ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ NEET ಮತ್ತು ಸಿಬಿಎಸ್‌ಇ ಸೇರಿದಂತೆ ಪ್ರಮುಖ ಪರೀಕ್ಷಾ ಅಕ್ರಮಗಳ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿರುವ ಯುವ ಆಂದೋಲನ ವೇದಿಕೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಶನಿವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಆಫ್‌ಲೈನ್ ಪ್ರತಿಭಟನೆ ಆಯೋಜಿಸಿದೆ.
ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಆರಂಭಿಸಲಾಗಿರುವ ಹೋರಾಟಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಲಕ್ಷಾಂತರ ಮಂದಿ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ ರಾಜೀನಾಮೆ ಬೇಡಿಕೆಗೆ ಸಹಿ ಹಾಕುತ್ತಿದ್ದಾರೆ. ಈಗಾಗಲೇ ಸುಮಾರು 8 ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ. ಕೋಟ್ಯಂತರ ಯುವಕರು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಹೋರಾಟಕ್ಕೆ ಧ್ವನಿಯಾಗಿದ್ದು, ಸಹಿ ಸಂಗ್ರಹ ಅಭಿಯಾನ ದಿನದಿಂದ ದಿನಕ್ಕೆ ಬೃಹತ್ ರೂಪ ಪಡೆಯುತ್ತಿದೆ.
ಮೊದಲು ಕೇವಲ ವಿಡಂಬನಾತ್ಮಕ ಆನ್‌ಲೈನ್ ಪೇಜ್ ಆಗಿ ಆರಂಭವಾಗಿದ್ದ ಈ ಚಳವಳಿಗೆ ಈಗ ದೇಶದ ಪ್ರಮುಖ ಗಣ್ಯರು ಹಾಗೂ ರಾಜಕೀಯ ನಾಯಕರು ಕೈಜೋಡಿಸುತ್ತಿದ್ದಾರೆ. ಹೋರಾಟಗಾರ ಸೋನಮ್ ವಾಂಗ್ಚುಕ್, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಸಾಮಾಜಿಕ ಹೋರಾಟಗಾರರು ಈ ಪ್ರತಿಭಟನೆಯನ್ನು ಮುಕ್ತವಾಗಿ ಬೆಂಬಲಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಬ್ಯಾನರ್‌ಗಳಿಲ್ಲದೆ ದೇಶದ ಯುವಜನತೆಯ ಭವಿಷ್ಯಕ್ಕಾಗಿ ಈ ನಾಯಕರು ಒಂದಾಗುತ್ತಿರುವುದು ಹೋರಾಟಕ್ಕೆ ಮತ್ತಷ್ಟು ಶಕ್ತಿ ತಂದಿದೆ.
ಇದನ್ನೂ ಓದಿ: ಭವಿಷ್ಯದ ʼಸೂಪರ್ ಆಂಟಿಜೆನ್ʼ; ಇದು AI ರೂಪಿಸಿದ ವಿಶ್ವದ ಮೊದಲ ಲಸಿಕೆ!
ಸದ್ಯ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡುವಂತಾಗಬಹುದೇ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೋರಾಟ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲದೆ, ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶದ ಸಂಕೇತವಾಗಿರುವುದರಿಂದ ಸರ್ಕಾರಕ್ಕೆ ಇದರ ತೀವ್ರತೆ ತಟ್ಟದೆ ಇರಲಾರದು. ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಭಾರಿ ಆಕ್ರೋಶ ಮತ್ತು ಲಕ್ಷಾಂತರ ಸಹಿಗಳ ಒತ್ತಡವು ಕೇಂದ್ರ ಸರ್ಕಾರದ ಮೇಲೆ ತೀವ್ರ ನೈತಿಕ ಒತ್ತಡವನ್ನು ಸೃಷ್ಟಿಸಿದೆ.
ಜೊತೆಗೆ, ಹಲವು ರಾಜಕೀಯ ನಾಯಕರು ಈ ಯುವ ಆಂದೋಲನಕ್ಕೆ ಸಾಥ್ ನೀಡುತ್ತಿರುವುದರಿಂದ ಇದು ರಾಷ್ಟ್ರೀಯ ಮಟ್ಟದ ದೊಡ್ಡ ಚಳವಳಿಯಾಗಿ ಮಾರ್ಪಡುತ್ತಿದ್ದು, ಶನಿವಾರ ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯ ತೀವ್ರತೆಯು ಕೇಂದ್ರ ಸರ್ಕಾರವು ಶಿಕ್ಷಣ ಸಚಿವರ ರಾಜೀನಾಮೆಯನ್ನು ಪಡೆದುಕೊಳ್ಳುವ ಅನಿವಾರ್ಯತೆಗೆ ತಳ್ಳುವ ಸಾಧ್ಯತೆ ದಟ್ಟವಾಗಿದೆ.





