ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲನೆಯ ಹಂತದ ಮತದಾನ ನಡೆಯುತ್ತಿದ್ದು, ಮತ ಚಲಾಯಿಸಲು ಬಂದ ಆಮ್ ಜನತಾ ಉನ್ನಯನ್ ಪಕ್ಷದ ಮುಖ್ಯಸ್ಥ ಹುಮಾಯೂನ್ ಕಬೀರ್ ವಿರುದ್ಧ ಟಿಎಂಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುರ್ಷಿದಾಬಾದ್‌ನ ನೌಡಾ ವಿಧಾನಸಭಾ ಕ್ಷೇತ್ರದ ಶಿಬ್‌ನಗರ ಗ್ರಾಮದ ಮತಗಟ್ಟೆಯಲ್ಲಿ ಕಬೀರ್ ಮತ ಚಲಾಯಿಸಲು ಬಂದಾಗ ಟಿಎಂಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಹುಮಾಯೂನ್ ವಿರುದ್ದ ‘ಬಿಜೆಪಿ ಏಜೆಂಟ್’, ‘ಗೋ ಬ್ಯಾಕ್’ ಘೋಷಣೆ ಕೂಗಿದ್ದಾರೆ. ಸ್ಥಳೀಯ ಟಿಎಂಸಿ ನಾಯಕರ ನೇತೃತ್ವದಲ್ಲಿ, ಪ್ರತಿಭಟನಾಕಾರರು ಕಬೀರ್ ಅವರ ವಾಹನವನ್ನು ಸುತ್ತುವರೆದರು. ಸದ್ಯ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಇದನ್ನು ಓದಿದ್ದೀರಾ? ಮುಸ್ಲಿಂ ಮತಗಳ ವಿಭಜಿಸಲು ಬಿಜೆಪಿಯೊಂದಿಗೆ ಒಪ್ಪಂದ: ಹುಮಾಯೂನ್ ಕಬೀರ್ ‘ಸ್ಟಿಂಗ್ ವಿಡಿಯೋ’ ವೈರಲ್
ಮುರ್ಷಿದಾಬಾದ್‌ನ ಭರತ್‌ಪುರದ ಶಾಸಕರಾಗಿರುವ ಕಬೀರ್, ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಬ್ರಿ ಮಸೀದಿ ಸ್ಥಾಪಿಸುವ ಹೇಳಿಕೆಗಳ ಬಳಿಕ ಟಿಎಂಸಿಯಿಂದ ಅಮಾನತುಗೊಂಡಿದ್ದಾರೆ. ಅದಾದ ಬಳಿಕ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದ್ದಾರೆ. ಆದರೆ ಇತ್ತೀಚೆಗೆ ಬಿಜೆಪಿ ಜತೆಗೆ ಕೈಜೋಡಿಸಿದ್ದಾರೆ, ಮುಸ್ಲಿಂ ಮತಗಳನ್ನು ವಿಭಜಿಸಲು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಈ ಸಂಬಂಧ ಸ್ಟಿಂಗ್ ಆಪರೇಷನ್ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ವಿಡಿಯೋದಲ್ಲಿ ಕಬೀರ್ ಅವರು ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡುತ್ತಾ, ತಾವು ಬಿಜೆಪಿಯ ಸುವೇಂದು ಅಧಿಕಾರಿ ಅವರೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿರುವುದು ಕಂಡು ಬಂದಿದೆ. ಚುನಾವಣೆಯ ನಂತರ ಬಿಜೆಪಿ ಸರ್ಕಾರ ರಚಿಸಲು ಬೆಂಬಲ ನೀಡಿದರೆ ತಮಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಸುವೇಂದು ಭರವಸೆ ನೀಡಿರುವುದಾಗಿಯೂ ಕಬೀರ್ ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ “ಮುಸ್ಲಿಮರನ್ನು ಮೂರ್ಖರನ್ನಾಗಿಸುವುದು ಸುಲಭ” ಎಂಬ ವಿವಾದಾತ್ಮಕ ಹೇಳಿಕೆಯೂ ಈ ಸ್ಟಿಂಗ್ ವಿಡಿಯೋದಲ್ಲಿದೆ. ಈ ವಿಡಿಯೋ ಸದ್ಯ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇಂದು ಮೊದಲನೆಯ ಹಂತದ ಚುನಾವಣೆ ನಡೆಯುತ್ತಿರುವ ನಡುವೆ ಟಿಎಂಸಿ ಕಾರ್ಯಕರ್ತರು ಕಬೀರ್ ವಿರುದ್ಧ ಪ್ರತಿಭಟಿಸಿ ‘ಬಿಜೆಪಿ ಏಜೆಂಟ್’ ಎಂದು ಕರೆದಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಕೋಮು ವಿಭಜನೆ; ಚುನಾವಣೆಗೂ ಮುನ್ನ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ!
ಈ ನಡುವೆ ಎಜೆಯುಪಿ ಕಾರ್ಯಕರ್ತರು ತಮ್ಮ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರ ಮೇಲೆ ಆಡಳಿತ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಭದ್ರತಾ ಪಡೆಗಳುಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟಿಎಂಸಿ ತನ್ನ ಪಕ್ಷದ ಹಲವಾರು ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹಿಂದೆ ಸರಿಯಲು ಲಂಚ ನೀಡಿದೆ ಎಂದು ಈ ಹಿಂದೆ ಕಬೀರ್ ದೂರಿದ್ದಾರೆ. 27 ಅಭ್ಯರ್ಥಿಗಳನ್ನು 9 ಲಕ್ಷದಿಂದ 30 ಲಕ್ಷ ರೂ.ಗಳವರೆಗಿನ ಮೊತ್ತಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖರೀದಿಸಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಸಂಖ್ಯೆ 142ರಿಂದ 115ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.





