ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮನಸ್ಸಿನ ಪರಿವರ್ತನೆ ಯಾರದ್ದೋ ಒತ್ತಡ, ಬೆದರಿಕೆ, ಬಲವಂತ ಅಥವಾ ಆಮಿಷದಿಂದ ಆಗುವುದಿಲ್ಲ. ವ್ಯಕ್ತಿಗೆ ಸೂಕ್ತವೆನಿಸುವ ಸಕಾರಾತ್ಮಕ ಗುಣಗಳು, ಪ್ರೀತಿ ಮತ್ತು ಉತ್ತಮ ವಿಚಾರಗಳಿಂದ ಪ್ರಭಾವಿತನಾದಾಗ ಮಾತ್ರ ನಿಜವಾದ ಮಾನಸಾಂತರ ಸಾಧ್ಯ.
ಜಾತಿ ಬದಲಾಗಿಲ್ಲ, ಮತ ಬದಲಾಗಿಲ್ಲ, ವೇಷಭೂಷಣದಲ್ಲಿಯೂ ಯಾವುದೇ ಬದಲಾವಣೆಯಾಗಿಲ್ಲ. ಧರ್ಮದ ಹೆಸರೂ ಬದಲಾಗಿಲ್ಲ. ಎಲ್ಲವೂ ಮೊದಲಿನಂತೆಯೇ ಇವೆ. ಆದರೆ ಬದಲಾಗಿರುವುದು ಮನಸ್ಸು ಮಾತ್ರ. ಕಾರ್ಗತ್ತಲೆಯ ಮನಸ್ಸುಗಳಿಗೆ ಪ್ರೀತಿಯ ಹಣತೆಯ ಬೆಳಕಿನ ಕಿರಣಗಳು ಸ್ಪರ್ಶಿಸಿದಾಗ ಉಂಟಾಗುವ ಬದಲಾವಣೆಯೇ ಮಾನಸಾಂತರ. ಇದಕ್ಕೆ ಮತಾಂತರದ ಪಟ್ಟ ಕಟ್ಟುವುದು ಎಷ್ಟು ಸರಿ? ಬದಲಾಗಿರುವುದು ಮತವಲ್ಲ, ಮನಸ್ಸು ಮಾತ್ರ.
ಧರ್ಮಕ್ಕಿಂತ ದೊಡ್ಡದು ಮಾನವೀಯತೆ – ಮನಸ್ಸು ಬದಲಾದರೆ ಸಮಾಜ ಬದಲಾಗುತ್ತದೆ
ಭಾರತ ವಿವಿಧ ಧರ್ಮ, ಜಾತಿ, ಭಾಷೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಸಂಗಮ ಭೂಮಿ. ಇಲ್ಲಿ ಪ್ರತಿಯೊಬ್ಬರಿಗೂ ತಮಗಿಷ್ಟವಾದ ಧರ್ಮವನ್ನು ನಂಬುವ, ಆಚರಿಸುವ ತಮ್ಮ ನಂಬಿಕೆಯಂತೆ ಬದುಕುವ ಸ್ವಾತಂತ್ರ್ಯವಿದೆ. ಆದರೆ ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆಗಳು ನಿರ್ಮಾಣವಾಗುತ್ತಿರುವುದು ಇಂದಿನ ಸಮಾಜದ ಆತಂಕಕಾರಿ ಬೆಳವಣಿಗೆಯಾಗಿದೆ.
ಪ್ರಸ್ತುತ ಸಮಾಜದ ಮುಂದೆ ನಿಲ್ಲುವ ಮಹತ್ವದ ಪ್ರಶ್ನೆಯೆಂದರೆ ನಮಗೆ ಬೇಕಾಗಿರುವುದು ಮತಾಂತರವೋ ಅಥವಾ ಮನಸಾಂತರವೋ?
ಮತಾಂತರ ಎಂದರೇನು?
ಒಬ್ಬ ವ್ಯಕ್ತಿ ತನ್ನ ಧಾರ್ಮಿಕ ನಂಬಿಕೆ, ಆಚರಣೆ ಅಥವಾ ಧರ್ಮವನ್ನು ಬದಲಾಯಿಸಿಕೊಳ್ಳುವುದನ್ನು ಸಾಮಾನ್ಯವಾಗಿ ಮತಾಂತರ ಎಂದು ಕರೆಯಲಾಗುತ್ತದೆ. ಇದು ವ್ಯಕ್ತಿಯ ವೈಯಕ್ತಿಕ ನಂಬಿಕೆ ಮತ್ತು ಆತ್ಮಸಾಕ್ಷಿಗೆ ಸಂಬಂಧಿಸಿದ ವಿಚಾರ. ಆದರೆ ಪ್ರತಿಯೊಂದು ಬದಲಾವಣೆಯನ್ನೂ ಮತಾಂತರ ಎಂದು ಪರಿಗಣಿಸುವುದು ಎಷ್ಟು ಸಮಂಜಸ?
ಒಬ್ಬ ವ್ಯಕ್ತಿ ತನ್ನಲ್ಲಿರುವ ಜಡತ್ವ, ಕೆಟ್ಟ ಗುಣಗಳು, ಬಾಧಕ ಭಾವನೆಗಳು ಹಾಗೂ ನಕಾರಾತ್ಮಕ ಆಲೋಚನೆಗಳನ್ನು ತೊರೆದು ನಿರ್ಮಲತೆ, ಸಾತ್ವಿಕತೆ ಮತ್ತು ಸದುದ್ದೇಶದ ವಿಚಾರಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗುತ್ತಾನೆ ಎಂದಿಟ್ಟುಕೊಳ್ಳಿ. ಅದಕ್ಕಾಗಿ ಒಂದು ಧರ್ಮದ ಸಕಾರಾತ್ಮಕ ವಿಚಾರಗಳಿಂದ ಪ್ರಭಾವಿತನಾಗಿ ತನ್ನ ಬದುಕಿನಲ್ಲಿ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡರೆ ಅದನ್ನು ಹೇಗೆ ಮತಾಂತರ ಎನ್ನಲು ಸಾಧ್ಯ?
ಆತ ತನ್ನ ಧರ್ಮ ಬದಲಾಯಿಸಿಲ್ಲ, ಹೆಸರು ಬದಲಾಯಿಸಿಲ್ಲ, ಜಾತಿಯನ್ನೂ ಬದಲಾಯಿಸಿಲ್ಲ. ಬದಲಾಯಿಸಿಕೊಂಡಿರುವುದು ತನ್ನ ಮನಸ್ಸು ಮತ್ತು ಆಲೋಚನೆಗಳನ್ನು ಮಾತ್ರ. ಆಧ್ಯಾತ್ಮಿಕ ಭಾವನೆ ಹಾಗೂ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡ ಮಾತ್ರಕ್ಕೆ ಆತ ಜಾತಿಹೀನನೇ, ಮತಿಹೀನನೇ ಅಥವಾ ಮತಾಂತರಗೊಂಡವನೇ? ಖಂಡಿತ ಅಲ್ಲ. ಪ್ರತಿಯೊಂದು ಸಂದರ್ಭದಲ್ಲಿಯೂ ಇಂತಹ ಬದಲಾವಣೆಯನ್ನು ಮತಾಂತರ ಎಂದು ಕರೆಯುವುದು ಸರಿಯಲ್ಲ. ಮನಸ್ಸಿನ ಪರಿವರ್ತನೆಯನ್ನು ಮತಾಂತರ ಎಂದು ಬಿಂಬಿಸುವುದು ತಪ್ಪು.
ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದರೆ ಮನಸ್ಸಿನ ಪರಿವರ್ತನೆ ಯಾರದ್ದೋ ಒತ್ತಡ, ಬೆದರಿಕೆ, ಬಲವಂತ ಅಥವಾ ಆಮಿಷದಿಂದ ಆಗುವುದಿಲ್ಲ. ವ್ಯಕ್ತಿಗೆ ಸೂಕ್ತವೆನಿಸುವ ಸಕಾರಾತ್ಮಕ ಗುಣಗಳು, ಪ್ರೀತಿ ಮತ್ತು ಉತ್ತಮ ವಿಚಾರಗಳಿಂದ ಪ್ರಭಾವಿತನಾದಾಗ ಮಾತ್ರ ನಿಜವಾದ ಮಾನಸಾಂತರ ಸಾಧ್ಯ.
ಒಬ್ಬ ವ್ಯಕ್ತಿ ಯಾವ ಧರ್ಮವನ್ನು ಅನುಸರಿಸುತ್ತಾನೆ ಎನ್ನುವುದಕ್ಕಿಂತ ಆತ ಸಮಾಜಕ್ಕೆ ಎಂತಹ ಕೊಡುಗೆ ನೀಡುತ್ತಾನೆ ಎಂಬುದು ಮುಖ್ಯವಾಗಬೇಕು. ದೇವರನ್ನು ಪೂಜಿಸುವ ಕೈಗಳು ಸಂಕಷ್ಟದಲ್ಲಿರುವ ಮನುಷ್ಯನಿಗೆ ನೆರವಾಗಬೇಕು. ಪ್ರಾರ್ಥಿಸುವ ತುಟಿಗಳು ಮತ್ತೊಬ್ಬರನ್ನು ನೋಯಿಸಬಾರದು. ಧರ್ಮದ ಬಗ್ಗೆ ಮಾತನಾಡುವ ಮನಸ್ಸಿನಲ್ಲಿ ಮಾನವೀಯತೆಯೂ ನೆಲೆಸಿರಬೇಕು.
ಮತಾಂತರದ ಕುರಿತು ಚರ್ಚೆಗಳು ನಡೆಯಲಿ. ಆದರೆ ಅವು ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿರಲಿ. ಇಂತಹ ಚರ್ಚೆಗಳ ನಡುವೆ ಮನುಷ್ಯತ್ವ ಮರೆಯಾಗಬಾರದು. ಧರ್ಮಗಳು ಬೇರೆ ಇರಬಹುದು, ದೇವರ ಆರಾಧನೆಯ ವಿಧಾನಗಳು ಬೇರೆ ಇರಬಹುದು. ಆದರೆ ಮನುಷ್ಯರೆಲ್ಲರೂ ಒಂದೇ ಸಮಾಜದ ಭಾಗವಾಗಿದ್ದಾರೆ. ಮನುಷ್ಯರಾಗಿ ಹುಟ್ಟಿದ ಮೇಲೆ ಮನುಷ್ಯತ್ವದಿಂದಲೇ ಬದುಕಬೇಕು.
ಪ್ರೀತಿಯೇ ಎಲ್ಲ ಧರ್ಮಗಳ ಸಾರ
ಜಗತ್ತಿನಾದ್ಯಂತ ಬಹುಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಕ್ರೈಸ್ತ ಧರ್ಮದ ಸೇವಾ ಕಾರ್ಯಗಳು ಸರ್ವಕಾಲಕ್ಕೂ ಶ್ಲಾಘನೀಯ. ಯೇಸು ಕ್ರಿಸ್ತರು ಬೋಧಿಸಿದ ಪ್ರೀತಿ, ಕ್ಷಮೆ ಮತ್ತು ಸೇವೆಯ ಸಂದೇಶ ಮಾನವೀಯತೆಯ ಮಹತ್ವವನ್ನು ಸಾರುತ್ತದೆ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿ, ಬಟ್ಟೆಯಿಲ್ಲದವರಿಗೆ ಬಟ್ಟೆ ನೀಡಿ, ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬ ಸಂದೇಶವನ್ನು ಅವರು ಸಾರಿದ್ದಾರೆ.
ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ಮರಳಬೇಕು ಎಂಬುದು ಅವರ ಬೋಧನೆಯ ಸಾರ. ನನಗೆ ಯಜ್ಞಕ್ಕಿಂತ ಪ್ರೀತಿ ಹಾಗೂ ಕುಗ್ಗಿದ ಹೃದಯ ಮುಖ್ಯ ಎಂಬ ಸಂದೇಶವೂ ಇದೇ ಮಾನವೀಯ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ.
ಆಸ್ಪತ್ರೆಗಳು, ಅನಾಥಾಶ್ರಮಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯದ ಸೇವಾ ಕಾರ್ಯಗಳು ಗಮನಾರ್ಹವಾಗಿವೆ. ಇಂತಹ ಸೇವೆಗಳ ಹಿಂದಿರುವುದು ದೇವರ ಮೇಲಿನ ಪ್ರೀತಿ ಮತ್ತು ಮಾನವೀಯ ಕಾಳಜಿ. ಈ ಪ್ರೀತಿ ಒಂದು ಜನಾಂಗಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಾಗದೆ ಇಡೀ ಜೀವಸಂಕುಲವನ್ನು ಒಳಗೊಳ್ಳುವ ಮಮತೆಯಾಗಿ ವಿಸ್ತರಿಸಿದೆ.
ಜಾತಿ ಬೇಡ, ಧರ್ಮದ್ವೇಷ ಬೇಡ, ಮನುಷ್ಯತ್ವಕ್ಕೆ ಬೆಲೆ ಇರಲಿ. ದ್ವೇಷದ ಮನಸ್ಸು ಪ್ರೀತಿಯಾಗಿ ಬದಲಾಗಲಿ. ಅಸಮಾನತೆಯ ಆಲೋಚನೆಗಳು ಸಮಾನತೆಯ ರೂಪ ಪಡೆದುಕೊಳ್ಳಲಿ. ದೇವರ ಪ್ರೀತಿ ಪ್ರತಿಯೊಂದು ಜೀವಿಯಲ್ಲೂ ಪಸರಿಸಲಿ. ಮೌಢ್ಯ ಮಾಯವಾಗಿ ಪ್ರೀತಿಯ ಹಣತೆ ಪ್ರತಿಯೊಬ್ಬರ ಹೃದಯದಲ್ಲೂ ಬೆಳಗಲಿ.
ನಮಗೆ ಬೇಕಾಗಿರುವುದು ಕೇವಲ ಮತಾಂತರವಲ್ಲ… ನಿಜವಾದ ಮನಸಾಂತರ!



