ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಮೊದಲ ಹಂತದಲ್ಲಿ 44 ಅಭ್ಯರ್ಥಿಗಳನ್ನು ಘೋಷಿಸಿದ ಕೆಲವೇ ಸಮಯದಲ್ಲಿ ವಾಪಸ್ ತೆಗೆದುಕೊಂಡಿದೆ. ಬಿಜೆಪಿ ಮೂಲಗಳ ಪ್ರಕಾರ ಹೊಸ ಪಟ್ಟಿಯನ್ನು ಕೆಲವು ತಿದ್ದುಪಡಿಗಳೊಂದಿಗೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಮೊದಲ ಹಂತದಲ್ಲಿ ಮೂರು ಹಂತಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ರದ್ದು ಮಾಡುವ ಮುನ್ನ ಸೆ.18 ರಂದು ನಡೆಯುವ ಮೊದಲ ಹಂತದಲ್ಲಿ 15 ಅಭ್ಯರ್ಥಿಗಳು, ಸೆ.25 ರಂದು ನಡೆಯುವ ಎರಡನೇ ಹಂತದಲ್ಲಿ 10 ಅಭ್ಯರ್ಥಿಗಳು ಹಾಗೂ ಅ.1 ರಂದು ನಡೆಯುವ ಮೂರನೇ ಹಂತದಲ್ಲಿ 19 ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು.
ರದ್ದಾದ ಪಟ್ಟಿಯಲ್ಲಿ 14 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಇದರಲ್ಲಿ ಮುಸ್ಲಿಂ ಬಾಹುಳ್ಯದ 8 ಕ್ಷೇತ್ರಗಳು ಸೇರಿದ್ದವು. ಜೊತೆಯಲ್ಲಿ ಇಬ್ಬರು ಕಾಶ್ಮೀರಿ ಪಂಡಿತರಿಗೂ ಘೋಷಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ಸರ್ಕಾರದ ಆತ್ಮಾವಲೋಕನಕ್ಕಿದು ಸಕಾಲ
44 ಅಭ್ಯರ್ಥಿಗಳಲ್ಲಿ ಕೇವಲ ಒಬ್ಬರು ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಲಾಗಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ನಾಲ್ವರು ದಲಿತರಿಗೆ ಟಿಕೆಟ್ ಅಂತಿಮಗೊಳಿಸಲಾಗಿತ್ತು. ಹಿಂತೆಗೆದುಕೊಂಡ ಪಟ್ಟಿಯಲ್ಲಿ ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಹಾಗೂ ಮಾಜಿ ಡಿಸಿಎಂಗಳಾದ ನಿರ್ಮಲ್ ಸಿಂಗ್ ಹಾಗೂ ಕವೀಂದ್ರ ಗುಪ್ತ ಅವರಿಗೆ ಟಿಕೆಟ್ ನೀಡಿರಲಿಲ್ಲ.
ಸೆ. 18 ರಿಂದ ಅ.1ರವರೆಗೆ ನಡೆಯುವ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4 ರಂದು ಫಲಿತಾಂಶ ಘೋಷಿಸಲಾಗುತ್ತದೆ.
