24 ಗಂಟೆಯ ಹಿಂದೆ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ಅನ್ನು ಬೆಂಬಲಿಸಿ, ರೀಟ್ವೀಟ್ ಮಾಡಿದ್ದ ಬಾಕ್ಸರ್ ಮತ್ತು ಕಾಂಗ್ರೆಸ್ ನಾಯಕ ವಿಜೇಂದರ್ ಸಿಂಗ್, ದಿಢೀರ್ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಾಕ್ಸರ್ ಆಗಿ ಗುರುತಿಸಿಕೊಂಡಿರುವ ವಿಜೇಂದರ್ ಸಿಂಗ್, ಇಂದು ಮಧ್ಯಾಹ್ನ ದೆಹಲಿಯಲ್ಲಿರುವ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸೇರಿದ್ದಾರೆ. ಈ ವೇಳೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ದೆ ಪಕ್ಷದ ಸದಸ್ಯತ್ವ ನೀಡುವ ಮೂಲಕ ಸ್ವಾಗತಿಸಿದರು.
VIDEO | Boxer and former Congress leader Vijender Singh (@boxervijender) joins BJP in the presence of the party’s National General Secretary Vinod Tawde (@TawdeVinod) in Delhi. pic.twitter.com/3VIDsSMkh4
— Press Trust of India (@PTI_News) April 3, 2024
ವಿಜೇಂದರ್ ಸಿಂಗ್ ಅವರು ಜಾಟ್ ಸಮುದಾಯದಿಂದ ಬಂದವರು. ಹಾಗಾಗಿ, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪಕ್ಷವು ಅವರನ್ನು ಸೇರಿಸಿಕೊಂಡಿದ್ದು, ಟಿಕೆಟ್ ನೀಡುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. ಆದರೆ, ಯಾವ ಕ್ಷೇತ್ರದಿಂದ ಎಂದು ಈವರೆಗೆ ಮಾಹಿತಿ ಲಭ್ಯವಾಗಿಲ್ಲ.
ಕಾಂಗ್ರೆಸ್ನಲ್ಲಿದ್ದ ವಿಜೇಂದರ್ ಸಿಂಗ್, 2019ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿದ್ದರು ಆದರೆ ರಮೇಶ್ ಬಿಧುರಿ ವಿರುದ್ಧ ಸೋತಿದ್ದರು.

ವಿಜೇಂದರ್ ಸಿಂಗ್ ಅವರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೂ ಪಾಲ್ಗೊಂಡು ಬೆಂಬಲಿಸಿದ್ದಲ್ಲದೇ, ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧವೂ ಕೂಡ ಹರಿಹಾಯ್ದಿದ್ದರು. ಆ ಮೂಲಕ ಕುಸ್ತಿಪಟುಗಳ ಹೋರಾಟಕ್ಕೂ ಬೆಂಬಲ ಸೂಚಿಸಿದ್ದರು.
