ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ಅಕ್ಟೋಬರ್ 23ರಂದು ಮೈಸೂರಿನಲ್ಲಿ ಶಾಂತಿಯುತ ‘ತಿರಂಗಾ ಯಾತ್ರೆ’ ಹಾಗೂ ‘ಜಂತರ್ ಮಂತರ್’ ಸಭೆ ಆಯೋಜಿಸಲಾಗಿದೆ.
ನವದೆಹಲಿಯಲ್ಲಿ ಅಕ್ಟೋಬರ್ 14ರಂದು ಸುರ್ಜೀತ್ ಭವನದಲ್ಲಿ ನಡೆದ ಸಭೆಯಲ್ಲಿ ದೇಶದ ವಿವಿಧ ಜನಚಳವಳಿಗಳು ಮತ್ತು ಜನಪರ ಸಂಘಟನೆಗಳು ಒಗ್ಗೂಡಿ ‘SIR ವಿರುದ್ಧ ಜನತೆ’ (People Against SIR) ಎಂಬ ಒಕ್ಕೂಟವನ್ನು ರಚಿಸಿವೆ. ರೈತ ಸಂಘಟನೆಗಳು, ಜನರೇಟಿವ್ ಜನ್-ಝೀ ಯುವಕರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ನಾಗರಿಕ ಸಂಘಟನೆಗಳು ಸೇರಿದಂತೆ ವಿವಿಧ ಸಾಮಾಜಿಕ ಸಮುದಾಯಗಳು ಈ ಒಕ್ಕೂಟದಲ್ಲಿ ಭಾಗಿಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಸ್‌ಐಆರ್ ವಿರೋಧಿ ಹೋರಾಟದ ಭಾಗವಾಗಿ ಅಕ್ಟೋಬರ್ 23ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮೈಸೂರಿನ ಸಿದ್ಧಾರ್ಥ ನಗರದ ಬುದ್ಧ ಪ್ರತಿಮೆ ಬಳಿಯಿಂದ, ಡಿಎಫ್‌ಆರ್‌ಎಲ್ ಮುಂಭಾಗದ ಬನ್ನೂರು ರಸ್ತೆಯಲ್ಲಿ ತಿರಂಗಾ ಯಾತ್ರೆ ಆರಂಭವಾಗಲಿದೆ. ನಾಡಿನ ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಯಾತ್ರೆಯು ಹೊಸ ಜಿಲ್ಲಾಧಿಕಾರಿ ಕಚೇರಿಯ ಹೊರ ಆವರಣ ತಲುಪಲಿದ್ದು, ಅಲ್ಲಿ ‘ಜಂತರ್ ಮಂತರ್’ ಮಾದರಿಯ ಸಭೆ ನಡೆಯಲಿದೆ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಆತಂಕಗಳು, ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಭಾಗವಹಿಸುವಿಕೆಯ ಮಹತ್ವದ ಕುರಿತು ಈ ಸಂದರ್ಭದಲ್ಲಿ ಧ್ವನಿ ಎತ್ತಲು ಸಂಘಟಕರು ಉದ್ದೇಶಿಸಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆ ಚುನಾವಣಾ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ. ಆದರೆ, ಪರಿಷ್ಕರಣೆಯ ಸಂದರ್ಭದಲ್ಲಿ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳುವುದು, ಮತದಾರರಿಗೆ ಅಗತ್ಯ ಮಾಹಿತಿ ಒದಗಿಸುವುದು ಹಾಗೂ ಆಕ್ಷೇಪಣೆ ಮತ್ತು ತಿದ್ದುಪಡಿಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಕುರಿತು ತಮ್ಮ ವಿರೋಧ ಮತ್ತು ಆತಂಕಗಳನ್ನು ವ್ಯಕ್ತಪಡಿಸಲು ವಿವಿಧ ಜನಪರ ಸಂಘಟನೆಗಳು ಹೋರಾಟದ ಹಾದಿ ಹಿಡಿದಿವೆ.
ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಆಧಾರವಾಗಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ಮತ್ತು ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ನಡೆಯಬೇಕು ಎಂಬುದು ಈ ಹೋರಾಟದ ಪ್ರಮುಖ ಆಶಯವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ವಿಶೇಷ ವರದಿ ಓದಿದ್ದೀರಾ? ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!
ಅಕ್ಟೋಬರ್ 23ರಂದು ನಡೆಯಲಿರುವ ತಿರಂಗಾ ಯಾತ್ರೆ ಮತ್ತು ಸಭೆಯಲ್ಲಿ ಪ್ರಜ್ಞಾವಂತ ನಾಗರಿಕರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ದಲಿತರು, ಆದಿವಾಸಿಗಳು ಹಾಗೂ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.





