ಏರ್ ಇಂಡಿಯಾ ಜೆಟ್ ಟೇಕ್ ಆಫ್ ಆಗುತ್ತಿದ್ದ ಅದೇ ರನ್‌ವೇಯಲ್ಲಿ ಇಂಡಿಗೋ ವಿಮಾನವು ಲ್ಯಾಂಡಿಂಗ್ ಆಗಿದ್ದು ಕ್ಷಣ ಮಾತ್ರದಲ್ಲಿ ಅವಘಡ ತಪ್ಪಿದೆ. ನೂರಾರು ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲಿ ಆತಂಕಕ್ಕೆ ಒಳಗಾಗಿದ್ದರು.
ಒಂದೇ ಕ್ಷಣದಲ್ಲಿ ಒಂದೇ ರನ್‌ವೇಯಲ್ಲಿ ಎರಡು ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕ್ ಆಫ್‌ಗೆ ಅನುಮತಿ ನೀಡಿದ ವಿಚಾರದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದೆ. ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಯನ್ನು ಹುದ್ದೆಯಿಂದ ಕೆಳಗಿಳಿಸಿದೆ.
Video | Narrow Escape For Passengers At Mumbai Airport As 2 Planes Land, Take-Off On Same Runway pic.twitter.com/SEZigyPskD
— Saif Ali Khan (@synclairsa) June 9, 2024
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಎರಡೂ ವಿಮಾನಗಳು ಒಂದೇ ರನ್‌ವೇಯಲ್ಲಿ ಕಾಣಿಸಿಕೊಂಡಿವೆ. ಏರ್ ಇಂಡಿಯಾ ಜೆಟ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಇಂಡಿಗೋ ವಿಮಾನ ಲ್ಯಾಂಡಿಂಗ್ ಆಗಿದೆ. ಇಂಡಿಗೋ ವಿಮಾನ ಇಂದೋರ್‌ನಿಂದ ಮುಂಬೈಗೆ ಬಂದಿಳಿದಿದ್ದು, ಏರ್ ಇಂಡಿಯಾ ವಿಮಾನವು ಕೇರಳದ ತಿರುವನಂತಪುರಕ್ಕೆ ಹಾರಿದೆ.
ಇದನ್ನು ಓದಿದ್ದೀರಾ? 8 ಗಂಟೆಗಳ ಕಾಲ ತಡವಾದ ಏರ್ ಇಂಡಿಯಾ ವಿಮಾನ: ಎಸಿ ಇಲ್ಲದೆ ಪ್ರಯಾಣಿಕರು ಮೂರ್ಛೆ
ಇಂದೋರ್-ಮುಂಬೈ ವಿಮಾನದ ಪೈಲಟ್ ಎಟಿಸಿಯ (ಏರ್ ಟ್ರಾಫಿಕ್ ಕಂಟ್ರೋಲ್) ಸೂಚನೆಗಳನ್ನು ಅನುಸರಿಸಿದ್ದಾರೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. ಏರ್ ಇಂಡಿಯಾ ಕೂಡ ಎಟಿಸಿ ತನ್ನ ವಿಮಾನವನ್ನು ಟೇಕ್-ಆಫ್ ಮಾಡಲು ಅನುಮತಿ ನೀಡಿದೆ ಎಂದು ಹೇಳಿದೆ.
“ಜೂನ್ 8ರಂದು ಇಂದೋರ್‌ನಿಂದ ಇಂಡಿಗೋ ಫ್ಲೈಟ್‌ಗೆ 6E 6053 ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಎಟಿಸಿಯ ಲ್ಯಾಂಡ್ ಕ್ಲಿಯರೆನ್ಸ್ ಲಭ್ಯವಾಗಿದೆ. ಪೈಲಟ್ ಇನ್ ಕಮಾಂಡ್ ಲ್ಯಾಂಡಿಂಗ್ ಸೂಚನೆ ನೀಡಿದ್ದು ಅದನ್ನು ನಾವು ಅನುಸರಿಸಿದ್ದೇವೆ. ಇಂಡಿಗೋದಲ್ಲಿ ಪ್ರಯಾಣಿಕರ ಸುರಕ್ಷತೆ ನಮಗೆ ಅತ್ಯುನ್ನತವಾಗಿದೆ. ಈ ಲ್ಯಾಂಡಿಂಗ್ ಬಗ್ಗೆ ನಾವು ರಿಪೋರ್ಟ್ ಮಾಡಿದ್ದೇವೆ” ಎಂದು ಇಂಡಿಗೋ ತಿಳಿಸಿದೆ.
ಇದನ್ನು ಓದಿದ್ದೀರಾ? ಕೆನಡಾ | ಟೇಕಾಫ್ ಆಗುತ್ತಿದ್ದಂತೆಯೇ 389 ಪ್ರಯಾಣಿಕರಿದ್ದ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ; ವಿಡಿಯೋ ವೈರಲ್
“ಮುಂಬೈನಿಂದ ತಿರುವನಂತಪುರಕ್ಕೆ AI657 ಜೂನ್ 8ರಂದು ಟೇಕ್-ಆಫ್ ಆಗಲು ಸಿದ್ಧವಾಗಿತ್ತು. ಏರ್ ಇಂಡಿಯಾ ವಿಮಾನ ರನ್‌ವೇಗೆ ಪ್ರವೇಶಿಸಲು ಏರ್ ಟ್ರಾಫಿಕ್ ಕಂಟ್ರೋಲ್ ಅನುಮತಿ ನೀಡಿದೆ. ಅದಾದ ಬಳಿಕ ವಿಮಾನವನ್ನು ಟೇಕ್-ಆಫ್ ಮಾಡಲಾಗಿದೆ. ಕ್ಲಿಯರೆನ್ಸ್ ಬಗ್ಗೆ ಅಧಿಕಾರಿಗಳು ನಿಗದಿಪಡಿಸಿದ ಕಾರ್ಯವಿಧಾನಗಳಿಗೆ ಅನುಗುಣವಾಗಿ ತನಿಖೆಯನ್ನು ಪ್ರಾರಂಭಿಸಿದ್ದಾರೆ” ಎಂದು ಏರ್‌ಇಂಡಿಯಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.