ಬಿಹಾರದ ನಳಂದ ಜಿಲ್ಲೆಯ ಕುಲ್ ಗ್ರಾಮದಲ್ಲಿ 40 ಅಡಿ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ಭಾನುವಾರ (ಜುಲೈ 23) ಸಂಜೆ ರಕ್ಷಿಸಲಾಗಿದೆ.
ಸ್ಥಳೀಯ ಪೊಲೀಸರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನೇತೃತ್ವದಲ್ಲಿ ಐದು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಮಗುವನ್ನು ರಕ್ಷಿಸಲಾಗಿದೆ.
ಕೊಳವೆ ಬಾವಿಗೆ ಬಿದ್ದ ಮಗುವನ್ನು ಶಿವಂ ಕುಮಾರ್ ಎಂದು ಗುರುತಿಸಲಾಗಿದೆ. ರೈತರೊಬ್ಬರಿಗೆ ಸೇರಿದ ಕೊಳವೆ ಬಾವಿ ಇದಾಗಿದ್ದು, ಇದನ್ನು ಮುಚ್ಚಿರಲಿಲ್ಲ. ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಈ ಮಗು ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿತ್ತು.
ಈ ಜಮೀನಿನ ಮಾಲೀಕ ಕೆಲವು ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ನೀರು ಸಿಗದೆ ವಿಫಲವಾಗಿತ್ತು. ಆದರೆ ಇದನ್ನು ಮುಚ್ಚಿರಲಿಲ್ಲ. ಈ ಕಾರಣದಿಂದ ಮಗು ಕೊಳವೆ ಬಾವಿಗೆ ಬಿದ್ದಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ನಳಂದದ ನಗರ ಪಂಚಾಯತ್ ಉಪಾಧ್ಯಕ್ಷ ನಳಿನ್ ಮೌರ್ಯ ತಿಳಿಸಿದ್ದಾರೆ.
ಮಗು ಬಿದ್ದ ನಂತರ ಕೊಳವೆ ಬಾವಿಗೆ ಆಮ್ಲಜನಕ ತಲುಪಿಸಲಾಗಿತ್ತು ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಲಾಗಿತ್ತು. ಐದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮಗುವನ್ನು ರಕ್ಷಿಸಲಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.