ಕೃಷಿರಂಗ | ರಾಗಿ ತಂದೀರಾ… ಬಿತ್ತನೆ ರಾಗಿ ತಂದೀರಾ…

Date:

ರಾಗಿ ತಳಿಗಳು ಎಂದೊಡನೆ ರೈತರಿಗೆ ನೆನಪಾಗುವುದು ಜಗತ್ತಿನ ಮೊಟ್ಟಮೊದಲ ರಾಗಿ ಬ್ರೀಡರ್ ರಾಗಿಬ್ರಹ್ಮ ಲಕ್ಷ್ಮಣಯ್ಯ. ಅವರು ಸುಮಾರು 23 ಬಗೆಯ ಅಧಿಕ ಇಳುವರಿಯ ರಾಗಿ ತಳಿಗಳನ್ನು ಕೊಟ್ಟವರು. ಎಕರೆಗೆ ಐದಾರು ಕ್ವಿಂಟಾಲ್ ಇಳುವರಿಯಿಂದ ಎಕರೆಗೆ 15ರಿಂದ 20 ಕ್ವಿಂಟಾಲ್ ಇಳುವರಿ ಕೊಡುವ ರಾಗಿ ತಳಿಗಳನ್ನು ಮಂಡ್ಯದ ಕೃಷಿ ಕ್ಷೇತ್ರದ ತಮ್ಮ ಸಂಶೋಧನಾ ಟಂಕಸಾಲೆಯಿಂದ 1956ರಿಂದ 1984ರವರೆಗೆ ಬಿಡುಗಡೆಯಾಗುವಂತೆ ಮಾಡಿದರು.

- Advertisement -


ಮುಂಗಾರು ಮಳೆ ಆರಂಭವಾಗಿದೆ. ಹಳೇ ಮೈಸೂರಿನ ಜಿಲ್ಲೆಗಳಲ್ಲಿ ರಾಗಿಯೇ ಪ್ರಮುಖ ಆಹಾರ ಬೆಳೆ. ಬಿತ್ತನೆಗಾಗಿ ರೈತರು ತಮಗಿಷ್ಟವಾದ ರಾಗಿ ತಳಿಯ ಹುಡುಕಾಟದಲ್ಲಿರುತ್ತಾರೆ. ತಾವೇ ಬೆಳೆದ ರಾಗಿಯಲ್ಲೊಂದಿಷ್ಟು ಕಾಳನ್ನು ಬಿತ್ತನೆಗಾಗಿ ಎತ್ತಿಟ್ಟುಕೊಂಡಿರುತ್ತಾರೆ. ಕಳೆದ ಸಾರಿ ಇತರೆ ರೈತರ ಹೊಲಗಳಲ್ಲಿ ಉತ್ತಮವಾಗಿ ಬೆಳೆದ ರಾಗಿ ಬೆಳೆಯನ್ನು ಗಮನಿಸಿದ ರೈತರು ಅವರಿಂದ ಬಿತ್ತನೆ ರಾಗಿಯನ್ನು ಕೇಳಿ ಪಡೆಯುತ್ತಾರೆ. ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ, ಖಾಸಗಿ ಉತ್ಪಾದಕರಿಂದ ಬಿತ್ತನೆ ರಾಗಿಯನ್ನು ಖರೀದಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ರಾಗಿ ಬಿತ್ತನೆ ಕಾಲದಲ್ಲಿ ತಾವು ಬಿತ್ತಿಕೊಳ್ಳುವ ತಳಿಗಳ ಬಗ್ಗೆ ರೈತರು ಮಾತನಾಡಿಕೊಳ್ಳುತ್ತಾರೆ. ಅವರೊಳಗೆ ನಡೆಯುವ ಸಂವಹನವು ‘ರಾಗಿ ತಂದೀರಾ, ಬಿತ್ತನೆ ರಾಗಿ ತಂದೀರಾ’ ಎಂಬಂತಿರುತ್ತದೆ.

ರಾಗಿ ತಳಿಗಳು ಎಂದೊಡನೆ ರೈತರಿಗೆ ನೆನಪಾಗುವುದು ಜಗತ್ತಿನ ಮೊಟ್ಟಮೊದಲ ರಾಗಿ ಬ್ರೀಡರ್ ರಾಗಿಬ್ರಹ್ಮ ಲಕ್ಷ್ಮಣಯ್ಯ. ಅವರು ಸುಮಾರು 23 ಬಗೆಯ ಅಧಿಕ ಇಳುವರಿಯ ರಾಗಿ ತಳಿಗಳನ್ನು ಕೊಟ್ಟವರು. ಎಕರೆಗೆ ಐದಾರು ಕ್ವಿಂಟಾಲ್ ಇಳುವರಿಯಿಂದ ಎಕರೆಗೆ 15ರಿಂದ 20 ಕ್ವಿಂಟಾಲ್ ಇಳುವರಿ ಕೊಡುವ ರಾಗಿ ತಳಿಗಳನ್ನು ಮಂಡ್ಯದ ಕೃಷಿ ಕ್ಷೇತ್ರದ ತಮ್ಮ ಸಂಶೋಧನಾ ಟಂಕಸಾಲೆಯಿಂದ 1956ರಿಂದ 1984ರವರೆಗೆ ಬಿಡುಗಡೆಯಾಗುವಂತೆ ಮಾಡಿದರು. ಬಡವರಿಗೆ ರಾಗಿ ಮುದ್ದೆ ಸಿಕ್ಕಿ ಹೊಟ್ಟೆ ತುಂಬುವಂತೆ ಮಾಡಿದರು. ಅದು ಆ ದಶಕಗಳಲ್ಲಾದ ಹಸಿರು ಕ್ರಾಂತಿಗೊಂದು ಪ್ರಮುಖ ಕೊಡುಗೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...
Raagi Lakshmaniah1

ವಿಶೇಷ ಸಂಪರ್ಕ ಪದ್ದತಿಯಿಂದ ಅಧಿಕ ಇಳುವರಿಯ ರಾಗಿ ತಳಿಗಳು

ರಾಗಿಯು ಒಂದು ಸ್ವಕೀಯ ಪರಾಗ ಸ್ಪರ್ಶ ಬೆಳೆ. ರಾಗಿಯಲ್ಲಿ ತಳಿ ಸಂಕರಣಕ್ಕಾಗಿ ಜಗತ್ತಿನ ಹಲವು ತಳಿ ವಿಜ್ಞಾನಿಗಳು ಪ್ರಯತ್ನಪಟ್ಟು ವಿಫಲರಾಗಿದ್ದರು. ರಾಗಿ ಲಕ್ಷ್ಮಣಯ್ಯನವರು ಸ್ಪೆಷಲ್ ಕಾಂಟ್ಯಾಕ್ಟ್ ಮೆಥಡ್ (ವಿಶೇಷ ಸಂಪರ್ಕ ಪದ್ದತಿ) ಅನ್ನು ಆವಿಷ್ಕರಿಸಿ ಯಶಸ್ವಿಯಾದರು. ಆ ಪದ್ದತಿಯಲ್ಲಿ, ಎರಡು ವಿವಿಧ ರಾಗಿ ತಳಿಗಳನ್ನು ಅಕ್ಕಪಕ್ಕದಲ್ಲಿ ಸಾಲಾಗಿ ನೆಟ್ಟು ಅವುಗಳು ತೆನೆಯೊಡೆದಾಗ ಸೂಕ್ತ ಕಾಲದಲ್ಲಿ, ಸುಂಕ ಮೇಯುವ ಕಾಲದಲ್ಲಿ, ಪರಾಗರೇಣುಗಳು ಬಿಡುಗಡೆಯಾಗುವ ಸಮಯದಲ್ಲಿ ಎರಡು ತಳಿಗಳ ಮಧ್ಯೆ ಪರಾಗಸ್ಪರ್ಶವಾಗುವಂತೆ ತೆನೆಗಳನ್ನು ತೆಳುವಾದ ಬಟ್ಟೆಯ ಹೊದಿಕೆಯಲ್ಲಿ ಕಟ್ಟಿದರು. ಆಗ ಪರಾಗಸ್ಪರ್ಶವಾಯಿತು. ತೆನೆಗಳು ಬಲಿತವು. ಕಾಳು ಕೊಟ್ಟವು. ಕಾಳುಗಳನ್ನು ಮತ್ತೆ ಬಿತ್ತಿದರು. ಅದೊಂದು ಹೊಸ ಸಂಕರಣ ತಳಿಯಾಯಿತು. ಇಳುವರಿ ಹೆಚ್ಚಾಯಿತು. ಹೀಗೆ ಅವರ ಸಂಶೋಧನಾ ಟಂಕಸಾಲೆಯಿಂದ ಸಾಲು ಸಾಲಾಗಿ ಹೊಸ ರಾಗಿ ತಳಿಗಳು ಬಿಡುಗಡೆಯಾದವು. ವರ್ಷಗಳುರುಳಿದಂತೆ ಬಿಡುಗಡೆಯಾದ ರಾಗಿ ತಳಿಗಳ ಪಟ್ಟಿ ಹೀಗಿದೆ (ಆವರಣದಲ್ಲಿ ಬಿಡುಗಡೆಯಾದ ವರ್ಷ): ಪೂರ್ಣ (1959), ಉದಯ (1959), ಅನ್ನಪೂರ್ಣ (1962), ಕಾವೇರಿ (1962), ಶಕ್ತಿ (1972), ಇಂಡಾಫ್ -1 (1976), ಇಂಡಾಫ್ -3 (1976), ಇಂಡಾಫ್ -5 (1977), ಇಂಡಾಫ್ -7 (1981), ಇಂಡಾಫ್ -8 (1982), ಇಂಡಾಫ್ -9 (1985), ಇಂಡಾಫ್ -15 (1994), ಎಲ್-5 (1999). ಹೀಗೆ ಅಧಿಕ ಇಳುವರಿಯ ರಾಗಿ ಸಂಕರಣ ತಳಿಗಳ ಸರಮಾಲೆಯೇ ಬಂತು. ರಾಗಿ ಕಣಗಳು ರಾಗಿಯ ರಾಶಿಗಳಿಂದ ತುಂಬಿ ತುಳುಕಿದವು.

ಮೊದಲಿಗೆ ರಾಗಿ ಲಕ್ಷ್ಮಣಯ್ಯನವರು ನಮ್ಮ ರಾಜ್ಯದ ರಾಗಿ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿದರು. ತದನಂತರ, ಅಮೆರಿಕದ ರಾಕ್‍ಫೆಲ್ಲರ್ ಸಂಸ್ಥೆಯು ಕಳುಹಿಸಿಕೊಟ್ಟ ಆಫ್ರಿಕಾದ ರಾಗಿ ತಳಿಗಳೊಂದಿಗೆ ನಮ್ಮ ರಾಗಿ ತಳಿಗಳನ್ನು ವಿಶೇಷ ಸಂಪರ್ಕ ಪದ್ದತಿಯಲ್ಲಿ ಸಂಕರಣಗೊಳಿಸಿ ಇಂಡಾಫ್ (ಇಂಡಿಯಾ + ಆಫ್ರಿಕಾ = ಇಂಡಾಫ್) ಎಂದು ಕರೆದರು. ಅವೆಲ್ಲವೂ ಎಕರೆಗೆ 15ರಿಂದ 20 ಕ್ವಿಂಟಾಲ್ ರಾಗಿ ಇಳುವರಿ ಕೊಡುವ ತಳಿಗಳಾದವು. ಇಂಡಾಫ್ ತಳಿಗಳು ಬಿಡುಗಡೆಯಾಗಿ ನಾಲ್ಕೈದು ದಶಕಗಳಾದರೂ ರೈತರ ಹೊಲಗಳಲ್ಲಿ ಇಂದಿಗೂ ಭರ್ಜರಿ ಇಳುವರಿ ಕೊಡುತ್ತಿವೆ.

ಇಂಡಾಫೋತ್ತರ ರಾಗಿ ತಳಿಗಳು

ಸ್ವಾತಂತ್ರ್ಯ ಪೂರ್ವದಲ್ಲಿ ಡಾ. ಲೆಸ್ಲಿ ಸಿ. ಕೋಲ್ಮನ್‍ರವರಿಂದ ಬೆಂಗಳೂರಿನ ಹೆಬ್ಬಾಳ ಕೃಷಿ ಕ್ಷೇತ್ರದಲ್ಲಿ ರಾಗಿ ಸಂಶೋಧನೆ ನಡೆಯಿತು. ಇದ್ದ ದೇಸಿ ತಳಿಗಳಲ್ಲಿ ಉತ್ತಮವಾದ ತಳಿಯನ್ನವರು ಆಯ್ಕೆ ಮಾಡಿ ಎಚ್ 22 ಎಂಬ ಹೆಸರಿನಿಂದ ರೈತರಿಗೆ ಪೂರೈಸಿದರಷ್ಟೇ. ರಾಗಿ ಲಕ್ಷ್ಮಣಯ್ಯನವರ ಕಾರ್ಯ ಕ್ಷೇತ್ರ ಮಂಡ್ಯದ ವಿ.ಸಿ. ಫಾರ್ಮ್ ಆಯಿತು. ಅವರದು ಸ್ವಾತಂತ್ರ್ಯಾನಂತರದ ರಾಗಿ ಸಂಶೋಧನೆ. ಅವರೇ ಜಗತ್ತಿನ ಮೊಟ್ಟಮೊದಲ ರಾಗಿ ತಳಿಗಳ ಬ್ರೀಡರ್. ಇತ್ತೀಚಿನ ದಶಕಗಳಲ್ಲಿ ಹಲವು ವಿಜ್ಞಾನಿಗಳಿಂದ ಮಂಡ್ಯದ ವಿ.ಸಿ. ಫಾರ್ಮ್ ಜೊತೆಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲೂ ರಾಗಿ ಸಂಶೋಧನಾ ಚಟುವಟಿಕೆಗಳು ನಡೆದವು. ರಾಗಿ ಲಕ್ಷ್ಮಣಯ್ಯನವರ ವಿಶೇಷ ಸಂಪರ್ಕ ಪದ್ದತಿಯನ್ನು ಅಳವಡಿಸಿಕೊಂಡು ಹೊಸ ತಳಿಗಳನ್ನು ಉತ್ಪಾದಿಸಲಾಯಿತು.

Ragi 2

ಇಂಡಾಫ್ ತಳಿಗಳನ್ನು ಮೂಲಾಧಾರವಾಗಿರಿಸಿಕೊಂಡು ಹೊಸ ತಲೆಮಾರಿನ ವಿಜ್ಞಾನಿಗಳು ಹಲವು ರಾಗಿ ತಳಿಗಳನ್ನು ಬಿಡುಗಡೆ ಮಾಡಿದರು (ಆವರಣದಲ್ಲಿ ಬಿಡುಗಡೆಯಾದ ವರ್ಷ). ಅವೆಂದರೆ : ಎಂಆರ್ -1 (1990), ಎಂಆರ್ -2 (1992), ಜಿಪಿಯು -28 (1998), ಎಲ್ -5 (1999), ಜಿಪಿಯು -26 (2000), ಜಿಪಿಯು -45 (2001), ಎಂಆರ್ -6 (2004), ಜಿಪಿಯು -48 (2005), ಎಂಎಲ್ – 365 (2008), ಜಿಪಿಯು -66 (2009), ಕೆಎಂಆರ್ -301 (2009), ಕೆಎಂಆರ್ -204 (2012), ಕೆಎಂಆರ್ -340 (2016), ಕೆಎಂಆರ್ -630 (2018), ಕೆಎಂಆರ್ -316 (2021) ಮತ್ತು ಎಂಎಲ್ -322 (2023). (ಎಂಆರ್ ಎಂದರೆ ಮಂಡ್ಯ ರಾಗಿ, ಎಲ್ ಎಂದರೆ ಲಕ್ಷ್ಮಣಯ್ಯ, ಜಿಪಿಯು ಎಂದರೆ ಜೆರ್ಮ್ ಪ್ಲಾಸ್ಮ್ ಯೂನಿಟ್, ಕೆಎಂಆರ್ ಎಂದರೆ ಕರ್ನಾಟಕ ಮಂಡ್ಯ ರಾಗಿ, ಎಂಎಲ್ ಎಂದರೆ ಮಾಸ್ ಲ್ಯಾಬ್). ಇಂತಹ ಅಧಿಕ ಇಳುವರಿಯ ರಾಗಿ ತಳಿಗಳನ್ನು ಕೊಟ್ಟ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯಕ್ಕೊಂದು ಶರಣು.

ಮುಂಗಾರು ಹಂಗಾಮಿನ ಬಿತ್ತನೆಗೆ ಸೂಕ್ತ ತಳಿಗಳು

ಬಿತ್ತನೆಗಾಗಿ ನೀರಾವರಿಯಾದರೆ ಪ್ರತಿ ಎಕರೆಗೆ 2 ಕಿಲೋ ಹಾಗೂ ಖುಷ್ಕಿಯಾದರೆ 5 ಕಿಲೋ ರಾಗಿ ಕಾಳು ಬೇಕಾಗುತ್ತದೆ. ಕೆಲ ರೈತರು ಇನ್ನೂ ಹೆಚ್ಚು ಕಾಳನ್ನು ಬಿತ್ತನೆಗೆ ಬಳಸುತ್ತಾರೆ.
ಇಂಡಾಫ್ 8, ಎಂ. ಆರ್ 1, ಎಂ. ಆರ್ 6 ಮತ್ತು ಎಲ್ 5: ಜೂನ್ –ಜುಲೈ ತಿಂಗಳಲ್ಲಿ ಬಿತ್ತನೆಗೆ ಸೂಕ್ತ. ಬೆಳೆ ಅವಧಿ 120-125 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 16-18 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 9-12 ಕ್ವಿಂಟಾಲ್ ರಾಗಿ ಇಳುವರಿ.

ಕೆಎಂಆರ್ 301: ಜೂನ್ – ಜುಲೈ ತಿಂಗಳಲ್ಲಿ ಬಿತ್ತನೆಗೆ ಸೂಕ್ತ. ಬೆಳೆ ಅವಧಿ ಅಂದಾಜು 115-118 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 12-14 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 8-10 ಕ್ವಿಂಟಾಲ್ ರಾಗಿ ಇಳುವರಿ.

ಜಿಪಿಯು 28, ಹೆಚ್ ಆರ್ 911, ಜಿಪಿಯು 66, ಎಂಎಲ್ 365 ಮತ್ತು ಇಂಡಾಫ್ 5 : ಜುಲೈ- ಆಗಸ್ಟ್ ತಿಂಗಳಲ್ಲಿ ಬಿತ್ತನೆಗೆ ಸೂಕ್ತ. ಬೆಳೆ ಅವಧಿ ಅಂದಾಜು 110 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 12-14 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 8-10 ಕ್ವಿಂಟಾಲ್ ರಾಗಿ ಇಳುವರಿ.
ಎಂಎಲ್ 322: ಆಗಸ್ಟ್ -ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆಗೆ ಸೂಕ್ತ. ಬೆಳೆ ಅವಧಿ 105-110 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 18-20 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 14-16 ಕ್ವಿಂಟಾಲ್ ರಾಗಿ ಇಳುವರಿ.

ಕೆಎಂಆರ್ 316: ಜೂನ್ – ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆಗೆ ಸೂಕ್ತ. ಬೆಳೆ ಅವಧಿ 100-105 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 18-20 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 12-14 ಕ್ವಿಂಟಾಲ್ ರಾಗಿ ಇಳುವರಿ.

ಜಿಪಿಯು 45: ವರ್ಷದ ಎಲ್ಲಾ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 95-100 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 10-12 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 7-8 ಕ್ವಿಂಟಾಲ್ ರಾಗಿ ಇಳುವರಿ.

ಜಿಪಿಯು 48: ಏಪ್ರಿಲ್ – ಮೇ, ಆಗಸ್ಟ್, ಜನವರಿ- ಫೆಬ್ರವರಿ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 100-105 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 10-12 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 7-8 ಕ್ವಿಂಟಾಲ್ ರಾಗಿ ಇಳುವರಿ.

ಜಿಪಿಯು 26: ಆಗಸ್ಟ್, ಜನವರಿ- ಫೆಬ್ರವರಿ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 100-105 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 10-12 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 7-8 ಕ್ವಿಂಟಾಲ್ ರಾಗಿ ಇಳುವರಿ.

ಇಂಡಾಫ್ 9: ಏಪ್ರಿಲ್ – ಮೇ, ಆಗಸ್ಟ್ – ಸೆಪ್ಟೆಂಬರ್, ಜನವರಿ- ಫೆಬ್ರವರಿ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 95-105 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 12-14 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 8-10 ಕ್ವಿಂಟಾಲ್ ರಾಗಿ ಇಳುವರಿ.

ಕೆಎಂಆರ್ 204: ಜುಲೈ- ಆಗಸ್ಟ್ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 100-105 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 12-14 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 8-10 ಕ್ವಿಂಟಾಲ್ ರಾಗಿ ಇಳುವರಿ.

ಕೆಎಂಆರ್ 340 : ಜುಲೈ- ಆಗಸ್ಟ್ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 95-100 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 18-20 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 12-14 ಕ್ವಿಂಟಾಲ್ ರಾಗಿ ಇಳುವರಿ.

ಕೆಎಂಆರ್ 630: ಜುಲೈ- ಆಗಸ್ಟ್ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 95-100 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 18-20 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 14-16 ಕ್ವಿಂಟಾಲ್ ರಾಗಿ ಇಳುವರಿ.

ಇಂಡಾಫ್ 7: ಸೆಪ್ಟೆಂಬರ್ – ಅಕ್ಟೋಬರ್ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 115-120 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 12-14 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 8-10 ಕ್ವಿಂಟಾಲ್ ರಾಗಿ ಇಳುವರಿ.

ಇಂಡಾಫ್ 9: ಸೆಪ್ಟೆಂಬರ್ – ಅಕ್ಟೋಬರ್ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 95-105 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 12-14 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 8-10 ಕ್ವಿಂಟಾಲ್ ರಾಗಿ ಇಳುವರಿ.

ಕೆಎಂಆರ್ 301: ಸೆಪ್ಟೆಂಬರ್ – ಅಕ್ಟೋಬರ್ ತಿಂಗಳು ಬಿತ್ತನೆಗೆ ಸೂಕ್ತ. ಬೆಳೆ ಅವಧಿ 115-120 ದಿನಗಳು. ನೀರಾವರಿಯಲ್ಲಿ ಪ್ರತಿ ಎಕರೆಗೆ 12-14 ಕ್ವಿಂಟಾಲ್ ರಾಗಿ ಇಳುವರಿ. ಖುಷ್ಕಿಯಲ್ಲಿ 8-10 ಕ್ವಿಂಟಾಲ್ ರಾಗಿ ಇಳುವರಿ.

Ragi 3

ಜಾನುವಾರುಗಳಿಗೆ ರಾಗಿ ಹುಲ್ಲು

ರಾಗಿ ಇಳುವರಿಯ ಜೊತೆಗೆ ಒಂದು ಎಕರೆಗೆ ಅಂದಾಜು 1.5 ರಿಂದ 4 ಟನ್‍ಗಳವರೆಗೆ ರಾಗಿ ಹುಲ್ಲಿನ ಇಳುವರಿಯು ಸಿಗುತ್ತದೆ. ಅದು ಜಾನುವಾರುಗಳಿಗೆ ಪೌಷ್ಟಿಕ ಮೇವಾಗುತ್ತದೆ. ಬೇಸಾಯದ ಜೊತೆಜೊತೆಗೆ ಜಾನುವಾರು ಸಾಕಣೆಯೂ ನಡೆಯುತ್ತದೆ. ಅದರಿಂದ ಕೊಟ್ಟಿಗೆ ಗೊಬ್ಬರ ಸಿಗುತ್ತದೆ. ಭೂಮಿಯು ಫಲವತ್ತತೆಯಿಂದ ಸಮೃದ್ಧವಾಗುತ್ತದೆ. ಒಂದು ಅಂದಾಜಿನಂತೆ, ನಮ್ಮ ರಾಜ್ಯದಲ್ಲಿ 1.02 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ ಬೆಳೆಯುತ್ತಾರೆ. ಅದರಿಂದ 1.875 ಮಿಲಿಯನ್ ಟನ್‍ಗಳಷ್ಟು ರಾಗಿಯ ಉತ್ಪಾದನೆಯಾಗುತ್ತಿದೆ. ಅಲ್ಪಸ್ವಲ್ಪ ಮಳೆಯಾದರೂ ಜೀವವುಳಿಸಿಕೊಂಡು ಬೆಳೆಯುವ ಗುಣ ರಾಗಿ ಪೈರಿಗಿದೆ. ರಾಗಿ ಪೈರು ಅಷ್ಟಾಗಿ ರೈತನ ಕೈ ಬಿಡುವುದಿಲ್ಲ. ರಾಷ್ಟ್ರಕವಿಗಳಾದ ಕುವೆಂಪುರವರು ರಚಿಸಿದಂತೆ ‘ಬಿತ್ತುಳುವುದನವ ಬಿಡುವುದೇ ಇಲ್ಲ’ ಎಂಬ ಮಾತಂತೂ ರಾಗಿ ಬೆಳೆಗೆ ಅಕ್ಷರಶಃ ಅನ್ವಯ.

*****

(ಆಧಾರ : 1. ತೆನೆಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ : ಪ್ರೊ. ಎಂ. ನಾರಾಯಣ ಸ್ವಾಮಿ ಮತ್ತು ರಮೇಶ್ ಸಂಕ್ರಾತಿ, 2. ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ದತಿಗಳು : ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ 3. ಜೆನೆಟಿಕ್ ಎನ್‍ಹ್ಯಾನ್ಸ್‍ಮೆಂಟ್ ಆಫ್ ಫಿಂಗರ್ ಮಿಲ್ಲೆಟ್ ಇನ್ ಕರ್ನಾಟಕ – ಅನ್ ಓವರ್‍ವ್ಯೂ : ಕೆ. ಮಧುಸೂದನ್, ಸಿ. ಆರ್. ರವಿಶಂಕರ್, ಎಚ್. ಆರ್. ರವೀಂದ್ರ, ಪಿ. ಪ್ರಕಾಶ್, ಚನ್ನಬೈರೇಗೌಡ ಮತ್ತು ಎ. ಸೀತಾರಾಮ್).

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರೇನ್ ಸ್ಟ್ರೋಕ್ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಅವಶ್ಯ: ನರರೋಗ ತಜ್ಞ ಡಾ. ರಾಕೇಶ ಎ.ವಿ

ಮೆದುಳಿನ ಪಾರ್ಶ್ವವಾಯು (ಬ್ರೇನ್ ಸ್ಟ್ರೋಕ್) ಸಂಭವಿಸಿದಾಗ ತಕ್ಷಣ ವೈದ್ಯಕೀಯ ನೆರವು ಪಡೆಯುವುದು...

ಅಮೆರಿಕ ಸರ್ಕಾರದ ವಿರುದ್ಧ ನ್ಯಾಯಾಲಯದ ಮಹತ್ವದ ಆದೇಶ: 55 ಸಾವಿರ ಗ್ರೀನ್ ಕಾರ್ಡ್ ಅರ್ಜಿಗಳ ಪರಿಗಣನೆಗೆ ಸೂಚನೆ

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವ ವಿದೇಶಿಯರಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಜಗತ್ತಿನ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ ಬೆಳಗಿದ ರೋಚಕ ಕತೆ ಗೊತ್ತೇ?

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ...