ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡುತ್ತಿರುವ ಸಮನ್ಸ್‌ಗಳಿಂದ ಮಧ್ಯಂತರ ರಕ್ಷಣೆ ನೀಡಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
“ನಾವು ಎರಡು ಕಡೆಯ ವಾದಗಳನ್ನು ಕೇಳಿದ್ದೇವೆ. ನಾವು ಈ ಹಂತದಲ್ಲಿ ಮಧ್ಯಂತರ ರಕ್ಷಣೆಯನ್ನು ನೀಡಲು ಸಾಧ್ಯವಿಲ್ಲ. ಪ್ರತಿವಾದಿಗಳು ಪ್ರತಿಕ್ರಿಯೆ ನೀಡಲು ಸ್ವತಂತ್ರರಿದ್ದಾರೆ” ಎಂದು ಸುರೇಶ್ ಕುಮಾರ್ ಕೈತ್ ಹಾಗೂ ಮನೋಜ್ ಜೈನ್ ಅವರಿದ್ದ ಪೀಠ ಹೇಳಿದೆ.
ಸಮನ್ಸ್ ನೀಡುವುದನ್ನು ಪ್ರಶ್ನಿಸಿ ಮಧ್ಯಂತರ ರಕ್ಷಣೆ ನೀಡಲು ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆಯ ಮುಂದಿನ ಪರಿಗಣನೆಯನ್ನು ಏಪ್ರಿಲ್ 22 ಕ್ಕೆ ಕೋರ್ಟ್ ನಿಗದಿಪಡಿಸಿದೆ.
ಹಲವು ಸಮನ್ಸ್‌ಗಳನ್ನು ನೀಡಿ ತಮ್ಮನ್ನು ಬಂಧಿಸಲು ಯತ್ನಿಸುತ್ತಿರುವ ಜಾರಿ ನಿರ್ದೇಶನಾಲಯದಿಂದ ರಕ್ಷಣೆ ನೀಡಬೇಕೆಂದು ಬೇಡಿಕೆಗೆ ಒತ್ತಾಯಿಸಿ ಅರವಿಂದ್ ಕೇಜ್ರಿವಾಲ್ ಇಂದು ಹೊಸ ಅರ್ಜಿ ಸಲ್ಲಿಸಿದ್ದರು.
“ನಾನು ಸಮನ್ಸ್‌ಗಳನ್ನು ಸ್ವೀಕರಿಸಿದರೆ ತಮ್ಮನ್ನು ಬಂಧಿಸುವುದಿಲ್ಲ ಎಂಬ ಭರವಸೆಯನ್ನು ಜಾರಿ ನಿರ್ದೇಶನಾಲಯ ನೀಡಬೇಕು” ಎಂದು ಅರವಿಂದ್ ಕೇಜ್ರಿವಾಲ್ ಕೋರ್ಟ್‌ಗೆ ತಮ್ಮ ಅರ್ಜಿಯನ್ನು ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು
ಜಾರಿ ನಿರ್ದೇಶನಾಲಯ 9ನೇ ಸಮನ್ಸ್ ನೀಡಿದ ನಂತರ ಕೋರ್ಟ್ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪುನರಾವರ್ತಿತವಾಗಿ ಜಾರಿ ನಿರ್ದೇಶನಾಲಯ ನೀಡುತ್ತಿರುವ ಸಮನ್ಸ್‌ಗಳನ್ನು ಅಕ್ರಮ ಎಂದು ದೆಹಲಿ ಮುಖ್ಯಮಂತ್ರಿ ನಿರಾಕರಿಸುತ್ತಿದ್ದಾರೆ.
ಸಮನ್ಸ್‌ಗಳನ್ನು ನಿರಾಕರಿಸುತ್ತಿರುವ ಹಿನ್ನಲೆ ಜಾರಿ ನಿರ್ದೇಶನಾಲಯ ರೋಸ್ ಅವಿನ್ಯೂ ಕೋರ್ಟ್‌ನಲ್ಲಿ ಎರಡು ದೂರುಗಳನ್ನು ಸಲ್ಲಿಸಿದೆ.
2021-22ರಲ್ಲಿ ಜಾರಿಗೊಳಿಸಲಾಗಿದ್ದ ಅಬಕಾರಿ ಯೋಜನೆ ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರದ ಆರೋಪದ ನಂತರ ರದ್ದುಗೊಂಡಿತು.
