ಗುಜರಾತ್‌ನಲ್ಲಿ 8ನೇ ತರಗತಿ ಓದಿದವರಿಗೂ, 70,000 ರೂ. ಕೊಡುವ ಎಲ್ಲರಿಗೂ ವೈದ್ಯಕೀಯ ಪದವಿ ಪ್ರಮಾಣಪತ್ರ ವಿತರಿಸುತ್ತಿದ್ದ ಜಾಲವನ್ನು ಗುಜರಾತ್‌ನ ಪೊಲೀಸರು ಬೇಧಿಸಿದ್ದಾರೆ. 14 ಮಂದಿ ನಕಲಿ ವೈದ್ಯರನ್ನು ಬಂಧಿಸಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ 1,200 ನಕಲಿ ಪದವಿಗಳ ಡೇಟಾವನ್ನು ಹೊಂದಿದ್ದ ಗ್ಯಾಂಗ್‌ಅನ್ನು ಸೆರೆಹಿಡಿದಿರುವ ಪೊಲೀಸರು ಪ್ರಮಖ ಆರೋಪಿ ಡಾ. ರಮೇಶ್ ಗುಜರಾತಿಯನ್ನೂ ಬಂಧಿಸಿದ್ದಾರೆ.
ಆರೋಪಿಗಳು ‘ಬೋರ್ಡ್ ಆಫ್ ಎಲೆಕ್ಟ್ರೋ ಹೋಮಿಯೋಪತಿಕ್ ಮೆಡಿಸಿನ್’ (BEHM) ವೈದ್ಯಕೀಯ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಪದವಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದರು. ಅವರ ಬಳಿ ಇದ್ದ ನೂರಾರು ಅರ್ಜಿಗಳು, ಪ್ರಮಾಣಪತ್ರಗಳು ಹಾಗೂ ಸ್ಟ್ಯಾಂಪ್‌ಗಳನ್ನು ಪತ್ತೆಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ವೈದ್ಯಕೀಯ ಪದವಿ ಹೊಂದಿರುವ ಮೂವರು ಅಲೋಪತಿ ವಿಭಾಗದಲ್ಲಿ ಅಭ್ಯಾಸ (ಪ್ರಾಕ್ಟಿಸ್-ಕೆಲಸ) ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿತ್ತು. ಮಾಹಿತಿ ಆಧಾರದಲ್ಲಿ ಅವರ ಕ್ಲಿನಿಕ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವಿಚಾರಣೆ ವೇಳೆ ತಾವು ಬಿಇಎಚ್‌ಎಂ ನೀಡಿದ ಪದವಿ ಪಡೆದಿರುವುದಾಗಿ ತೋರಿಸಿದ್ದಾರೆ. ಆದರೆ, ಗುಜರಾತ್ ಸರ್ಕಾರ ಅಂತಹ ಯಾವುದೇ ಪದವಿಯನ್ನು ನೀಡದ ಕಾರಣ ಇದು ನಕಲಿ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | ಆರೋಪಿ, ಅಪರಾಧಿಗಳೇ ಇಲ್ಲದ ಹಗರಣವೇ?
“ಭಾರತದಲ್ಲಿ ‘ಎಲೆಕ್ಟ್ರೋ ಹೋಮಿಯೋಪತಿ’ಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲ ಎಂಬುದನ್ನು ಪ್ರಮುಖ ಆರೋಪಿ ರಮೇಶ್ ಕಂಡುಕೊಂಡಿದ್ದರು. ಆ ಕೋರ್ಸ್ ಹೆಸರಿನಲ್ಲಿ ಪದವಿಗಳನ್ನು ನೀಡಲು ಮಂಡಳಿಯನ್ನು ತೆರೆಯಲು ಯೋಜಿಸಿದ್ದರು. ಅದಕ್ಕಾಗಿ 5 ಮಂದಿಯನ್ನು ನೇಮಿಸಿಕೊಂಡು, ಅವರಿಗೆ ಎಲೆಕ್ಟ್ರೋ-ಹೋಮಿಯೋಪತಿಯಲ್ಲಿ ತರಬೇತಿ ನೀಡಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
“ಆದರೆ, ಜನರು ಎಲೆಕ್ಟ್ರೋ ಹೋಮಿಯೋಪತಿಯ ಬಗ್ಗೆ ಭಯಪಡುತ್ತಿದ್ದಾರೆ ಎಂದು ತಿಳಿದಾಗ, ಆರೋಪಿಗಳು ತಮ್ಮ ಯೋಜನೆಗಳನ್ನು ಬದಲಾಯಿಸಿದರು. ಗುಜರಾತ್‌ನ ಆಯುಷ್ ಸಚಿವಾಲಯ ನೀಡುವ ಪದವಿಗಳನ್ನು ನಕಲು ಮಾಡಿ, ಜನರಿಗೆ ನೀಡಲು ಪ್ರಾರಂಭಿಸಿದರು. ತಮ್ಮ BEHM ಸಂಸ್ಥೆಯು ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿಕೊಂಡು, 70,000 ರೂ. ಶುಲ್ಕ ಪಡೆಯುವ ಮೂಲಕ ಅಲೋಪತಿ, ಹೋಮಿಯೋಪತಿಯಂತಹ ವಿಭಾಗಗಳ ಪ್ರಮಾಣಪತ್ರ ನೀಡುತ್ತಿದ್ದರು” ಎಂದು ಪೊಲೀಸರು ವಿವರಿಸಿದ್ದಾರೆ.
“ಹಣ ಪಾವತಿ ಮಾಡಿದ 15 ದಿನಗಳಲ್ಲಿ ಅವರು ಪ್ರಮಾಣಪತ್ರಗಳನ್ನು ನೀಡುತ್ತಿದ್ದರು. ಪ್ರಮಾಣಪತ್ರಗಳು ಸಿಂಧುತ್ವವನ್ನು ಹೊಂದಿದ್ದು, ಅವುಗಳನ್ನು ಪಡೆದ ವೈದ್ಯರು (ನಕಲಿ) ಒಂದು ವರ್ಷದ ನಂತರ 5,000 ರಿಂದ 15,000 ರೂ. ನೀಡಿ ಪ್ರಮಾಣಪತ್ರಗಳನ್ನು ನವೀಕರಿಸಬೇಕಾಗಿತ್ತು. ನವೀಕರಣ ಶುಲ್ಕ ಪಾವತಿಸಲು ಸಾಧ್ಯವಾಗದ ವೈದ್ಯರಿಗೆ ಆರೋಪಿಗಳ ಗ್ಯಾಂಗ್ ಬೆದರಿಕೆ ಹಾಕಿ ವಸೂಲಿ ಮಾಡುತ್ತಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.