ತನ್ನ ಜಾತಿ ತಿಳಿದ ನಂತರ ಸ್ನೇಹಿತರ ವರ್ತನೆಯಲ್ಲಿ ಬದಲಾವಣೆಯಾಗಿರುವ ಬಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಂಬೆ ಐಐಟಿ ವಿದ್ಯಾರ್ಥಿ ದರ್ಶನ್ ಸೋಲಂಕಿ ತನ್ನ ತಾಯಿಗೆ ತಿಳಿಸಿದ್ದರು. ಈ ಮೂಲಕ ಕ್ಯಾಂಪಸ್‌ನಲ್ಲಿ ಜಾತಿ ಆಧಾರಿತ ತಾರತಮ್ಯ ಅಸ್ತಿತ್ವದಲ್ಲಿದೆ ಎಂದು ಹೇಳಿದ್ದರು ಎಂದು ಪೊಲೀಸರು ಪ್ರಕರಣದಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.
ಸಹ ವಿದ್ಯಾರ್ಥಿಗಳು ತಮ್ಮ ಜಾತಿಯ ಬಗ್ಗೆ ತಿಳಿದಾಗ ಅವರ ನಡವಳಿಕೆಯಲ್ಲಿ ಬದಲಾಗಿದೆ ಎಂದು ದೂರವಾಣಿ ಸಂಭಾಷಣೆಯ ಸಮಯದಲ್ಲಿ ಅವರು ತನ್ನ ತಾಯಿಗೆ ಹೇಳಿದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ನಗರ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸೋಲಂಕಿ ಅವರ ತಾಯಿಯ ಹೇಳಿಕೆಯು ಒಂದು ಭಾಗವಾಗಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿರುವ ಸಹ ವಿದ್ಯಾರ್ಥಿ ಅರ್ಮಾನ್ ಖತ್ರಿ ಎಂದು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.
ಅಹಮದಾಬಾದ್ ಮೂಲದ ರಾಸಾಯನಿಕ ಶಾಸ್ತ್ರ ವಿಭಾಗದ ಬಿಟೆಕ್ ಪ್ರಥಮ ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ, ಫೆಬ್ರವರಿ 12, 2023 ರಂದು ಮುಂಬೈನ ಪೊವೈ ಪ್ರದೇಶದ ಐಐಟಿ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಸಾವನಪ್ಪಿದ್ದರು. ಆಗಷ್ಟೆ ಸೆಮಿಸ್ಟರ್ ಪರೀಕ್ಷೆಗಳು ಮುಗಿದಿದ್ದವು.
ಧರ್ಮದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ ನಂತರ ವಿದ್ಯಾರ್ಥಿ ಖತ್ರಿ, ಸೋಲಂಕಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ: ವಿಶೇಷ ಸಿಬಿಐ ತಂಡದೊಂದಿಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ
ಸೋಲಂಕಿ ಅವರ ತಾಯಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಡಿಸೆಂಬರ್ 2022 ರಲ್ಲಿ ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಸೋಲಂಕಿ ತನ್ನ ಸಹೋದರಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಹೇಳಿರುವ ಬಗ್ಗೆ ದಾಖಲಾಗಿದೆ.
ವಿದ್ಯಾರ್ಥಿಯ ಜಾತಿಯ ಬಗ್ಗೆ ಸ್ನೇಹಿತರು ತಿಳಿದುಕೊಂಡಾಗ ಅವರ ವರ್ತನೆಯಲ್ಲಿ ಬದಲಾವಣೆಯಾಗಿದೆ ಎಂದು ಸೋಲಂಕಿ ಅವರ ತಾಯಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನವರಿ 2023 ರಲ್ಲಿ ಮಕರ ಸಂಕ್ರಾಂತಿ ರಜೆಯ ಸಮಯದಲ್ಲಿ ಸೋಲಂಕಿ ಅವರು ತಮ್ಮ ಸಹೋದರಿಯನ್ನು ಭೇಟಿ ಮಾಡಿದಾಗ ಈ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಫೆಬ್ರವರಿ 12 ರಂದು, ಅವರು ಮಧ್ಯಾಹ್ನ 12.20ರ ಸುಮಾರಿಗೆ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ ಮತ್ತು ಫೆಬ್ರವರಿ 14 ರಂದು ಮನೆಗೆ ಭೇಟಿ ನೀಡುವುದಾಗಿ ಮತ್ತು ಅವರು ತಮ್ಮ ಎಲ್ಲ ಸಂಬಂಧಿಕರನ್ನು ಒಟ್ಟಿಗೆ ಆಹ್ವಾನಿಸಬೇಕು ಎಂದು ಹೇಳಿದರು ಎಂದು ದರ್ಶನ್ ಅವರ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಸೋಲಂಕಿ ಅವರ ಸಹೋದರಿ ಮತ್ತು ಚಿಕ್ಕಮ್ಮ ಕೂಡ ತಮ್ಮ ಹೇಳಿಕೆಗಳಲ್ಲಿ, ಅವರು ತಾರತಮ್ಯವನ್ನು ಎದುರಿಸುತ್ತಿದ್ದಾರೆ ಮತ್ತು ಅವರ ಜಾತಿಯ ಬಗ್ಗೆ ತಿಳಿದಾಗ ಇತರ ವಿದ್ಯಾರ್ಥಿಗಳ ವರ್ತನೆಯಲ್ಲಿ ಬದಲಾವಣೆ ಗಮನಿಸಿದ್ದಾರೆ ಎಂದು ಹೇಳಿದ್ದಾರೆ.
ಆರೋಪಪಟ್ಟಿಯಲ್ಲಿ ಕೆಲವು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿದಂತೆ 55 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿವೆ.