ದೇಶದ ಯುವಜನರಲ್ಲಿ ಭಾರಿ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಜೂನ್ 6ರಂದು ಭಾರತಕ್ಕೆ ಮರಳುವುದಾಗಿ ಪ್ರಕಟಿಸಿದ್ದಾರೆ. ನೀಟ್ (NEET-UG 2026) ಪರೀಕ್ಷಾ ಅಕ್ರಮಗಳು ಮತ್ತು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲು ಅವರು ಕರೆ ನೀಡಿದ್ದಾರೆ.
ಅವರ ಭಾರತಕ್ಕೆ ಮರಳುವ ಮತ್ತು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸುವ ಅಭಿಜೀತ್ ಅವರ ಹಠಾತ್ ನಿರ್ಧಾರವು ಹೊಸ ರಾಜಕೀಯ ಚರ್ಚೆ ಹುಟ್ಟುಹಾಕಿದೆ. ಆದಾಗ್ಯೂ, ಅವರು ಭಾರತಕ್ಕೆ ಬರುತ್ತಿದ್ದಂತೆಯೇ ಅವರನ್ನು ಮೋದಿ ಸರ್ಕಾರ ಬಂಧಿಸುವ ಸಾಧ್ಯತೆಗಳ ಕುರಿತೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿವೆ.
ಅಭಿಜೀತ್ ದೀಪ್ಕೆ ಜೂನ್ 6ರ ಶನಿವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ನೇರವಾಗಿ ಬೆಂಬಲಿಗರೊಂದಿಗೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ, ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಲಿದ್ದಾರೆ.
ಆದರೆ, ಅವರು ಭಾರತದ ಹೊರಗಿದ್ದಾಗಲೇ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಮತ್ತು ಅವರ ಕುಟುಂಬಕ್ಕೆ ಬಿಜೆಪಿ ಬೆಂಬಲಿತರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ, ಈಗಾಗಲೇ ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಭದ್ರತೆ’ಯ ಕಾರಣಗಳನ್ನು ನೀಡಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 69A ಅಡಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಅಧಿಕೃತ ‘X’ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದೆ. ಅಲ್ಲದೆ, ಮೋದಿ ಸರ್ಕಾರದ ಕೆಲವು ಪ್ರಮುಖ ನಾಯಕರು ಈ ಯುವಜನರ ಚಳವಳಿಯ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಯಥಾಪ್ರಕಾರದ ಆರೋಪ ಮಾಡುತ್ತಿದ್ದಾರೆ. ಇದೆಲ್ಲವೂ, ಯುವಜನರ ಕಾಕ್ರೋಚ್ ಅಭಿಯಾನಕ್ಕೆ ಮೋದಿ ಸರ್ಕಾರ ಬೆಚ್ಚಿ ಬಿದ್ದಿದೆ ಎಂಬುದರ ಸೂಚಕವೂ ಆಗಿದೆ.
ಇಂತಹ ಪರಿಸ್ಥಿತಿಯಲ್ಲಿ ಅಭಿಜೀತ್ ಅವರು ಭಾರತಕ್ಕೆ ಬರುತ್ತಿದ್ದಾರೆ. ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ, ಅವರನ್ನು ಪೊಲೀಸರು ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆಯುವ ಅಥವಾ ಬಂಧಿಸುವ ಸಾಧ್ಯತೆಗಳಿವೆ.
ಈ ಲೇಖನ ಓದಿದ್ದೀರಾ?: ವಿಫಲಗೊಳ್ಳುತ್ತಿದೆ ಗೋಹತ್ಯೆ ನಿಷೇಧ; ಬಿಜೆಪಿಗೆ ತಿರುಗು ಬಾಣ
ಅಭಿಜೀತ್ ಅವರ ಹೋರಾಟ ಮತ್ತು ಭಾರತದ ಭೇಟಿ ಹಾಗೂ ಮೋದಿ ಸರ್ಕಾರದ ದಾಳಿಗಳು ಅವರ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ (ಔರಂಗಾಬಾದ್) ನಿವಾಸಿಯಾಗಿರುವ ಅವರ ತಂದೆ ಭಗವಾನ್ ರಾವ್ ಮತ್ತು ತಾಯಿ ಅನಿತಾ ದೀಪ್ಕೆ ಅವರು ಅಭಿಜೀತ್ ಎದುರಿಸಬಹುದಾದ ಸವಾಲುಗಳ ಕುರಿತು ಆತಂಕಗೊಂಡಿದ್ದಾರೆ. ಈಗಾಗಲೇ, ಅಭಿಜೀತ್ ಅವರ ಮನೆ ಮುಂದೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಹ್ಯಾಕಿಂಗ್ ಯತ್ನಗಳು ನಡೆಯುತ್ತಿವೆ. ಇದೆಲ್ಲವೂ ಕುಟುಂಬದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಒಂದು ವೇಳೆ, ಮೋದಿ ಸರ್ಕಾರವು ಅಭಿಜೀತ್ ಅವರನ್ನು ಬಂಧಿಸಿದರೆ, ಯುವಜನರು ದೇಶಾದ್ಯಂತ ‘ಜೈಲ್ ಬರೋ’ ಚಳುವಳಿಗೆ ಕರೆಕೊಡಲು ಸಿದ್ಧತೆ ನಡೆಸಿದ್ದಾರೆ. ತಾವೆಲ್ಲರೂ ಕಾಕ್ರೋಚ್ ಪಾರ್ಟಿಯ ಸದಸ್ಯರು ತಮ್ಮನ್ನೂ ಬಂಧಿಸಿ ಎಂದು ಪ್ರತಿಭಟನೆಗಳನ್ನು ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.



