ಭಾರತದಲ್ಲಿ ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳು ಇದ್ದರೂ, ಅತ್ಯಾಚಾರ, ಬಾಲ್ಯವಿವಾಹ ಹಾಗೂ ವರದಕ್ಷಿಣೆ ಕಿರುಕುಳದಂತಹ ಗಂಭೀರ ಸಮಸ್ಯೆಗಳು ಇನ್ನೂ ಕೊನೆಗೊಂಡಿಲ್ಲ. ವರದಕ್ಷಿಣೆ ಕೊಡುವುದು-ಪಡೆಯುವುದು ಕಾನೂನುಬಾಹಿರವಾಗಿದ್ದರೂ, ವರದಕ್ಷಿಣೆ ಪದ್ದತಿಯು ನಿರಂತರವಾಗಿ ಮುಂದುವರೆದಿದೆ. ಅದರಲ್ಲೂ, ವರದಕ್ಷಿಣೆಗಾಗಿ ‘ಕಿಡ್ನಿ’ ಕೊಡುವಂತೆ ಸೊಸೆಗೆ ಅತ್ತೆ-ಮಾವ ಕಿರುಕುಳ ನೀಡಿರುವ ವಿಕೃತ ಘಟನೆ ಬಿಹಾರದಲ್ಲಿ ನಡೆದಿದೆ.
ವರದಕ್ಷಿಣೆಯಾಗಿ ತಮ್ಮ ಮಗನಿಗೆ ತವರು ಮನೆಯಿಂದ ಬೈಕ್, ಚಿನ್ನದ ಆಭರಣೆ ಹಾಗೂ ನಗದು ತಂದುಕೊಡಬೇಕು. ಇಲ್ಲವಾದಲ್ಲಿ, ನಿನ್ನ ಕಿಡ್ನಿಯನ್ನೇ ಕೊಡಬೇಕೆಂದು ಮಹಿಳೆಯೊಬ್ಬರಿಗೆ ಆಕೆಯ ಅತ್ತೆ-ಮಾವ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬಿಹಾರದ ಮುಜಫರ್‌ಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಜಫರ್‌ಪುರದ ದೀಪ್ತಿ ಎಂಬವರು ತಮ್ಮ ಅತ್ತೆ-ಮಾವನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ; ” 2021ರಲ್ಲಿ ನನ್ನ ವಿವಾಹವಾಗಿತ್ತು. ಆರಂಭದಲ್ಲಿ ಗಂಡನ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಕಾಲಾನಂತರದಲ್ಲಿ ಅತ್ತೆ-ಮಾವ ಕಿರುಕುಳ ನೀಡಲು ಆರಂಭಿಸಿದರು. ವರದಕ್ಷಿಣೆಯಾಗಿ ಬೈಕ್, ನಗದು ಮತ್ತು ಆಭರಣಗಳನ್ನು ತವರು ಮನೆಯಿಂದ ತರಬೇಕೆಂದು ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ತನ್ನ ತಂದೆಯ ಮನೆಯಿಂದ ವರದಕ್ಷಿಣೆ ತರಲು ಸಾಧ್ಯವಿಲ್ಲವೆಂದು ಹೇಳಿದ್ದಕ್ಕೆ, ನನ್ನ ಅನಾರೋಗ್ಯ ಪೀಡಿತ ಪತಿಗೆ ನನ್ನ ಕಿಡ್ನಿಗಳನ್ನು ಒಂದನ್ನು ದಾನ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆತನಿಗೆ ಮದುವೆಗೂ ಮುನ್ನವೆ ಕಿಡ್ನಿ ಸಮಸ್ಯೆಯಿತ್ತು. ಆದರೆ, ಅದನ್ನು ಮುಚ್ಚಿಟ್ಟು ಮದುವೆ ಮಾಡಿಸಿದ್ದಾರೆ. ಈಗ, ಕಿಡ್ನಿ ಕೊಡಬೇಕೆಂದು ಹೊಡೆದು, ಬಡಿದು ಪೀಡಿಸುತ್ತಿದ್ದಾರೆ” ಎಂದು ದೀಪ್ತಿ ಆರೋಪಿಸಿದ್ದಾರೆ.
ದೀಪ್ತಿ ಅವರ ದೂರಿನ ಆಧಾರದ ಮೇಲೆ ಪೊಲೀಸರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.