ಐದು ರಾಜ್ಯಗಳ ಮತದಾನ ಮುಕ್ತಾಯವಾಗಿದ್ದು ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಯ(ಎಕ್ಸಿಟ್ ಪೋಲ್) ಪ್ರಕಾರ ಪಂಚ ರಾಜ್ಯಗಳಲ್ಲಿ 3 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯ ವರದಿಗಳು ತಿಳಿಸಿವೆ.
ತೆಲಂಗಾಣದಲ್ಲಿ ಕಳೆದ ಎರಡು ಅವಧಿಗಳಿಂದ ಅಧಿಕಾರದಲ್ಲಿದ್ದ ಬಿಆರ್‌ಎಸ್‌ಗಿಂತ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳೊಂದಿಗೆ ಜಯಗಳಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಈ ಬಾರಿ ಗೆಲುವು ಸಾಧಿಸಲಿದ್ದು, ಛತ್ತೀಸ್‌ಗಢದಲ್ಲಿ ‘ಕೈ’ಗೆ ಮತ್ತೆ ಅಧಿಕಾರ ಸಿಗಲಿದೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಜಿದ್ದಾಜಿದ್ದಿ ಹೋರಾಟವಿದ್ದು, ಕಾಂಗ್ರೆಸ್ ಗೆಲುವಿನ ಸಮೀಪ ಬರಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿದ್ದರೆ, ಇನ್ನೂ ಕೆಲವು ಸಮೀಕ್ಷಾ ವರದಿಗಳು ಬಿಜೆಪಿ ಜಯಗಳಿಸಲಿದೆ ಎಂದು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಪ್ರೊ. ಅರ್ನಾಲ್ಡ್ ಡಿಕ್ಸ್ : ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯಾಚರಣೆಯ ಹಿಂದಿನ ಶಕ್ತಿ
ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಎಂಎನ್‌ಎಫ್ ಹಾಗೂ ಜೆಡ್‌ಪಿಎಂ ನಡುವೆ ಪೈಪೋಟಿಯಿದ್ದು, ಕಾಂಗ್ರೆಸ್ ಕೂಡ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಸಮೀಕ್ಷಾ ವರದಿಗಳು ಹೇಳಿವೆ.
ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಟುಡೆ, ಟುಡೇಸ್ ಚಾಣಕ್ಯ, ಜನ್ ಕಿಬಾತ್ ಒಳಗೊಂಡು ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ 45 ರಿಂದ 66 ಸ್ಥಾನಗಳವರೆಗೆ ಗೆಲುವು ಸಾಧಿಸಲಿದೆ ಎಂದು ಹೇಳಿದ್ದರೆ, ಬಿಜೆಪಿ 30 ರಿಂದ 48 ಸ್ಥಾನ ಜಯಗಳಿಸಬಹುದೆಂದು ತಿಳಿಸಿವೆ.
ರಾಜಸ್ಥಾನದ 200 ಕ್ಷೇತ್ರಗಳ ಪೈಕಿ ಇಂಡಿಯಾ ಟುಡೆ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 96, ಬಿಜೆಪಿ 90 ಸ್ಥಾನ ಗಳಿಸಿದರೆ, ಟೈಮ್ಸ್ ನೌ ಪ್ರಕಾರ ಕಾಂಗ್ರೆಸ್ 56 ರಿಂದ 72, ಬಿಜೆಪಿ 108 ರಿಂದ 128 ಹಾಗೂ ಪಿ ಮಾರ್ಕ್ ಪ್ರಕಾರ ಕಾಂಗ್ರೆಸ್ 69 ರಿಂದ 91 ಹಾಗೂ ಬಿಜೆಪಿ 105 ರಿಂದ 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.

ತೆಲಂಗಾಣದ 119 ಕ್ಷೇತ್ರಗಳಲ್ಲಿ ಸಿಎನ್‌ಎನ್ ನ್ಯೂಸ್ 18 ಪ್ರಕಾರ ಕಾಂಗ್ರೆಸ್ 56, ಬಿಆರ್‌ಎಸ್ 48 ಸ್ಥಾನಗಳಲ್ಲಿ ಗೆದ್ದರೆ, ಟುಡೇಸ್ ಚಾಣಾಕ್ಯ ಸಮೀಕ್ಷೆಯಂತೆ ಕಾಂಗ್ರೆಸ್ 71, ಬಿಆರ್‌ಎಸ್ 33 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿವೆ.
ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲಿ ಜನ್ ಕೀಬಾತ್ ಪ್ರಕಾರ ಕಾಂಗ್ರೆಸ್ 125, ಬಿಜೆಪಿ 100, ಪೋಲ್‌ಸ್ಟ್ರಾಟ್ ಪ್ರಕಾರ ಕಾಂಗ್ರೆಸ್ 121, ಬಿಜೆಪಿ 116 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಫಲಿತಾಂಶ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂದು ತಿಳಿಸಿವೆ.
ಮಿಜೋರಾಂನ ಒಟ್ಟು 40 ಕ್ಷೇತ್ರಗಳಲ್ಲಿ ಎಂಎನ್‌ಎಫ್ ಹಾಗೂ ಜೆಡ್‌ಪಿಎಂ ನಡುವೆ ತೀವ್ರ ಸ್ಪರ್ಧೆಯಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆ ತಿಳಿಸಿವೆ. ಈ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯಿದ್ದು ಕಾಂಗ್ರೆಸ್ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಕೂಡ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.
ಇವೆಲ್ಲ ವರದಿಗಳ ಸತ್ಯಾಸತ್ಯತೆ ಡಿ. 3 ರಂದು ಭಾನುವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಚುನಾವಣಾ ಎಣಿಕೆ ಮೂಲಕ ಬಹಿರಂಗಗೊಳ್ಳಲಿದೆ.
ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿಗೆ ನವೆಂಬರ್ 17 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದರೆ, ರಾಜಸ್ಥಾನದ 199 ಸ್ಥಾನಗಳಿಗೆ ನ.25, ಛತ್ತೀಸ್‌ಗಢದಲ್ಲಿ 90 ಸ್ಥಾನಗಳಿ ನ.7 ಹಾಗೂ ನ.17ರಂದು ಎರಡು ಹಂತಗಳು, ತೆಲಂಗಾಣದಲ್ಲಿ ನ.30 ಹಾಗೂ ಮಿಜೋರಾಂನಲ್ಲಿ ನ.7 ರಂದು ಮತದಾನ ನಡೆದಿತ್ತು.