ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರು ಈಗಾಗಲೇ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಭಾಗಿಯಾಗಿದ್ದಾರೆ. ದೊಡ್ಡ ಮಟ್ಟದಲ್ಲಿ ಅನುಕೂಲ ಪಡೆಯುವ ಸಲುವಾಗಿ ಎಎಪಿ ನಾಯಕರಿಗೆ 100 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಕವಿತಾ ವಿರುದ್ಧ ಸಲ್ಲಿಸಲಾಗಿರುವ ಆರೋಪಟ್ಟಿಯಲ್ಲಿ ದಾಖಲಿಸಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಇಂಡೋ ಸ್ಪಿರಿಟ್ಸ್ ಎಂಬ ಸಂಸ್ಥೆಯನ್ನು ರಚಿಸಿ ಅದನ್ನು ಸ್ವಾಧೀನಪಡಿಸಿಕೊಳ್ಳುವ ಪಿತೂರಿಯ ಭಾಗವಾಗಿ 292.8 ಕೋಟಿ ರೂ. ಮೊತ್ತವನ್ನು ಬಳಸುವ ಪ್ರಕ್ರಿಯೆಯಾಗಿತ್ತು. ಇದಕ್ಕಾಗಿ ಲಂಚ ನೀಡಲಾಗಿತ್ತು ಎಂದು ತನಿಖಾ ಸಂಸ್ಥೆ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಇಂಡೋ ಸ್ಪಿರಿಟ್ಸ್‌ನಿಂದ ಸಹಾಯಕ ಅಭಿಷೇಕ್ ಬೋಯ್ನಪಲ್ಲಿ ಎಂಬುವವರ ಹೆಸರಿನಲ್ಲಿ ಬಿಆರ್‌ಎಸ್ ನಾಯಕಿ 5.5 ಕೋಟಿ ರೂ. ಆದಾಯವನ್ನು ಸ್ವೀಕರಿಸಿದ್ದಾರೆ ತನಿಖಾ ಸಂಸ್ಥೆ ಆರೋಪಿಸಿದೆ.
ಕೆ ಕವಿತಾ ಅವರು ಸರ್ಕಾರದಲ್ಲಿ ಇಂಡೋ ಸ್ಪಿರಿಟ್ಸ್ ಕಾರ್ಯ ಸ್ಥಾಪಿಸುವ ಸಲುವಾಗಿ 1100 ಕೋಟಿ ರೂ. ಲಾಭ ಪಡೆಯಲು ಮಧ್ಯವರ್ತಿಯ ಮೂಲಕ ಲಂಚ ನೀಡಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಭಾಗಿಯಾಗಿರುವ ಪುರಾವೆಗಳು ಹಾಗೂ ತಮ್ಮ ಮೊಬೈಲ್‌ನಲ್ಲಿರುವ ದಾಖಲೆಗಳನ್ನು ಅಳಿಸಿದ್ದಾರೆ. ಪರಿಶೀಲನೆಗಾಗಿ ಇ.ಡಿ ಸಂಸ್ಥೆಗೆ ನೀಡಲಾಗಿರುವ 9 ಫೋನ್‌ಗಳಲ್ಲಿ ಯಾವುದೇ ಡಾಟಾ ಇಲ್ಲದಂತೆ ಫಾರ್ಮೆಟ್ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು
ವಿಚಾರಣೆಯ ಸಂದರ್ಭದಲ್ಲಿ ಪ್ರಕರಣದಲ್ಲಿ ತಪ್ಪಿಸಿಕೊಳ್ಳುವ ಸಲುವಾಗಿ ಕವಿತಾ ಅವರು ಫಾರ್ಮೇಟ್ ಮಾಡಲಾದ ಫೋನ್‌ಗಳ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡುತ್ತಿರಲಿಲ್ಲ. ಅಲ್ಲದೆ ಪ್ರಕರಣದಲ್ಲಿ ಭಾಗಿಯಾಗಿರುವ ಸಾಕ್ಷಿಗಳ ಮೇಲೂ ಕವಿತಾ ಅವರು ಪ್ರಭಾವ ಬೀರಿದ್ದಾರೆ ಎಂದು ಇ.ಡಿ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
ಕೆ ಕವಿತಾ ಅವರ ಚಾರ್ಟೆಡ್ ಅಕೌಂಟೆಡ್ ಆಗಿರುವ ಬುಚಿ ಬಾಬು ಅವರು ಇ.ಡಿ ಮುಂದೆ ಕಳೆದ ಫೆ.23 ಹಾಗೂ ಫೆ.28ರಂದು ನೀಡಿರುವ ಹೇಳಿಕೆಗಳಲ್ಲಿ ಇದು ದಾಖಲಾಗಿದೆ. ಆತನು ತಾನು ನೀಡಿರುವ ಹೇಳಿಕೆ ಹಿಂತೆಗೆದುಕೊಳ್ಳುವಂತೆ ಕವಿತಾ ಅವರು ಪ್ರಭಾವ ಬೀರಿದ್ದರು ಎಂದು ತನಿಖಾ ಸಂಸ್ಥೆ ಮುಂದೆ ತಿಳಿಸಿದ್ದಾನೆ.
ನಿನ್ನೆಯಷ್ಟೆ ಕವಿತಾ ಅವರನ್ನು ದೆಹಲಿ ಕೋರ್ಟ್ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.3ರವರೆಗೂ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿತ್ತು. ಅಬಕಾರಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇ.ಡಿ ಎರಡೂ ಸಂಸ್ಥೆಗಳು ತನಿಖೆ ನಡೆಸುತ್ತಿದೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿಯಾದ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯಾದ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಮಾ.15 ರಂದು ಹೈದರಾಬಾದ್‌ನಿಂದ ಬಂಧಿಸಿತ್ತು. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದಾರೆ.
