ದೇಶದ ರಾಜಧಾನಿ ದೆಹಲಿಯಲ್ಲೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. 8ನೇ ತರಗತಿಯ ವಿದ್ಯಾರ್ಥಿಗೆ ಅವನ ಸಹಪಾಠಿಗಳು ಹಲ್ಲೆ ನಡೆಸಿದ ಬಳಿಕ ಆತನ ಗುಪ್ತಾಂಗಕ್ಕೆ ಮರದ ಕೋಲು ತುರುಕಿದ ಘಟನೆ ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಬಾಲಾಪರಾಧಿಯನ್ನು ಬಂಧಿಸಿದ್ದಾರೆ.
ಎಫ್‌ಐಆರ್ ಪ್ರಕಾರ, 14 ವರ್ಷದ ವಿದ್ಯಾರ್ಥಿಯು ತನ್ನ ಶಾಲಾ ಸಹಪಾಠಿಗಳೊಂದಿಗೆ ಮಾ.13ರಂದು ಜಗಳವಾಡಿದ್ದನು. ಆ ಬಳಿಕ ನಾಲ್ವರು ಸಹಪಾಠಿಗಳು ಸೇರಿ ಮಾರ್ಚ್ 18ರಂದು 8ನೇ ತರಗತಿ ಬಾಲಕನಿಗೆ ಅಮಾನುಷವಾಗಿ ಥಳಿಸಿದ್ದಾರೆ. ಆ ಬಳಿಕ ಗುಂಪಿನಲ್ಲಿದ್ದ ಬಾಲಕನೋರ್ವ ಮರದ ತುಂಡೊದನ್ನು ಗುಪ್ತಾಂಗಕ್ಕೆ ತುರುಕಿರುವುದಾಗಿ ತಿಳಿದುಬಂದಿದೆ.
ಶಾಲಾ ಸಿಬ್ಬಂದಿ ಘಟನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿಯ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲದೇ, ಘಟನೆಯ ಬಗ್ಗೆ ಶಾಲಾ ಪ್ರಾಂಶುಪಾಲರೊಂದಿಗೆ ಮಾತುಕತೆ ನಡೆಸಲು ಅವಕಾಶ ಕೇಳಿದರೂ ನಿರಾಕರಿಸಲಾಗಿದೆ ಎಂದು ದೂರಿದ್ದಾರೆ.
“ಘಟನೆಯನ್ನು ಯಾರಿಗೂ ಹೇಳದಂತೆ ಶಾಲಾ ಸಹಪಾಠಿಗಳು ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ತಿಳಿಸಿದಲ್ಲಿ ಅದೇ ಶಾಲೆಯಲ್ಲಿ ಓದುತ್ತಿರುವ ತನ್ನ ಸಹೋದರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ನನ್ನನ್ನು ಬೆದರಿಸಿದ್ದರು” ಎಂದು 8ನೇ ತರಗತಿ ವಿದ್ಯಾರ್ಥಿ ಮಾಹಿತಿ ನೀಡಿದ್ದಾನೆ.
ಪೊಲೀಸರಿಗೆ ಪೋಷಕರು ನೀಡಿದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾರ್ಚ್ 13 ರಂದು ತನ್ನ ಸಹಪಾಠಿಯೊಂದಿಗೆ ಜಗಳವಾಡಿದ್ದನು. ಮಾರ್ಚ್ 18ರಂದು ಸಹಪಾಠಿಗಳು ಹಲ್ಲೆ ನಡೆಸಿದ್ದಾರೆ. ಬೆದರಿಕೆ ಹಾಕಿದ್ದರಿಂದ, ಭಯಗೊಂಡಿದ್ದ ಸಂತ್ರಸ್ತ ವಿದ್ಯಾರ್ಥಿ ಮೊದಲು ಘಟನೆಯ ಬಗ್ಗೆ ಯಾರಿಗೂ ಹೇಳಿರಲಿಲಿಲ್ಲ. ಮಾರ್ಚ್ 20ರಂದು ಅವರು ಹೊಟ್ಟೆ ನೋವು ಎಂದು ಹತ್ತಿರದ ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ಆದರೆ, ಸಂತ್ರಸ್ತ ವಿದ್ಯಾರ್ಥಿಯ ಪರಿಸ್ಥಿತಿ ಸುಧಾರಿಸದ ಕಾರಣ ಮಾರ್ಚ್ 28ರಂದು ಆಸ್ಪತ್ರೆಗೆ ಕರೆದೊಯ್ದು ಆಪರೇಷನ್ ಮಾಡಬೇಕಾಯಿತು.
‘ಯಾವುದೋ ಅಹಿತಕರ ಘಟನೆಗೆ ಮಗು ಬಲಿಯಾಗಿರಬಹುದು’ ಎಂದು ಆಸ್ಪತ್ರೆಯ ವೈದ್ಯರು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 2 ರಂದು ಹುಡುಗನಿಗೆ ಪ್ರಜ್ಞೆ ಬಂದಾಗ, ಪೋಷಕರ ವಿಚಾರಿಸಿದಾಗ ಎಲ್ಲ ಘಟನೆಯನ್ನು ವಿವರಿಸಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸ್ ದೂರು ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ: ಬಿಜೆಪಿ ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ
ಬಲಿಪಶುವಾಗಿರುವ ವಿದ್ಯಾರ್ಥಿಯ ಗುದದಲ್ಲಿ ಮರದ ಕೋಲನ್ನು ತುರುಕಿದ್ದರ ಪರಿಣಾಮ ತೀವ್ರವಾದ ಗಾಯವಾಗಿದೆ. ಆದ್ದರಿಂದ ಶಸ್ತ್ರಚಿಕಿತ್ಸೆ ನಡೆಸಿರುವುದಾಗಿ ವೈದ್ಯರು ತನ್ನ ವರದಿಯಲ್ಲಿ ತಿಳಿಸಿದ್ದರು.
ವೈದ್ಯರ ವರದಿಯ ಆಧಾರದ ಮೇಲೆ ಪೊಲೀಸರು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 323, 341, 34 ಮತ್ತು 377 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 6 ಅನ್ನು ಕೂಡ ಸೇರಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿಯ ಗುದಕ್ಕೆ ಮರದ ತುಂಡು ತುರುಕಿದ್ದ ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ಬಾಲ ನ್ಯಾಯ ಮಂಡಳಿ (ಜೆಜೆಬಿ) ಮುಂದೆ ಹಾಜರುಪಡಿಸಲಾಗಿದೆ.
