ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಂಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಭ್ರಷ್ಟಾಚಾರ’ದ ಕಾರಣಕ್ಕಾಗಿ ಎಐಎಡಿಎಂಕೆ ನಾಯಕತ್ವವು ಬಿಜೆಪಿಗೆ ಸಂಪೂರ್ಣವಾಗಿ ಶರಣಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕನ್ಯಾಕುಮಾರಿಯಲ್ಲಿ ಸೋಮವಾರ ನಡೆದ ಬೃಹತ್ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಎಐಎಡಿಎಂಕೆ ಪಕ್ಷವು ಇದೀಗ ತಮಿಳುನಾಡಿನೊಳಗೆ ಬಿಜೆಪಿ ಪ್ರವೇಶಿಸಲು ಕೇವಲ ಒಂದು ಮಾರ್ಗವಾಗಿ ಮಾರ್ಪಾಡಾಗಿದೆ ಎಂದು ಟೀಕಿಸಿದ್ದಾರೆ.
ದ್ರಾವಿಡ ಸಿದ್ಧಾಂತವನ್ನು ದ್ವೇಷಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ತಮಿಳುನಾಡನ್ನು ಆಳುವ ಯೋಜನೆಯನ್ನು ಹೊಂದಿದೆ ಎಂದು ರಾಹುಲ್ ಆರೋಪಿಸಿದರು.
ದೇಶದ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪ್ರತಿಪಾದಿಸಿದ ಅವರು, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಧ್ವನಿ ಹಾಗೂ ಪ್ರಾತಿನಿಧ್ಯವನ್ನು ಹೊಂದಿರಬೇಕು ಮತ್ತು ಆಯಾ ರಾಜ್ಯದ ಜನರೇ ತಮ್ಮ ರಾಜ್ಯವನ್ನು ಆಳಬೇಕು ಎಂದು ಹೇಳಿದರು. ಆದರೆ, ಬಿಜೆಪಿ ಈ ರೀತಿ ಯೋಚಿಸುವುದಿಲ್ಲ; ಆ ಪಕ್ಷವು ‘ಒಂದೇ ಸಂಪ್ರದಾಯ, ಒಂದೇ ಭಾಷೆ ಮತ್ತು ಒಂದೇ ಇತಿಹಾಸ’ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದೆ ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? ಅಮೆರಿಕದ ವಿನಾಶಕ್ಕೆ ಸಿದ್ಧವಾಗಿರುವ ಡೊನಾಲ್ಡ್ ಟ್ರಂಪ್ ಎಂಬ ‘ವಿಧ್ವಂಸಕ’
ಇದೇ ವೇಳೆ ಜಾಗತಿಕ ರಾಜಕೀಯ ಬೆಳವಣಿಗೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ, ಪ್ರಧಾನಿ ಮೋದಿಯವರು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಮೂಲಕ ಇಡೀ ತಮಿಳುನಾಡನ್ನು ನಿಯಂತ್ರಿಸಲು ಬಯಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ತಮಿಳುನಾಡಿನ ಆಡಳಿತವು ಬೇರಾರದೋ ನಿಯಂತ್ರಣದಲ್ಲಿರುವ ಬದಲು, ತಮಿಳುನಾಡಿನ ಜನರ ಕೈಯಲ್ಲೇ ಇರಬೇಕು ಎಂದು ಅವರು ಪ್ರತಿಪಾದಿಸಿದರು.
ತಮಿಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕುರಿತು ಮಾತನಾಡಿದ ರಾಹುಲ್ ಗಾಂಧಿ, ತಮಿಳು ಭಾಷೆ, ಇಲ್ಲಿನ ಅನನ್ಯ ಸಂಸ್ಕೃತಿ ಮತ್ತು ಅದರ ಶ್ರೀಮಂತ ಇತಿಹಾಸವನ್ನು ರಕ್ಷಿಸಲು ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಬದ್ಧವಾಗಿದೆ ಎಂದು ಜನತೆಗೆ ಭರವಸೆ ನೀಡಿದರು. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಅಸ್ಮಿತೆ ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ತಮ್ಮ ಮೈತ್ರಿಕೂಟವೇ ಸೂಕ್ತ ಎಂಬ ಸಂದೇಶವನ್ನು ಕನ್ಯಾಕುಮಾರಿ ಪ್ರಚಾರದ ಮೂಲಕ ರವಾನಿಸಿದರು.





