ತಾನು ಬೇಡಿಕೆಯಿಟ್ಟ ₹13 ಲಕ್ಷ ಮೌಲ್ಯದ ಮಾರುತಿ ಬ್ರೆಜಾ ಕಾರಿನ ಬದಲು ₹9.5 ಲಕ್ಷದ ಹುಂಡೈ ಔರಾ ಕಾರು ಬುಕ್ ಮಾಡಿದ್ದಕ್ಕಾಗಿ ಮದುವೆಯನ್ನೇ ರದ್ದುಗೊಳಿಸಿದ ಆರೋಪದ ಮೇಲೆ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಕುಲ್‌ದೀಪ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಹರಿಯಾಣದ ಸೋನಿಪತ್‌ನ ಮಾಮ್‌ಚಂದ್ ವಾಟಿಕಾದಲ್ಲಿ ನವೆಂಬರ್ 20ರಂದು ನಡೆಯಬೇಕಿದ್ದ ವಿವಾಹವು ವರದಕ್ಷಿಣೆ ವಿವಾದದಿಂದ ಮುರಿದುಬಿದ್ದಿದೆ.
ಸುಮಾರು ಆರು ತಿಂಗಳ ಹಿಂದೆ ಈ ವಿವಾಹ ನಿಶ್ಚಯವಾಗಿತ್ತು. ವಧುವಿನ ತಂದೆ ಸುಭಾಷ್ ಕುಮಾರ್ ಅವರು ಸೋನಿಪತ್ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ವರನಿಗಾಗಿ ₹9.5 ಲಕ್ಷ ಮೌಲ್ಯದ ಹುಂಡೈ ಔರಾ ಕಾರನ್ನು ಬುಕ್ ಮಾಡಲಾಗಿತ್ತು. ಆದರೆ ಆ ಕಾರು ತನಗೆ ಇಷ್ಟವಾಗಿಲ್ಲ ಎಂದ ಕುಲ್‌ದೀಪ್, ₹13 ಲಕ್ಷದ ಮಾರುತಿ ಬ್ರೆಜಾ ಕಾರೇ ಬೇಕು ಎಂದು ಪಟ್ಟು ಹಿಡಿದಿದ್ದರು. ಬಳಿಕ ಔರಾ ಬುಕಿಂಗ್ ರದ್ದುಗೊಳಿಸಿ ಬ್ರೆಜಾ ಕಾರಿಗಾಗಿ ಹುಡುಕಾಡಿದರೂ, ಕೆಲ ಶೋರೂಂಗಳಲ್ಲಿ ಲಭ್ಯವಿಲ್ಲದ ಕಾರಣ ಅದನ್ನು ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸುಭಾಷ್ ತಿಳಿಸಿದ್ದಾರೆ.
ವರನ ಕುಟುಂಬಕ್ಕಾಗಿ ಸೋಫಾ, ಅಲ್ಮೇರಾ ಸೇರಿದಂತೆ ಉತ್ತಮ ಗುಣಮಟ್ಟದ ಪೀಠೋಪಕರಣಗಳನ್ನು ಸಿದ್ಧಪಡಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ ವರನಿಗೆ ಎರಡು ತೊಲ ಚಿನ್ನದ ಸರ, ಆತನ ತಾಯಿಗೆ ನಾಲ್ಕು ತೊಲ ಚಿನ್ನದ ಕಿವಿಯೋಲೆ ಮತ್ತು ಬೆಳ್ಳಿ ಕಾಲ್ಗೆಜ್ಜೆಯನ್ನೂ ವ್ಯವಸ್ಥೆ ಮಾಡಲಾಗಿತ್ತು. ವರನ ಸಹೋದರ ಹಾಗೂ ಆತನ ಪತ್ನಿಗೂ ಆಭರಣ ನೀಡಬೇಕೆಂಬ ಬೇಡಿಕೆಯ ಮೇರೆಗೆ ಅಕ್ಕಸಾಲಿಗರಿಗೆ ಆರ್ಡರ್ ನೀಡಿದ್ದಾಗಿ ಸುಭಾಷ್ ಕುಮಾರ್ ಆರೋಪಿಸಿದ್ದಾರೆ.
ಸಾಮಾನ್ಯವಾಗಿ ವರನ ಕಡೆಯವರು ಭರಿಸಬೇಕಾದ ಖರ್ಚುಗಳನ್ನೂ ತಾವೇ ಮಾಡಿದ್ದಾಗಿ ವಧುವಿನ ತಂದೆ ಹೇಳಿದ್ದಾರೆ. ವರನ ಕುಟುಂಬದ ಒತ್ತಾಯದ ಮೇರೆಗೆ ₹11,000 ವೆಚ್ಚದಲ್ಲಿ ಅಲಂಕೃತ ಕುದುರೆ (ಘೋಡಿ) ಹಾಗೂ ₹13,500 ವೆಚ್ಚದಲ್ಲಿ ಡಿಜೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನವೆಂಬರ್ 20ರಂದು ವಿವಾಹ ಸ್ಥಳವನ್ನು ಸಿಂಗರಿಸಿ, ಡಿಜೆ ಸಿದ್ಧಪಡಿಸಿ, ವಧು ಹಾಗೂ ಅತಿಥಿಗಳು ವರನ ಆಗಮನಕ್ಕಾಗಿ ಕಾಯುತ್ತಿದ್ದರು.
ಆದರೆ ಮದುವೆ ದಿನ ರಾತ್ರಿ 7.15ರ ಸುಮಾರಿಗೆ ಕುಲ್‌ದೀಪ್ ಮತ್ತು ಅವರ ತಾಯಿ ಸಾಮಾನ್ಯ ಉಡುಪಿನಲ್ಲಿ ವಿವಾಹ ಸ್ಥಳಕ್ಕೆ ಬಂದಿದ್ದು ಕಂಡು ಸುಭಾಷ್ ಕುಮಾರ್ ಅಚ್ಚರಿಗೊಂಡರು. ಸ್ಥಳದಲ್ಲಿ ಬ್ರೆಜಾ ಕಾರು ಕಾಣದಿದ್ದಾಗ ಕುಲ್‌ದೀಪ್ ಅವರು ಸುಭಾಷ್ ಹಾಗೂ ವಧುವಿನ ಕುಟುಂಬಸ್ಥರನ್ನು ನಿಂದಿಸಿದ್ದಾರೆ ಎಂದು ದೂರಲಾಗಿದೆ. ಅವರನ್ನು ಸಮಾಧಾನಪಡಿಸಿ, ವಿವಾಹ ವಿಧಿವಿಧಾನಗಳನ್ನು ಪೂರ್ಣಗೊಳಿಸುವಂತೆ ಎಷ್ಟೇ ಮನವಿ ಮಾಡಿದರೂ ಕಿವಿಗೊಡದೆ ವರ ಮತ್ತು ಆತನ ತಾಯಿ ಅಲ್ಲಿಂದ ಹೊರಟುಹೋಗಿದ್ದಾರೆ.
ವರದಕ್ಷಿಣೆ ಬೇಡಿಕೆ ಹಾಗೂ ಮದುವೆ ರದ್ದುಗೊಳಿಸಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸ್ ಇಲಾಖೆಯು, ಔಟರ್‌ನಾರ್ತ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಕುಲ್‌ದೀಪ್ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೋಮವಾರ ಅಮಾನತುಗೊಳಿಸಿದೆ. ಅವರ ದುರ್ನಡತೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ನಿಯಮಾನುಸಾರ ಅಗತ್ಯ ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸೋಮವಾರ ಪ್ರತಿಕ್ರಿಯಿಸಿದ ಸೋನಿಪತ್ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಿತೇಂದರ್ ಗಹ್ಲಾವತ್, ವಧುವಿನ ಕುಟುಂಬದಿಂದ ದೂರು ಸ್ವೀಕರಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಸಮುದಾಯದ ಹಿರಿಯರ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿರುವ ಕುಟುಂಬಸ್ಥರು, ಅದಕ್ಕಾಗಿ ಒಂದು ದಿನದ ಕಾಲಾವಕಾಶ ಕೋರಿದ್ದು, ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.



