ಭಾರತೀಯ ರಾಜಕೀಯ ಇತಿಹಾಸದಲ್ಲಿ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಅಥವಾ ಮಹಿಳಾ ಮೀಸಲಾತಿ ಮಸೂದೆ ಒಂದು ಮಹತ್ವದ ಮೈಲಿಗಲ್ಲು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಇದನ್ನು ಕೇವಲ ಸಾಮಾಜಿಕ ಸುಧಾರಣೆಯಾಗಿ ಮಾತ್ರವಲ್ಲದೆ, ಬಿಜೆಪಿ ಒಂದು ಅತ್ಯಂತ ವ್ಯವಸ್ಥಿತ ಮತ್ತು ಚಾಣಾಕ್ಷ ‘ಪಾಲಿಟಿಕಲ್ ಮಾರ್ಕೆಟಿಂಗ್’ ತಂತ್ರವಾಗಿ ಬಳಸಿಕೊಳ್ಳುವುದಕ್ಕೆ ಯತ್ನಿಸಿ ವಿಫಲವಾಗಿದೆ.
ಬಿಜೆಪಿ ಮಹಿಳಾ ಮತದಾರರನ್ನು ಒಂದು ಪ್ರಬಲ ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವಲ್ಲಿ ಪ್ರಯತ್ನಿಸಿತ್ತು. ‘ನಾರಿ ಶಕ್ತಿ’ ಎಂಬ ಬ್ರಾಂಡ್ ಅಡಿಯಲ್ಲಿ ಮಹಿಳೆಯರನ್ನು ನೇರವಾಗಿ ತಲುಪುವ ತಂತ್ರವನ್ನು ಬಿಜೆಪಿ ರೂಪಿಸಿತ್ತು. ಮಹಿಳಾ ಮೀಸಲಾತಿ ಮಸೂದೆಯನ್ನು ಈ ಬ್ರಾಂಡ್ನ ಸರ್ವೋಚ್ಚ ಸಾಧನೆಯಾಗಿ ಪ್ರಸ್ತುತಪಡಿಸಲಾಯಿತು. ಮಹಿಳಾ ಮೀಸಲಾತಿ ಮಸೂದೆ ಕಳೆದ ಮೂರು ದಶಕಗಳಿಂದ ಸಂಸತ್ತಿನಲ್ಲಿ ನೆನೆಗುದಿಗೆ ಬಿದ್ದಿತ್ತು. 2023ರಲ್ಲೇ ಸರ್ವ ಪಕ್ಷಗಳ ಸರ್ವಾನುಮೋದನೆಯೊಂದಿಗೆ ಸಂವಿಧಾನದ ಆರ್ಟಿಕಲ್ 334A ತಿದ್ದುಪಡಿ ತಂದು ಮಹಿಳಾ ಮೀಸಲಾತಿಯನ್ನು ಕಾನೂನು ಮಾಡಿಲಾಗಿತ್ತು. ಆದಾಗ್ಯೂ, ಈಗ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ಬಿಜೆಪಿ ತನ್ನನ್ನು “ನಿರ್ಣಾಯಕ ಮತ್ತು ಇಚ್ಛಾಶಕ್ತಿಯುಳ್ಳ ಪಕ್ಷ” ಎಂದು ಬಿಂಬಿಸಿಕೊಳ್ಳಲು ಯತ್ನಿಸಿತ್ತು. ಇವೆಲ್ಲಾ ಚುನಾವಣಾ ಗಿಮಿಕ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಬಾರಿ ವಿಶೇಷ ಅಧಿವೇಶನ ಕರೆದಿದ್ದಂತೂ ಚುನಾವಣಾ ಕಾರ್ಯತಂತ್ರದ ಭಾಗವಾಗಿತ್ತು ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ.
“ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಕೇವಲ ಭರವಸೆ ನೀಡಿದ್ದವು, ಆದರೆ ನಾವು ಮಾಡಿ ತೋರಿಸಿದೆವು” ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಹುನ್ನಾರವನ್ನು ಬಿಜೆಪಿ ಮಾಡಿತ್ತು. ಲೋಕಸಭೆಯಲ್ಲಿ ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆಗೆ (ಸಂವಿಧಾನದ 131ನೇ ತಿದ್ದುಪಡಿ ಮಸೂದೆ) ಅಗತ್ಯವಾದ ಮೂರನೇ ಎರಡರಷ್ಟು (2/3rd) ಬಹುಮತ ಸಿಗದೆ ಸೋಲನುಭವಿಸಿದೆ. ಅದಾದ ಬಳಿಕ ಮಸೂದೆ ಜಾರಿಯಾಗದಂತೆ ಅಡ್ಡಗಾಲು ಹಾಕಿದ್ದೇ ಕಾಂಗ್ರೆಸ್ ಎಂದು ಬಿಜೆಪಿ ಟೀಕಿಸಿತ್ತು. ಇವೆಲ್ಲಾ ಪೂರ್ವಯೋಜಿತ ಚುನಾವಣಾ ಕಾರ್ಯತಂತ್ರದ ಭಾಗವಾಗಿಯೇ ಇತ್ತು. ಮಹಿಳೆಯರಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ ಎಂಬ ರಾಜಕೀಯ ನಿರೂಪಣೆಯನ್ನು ಯಶಸ್ವಿಯಾಗಿ ಜನರ ತಲೆಯೊಳಗೆ ತುಂಬುವುದಕ್ಕೆ ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ಮಹಿಳಾ ವಿರೋಧಿ ಎಂಬಂತೆ ಚಿತ್ರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೇ, ವಾಸ್ತವಾಂಶ ಬೇರೆಯದ್ದೇ ಇದೆ.
ಇನ್ನು, ರಾಜಕೀಯದಲ್ಲಿ ಭಾವನೆಗಳಿಗೆ ಹೆಚ್ಚಿನ ಬೆಲೆ ಇದೆ. ಪ್ರಧಾನಿ ಮೋದಿ ರಕ್ಷಾಬಂಧನ, ಉಜ್ವಲ ಯೋಜನೆ (ಅಡುಗೆ ಅನಿಲ), ಮತ್ತು ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಮಹಿಳೆಯರ ಗೌರವ ಮತ್ತು ಸುರಕ್ಷತೆಯ ಬಗ್ಗೆ ಮಾತನಾಡುವ ಮೂಲಕ ಅವರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಾರೆ. ಮಹಿಳಾ ಮೀಸಲಾತಿಯನ್ನು ಆ ʼಭಾವನಾತ್ಮಕ ಸರಣಿʼಯ ಮುಂದುವರಿದ ಭಾಗವಾಗಿ “ಸೋದರಿಯರಿಗೆ ನೀಡುವ ಉಡುಗೊರೆ” ಎಂಬ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಲಾಯಿತು. ಮೂರನೇ ಎರಡರಷ್ಟು ಬಹುಮತ ಸಿಗದೇ ಹೋದ ಮರುಕ್ಷಣದಿಂದಲೇ ಬಿಜೆಪಿ ಮಹಿಳಾ ಮೋರ್ಚಾದ ಮೂಲಕ ತಳಮಟ್ಟದವರೆಗೂ ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುತ್ತಿದೆ. ಮಸೂದೆ ಮಂಡನೆ, ಜಾರಿಯಾಗುವವರೆಗೆ ಈ ವಿಷಯವನ್ನು ಜೀವಂತವಿಟ್ಟುಕೊಂಡೇ ಪ್ರತಿ ಚುನಾವಣೆಯಲ್ಲಿ ಮಹಿಳೆಯರನ್ನು ಭಾವನಾತ್ಮಕವಾಗಿ ಸೆಳೆಯಲು ಅಕ್ಷರಶಃ ಮುಂದಾಗಿದೆ.
ಮಹಿಳಾ ಮೀಸಲಾತಿಯನ್ನು ವಿರೋಧಿಸುವುದು ಯಾವುದೇ ಪಕ್ಷಕ್ಕೆ ಸಾಧ್ಯವಿಲ್ಲ. ಹೀಗಾಗಿ, ವಿರೋಧ ಪಕ್ಷಗಳು ಒಬಿಸಿ (OBC) ಕೋಟಾದ ಬಗ್ಗೆ ಪ್ರಶ್ನೆ ಎತ್ತಿದ್ದವು. 2023ರ ಕಾಯಿದೆಯಲ್ಲಿ ವಿರೋಧ ಪಕ್ಷಗಳೆಲ್ಲ ಒಕ್ಕೊರಲಿನಿಂದ ಆಗ್ರಹಿಸಿದಂತೆ ಹಾಲಿ 543 ಸ್ಥಾನಗಳಲ್ಲೇ ಶೇ. 33ರ ಮೀಸಲಾತಿಯನ್ನು ಕಲ್ಪಿಸದೆ 2026/2027ರ ಜನಗಣತಿ ಆಧರಿಸಿದ ಕ್ಷೇತ್ರ ಮರುವಿಂಗಡಣೆಯಾದ ನಂತರ ಮೀಸಲಾತಿಯನ್ನು ಜಾರಿ ಮಾಡಲಾಗುವುದು ಎಂಬ ಅನಗತ್ಯವಾಗಿತ್ತು. ಮಹಿಳಾ ಮೀಸಲಾತಿಯನ್ನು 2034ರ ತನಕ ಜಾರಿ ಮಾಡಲು ಸಾಧ್ಯವಾಗದಂತೆ ಷರತ್ತುಗಳನ್ನು ಸೇರಿಸಿರುವ ಕಾರಣಕ್ಕೆ ವಿರೋಧಿಸಿದ್ದನ್ನು ʼಮಹಿಳಾ ವಿರೋಧಿ ಕಾಂಗ್ರೆಸ್ʼ ಎಂಬಂತೆ ಬಿಜೆಪಿ ತನ್ನ ರಾಜಕೀಯ ನಿರೂಪಣೆಯನ್ನೇ ಬದಲಾಯಿಸಿದೆ. ಅಂದರೇ, ಈ ಮಟ್ಟಿಗಿನ ಕೀಳು ರಾಜಕೀಯವನ್ನು ಮಾಡಿ ಜನರನ್ನು ಮತ್ತೆ ಮತ್ತೆ ಮೂರ್ಖರನ್ನಾಗಿ ಮಾಡುವುದಕ್ಕೆ ಬಿಜೆಪಿ ಯತ್ನಿಸಿದೆ.
ಕ್ರೆಡಿಟ್ ಪಾಲಿಟಿಕ್ಸ್
ಬಿಜೆಪಿ ಮಹಿಳಾ ಮೋರ್ಚಾ ಮಹಿಳಾ ಮೀಸಲಾತಿ (ನಾರಿ ಶಕ್ತಿ ವಂದನ್ ಅಧಿನಿಯಮ) ವಿಚಾರದಲ್ಲಿ ಕಾಂಗ್ರೆಸ್ ಅನ್ನು ಟೀಕಿಸಲು ಮುಖ್ಯ ಕಾರಣ ಕ್ರೆಡಿಟ್ ಪಾಲಿಟಿಕ್ಸ್.
ಬಿಜೆಪಿ, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದಿದ್ದು ಮೋದಿ ಸರ್ಕಾರ ಎಂದು ಹೇಳುತ್ತಿದೆ. ಆದರೆ ಕಾಂಗ್ರೆಸ್ ಈಗ ಅದರಲ್ಲಿ ‘ಒಳ ಮೀಸಲಾತಿ’ (OBC ಕೋಟಾ) ನೆಪವೊಡ್ಡಿ ಜಾರಿಯನ್ನು ವಿಳಂಬಗೊಳಿಸಲು ನೋಡುತ್ತಿದೆ ಎಂದು ಬಿಜೆಪಿಯ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಈ ಹಿಂದೆ ಜಾರಿಗೆ ತರಲು ಪ್ರಯತ್ನಿಸಿದ್ದ ಮಸೂದೆಯನ್ನು ಬಿಜೆಪಿ ಬೆಂಬಲಿಸಿರಲಿಲ್ಲ ಎಂದು ನೆನಪಿಸುತ್ತದೆ. ಈ “ಯಾರು ಮೊದಲು?” ಎಂಬ ಪೈಪೋಟಿಯಲ್ಲಿ ಮಹಿಳೆಯರ ನೈಜ ಸಬಲೀಕರಣಕ್ಕಿಂತ ಮತಬ್ಯಾಂಕ್ ಮುಖ್ಯವಾಗಿ ಕಾಣುತ್ತಿದೆ ಎನ್ನುವುದರಲ್ಲಿ ಅನುಮಾನವವಿಲ್ಲ.
ಇನ್ನು, ನರೇಂದ್ರ ಮೋದಿ ಅವರನ್ನು ಮಹಾನ್ ಸ್ತ್ರೀವಾದಿ ಎಂದು ಬಿಂಬಿಸಿ, ಕಾಂಗ್ರೆಸ್ ಮತ್ತು ಇತರೆ ವಿರೋಧಿ ಪಕ್ಷಗಳನ್ನು ಸ್ತ್ರೀ ವಿರೋಧಿ ಎಂದು ಈಗ ಬಿಂಬಿಸುತ್ತಿರುವ ಬಿಜೆಪಿ, ಬ್ರಿಜ್ ಭೂಷಣ್ ಸಿಂಗ್ ಪ್ರಕರಣದ ಬಗ್ಗೆ ಧ್ವನಿ ಎತ್ತಿಲ್ಲ ಯಾಕೆ ? ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ವಿರುದ್ಧ ಬೀದಿಗಿಳಿದಾಗ ಬಿಜೆಪಿ ಮಹಿಳಾ ನಾಯಕಿಯರು ತೋರಿದ ಮೌನವನ್ನು ಸ್ತ್ರೀವಿರೋಧಿ ಎನ್ನಬೇಕೆ ಅಥವಾ ಸ್ತ್ರೀವಾದಿ ಎಂದು ಹಾಡಿಹೊಗಳಬೇಕೆ? ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅಮಾನವೀಯ ಕೃತ್ಯಗಳ ಬಗ್ಗೆ ತುಟಿ ಬಿಚ್ಚದ ಮೋದಿಯನ್ನು ಯಾವ ಮುಖ ಇಟ್ಟುಕೊಂಡು ಸ್ತ್ರೀವಾದಿ ಎಂದು ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ? ಉನ್ನಾವೋ ಪ್ರಕರಣ, ಹತ್ರಾಸ್ ಪ್ರಕರಣ, ಸೌಜನ್ಯ ಪ್ರಕರಣ ಸೇರಿ ಇನ್ನೂ ಅನೇಕ ಮಹಿಳಾ ದೌರ್ಜನ್ಯದ ಪ್ರಕರಣಗಳ ಬಗ್ಗೆ ಸ್ತ್ರೀವಾದಿ ಚಿಂತನೆಯನ್ನು ಮರೆತಿತ್ತೇ ಬಿಜೆಪಿ? ಪ್ರಧಾನಿ ನರೇಂದ್ರ ಮೋದಿಗೆ ಇವೆಲ್ಲಾ ಯಾವುವು ಕಾಣಿಸಿಲ್ಲವೇ ? ಈಗ ರಾಜಕೀಯ ಕುತಂತ್ರದಿಂದ ಜಾರಿಗೆ ತರಲು ಯತ್ನಿಸಿದ್ದ ಮಸೂದೆಗೆ ಬಹುಮತ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಮತ್ತು ಇತರೆ ವಿರೋಧಿ ಪಕ್ಷಗಳ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಬಿಜೆಪಿಗೆ ನಾಚಿಕೆ ಮಾನ ಮರ್ಯಾದೆ ಎಳ್ಳಷ್ಟಾದರೂ ಇದೆಯೇ ಎನ್ನುವ ಪ್ರಶ್ನೆಯನ್ನು ಕೇಳದೆ ಸುಮ್ಮನಿರುವುದಕ್ಕೆ ಸಾಧ್ಯವಿದೆಯೆ? ಕಾಂಗ್ರೆಸ್ ಮತ್ತು ಇತರೆ ವಿರೋಧಿ ಪಕ್ಷಗಳನ್ನು ಈಗ ಮಹಿಳಾ ವಿರೋಧಿ ಎಂಬ ಕಥನ ಕಟ್ಟುತ್ತಿರುವ ಬಿಜೆಪಿಗೆ ಇಡೀ ದೇಶದಾದ್ಯಂತ ನಡೆದ ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ಧ್ವನಿ ಎತ್ತುವುದಕ್ಕೆ ಬಾಯಿಗೆ ಕೋಲು ತುರುಕಿಸಿದವರು ಯಾರು? ಈಗ ಪ್ರಗತಿಪರ ವಿಚಾರಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಪ್ರಾಯೋಗಿಕವಾಗಿ ಮೀಸಲಾತಿಗೆ ಅಡ್ಡಿಪಡಿಸಿದೆ ಎಂದು ಬಿಂಬಿಸುವ ಮೂಲಕ ಮಹಿಳಾ ಮತದಾರರಲ್ಲಿ ಗೊಂದಲ ಮೂಡಿಸುವ ಕೀಳು ತಂತ್ರವನ್ನು ಬಿಜೆಪಿ ಹೆಣೆಯುತ್ತಿದೆ.
ಬಿಜೆಪಿಗೆ ಮಹಿಳೆಯರ ಮೇಲಿನ ದೌರ್ಜನ್ಯಕ್ಕಿಂತ “ಮೀಸಲಾತಿ” ಎನ್ನುವುದೇ ದೊಡ್ಡ ಚುನಾವಣಾ ಅಸ್ತ್ರವಾಗಿದೆ. ದೌರ್ಜನ್ಯದ ಬಗ್ಗೆ ಮಾತನಾಡಿದರೆ ಅದು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಮೀಸಲಾತಿಯ ಬಗ್ಗೆ ಮಾತನಾಡಿದರೆ ಅದು ಭವಿಷ್ಯದ ಭರವಸೆಯಾಗಿ ಮತ್ತು ಪ್ರಬಲ ಶಾಸನಾತ್ಮಕ ಸಾಧನೆಯಾಗಿ ಕಾಣುತ್ತದೆ. ಇದೊಂದು ಅಪ್ಪಟ ಬಿಜೆಪಿಯ ಪಾಲಿಟಿಕಲ್ ಮಾರ್ಕೆಟಿಂಗ್ ತಂತ್ರವಲ್ಲದೇ ಮತ್ತೇನು?
ಯಾವುದೇ ಪಕ್ಷದ ಮಹಿಳಾ ಘಟಕಗಳು ಕೇವಲ ಪಕ್ಷದ ಹಿತಾಸಕ್ತಿ ಕಾಯುವ ‘ರಕ್ಷಣಾ ಕವಚ’ಗಳಾಗುವ ಬದಲು, ದೌರ್ಜನ್ಯಕ್ಕೊಳಗಾದ ಮಹಿಳೆಯರ ಪರವಾಗಿ ಪಕ್ಷಾತೀತವಾಗಿ ಧ್ವನಿ ಎತ್ತಿದಾಗ ಮಾತ್ರ ನೈತಿಕ ಬಲ ಸಿಗುತ್ತದೆ. ಪ್ರಸ್ತುತ, ಬಿಜೆಪಿ ಮಹಿಳಾ ಮೋರ್ಚಾದ ನಿಲುವು ಕಾಂಗ್ರೆಸ್ನ ಮಹಿಳಾ ಮತಬ್ಯಾಂಕ್ ಅನ್ನು ತನ್ನ ಸೈದ್ಧಾಂತಿಕ ಚೌಕಟ್ಟಿನೊಳಗೆ ಸೆಳೆಯುವ ಪ್ರಯತ್ನವಲ್ಲದೇ ಮತ್ತೇನಲ್ಲ.
ಇದನ್ನೂ ಓದಿ : 2023ರಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಮಸೂದೆಯನ್ನು ಮೋದಿ ಸರ್ಕಾರ ಜಾರಿ ಮಾಡಬಹುದಲ್ಲವೇ?
ಅತ್ಯಂತ ವಿವಾದಾಸ್ಪದವಾಗಿರುವ ಕ್ಷೇತ್ರ ಮರುವಿಂಗಡಣೆಯ ಷರತ್ತುಗಳನ್ನು ಮಹಿಳಾ ಮೀಸಲಾತಿಯೊಂದಿಗೆ ಸೇರಿಸಿದಲ್ಲಿ ಸಂಸತ್ತಿನಲ್ಲಿ 2/3 ಬಹುಮತ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಈ ಪ್ರಕ್ರಿಯೆಗಳನ್ನು ಶುರು ಮಾಡಿದ್ದರ ಹಿಂದೆ ಬಿಜೆಪಿಯ ರಾಜಕೀಯ ಕುತಂತ್ರ ಎದ್ದು ಕಾಣಿಸುತ್ತಿದೆ. ಮಹಿಳಾ ಮೀಸಲಾತಿ ತರುವುದೇ ಬಿಜೆಪಿಯ ಮುಖ್ಯ ಉದ್ದೇಶವಾಗಿದ್ದಲ್ಲಿ ಹಾಲಿ 543 ಸಂಸದೀಯ ಕ್ಷೇತ್ರಗಳಲ್ಲೇ ಶೇ.33ರಷ್ಟು ಮೀಸಲಾತಿ ಕೊಡುವ ಸರಳ ತಿದ್ದುಪಡಿ ತರಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿಲ್ಲ ಯಾಕೆ ಎನ್ನುವ ಪ್ರಶ್ನೆಗೆ ತನ್ನ ಬೌದ್ಧಿಕ ಬಡತನದಿಂದ ಮತ್ತೆ ʼಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಮಹಿಳಾ ವಿರೋಧಿʼ ಎಂದೇ ಹೇಳುತ್ತದೆ. ಮಹಿಳಾ ಮೀಸಲಾತಿ ಮಸೂದೆಗೆ ವಿವಾದಿತ ಕ್ಷೇತ್ರ ಮರುವಿಂಗಡಣೆಯ ಮಸೂದೆಯನ್ನು ತಳುಕು ಹಾಕಿ 2034ರವರೆಗೂ ಜಾರಿಯಾಗದಂತೆ ನೋಡಿಕೊಂಡು ಈಗ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳ ಕಡೆಗೆ ಬೊಟ್ಟು ಮಾಡುವ ಬಿಜೆಪಿಯನ್ನು ಮಹಿಳೆಯರೇ ʼಯಾರು ಮಹಿಳಾ ವಿರೋಧಿ ?ʼ ಎಂದು ಪ್ರಶ್ನಿಸಬೇಕಿದೆ.
ಒಟ್ಟಿನಲ್ಲಿ, ಮಹಿಳಾ ಮೀಸಲಾತಿ ಕೇವಲ ಒಂದು ಪಕ್ಷದ ಸಾಧನೆಯಾಗಬಾರದು ಅಥವಾ ಮತ್ತೊಂದು ಪಕ್ಷದ ವಿರೋಧಕ್ಕೆ ಬಲಿಯಾಗಬಾರದು. ಇದು “ಮಹಿಳೆಯರ ಹಕ್ಕು”. ಈ ವಿಧೇಯಕವು ಕಾಗದದ ಮೇಲಿನ ಅಕ್ಷರವಾಗಿ ಉಳಿಯದೆ, ಶೀಘ್ರವಾಗಿ ಜಾರಿಯಾದಾಗ ಮಾತ್ರ ಮಹಿಳೆಯರಿಗೆ ನಿಜವಾದ ಗೆಲುವು ಸಿಕ್ಕಂತಾಗುತ್ತದೆ. ರಾಜಕೀಯ ಕುತಂತ್ರಗಳ ನಡುವೆ ಮಹಿಳೆಯರ ಹಿತಾಸಕ್ತಿ ಬಲಿಯಾಗಬಾರದು ಎನ್ನುವುದೇ ಮುಖ್ಯ ಉದ್ದೇಶ.





