- ಪ್ರಧಾನಿ ಕಚೇರಿ ಸಿಬ್ಬಂದಿ ಎಂದು ಜಮ್ಮು ಕಾಶ್ಮೀರದಲ್ಲಿ ಅಡ್ಡಾಡಿದ್ದ ಕಿರಣ್ ಪಟೇಲ್
- ಅಧಿಕಾರ ದುರ್ಬಳಕೆ ಬಗ್ಗೆ ವಿಪಕ್ಷಗಳ ಟೀಕೆಯ ನಂತರ ಗುಜರಾತ್ ಪೊಲೀಸರ ವಶಕ್ಕೆ
ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಹಿರಿಯ ಅಧಿಕಾರಿ ಸೋಗಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಗಳ ಜೊತೆಗೆ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಬಾರಿ ಓಡಾಡಿಕೊಂಡಿದ್ದ ಕಾನ್‌ಮ್ಯಾನ್ (ವಂಚಕ) ಕಿರಣ್ ಪಟೇಲ್‌ನನ್ನು ಬಂಧಿಸಿದ ಕಾಶ್ಮೀರ ಪೊಲೀಸರು ಗುಜರಾತ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಿರಣ್ ಪಟೇಲ್‌ನನ್ನು ಗುರುವಾರ (ಏಪ್ರಿಲ್ 6) ಬಂಧಿಸಿದ್ದ ಪೊಲೀಸರು ಶ್ರೀನಗರದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ನೀಡಿದ ಆದೇಶದ ಮೇರೆಗೆ ಆತನನ್ನು ಗುಜರಾತ್ ಪೊಲೀಸರ ವಶಕ್ಕೆ ನೀಡಿದ್ದಾರೆ.
ಅಹಮದಾಬಾದ್ ಅಪರಾಧ ವಿಭಾಗ ಇತ್ತೀಚೆಗೆ ದಾಖಲಿಸಿದ ಹೊಸ ಪ್ರಕರಣಕ್ಕೆ ಸಂಬಂಧಿಸಿ ವಂಚಕ ಕಿರಣ್ ಪಟೇಲ್‌ನನ್ನು ವಶಕ್ಕೆ ತೆಗೆದುಕೊಳ್ಳಲು ಗುಜರಾತ್ ಪೊಲೀಸರ ತಂಡ ಮಂಗಳವಾರ (ಏಪ್ರಿಲ್ 4) ಕಾಶ್ಮೀರಕ್ಕೆ ಆಗಮಿಸಿತ್ತು.
ಕಿರಣ್ ಪಟೇಲ್ ಕಳೆದ ತಿಂಗಳು ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಎಂದು ಸೋಗು ಹಾಕಿಕೊಂಡು ಜಮ್ಮ-ಕಾಶ್ಮೀರದ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದ. ಸರ್ಕಾರದ ಅಧಿಕಾರಿಗಳಿಂದ ಭದ್ರತೆ ಹಾಗೂ ಇತರ ಸೌಲಭ್ಯಗಳನ್ನು ಅನುಭವಿಸಿದ್ದ.
“ಶ್ರೀನಗರದ ಮ್ಯಾಜಿಸ್ಟ್ರೇಟ್ ಗುರುವಾರ ನೀಡಿದ ಆದೇಶದಂತೆ ಕೇಂದ್ರ ಕಾರಾಗೃಹದ ಅಧಿಕಾರಿಗಳು ಕಿರಣ್ ಪಟೇಲ್‌ನನ್ನು ಗುಜರಾತ್ ಪೊಲೀಸ್ ತಂಡಕ್ಕೆ ಹಸ್ತಾಂತರಿಸಿದರು. ಮಂಗಳವಾರದಿಂದ ಇಲ್ಲಿ ನೆಲೆಸಿದ್ದ ಗುಜರಾತ್ ಪೊಲೀಸ್ ತಂಡ ಗುರುವಾರ ಮಧ್ಯಾಹ್ನ ಕಿರಣ್‌ನನ್ನು ಗುಜರಾತ್‌ಗೆ ಕರೆದೊಯ್ದಿದೆ” ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಹಮದಾಬಾದ್ ನಗರದ ಪೊಲೀಸ್ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಚೈತನ್ಯ ಆರ್ ಮಾಂಡ್ಲಿಕ್ ಅವರು ನೀಡಿದ ಅಧಿಕಾರ ಪತ್ರವನ್ನು ಸಹ ಇನ್ಸ್‌ಪೆಕ್ಟರ್ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.
ಅದರ ಪ್ರಕಾರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎಂ. ಸೋಲಂಕಿ, ಪಿ.ಸಿ ಜಯೇಶ್ ನಾರನ್‌ಭಾಯ್, ವಿಜಯ್‌ಸಿಂಹ ಭರತ್‌ಸಿನ್ಹ್, ನಿಮೇಶ್ ಕೌಸಿಕ್‌ಭಾಯ್ ಮತ್ತು ಮಯೂರ್ಧ್ವಜಸಿಂಹ ಭಗೀರಥಸಿಂಹ ಪೊಲೀಸ್ ಸಿಬ್ಬಂದಿ, ಗುಜರಾತ್‌ನ ಅಹಮದಾಬಾದ್ ನಗರದ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಪ್ರಕರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಗಿದೆ.
“ಆರೋಪಿ ಕಿರಣ್‌ಭಾಯ್ ಅಲಿಯಾಸ್ ಬನ್ಸಿಯನ್ನು ಸಹ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಲಾಯಿತು. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ವಂಚಕ ಕಿರಣ್ ಪಟೇಲ್ ಹಸ್ತಾಂತರದ ಆದೇಶ ಮಾಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಈ ಹಿಂದೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಅವರು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾನೂನಿನ ಪ್ರಕಾರ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ವಂಚಕ ಕಿರಣ್ ಪಟೇಲ್‌ನನ್ನು ವಶಕ್ಕೆ ತೆಗೆದುಕೊಳ್ಳಲು ಗುಜರಾತ್ ಪೊಲೀಸರೊಂದಿಗೆ ಸಹಕರಿಸುತ್ತಾರೆ ಎಂದು ಹೇಳಿದರು.
ಗುಜರಾತ್‌ನ ನಾನಾ ನಗರಗಳಲ್ಲಿ ಕಿರಣ್ ಪಟೇಲ್ ವಿರುದ್ಧ ದಾಖಲಾಗಿರುವ ದೂರುಗಳ ಕಾರಣದಿಂದ ಜಮ್ಮು-ಕಾಶ್ಮೀರ ಪೊಲೀಸರಿಂದ ಬಿಡುಗಡೆಗೊಂಡರೆ ಅವರನ್ನು ಬಂಧಿಸುವುದಾಗಿ ಗುಜರಾತ್ ಪೊಲೀಸರು ಈ ಹಿಂದೆ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ರಾಹುಲ್ ವಿರುದ್ಧ ಗುಲಾಂ ನಬಿ ವಾಗ್ದಾಳಿ; ಅಧಿಕಾರ ಅನುಭವಿಸಿ ಹೊರ ಹೋದವರು ಎಂದ ಕಾಂಗ್ರೆಸ್
ಮಾರ್ಚ್ 3ರಂದು ವಂಚಕ ಕಿರಣ್ ಪಟೇಲ್ ಕಾಶ್ಮೀರಕ್ಕೆ ಅಧಿಕಾರಿಯ ಸೋಗಿನಲ್ಲಿ ಮೂರನೇ ಭೇಟಿ ನೀಡಿದಾಗ ಭದ್ರತಾ ಅಧಿಕಾರಿಗಳು ಆತನನ್ನು ಬಂಧಿಸಿದರು. ದಕ್ಷಿಣ ಕಾಶ್ಮೀರದಲ್ಲಿ ಸೇಬಿನ ತೋಟಗಳಿಗೆ ಖರೀದಿದಾರರನ್ನು ಗುರುತಿಸಲು ಕೇಂದ್ರ ಸರ್ಕಾರ ಆದೇಶವನ್ನು ನೀಡಿದೆ ಎಂದು ಕಿರಣ್ ಹೇಳಿಕೊಂಡಿದ್ದ.