ಮಣಿಪುರ ಹಿಂಸಾಚಾರದ ಘಟನೆಗಳ ಬಗ್ಗೆ ಸಿಬಿಐ ತನಿಖೆ ನಡೆಸಲಿದ್ದು, ಮತ್ತು ತನಿಖೆಯ ಮೇಲ್ವಿಚಾರಣೆಯನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಇಂಫಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಡೀ ಘಟನೆಯ ಬಗ್ಗೆ ತನಿಖೆ ನಡೆಸಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಲಾಗುವುದು. ಕೇಂದ್ರ ಸರ್ಕಾರವು ಮಣಿಪುರ ರಾಜ್ಯಪಾಲರ ನೇತೃತ್ವದಲ್ಲಿ ಶಾಂತಿ ಸಮಿತಿಯನ್ನು ಸಹ ರಚಿಸುತ್ತದೆ. ಶಾಂತಿ ಸಮಿತಿಯಲ್ಲಿ ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಸಂಘಟನೆಗಳು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳು ಮತ್ತು ಇತರ ಪ್ರತಿನಿಧಿಗಳು ಇರುತ್ತಾರೆ. ಸಮಿತಿಯು ರಾಜ್ಯದ ಕೆಲವು ಭಾಗಗಳಿಗೆ ಭೇಟಿ ನೀಡಿ ಶಾಶ್ವತ ಶಾಂತಿಗಾಗಿ ಎಲ್ಲ ಗುಂಪುಗಳೊಂದಿಗೆ ಮಾತನಾಡಲಿದೆ. ಸಿಬಿಐ ತಂಡದಿಂದ ಒಟ್ಟು ಆರು ಪ್ರಕರಣಗಳನ್ನು ತನಿಖೆಗೆ ಗುರುತಿಸಲಾಗಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.
“ಸಿಆರ್‌ಪಿಎಫ್ ನಿವೃತ್ತ ಡಿಜಿ ಕುಲದೀಪ್ ಸಿಂಗ್ ನೇತೃತ್ವದ ಇಂಟರ್-ಏಜೆನ್ಸಿ ಯುನಿಫೈಡ್ ಕಮಾಂಡ್ ಅನ್ನು ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಇತರ ಭದ್ರತಾ ಪಡೆಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ಸ್ಥಾಪಿಸಲಾಗಿದೆ. ಸಿಂಗ್ ಅವರು ಪ್ರಸ್ತುತ ಮಣಿಪುರ ಸರ್ಕಾರದ ಕೇಂದ್ರದ ಭದ್ರತಾ ಸಲಹೆಗಾರರಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಪರಿಹಾರ ಮತ್ತು ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್ ಕೂಡ ನಾಳೆ ಘೋಷಿಸಲಾಗುವುದು” ಎಂದು ಅಮಿತ್ ಶಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ: ಯಾರಿದು ಕನುಗೋಳು?
ಮೇ 3 ರಿಂದ ನಡೆದ ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಮುಂದಿನ ಎರಡು ತಿಂಗಳಿಗೆ ಒಟ್ಟು 30,000 ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದ್ದು, ಶೀಘ್ರದಲ್ಲೇ ವಿತರಣೆ ಮಾಡಲಾಗುವುದು. ಅಗತ್ಯ ವಸ್ತುಗಳ ನಿರಂತರ ಪೂರೈಕೆಗಾಗಿ ಎಲ್‌ಪಿಜಿ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಮಣಿಪುರಕ್ಕೆ ಕಳುಹಿಸಲಾಗುತ್ತಿದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ಸುಮಾರು ಒಂದು ತಿಂಗಳಿನಿಂದ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದ ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಕೇಂದ್ರದ ಪ್ರಯತ್ನಗಳ ಭಾಗವಾಗಿ ಅಮಿತ್ ಶಾ ಮೇ 29 ರಿಂದ ಮಣಿಪುರದಲ್ಲಿದ್ದಾರೆ.