ಐವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗೂ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ನ್ಯಾಯಾಲಯವು ದೋಷಾರೋಪ ಪಟ್ಟಿ ದಾಖಲಿಸಿಕೊಂಡಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿದೆ. ಬ್ರಿಜ್ ಭೂಷಣ್ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಅಂಶಗಳನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶೆ ಪ್ರಿಯಾಂಕಾ ರಾಜ್ಪೂತ್ ಕಂಡುಕೊಂಡಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Delhi Court Frames Sexual Harassment Charges Against BJP MP Brij Bhushan Saran Singh pic.twitter.com/RaqOgkoVeA
— Live Law (@LiveLawIndia) May 10, 2024
“ಲೈಂಗಿಕ ಕಿರುಕುಳಕ್ಕೊಳಗಾದ ಪ್ರತಿಯೊಬ್ಬ ಸಂತ್ರಸ್ತೆಯರಿಗೆ ಸಂಬಂಧಿಸಿದಂತೆ 354 ಮತ್ತು 354ಎ ಅಡಿಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ಆರೋಪಗಳನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ನ್ಯಾಯಾಲಯವು ತಿಳಿಸಿದೆ. ಆದರೆ, ಆರನೇ ಕುಸ್ತಿಪಟು ಮಾಡಿದ ಆರೋಪಗಳಿಂದ ಬ್ರಿಜ್ ಭೂಷಣ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿರುವುದಾಗಿ ವರದಿ ತಿಳಿಸಿದೆ.
ಬ್ರಿಜ್ ಭೂಷಣ್ಗೆ ಲೋಕಸಭಾ ಚುನಾವಣೆಯ ಟಿಕೆಟ್ ನಿರಾಕರಿಸಿದ್ದ ಬಿಜೆಪಿ
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಗಂಭೀರ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ಗೆ ಉತ್ತರ ಪ್ರದೇಶದ ಕೈಸರ್ಜಂಗ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿತ್ತು.
ಬ್ರಿಜ್ ಭೂಷಣ್ ಬದಲಿಗೆ ಈತನ ಪುತ್ರ ಕರಣ್ ಭೂಷಣ್ ಸಿಂಗ್ಗೆ ಟಿಕೆಟ್ ನೀಡಲಾಗಿತ್ತು. 2019ರವರೆಗೆ ಕಳೆದ ಮೂರು ಬಾರಿ ಕೈಸರ್ಜಂಗ್ ಕ್ಷೇತ್ರದಿಂದ ಬ್ರಿಜ್ ಭೂಷಣ್ ಸಿಂಗ್ಗೆ ಟಿಕೆಟ್ ನೀಡಲಾಗಿತ್ತು. ಮೂರು ಬಾರಿಯೂ ಬ್ರಿಜ್ ಭೂಷಣ್ ಆಯ್ಕೆಯಾಗಿದ್ದ.
