ಪಶ್ಚಿಮ ಘಟ್ಟಗಳ ಭೂಕುಸಿತ | ಮೊದಲು ನೈಸರ್ಗಿಕ ವಿಪತ್ತು, ಈಗ ಮಾನವ ನಿರ್ಮಿತ

Date:

Advertisements
ಮೊದಲೆಲ್ಲ ಭೂಕುಸಿತ ಎನ್ನುವುದು ನೈಸರ್ಗಿಕ ವಿಪತ್ತು ಆಗಿತ್ತು. ಆದರೆ, ಈಗ ನಡೆಯುತ್ತಿರುವುದು ನೈಸರ್ಗಿಕವಲ್ಲ. ಮಾನವನಿಂದ ನಿರ್ಮಿತವಾದದ್ದು. ಕರಾವಳಿ, ಮಲೆನಾಡು ಭಾಗಗಳಲ್ಲಿ ರಸ್ತೆ, ರೈಲು, ವಿದ್ಯುತ್‌ ಮಾರ್ಗ, ಗಣಿಗಾರಿಕೆ ಸೇರಿದಂತೆ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದ್ದು, ಗುಡ್ಡಗಳನ್ನು ಬೇಕಾಬಿಟ್ಟಿಯಾಗಿ ಕತ್ತರಿಸಲಾಗುತ್ತಿದೆ. ಬದಲಾವಣೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಆದರೆ, ಅದಕ್ಕಾಗಿ ಜೀವನಾಡಿಯಾದ ಪರಿಸರವನ್ನು ಹಾಳುಮಾಡುವುದಲ್ಲ.

ಕಳೆದ 2 ದಶಕದಿಂದ ಭಾರತದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವ್ಯಾಪಕವಾಗಿ ಉಂಟಾಗುತ್ತಿರುವ ಭೂಕುಸಿತಗಳು ಮಾನವ ನಿರ್ಮಿತ ಎಂಬುದು ಬಹುತೇಕ ನಿಜವಾದರೂ ನಮ್ಮ ಆಡಳಿತ ವ್ಯವಸ್ಥೆ ಪ್ರಕೃತಿ ನಾಶದ ಮೂಲಕ ಶ್ರೀಮಂತ ಉದ್ಯಮಿಗಳ ಖಜಾನೆಯನ್ನು ಭರ್ತಿ ಮಾಡಲು ನೀಡಿರುವ ಅಧಿಕೃತ ಪರವಾನಗಿಯಾಗಿದೆ ಎಂಬುದು ಮಾತ್ರ ಅಕ್ಷರಶಃ ಸತ್ಯವಾಗಿದೆ. ವಯನಾಡು ಹಾಗೂ ಶಿರೂರು ದುರಂತಗಳು ಕೇವಲ ಉದಾಹರಣೆಗಳಾದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸುವುದಕ್ಕೆ ಎಚ್ಚರಿಕೆ ಗಂಟೆಯಾಗಿದೆ.

ವಯನಾಡು, ಶಿರೂರು ಭೂಕುಸಿತ ಘಟನೆಗಳು ಮತ್ತೊಂದು ಮಾನವ ನಿರ್ಮಿತ ವಿಪತ್ತು ಎಂದು ಪರಿಸರ ತಜ್ಞರು ಹಾಗೂ ಭೂವಿಜ್ಞಾನಿಗಳು ಈಗಾಗಲೇ ತಮ್ಮ ವರದಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ವಯನಾಡು, ಉತ್ತರ ಕನ್ನಡದ ಶಿರೂರು ಮಾತ್ರವಲ್ಲದೆ ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚು ಮಳೆಯಾದ ಕರ್ನಾಟಕದ ಕೊಡಗು, ಹಾಸನ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯ ಎಚ್ಚರಿಕೆಯಾಗಿದೆ. ಕೆಲವು ವರ್ಷ ಮಳೆಯೆ ನಿಂತು ಹೋಗುವುದು, ಇಲ್ಲವೇ ಧಾರಾಕಾರ ಮಳೆ ಸುರಿಯುವುದು ಎಲ್ಲವೂ ಮಾನವ ನಿರ್ಮಿತ ಚಟುವಟಿಕೆಗಳಿಂದ ಪ್ರಚೋದಿಸಲ್ಪಟ್ಟ ಅನಾಹುತವಾಗಿದೆ.

ಜುಲೈ 30 ರಂದು ವಯನಾಡಿನಲ್ಲಿ ಸಂಭವಿಸಿದ ದುರಂತ ಭೂಕುಸಿತದಲ್ಲಿ ಅಧಿಕೃತ ಸಾವಿನ ಸಂಖ್ಯೆ ಇದುವರೆಗೆ 219 ಆಗಿದ್ದರೆ, ಅನಧಿಕೃತ ಎಣಿಕೆಗಳ ಪ್ರಕಾರ ಸುಮಾರು 365 ಜನರು ಸಾವನ್ನಪ್ಪಿದ್ದಾರೆ. ಇನ್ನೂ 200 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಜುಲೈ 16 ರಂದು ಉತ್ತರ ಕನ್ನಡದ ಶಿರೂರಿನ ಹೆದ್ದಾರಿ ಬಳಿ ಭಾರಿ ಭೂಕುಸಿತ ಸಂಭವಿಸಿ ಹನ್ನೊಂದು ಮಂದಿ ಕೊಚ್ಚಿಕೊಂಡು ಹೋದರು. ಮೂರು ಟ್ರಕ್‌ಗಳು ಗಂಗಾವಳಿ ನದಿಯಲ್ಲಿ ಮುಳುಗಿದವು. 

Advertisements

ಅವೈಜ್ಞಾನಿಕ ಬೆಳವಣಿಗೆಯು ಪಶ್ಚಿಮ ಘಟ್ಟಗಳನ್ನು ಹಾಳುಗೆಡವಿದ್ದು, ಈಗಲಾದರೂ ಸರ್ಕಾರವು ತಮ್ಮ ಮನಸ್ಸನ್ನು ಬದಲಿಸದಿದ್ದರೆ ಇಂತಹ ವಿನಾಶಗಳು ಇನ್ನಷ್ಟು ಹೆಚ್ಚಾಗುವುದನ್ನು ಕಾಣಬಹುದು. ಅಕ್ರಮ ಕಲ್ಲುಗಣಿಗಾರಿಕೆ ಚಟುವಟಿಕೆಗಳು, ಅರಣ್ಯ ನಾಶ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಆಗಾಗ ಉಂಟಾಗುವ ಸಡಿಲಿಕೆಗಳು ಮತ್ತು ವಿಪತ್ತು ನಿರ್ವಹಣಾ ನಿಯಮಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರದ ವೈಫಲ್ಯವು ಭೂಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

ಕಳೆದ ಎರಡು ದಶಕಗಳಲ್ಲಿ, ಪಶ್ಚಿಮ ಘಟ್ಟಗಳ ನೆಲೆಯಾಗಿರುವ ರಾಜ್ಯಗಳಾದ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ತಮಿಳುನಾಡಿನಲ್ಲಿ ಉಂಟಾದ ನೂರಾರು ಭೂಕುಸಿತಗಳಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರೆ, ಅಷ್ಟೆ ಪ್ರಮಾಣದ ಜನರು ತಮ್ಮ ನೆಲೆ ಹಾಗೂ ಕೃಷಿ ಭೂಮಿಗಳನ್ನು ಕಳೆದುಕೊಂಡು ಅನಾಥವಾಗಿದ್ದಾರೆ.

ರಾಜ್ಯದಲ್ಲಿ 1495 ಭೂಕುಸಿತಗಳು, ಉಳಿದ ಕಡೆ 12 ಸಾವಿರ ಭೂಕುಸಿತ

ಕರ್ನಾಟಕದಲ್ಲಿ, 2006 ರಿಂದ 2023 ರ ನಡುವೆ, ರಾಜ್ಯವು 1,495 ಭೂಕುಸಿತವುಂಟಾಗಿ 81 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರ್ಕಾರಿ ವರದಿಗಳು ಹೇಳುತ್ತವೆ. ಉಳಿದ ಪಶ್ಚಿಮ ಘಟ್ಟಗಳ ರಾಜ್ಯಗಳಲ್ಲಿ 12 ಸಾವಿರಕ್ಕೂ ಹೆಚ್ಚು ಭೂಕುಸಿತವುಂಟಾಗಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಇವುಗಳಲ್ಲಿ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿಯೇ ಹೆಚ್ಚು ಭೂಕುಸಿತವುಂಟಾಗಿದೆ. ಇಸ್ರೋ ಸಂಸ್ಥೆಯ 2023ರ ಭೂಕುಸಿತ ನಕ್ಷೆಯ ಪ್ರಕಾರ, ಭೂಕುಸಿತದಿಂದ ಹೆಚ್ಚಿನ ಅಪಾಯದಲ್ಲಿರುವ ಭಾರತದ 150 ಜಿಲ್ಲೆಗಳಲ್ಲಿ ಕರ್ನಾಟಕದ ಎಂಟು ಜಿಲ್ಲೆಗಳು ಸೇರಿವೆ. ಇವುಗಳಲ್ಲಿ ರಾಜ್ಯದ ಕೊಡಗು ಹಾಗೂ ಕೇರಳದ ವಯನಾಡು ಕ್ರಮವಾಗಿ 12 ಮತ್ತು 13 ನೇ ಸ್ಥಾನದಲ್ಲಿವೆ.

ಭಾರತದಲ್ಲಿ ಹೆಚ್ಚು ಭೂಕುಸಿತವುಂಟಾಗುತ್ತಿರುವ 19 ರಾಜ್ಯಗಳಲ್ಲಿ 12,385 ಭೂಕುಸಿತಗಳೊಂದಿಗೆ ಮಿಜೋರಾಂ ಹಾಗೂ 11,219 ಭೂಕುಸಿತಗಳೊಂದಿಗೆ ಉತ್ತರಾಖಂಡ ಮೊದಲೆರೆಡು ಸ್ಥಾನಗಳಲ್ಲಿವೆ. ಅಪಾಯಕಾರಿ ಜಿಲ್ಲೆಗಳಲ್ಲಿ ಉತ್ತರಾಖಂಡ್‌ನ ರುದ್ರಪ್ರಯಾಗ, ತೆಹ್ರಿ ಮೊದಲ ಎರಡು ಸ್ಥಾನಗಳಲ್ಲಿವೆ. ಮೊದಲ 15 ಜಿಲ್ಲೆಗಳಲ್ಲಿ ಕೇರಳದ 6 ಜಿಲ್ಲೆಗಳಿವೆ. ಕಳೆದ 25 ವರ್ಷಗಳಲ್ಲಿ ಕೇರಳದಲ್ಲಿ 6039, ಮಹಾರಾಷ್ಟ್ರದಲ್ಲಿ 5112, ತಮಿಳುನಾಡಿನಲ್ಲಿ 690 ಭೂಕುಸಿತವುಂಟಾಗಿದೆ. ಭಾರತದ ಶೇಕಡಾವಾರು ತೆಗೆದುಕೊಂಡರೆ ವಾಯವ್ಯ ಭಾರತ ಹಾಗೂ ಹಿಮಾಲಯ ಪ್ರದೇಶಗಳಲ್ಲಿ ಶೇ.66.5, ಈಶಾನ್ಯ ಭಾರತ ಹಾಗೂ ಹಿಮಾಲಯದಲ್ಲಿ ಶೇ. 18.8 ಹಾಗೂ ಪಶ್ಚಿಮ ಘಟ್ಟ ಹಾಗೂ ಕೊಂಕಣ ಬೆಟ್ಟ ಪ್ರದೇಶಗಳಲ್ಲಿ ಶೇ. 14.7 ರಷ್ಟು ಭೂಕುಸಿತವುಂಟಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಪಶ್ಚಿಮ ಘಟ್ಟಗಳ ಸಂರಕ್ಷಣೆ: ಅಭಿವೃದ್ಧಿ v/s ಪರಿಸರ – ಯಾವುದು ಮುಖ್ಯ 

ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳು

ಭೂಕುಸಿತಗಳು ಮುಖ್ಯವಾಗಿ ಧಾರಾಕಾರ ಮಳೆ, ಸಡಿಲವಾದ ಮಣ್ಣು ಮತ್ತು ನೈಸರ್ಗಿಕ ವಿಕೋಪಗಳಿಂದ ಉಂಟಾಗುತ್ತದೆ. ಇವುಗಳ ಜೊತೆ ಅನಿಯಂತ್ರಿತ ಹಾಗೂ ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳು ಅಪಾಯಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ, ನಗರೀಕರಣ, ನಿರ್ಮಾಣ ಕಾರ್ಯಗಳು ಮತ್ತು ಅರಣ್ಯ ನಾಶವು ಪಶ್ಚಿಮ ಘಟ್ಟದ ​​ಜಿಲ್ಲೆಗಳಲ್ಲಿ ಭೂಕುಸಿತದ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಕರ್ನಾಟಕದ ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪ ಹಾಗೂ ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆ ಹೆಚ್ಚಾಗಿದೆ. ಬೆಟ್ಟಗಳನ್ನು ಕತ್ತರಿಸುವ ಮೊದಲು ಬಹು ಇಂಜಿನಿಯರಿಂಗ್ ವಿಭಾಗಗಳು, ಭೂವಿಜ್ಞಾನಿಗಳು ಮತ್ತು ಪರಿಸರಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು. ಆದರೆ ಅವೈಜ್ಞಾನಿಕವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡ ಪರಿಣಾಮ ದೊಡ್ಡ ಪ್ರಮಾಣದ ಭೂಕುಸಿತವುಂಟಾಗುತ್ತದೆ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ.

ವಯನಾಡಿನಲ್ಲಿಯೂ, ಅಭಿವೃದ್ಧಿ ಯೋಜನೆಗಳು ದುರಂತಕ್ಕೆ ಗಣನೀಯ ಕೊಡುಗೆ ನೀಡಿವೆ ಎಂದು ಅನೇಕ ತಜ್ಞರು ಹೇಳುತ್ತಾರೆ.  ಮೆಪ್ಪಾಡಿಯಲ್ಲಿ ಪ್ರಸ್ತುತ ಭೂಕುಸಿತದ ಸ್ಥಳಕ್ಕೆ ಸಮೀಪವಿರುವ ಹೊಸ ಸುರಂಗ ಯೋಜನೆಯು ಅವೈಜ್ಞಾನಿಕವಾಗಿದೆ. 2019 ರಲ್ಲಿ ಪುತ್ತುಮಲದಲ್ಲಿ ಭೂಕುಸಿತ ಸಂಭವಿಸಿ 17 ಮಂದಿ ಮೃತಪಟ್ಟಿದ್ದರೂ ಸರ್ಕಾರವು ಇನ್ನೂ ಸುರಂಗ ರಸ್ತೆ ಯೋಜನೆಯನ್ನು ಆದ್ಯತೆಯಾಗಿ ಪರಿಗಣಿಸಿದೆ. ಇದು 2018 ರಿಂದ ಕೇರಳ ಕಂಡ ಆರನೇ ಪ್ರಮುಖ ಭೂಕುಸಿತವಾಗಿದೆ.

ಹಾಗೆಯೇ ಕರ್ನಾಟಕದ ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳು, ಅರಣ್ಯ ನಾಶ, ಒತ್ತುವರಿಯಿಂದ ಭೂಕುಸಿತಗಳು ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. 2018 ರ ಭೂಕುಸಿತ ದುರಂತದ ಪುನರಾವರ್ತನೆಯಾಗಬಹುದು ಎಂಬ ಭಯವು ಕೊಡಗಿನ ಜನರಲ್ಲಿ ನಿರಂತರವಾಗಿದೆ. 2018 ರಿಂದ 2020ರವರೆಗಿನ ಭೂಕುಸಿತದಿಂದಾಗಿ ಸುಮಾರು 25 ಜನರು ಮೃತಪಟ್ಟಿದ್ದರು. ಅದೇ ರೀತಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗಗಳಲ್ಲೂ ನಿರಂತರವಾಗಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳು ಸ್ಥಳೀಯರಲ್ಲಿ ಭಯ ಹುಟ್ಟಿಸಿವೆ.

ಬರಿ ಬಾಯಿಮಾತಿನ ಸರ್ಕಾರಗಳು

ಅಪರೂಪದ ಜೀವವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಹಲವು ನಿಯಮಗಳಿವೆ. ಆದರೆ ಎಲ್ಲವನ್ನೂ ಉಲ್ಲಂಘಿಸಿ ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಹಿಂದೆ ಇದಕ್ಕಿಂತ ಹೆಚ್ಚು ಮಳೆಯಾಗುತ್ತಿತ್ತು. ಆದರೆ ಭೂಕುಸಿತಗಳು ವಿರಳವಾಗಿದ್ದವು. ಇನ್ನೂರು, ಮುನ್ನೂರು ವರ್ಷಗಳ ಹಿಂದೆಯಿದ್ದ ಪರಿಸರ ವ್ಯವಸ್ಥೆ ಈಗಿಲ್ಲ. ಅವೈಜ್ಞಾನಿಕ ಕಾಮಗಾರಿ, ನೈಸರ್ಗಿಕ ಅರಣ್ಯ ನಾಶ, ನದಿ ಹಳ್ಳ ಅತಿಕ್ರಮಣ, ಗಣಿಗಾರಿಕೆ, ಅಧಿಕ ಮಳೆ, ಜನವಸತಿ ಹೆಚ್ಚಳ, ಪ್ರವಾಸೋದ್ಯಮ, ರಸ್ತೆ ಅಗಲೀಕರಣ, ಇಂಗುಗುಂಡಿ, ರೆಸಾರ್ಟ್ ಮುಂತಾದವು ಕುಸಿತಕ್ಕೆ ಹಲವು ಕಾರಣಗಳ ಪಟ್ಟಿ ಬೆಳೆಯುತ್ತಿದೆ. ಹಾಗೆಯೇ ಭೂ ಬಳಕೆಯ ವಿಷಯದಲ್ಲೂ ಹಲವು ತಪ್ಪು ಮಾಡಿದ್ದೇವೆ. ವರ್ಷದಿಂದ ವರ್ಷಕ್ಕೆ ಕಣಿವೆ, ನದಿ, ಬೆಟ್ಟಗಳ ಸ್ವರೂಪ ಬದಲಾಗುತ್ತಿದೆ. ಆಳಕ್ಕೆ ಬೇರಿಳಿಸದ ಅಕೇಶಿಯಾ, ಸಿಲ್ವರ್, ಕ್ಯಾಸುರಿನಾ ಮುಂತಾದ ಗಿಡಮರಗಳನ್ನು ಕಡಿಯುತ್ತಿದ್ದೇವೆ ಹೊರತು ಬೆಳೆಸುತ್ತಿಲ್ಲ. ಅಧಿಕ ನೀರು ಬಳಕೆಯಾಗುವ ಅಡಿಕೆ, ಬಾಳೆ, ಕಬ್ಬು, ಭತ್ತ ಮುಂತಾದವನ್ನು ಹೆಚ್ಚಿಸುತ್ತಿದ್ದೇವೆ. ಇದರಿಂದ ಜಲ ಸಂಪನ್ಮೂಲ ಕಡಿಮೆಯಾಗಿ ಭೂಮಿ ಕೂಡ ಬರಡಾಗುತ್ತಿದೆ.  

WhatsApp Image 2024 07 26 at 09.27.02

ಮೊದಲೆಲ್ಲ ಭೂಕುಸಿತ ಎನ್ನುವುದು ನೈಸರ್ಗಿಕ ವಿಪತ್ತು ಆಗಿತ್ತು. ಆದರೆ, ಈಗ ನಡೆಯುತ್ತಿರುವುದು ನೈಸರ್ಗಿಕವಲ್ಲ. ಮಾನವನಿಂದ ನಿರ್ಮಿತವಾದದ್ದು. ಕರಾವಳಿ, ಮಲೆನಾಡು ಭಾಗಗಳಲ್ಲಿ ರಸ್ತೆ, ರೈಲು, ವಿದ್ಯುತ್‌ ಮಾರ್ಗ, ಗಣಿಗಾರಿಕೆ ಸೇರಿದಂತೆ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದ್ದು, ಗುಡ್ಡಗಳನ್ನು ಬೇಕಾಬಿಟ್ಟಿಯಾಗಿ ಕತ್ತರಿಸಲಾಗುತ್ತಿದೆ. ಬದಲಾವಣೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಆದರೆ, ಅದಕ್ಕಾಗಿ ಜೀವನಾಡಿಯಾದ ಪರಿಸರವನ್ನು ಹಾಳುಮಾಡುವುದಲ್ಲ. ಅತ್ಯಂತ ವ್ಯವಸ್ಥಿತವಾಗಿ ಪರಿಸರಕ್ಕೆ ತೊಂದರೆಯಾಗದ ರೀತಿಯಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಗುಡ್ಡಗಳ ಯಾವುದೇ ಇಳಿಜಾರನ್ನು ಕತ್ತರಿಸುವಾಗ ಅದರ ಕೋನವು 45 ಡಿಗ್ರಿಗಿಂತ ಹೆಚ್ಚು ಇರುವಂತಿಲ್ಲ. ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕಿಂತಲೂ ಮೊದಲು, ಅಲ್ಲಿನ ಪರಿಸರ, ಮಣ್ಣಿನ ರಚನೆಯನ್ನು ಸಮರ್ಪಕ ಅಧ್ಯಯನಕ್ಕೆ ಒಳಪಡಿಸಬೇಕು.

ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ, ಕ್ವಾರಿ ಚಟುವಟಿಕೆಗಳ ತಡೆ ನೀಡಬೇಕು. ಅರಣ್ಯನಾಶ, ಭೂ ಸವಕಳಿ ತಡೆಗಟ್ಟುವುದು, ವಿವಿಧ ಸ್ಥಳೀಯ ಗಿಡ ನೆಟ್ಟು ಪೋಷಿಸಬೇಕು. ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಸಂಪೂರ್ಣವಾಗಿ ಕಡಿವಾಣವಾಗಬೇಕು. ನೀರು ಹರಿಯುವ ಮಾರ್ಗಗಳ ಒತ್ತುವರಿ ತಡೆ, ಮುಚ್ಚದಂತೆ ಎಚ್ಚರ ವಹಿಸಬೇಕು. ಗುಡ್ಡಗಳ ಇಳಿಜಾರು ಪ್ರದೇಶವನ್ನು ಕತ್ತರಿಸದೇ, ಮೇಲ್ಮಣ್ಣು ಕೊಚ್ಚಿಹೋಗದಂತೆ ಕ್ರಮ ಕೈಗೊಳ್ಳಬೇಕು. ಇವೆಲ್ಲವೂ ಕಾರ್ಯಸಾಧುವಾದರೆ ಮುಂದಿನ ಪೀಳಿಗೆಗೆ ಪರಿಸರವು ಉಳಿಯುತ್ತದೆ. ಭೂಕುಸಿತಗಳಂತಹ ಹಲವು ಸಂಕಷ್ಟಗಳು ಕಡಿಮೆಯಾಗುತ್ತದೆ. ಆದರೆ ಇವೆಲ್ಲವನ್ನು ಮಾಡಬೇಕಾದ ಸರ್ಕಾರಗಳು ಬರಿ ಮಾತನಾಡುತ್ತಿವೆ. ಶ್ರೀಮಂತರ ಹೊಟ್ಟೆ ತುಂಬಿಸಿ ಬಡವರನ್ನು ಬಲಿಕೊಡಲಾಗುತ್ತಿದೆ. ಪರಿಸರ ಉಳಿದರೆ ನಾವು ಉಳಿಯುತ್ತೇವೆ ಎಂಬುದನ್ನು ಆಳುವವರು ಅರಿತುಕೊಳ್ಳಬೇಕು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X