ತಮಿಳುನಾಡಿನ ಮಧುರೈನ ತಿರುಪರಂಕುಂಡ್ರಂ ಬೆಟ್ಟದಲ್ಲಿರುವ ವಿವಾದಿತ ‘ದೀಪತ್ತೂಣ್’ (Deepathoon) ಸ್ತಂಭದ ಮೇಲೆ ಶನಿವಾರ (ನವೆಂಬರ್ 28) ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಹಚ್ಚುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ. ಇದರೊಂದಿಗೆ, ನ್ಯಾಯಾಲಯದ ಹಿಂದಿನ ಆದೇಶ ಪಾಲಿಸದ ಅರುಳ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಟ್ರಸ್ಟ್ ಮಂಡಳಿಯನ್ನು ಅಮಾನತುಗೊಳಿಸಿರುವ ಪೀಠವು, ದೇಗುಲ ಮತ್ತು ಬೆಟ್ಟದ ಭದ್ರತೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಹಸ್ತಾಂತರಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು, ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವ ಮೂಲಕ ‘ಸಾಂವಿಧಾನಿಕ ಅರಾಜಕತೆ’ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಸರ್ಕಾರ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ನವೆಂಬರ್ 24ರಂದು ಕಾರ್ತಿಕ ದೀಪೋತ್ಸವದ ಅಂಗವಾಗಿ ದೀಪತ್ತೂಣ್‌ನಲ್ಲಿ ದೀಪ ಹಚ್ಚಲು ಸುಪ್ರೀಂ ಕೋರ್ಟ್ ನವೆಂಬರ್ 20ರಂದು ಒಂದು ಬಾರಿಯ ಮಧ್ಯಂತರ ಅನುಮತಿ ನೀಡಿತ್ತು. ಆದರೆ, ಅಂದು ದೀಪತ್ತೂಣ್ ಬದಲಾಗಿ ಉಚ್ಚಿ ಪಿಳ್ಳೈಯಾರ್ ದೇಗುಲದ ಸಮೀಪದ ಸಾಂಪ್ರದಾಯಿಕ ದೀಪ ಮಂಟಪದಲ್ಲಿ ಮಾತ್ರ ದೀಪ ಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಉಚ್ಚಿ ಪಿಳ್ಳೈಯಾರ್ ಮಂಟಪದಲ್ಲಿ ಹಚ್ಚಿದ ದೀಪದ ಜ್ಯೋತಿಯನ್ನೇ ಬಳಸಿ (ಅದು ಆರಿದ್ದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿ) ಶನಿವಾರ ದೀಪತ್ತೂಣ್‌ನಲ್ಲಿ ದೀಪ ಬೆಳಗಿಸುವಂತೆ ನಿರ್ದೇಶಿಸಿದೆ. ಸಮೀಪದ ಸಿಕಂದರ್ ದರ್ಗಾದಿಂದ ಕನಿಷ್ಠ 50 ಮೀಟರ್ ದೂರದಲ್ಲಿ ಭಕ್ತರು ದೀಪ ಹಚ್ಚಲು ಅವಕಾಶ ನೀಡಲಾಗಿದ್ದು, ದೇಗುಲ ಹಾಗೂ ದರ್ಗಾ ಎರಡಕ್ಕೂ ಸಿಆರ್‌ಪಿಎಫ್ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ.
ದೇವಾಲಯದ ಆಡಳಿತ ನಿರ್ವಹಣೆಯಲ್ಲಿ ಟ್ರಸ್ಟ್ ಮಂಡಳಿ ಸಂಪೂರ್ಣ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟ ಪೀಠವು, ಮಂಡಳಿಯನ್ನು ಅಮಾನತುಗೊಳಿಸಿದೆ. ದೇಗುಲದ ಆಡಳಿತವನ್ನು ತಕ್ಷಣವೇ ವಹಿಸಿಕೊಳ್ಳಲು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ (ಮೇಘಾಲಯ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ) ಮತ್ತು ವಿ. ಪಾರ್ತಿಬನ್ ಅವರನ್ನು ‘ಕೋರ್ಟ್ ರಿಸೀವರ್’ಗಳಾಗಿ (ಆಡಳಿತಾಧಿಕಾರಿ) ನೇಮಿಸಿದೆ. ಸ್ಥಳೀಯ ಪೊಲೀಸರು ಆದೇಶ ಜಾರಿಗೊಳಿಸುವಲ್ಲಿ ವಿಫಲರಾದ ಕಾರಣ ದೇಗುಲ ಮತ್ತು ತಿರುಪರಂಕುಂಡ್ರಂ ಬೆಟ್ಟದ ಭದ್ರತೆಯನ್ನು ಸಿಆರ್‌ಪಿಎಫ್‌ಗೆ ವಹಿಸಲಾಗಿದೆ.
ಇದೇ ವೇಳೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಪ್ರವೇಶಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಂದ ಯಾವುದೇ ಸೂಚನೆ ಬಂದಿಲ್ಲ’ ಎಂದು ದೇಗುಲದ ಟ್ರಸ್ಟಿಗಳು ಇಲಾಖೆಗೆ ತಿಳಿಸಿರುವುದಾಗಿ ಪೀಠದ ಗಮನಕ್ಕೆ ತಂದರು.
ನವೆಂಬರ್ 20ರ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ತಮಿಳುನಾಡು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ), ಮಧುರೈ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಡಿಸೆಂಬರ್ 15ರಂದು ಖುದ್ದು ಹಾಜರಾಗುವಂತೆ ಸೂಚಿಸಿರುವ ಪೀಠವು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಡುವೆ ವಿನಿಮಯವಾದ ಇ–ಮೇಲ್, ಫೋನ್ ಕರೆ ಮತ್ತು ಸಂದೇಶಗಳ ಸಂಪೂರ್ಣ ವಿವರಗಳೊಂದಿಗೆ ಪ್ರಮಾಣಪತ್ರ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ.



