ಬುಡಕಟ್ಟು ಸಮುದಾಯದ ವಿಚ್ಛೇದಿತ ಮಹಿಳೆಯನ್ನು ಆಕೆಯ ಪ್ರಿಯಕರನ ಕುಟುಂಬದವರು ಅಪಹರಿಸಿ, ಅಮಾನುಷವಾಗಿ ಥಳಿಸಿ ರಸ್ತೆಯಲ್ಲಿ ಅರೆಬೆತ್ತಲೆಯಾಗಿ ಬಿಟ್ಟಿರುವ ಘಟನೆ ಗುಜರಾತ್‌ನ ತಾಪಿ ಜಿಲ್ಲೆಯ ವ್ಯಾರಾ ಪಟ್ಟಣದಲ್ಲಿ ನಡೆದಿದೆ.
ಬುಡಕಟ್ಟು ಸಮುದಾಯದ 26 ವರ್ಷದ ಈ ಮಹಿಳೆ ತನ್ನ ಹತ್ತು ವರ್ಷದ ಮಗನೊಂದಿಗೆ ಎಂಟು ವರ್ಷಗಳ ಹಿಂದೆ ವಿಚ್ಛೇದನ ಪಡೆದು ಒಂಟಿಯಾಗಿ ವಾಸಿಸುತ್ತಿದ್ದರು. ಒಂದೂವರೆ ವರ್ಷದ ಹಿಂದೆ, ಆಕೆ ಬೋರಖಡಿ ಗ್ರಾಮದ ನಿವಾಸಿ ನೀರವ್ ಚೌಧರಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಕಳೆದ ಒಂದು ವಾರದಿಂದ ಇಬ್ಬರೂ ವ್ಯಾರಾ ಪಟ್ಟಣದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.
ಪೊಲೀಸ್ ದೂರಿನ ಪ್ರಕಾರ, ಇವರಿಬ್ಬರ ಗೆಳತನ, ಒಟ್ಟಿಗೆ ವಾಸಿಸುವ ಬಗ್ಗೆ ಚೌಧರಿ ಅವರ ಪೋಷಕರು ಮತ್ತು ಸಂಬಂಧಿಕರು ಕೋಪಗೊಂಡಿದ್ದರು. ಕಳೆದ ಬುಧವಾರ ಮಧ್ಯಾಹ್ನ, ಮಹಿಳೆ ಹತ್ತಿರದ ಬುಹಾರಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚೌಧರಿ ಅವರ ಪೋಷಕರು ಹಾಗೂ ಸಂಬಂಧಿಕರು ಆಕೆಯನ್ನು ಅಪಹರಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚೌಧರಿಯ ತಾಯಿ ಮಹಿಳೆಯ ಕೂದಲು ಕತ್ತರಿಸುವುದರ ಜೊತೆ ಆಕೆಯನ್ನು ಅರೆಬೆತ್ತಲೆಗೊಳಿಸಿ ನಡುರಸ್ತೆಯಲ್ಲಿ ಬಿಟ್ಟಿದ್ದಾರೆ. ತಮ್ಮ ಮಗನ ಜೊತೆ ಇನ್ನು ಮುಂದೆ ಕಾಣಿಸಿಕೊಂಡರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ದೇವರು ಆತನಿಗೆ ಮರುಜನ್ಮ ನೀಡಿದ್ದಾನೆ’: ಪ್ರಾಣ ಉಳಿಸಿದ ನಂತರ ವಿಡಿಯೋ ಪೋಸ್ಟ್ ಮಾಡಿದ ಶಮಿ
ನಡುರಸ್ತೆಯಲ್ಲಿ ನಿಂತಿದ್ದ ಸಂತ್ರಸ್ತ ಮಹಿಳೆ ತನಗಾದ ದೌರ್ಜನ್ಯವನ್ನು ದೂರವಾಣಿ ಮೂಲಕ ಪೋಷಕರಿಗೆ ತಿಳಿಸಿದ್ದಾರೆ. ಆಕೆಯ ಪೋಷಕರು ಸ್ಥಳಕ್ಕಾಗಮಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಸಂತ್ರಸ್ತೆ ವ್ಯಾರಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪೊಲೀಸರು ಚೌಧರಿ ಅವರ ಪೋಷಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆ, ಮಹಿಳೆಯರ ಮಾನಹಾನಿ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಪ್ರಕರಣವನ್ನು ದಾಖಲಿಸಿದ್ದಾರೆ.