ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಪಸ್ ಪಡೆದಿದ್ದಾರೆ.
ಮಾಧ್ಯಮಗಳ ವರದಿಯಂತೆ ಬಂಧನದ ವಿರುದ್ಧದ ತಮ್ಮ ಅರ್ಜಿಯನ್ನು ಕೆಳ ಹಂತದ ರೋಸ್ ಅವಿನ್ಯೂ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ ಎನ್ನಲಾಗಿದೆ.
ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಕೇಜ್ರಿವಾಲ್ ಪರವಾಗಿ ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ಕೆಳ ಹಂತದ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಘರ್ಷಣೆಯುಂಟಾಗುವ ಸಾಧ್ಯತೆಯಿರುವುದರಿಂದ ಅರ್ಜಿಯನ್ನು ವಾಪಸ್ ಪಡೆದರು.
2021-22ರ ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಾ.21ರಂದು ರಾತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಉತ್ತರಕ್ಕೆ ಬೆಂಕಿ ಹಚ್ಚದಿರಲಿ ಶೋಭಾ ಕರಂದ್ಲಾಜೆ
ದೆಹಲಿ ಮುಖ್ಯಮಂತ್ರಿ ಬಂಧನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದೆಹಲಿ ಸಂಪುಟ ಸಚಿವರಾದ ಅತೀಶಿ ಹಾಗೂ ಸೌರಭ್ ಬಾರದ್ವಜ್ ಒಳಗೊಂಡ ಎಎಪಿ ನಾಯಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಇಂದು ವಶಕ್ಕೆ ತೆಗೆದುಕೊಂಡರು.
ಈ ನಡುವೆ ಅಬಕಾರಿ ನೀತಿ ಯೋಜನೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಮಾ.22) ಜಾರಿ ನಿರ್ದೇಶನಾಲಯದಿಂದ ಬಂಧನದ ವಿರುದ್ಧ ಇಂದು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಒಪ್ಪಿಗೆ ಸೂಚಿಸಿತ್ತು.
ಮೂಲಗಳ ಪ್ರಕಾರ ಸ್ವಾತಂತ್ರ್ಯ ನಂತರದಲ್ಲಿ ಮುಖ್ಯಮಂತ್ರಿಯೊಬ್ಬರು ಅಧಿಕಾರದಲ್ಲಿದ್ದಾಗಲೇ ಬಂಧನಕ್ಕೊಳಗಾಗಿರುವುದು ಇದೇ ಮೊದಲ ಪ್ರಕರಣವಾಗಿದೆ.
ದೆಹಲಿ ಮುಖ್ಯಮಂತ್ರಿ ಕಚೇರಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ ಎಎಪಿ ದೇಶಾದ್ಯಂತ ಪ್ರತಿಭಟನೆ ಕರೆ ನೀಡಿದೆ.
