‘ಪರಿಸರವಾದಿಗಳು ಎಂದಾದರೂ ಅಭಿವೃದ್ಧಿ ಸ್ವಾಗತಿಸಿದ್ದಾರೆಯೇ?’ CJI ಹೇಳಿಕೆಗೆ ಭುಗಿಲೆದ್ದ ಆಕ್ರೋಶ!

Date:

ಅಭಿವೃದ್ಧಿ ಯೋಜನೆಗಳಿಗೆ ಪರಿಸರವಾದಿಗಳು ಅಡ್ಡಿಪಡಿಸುತ್ತಿದ್ದಾರೆ ಮತ್ತು ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಇತ್ತೀಚೆಗೆ ನೀಡಿದ್ದ ಮೌಖಿಕ ಹೇಳಿಕೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೇ 22ರ ಶುಕ್ರವಾರದಂದು ದೇಶದ 600ಕ್ಕೂ ಹೆಚ್ಚು ನಾಗರಿಕರು ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಜಂಟಿಯಾಗಿ CJIಗೆ ಪತ್ರ ಬರೆದಿದ್ದು, ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

- Advertisement -

ಪರಿಸರ ರಕ್ಷಣೆಯ ಪ್ರಯತ್ನಗಳನ್ನು ಕೀಳಾಗಿ ಕಾಣಲು ‘ಪರಿಸರವಾದಿ’ ಎಂಬ ಪದವನ್ನು ಬಳಸಬಾರದು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಇದೇ ವೇಳೆ, ಮಾಜಿ ಸರ್ಕಾರಿ ಅಧಿಕಾರಿಗಳ ಒಕ್ಕೂಟ ‘ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್’ (CCG) ಕೂಡ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ಅವರ ʼಅವಹೇಳನಕಾರಿ ಹೇಳಿಕೆʼ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

CCG ತನ್ನ ಪತ್ರದಲ್ಲಿ, ದೇಶದ ಅತ್ಯುನ್ನತ ನ್ಯಾಯ ಪೀಠದಿಂದ ಇಂತಹ ಪೂರ್ವಗ್ರಹ ಪೀಡಿತ ಹೇಳಿಕೆಗಳು ಬಂದಿರುವುದು ಆಘಾತಕಾರಿ ಎಂದಿದೆ. ಭಾರತದ ಪರಿಸರ ಇತಿಹಾಸವನ್ನು ನೆನಪಿಸಿರುವ ಆ ಪತ್ರ, ಕೇರಳದ ‘ಸೈಲೆಂಟ್ ವ್ಯಾಲಿ’ ಚಳವಳಿ, ಉತ್ತರಾಖಂಡದ ‘ಚಿಪ್ಕೋ’ ಚಳವಳಿ, ಕರ್ನಾಟಕದ ‘ಅಪ್ಪಿಕೋ’ ಚಳವಳಿ ಮತ್ತು ‘ನರ್ಮದಾ ಬಚಾವೋ ಆಂದೋಲನ’ಗಳೇ ಭಾರತವನ್ನು ಪರಿಸರ ಪ್ರಜ್ಞೆಯುಳ್ಳ ದೇಶವನ್ನಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ ಎಂದು ಹೇಳಿದೆ. ಮಾಜಿ IAS ಅಧಿಕಾರಿ ಹರ್ಷ್ ಮಂದರ್, ಮಾಜಿ ರಾಯಭಾರಿ ಕೆ ಪಿ ಫೇಬಿಯನ್ ಮತ್ತು ಪರಿಸರ ಸಚಿವಾಲಯದ ಮಾಜಿ ಕಾರ್ಯದರ್ಶಿ ಮೀನಾ ಗುಪ್ತಾ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಸಿಜೆಐ ಹೇಳಿದ್ದೇನು?

ಮೇ.11ರಂದು ಗುಜರಾತ್‌ನ ಪಿಪಾವಾವ್ ಬಂದರು ವಿಸ್ತರಣೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, CJI ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಕೆಲ ಅಂಶಗಳ ಮೌಖಿಕ ಟಿಪ್ಪಣಿ ಮಾಡಿತ್ತು.

ಅದರಂತೆ, “ದೇಶದ ಯಾವುದೇ ಒಂದು ಯೋಜನೆಯನ್ನು ಪರಿಸರ ಕಾರ್ಯಕರ್ತರು ಸ್ವಾಗತಿಸಿದ ಉದಾಹರಣೆ ಇದೆಯೇ? ದೇಶವು ಪ್ರಗತಿ ಹೊಂದುತ್ತಿದೆ. ನಾವು ಈ ಯೋಜನೆಯನ್ನು ಸ್ವಾಗತಿಸುತ್ತೇವೆ ಎಂದು ಅವರು ಎಂದಾದರೂ ಹೇಳಿದ್ದಾರೆಯೇ? ಪ್ರತಿಯೊಂದನ್ನೂ ನ್ಯಾಯಾಲಯಕ್ಕೆ ಎಳೆದುಕೊಂಡು ಬರಲಾಗುತ್ತದೆ. ಇಂತಹ ವ್ಯಾಜ್ಯಗಳು ದೇಶದ ಅಭಿವೃದ್ಧಿ ಯೋಜನೆಗಳನ್ನು ತಡೆಯಲೆಂದೇ ಸಲ್ಲಿಕೆಯಾಗುತ್ತಿವೆ, ಇದೇ ದೊಡ್ಡ ಸಮಸ್ಯೆ. ಅಲ್ಲದೆ, ಅರ್ಜಿದಾರರು ತಜ್ಞರ ಸಮಿತಿಗೆ ಹೋಗದೆ ನೇರವಾಗಿ ನ್ಯಾಯಾಲಯಕ್ಕೆ ಬರುವುದನ್ನು ಪ್ರಶ್ನಿಸಿರುವ ಪೀಠ, “ನಾನು RTI ಕಾರ್ಯಕರ್ತ, ಪರಿಸರವಾದಿ, ನಾನು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡು ತಿರುಗುವವರ ನಡೆ ಸಂಶಯಾಸ್ಪದ ಹಾಗೂ ಲಾಭದ ಉದ್ದೇಶದಿಂದ ಕೂಡಿದ್ದಾಗಿದೆ” ಎಂದು ಲೇವಡಿ ಮಾಡಿತ್ತು ಎನ್ನಲಾಗಿದೆ.

ಪರಿಸರವಾದಿಗಳು ಸಲ್ಲಿಸಿರುವ ಪತ್ರದಲ್ಲೇನಿದೆ?

ಮುಖ್ಯ ನ್ಯಾಯಮೂರ್ತಿಗಳ ಈ ಮಾತುಗಳು ಅತ್ಯಂತ ಆಕ್ಷೇಪಾರ್ಹ ಮತ್ತು ಆತಂಕಕಾರಿ ಎಂದು ನಾಗರಿಕರು ಬರೆದ ಪತ್ರದಲ್ಲಿ ಹೇಳಲಾಗಿದೆ. ಈ ಜಂಟಿ ಪತ್ರಕ್ಕೆ ರೈತರು, ವಕೀಲರು, ಪರಿಸರ ಕಾರ್ಯಕರ್ತರು, ವಿಜ್ಞಾನಿಗಳು, ವನ್ಯಜೀವಿ ತಜ್ಞರು, ಎಂಜಿನಿಯರ್‌ಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 533 ಪ್ರಮುಖರು ಮತ್ತು ಉತ್ತರಾಖಂಡದ ‘ಜೋಶಿಮಠ್ ಬಚಾವೋ ಸಂಘರ್ಷ್ ಸಮಿತಿ’, ಮುಂಬೈನ ‘ವನಶಕ್ತಿ’ ಸೇರಿದಂತೆ ಸುಮಾರು 50 ಸಂಸ್ಥೆಗಳು ಸಹಿ ಹಾಕಿವೆ.

“ಪರಿಸರ ಸಂರಕ್ಷಣೆಗಾಗಿ ಧ್ವನಿ ಎತ್ತುವ ನಾಗರಿಕರನ್ನು ʼಅಭಿವೃದ್ಧಿ ವಿರೋಧಿಗಳುʼ ಅಥವಾ ʼಸಂಶಯಾಸ್ಪದ ವ್ಯಕ್ತಿಗಳುʼ ಎಂಬಂತೆ ಬಿಂಬಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಪರಿಸರ ಮೊಕದ್ದಮೆಗಳಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬ ವಾದಕ್ಕೆ ಯಾವುದೇ ಆಧಾರವಿಲ್ಲ. ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ, 2020 ರಿಂದ 2025ರ ನಡುವೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ನೀಡಿದ ಒಂದು ಲಕ್ಷಕ್ಕೂ ಹೆಚ್ಚು ಆದೇಶಗಳಲ್ಲಿ, ಶೇ. 80ರಷ್ಟು (ಐದರಲ್ಲಿ ನಾಲ್ಕು ಭಾಗ) ಪ್ರಕರಣಗಳಲ್ಲಿ ಅಭಿವೃದ್ಧಿ ಯೋಜನೆಗಳ ಪರವಾಗಿಯೇ ತೀರ್ಪು ಬಂದಿದೆ. ಭಾರತೀಯ ಸಂವಿಧಾನದ ವಿಧಿ 51 (A)(g) ಪ್ರಕಾರ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ (ನ್ಯಾಯಾಧೀಶರನ್ನೂ ಒಳಗೊಂಡು) ಮೂಲಭೂತ ಕರ್ತವ್ಯ. ನಾಗರಿಕರು ನ್ಯಾಯಾಲಯದ ಮೊರೆ ಹೋಗುತ್ತಿರುವುದು ವ್ಯವಸ್ಥೆಯನ್ನು ಹಾಳುಮಾಡಲಲ್ಲ, ಬದಲಿಗೆ ಪರಿಸರ ಸಮತೋಲನ ಕಾಯ್ದುಕೊಳ್ಳಲು” ಎಂದು ಪತ್ರದಲ್ಲಿ ಸಿಜೆಐ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಇದೇ ವಿಷಯವಾಗಿ ದೇಶದ 72 ಪ್ರಮುಖ ವಕೀಲರು, ಕಾನೂನು ವಿದ್ಯಾರ್ಥಿಗಳು, ಕಾನೂನು ವಿಭಾಗದ ಅಧ್ಯಾಪಕರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ಮತ್ತೊಂದು ಒಕ್ಕೂಟವು ಮುಖ್ಯ ನ್ಯಾಯಮೂರ್ತಿಗಳಿಗೆ ಬಹಿರಂಗ ಪತ್ರ ಬರೆದಿದೆ.

ಮುಖ್ಯ ನ್ಯಾಯಮೂರ್ತಿಗಳ ಇಂತಹ ಮಾತುಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ಕಾನೂನು ಬದ್ಧತೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡುತ್ತವೆ ಮತ್ತು ಭವಿಷ್ಯದಲ್ಲಿ ಪರಿಸರ ನಾಶದ ವಿರುದ್ಧ ಧ್ವನಿ ಎತ್ತುವ ಸಮುದಾಯಗಳ ಭರವಸೆಗೆ ತಣ್ಣೀರೆರಚಿದಂತಾಗುತ್ತದೆ ಎಂದು ಕಾನೂನು ವಲಯ ಕಳವಳ ವ್ಯಕ್ತಪಡಿಸಿದೆ. ಕಾನೂನು ತಜ್ಞರ ವಿಶ್ಲೇಷಣೆಯ ಪ್ರಕಾರ, ಇದುವರೆಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರಿಸರ ವ್ಯಾಜ್ಯಗಳನ್ನು ಸಂವಿಧಾನದ ಆಡಳಿತದ ಒಂದು ಪ್ರಮುಖ ಭಾಗವೆಂದು ಗೌರವಿಸಲಾಗುತ್ತಿತ್ತು. ಆದರೆ ಸಿಜೆಐ ಅವರ ಪ್ರಸ್ತುತ ಧೋರಣೆಯು, ನ್ಯಾಯಾಲಯಗಳು ಇನ್ನು ಮುಂದೆ ಪರಿಸರ ಅರ್ಜಿಗಳನ್ನು ಕೇವಲ ʼಅಭಿವೃದ್ಧಿಗೆ ತಡೆಯೊಡ್ಡುವ ಒಂದು ಅನುಮಾನಾಸ್ಪದ ಅಡಚಣೆʼ ಎಂದು ಪರಿಗಣಿಸುವ ಸಿದ್ದಾಂತದ ಬದಲಾವಣೆಗೆ ಮುನ್ನುಡಿ ಬರೆಯುವಂತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ನಾವು ಸಂವಿಧಾನಬದ್ಧ ಕರ್ತವ್ಯವನ್ನು ಪಾಲಿಸುತ್ತಿದ್ದೇವೆಯೇ ಹೊರತು ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸುತ್ತಿಲ್ಲ. ‘ಪರಿಸರವಾದಿ’ ಎಂಬ ಪದವನ್ನು ನಕಾರಾತ್ಮಕವಾಗಿ ಬಳಸಿರುವುದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ” ಎಂದಿದ್ದಾರೆ ಹಿರಿಯ ಪರಿಸರವಾದಿ ಪ್ರಫುಲ್ಲ ಸಮಂತರಾ.

ಪರಿಸರ ವಿಜ್ಞಾನಿ ರೋಹಿತ್ ಝಾ ಅವರ ಪ್ರಕಾರ, ಪ್ರಸ್ತುತ ಪರಿಸರ ಪ್ರಭಾವದ ಮೌಲ್ಯಮಾಪನ (EIA) ವರದಿಗಳಲ್ಲಿ ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ ಮತ್ತು ಸ್ಥಳೀಯರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾಗರಿಕರಿಗೆ ನ್ಯಾಯಾಲಯವೇ ಕೊನೆಯ ಆಸರೆಯಾಗಿರುತ್ತದೆ. ದೇಶದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎಂಬುದು ಒಂದಕ್ಕೊಂದು ಮಾರುಕಟ್ಟೆಯಲ್ಲಿ ಇಡುವ ಪರ್ಯಾಯ ಆಯ್ಕೆಗಳಲ್ಲ ಮತ್ತು ಪರಿಸರವನ್ನು ಬಲಿಗೊಟ್ಟು ಮಾಡುವ ಅಭಿವೃದ್ಧಿ ಸುಸ್ಥಿರವಲ್ಲ ಎಂದು ನಾಗರಿಕ ಒಕ್ಕೂಟಗಳು ಒಕ್ಕೊರಲಿನಿಂದ ಹೇಳಿವೆ. ಸುಪ್ರೀಂ ಕೋರ್ಟ್ ತಾನೇ ಈ ಹಿಂದೆ ರೂಪಿಸಿರುವ ಪರಿಸರ ಸಂರಕ್ಷಣೆಯ ಭವ್ಯ ತತ್ವಗಳಿಗೆ ಬದ್ಧವಾಗಿರಬೇಕು ಮತ್ತು ದೇಶದ ಆರ್ಥಿಕ ಭದ್ರತೆಯ ಅಡಿಪಾಯವಾಗಿರುವ ಸುಸ್ಥಿರ ಹಾಗೂ ನ್ಯಾಯಸಮ್ಮತ ಅಭಿವೃದ್ಧಿಗೆ ಪೂರಕವಾಗಿ ಪರಿಸರ ಅರ್ಜಿಗಳನ್ನು ಕಾನೂನು ಜಾರಿಯ ಪಾರದರ್ಶಕ ಮಾಧ್ಯಮಗಳೆಂದು ಒಪ್ಪಿಕೊಳ್ಳಬೇಕು ಎಂದು ದೇಶದ ನಾಗರಿಕ ವಲಯ ಆಗ್ರಹಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮೌಖಿಕ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು, ತಾನೇ ಈ ಹಿಂದೆ ರೂಪಿಸಿರುವ ಪರಿಸರ ಸಂರಕ್ಷಣೆಯ ತತ್ವಗಳಿಗೆ ಕೋರ್ಟ್ ಬದ್ಧವಾಗಿರಬೇಕು ಹಾಗೂ ಅಭಿವೃದ್ಧಿ ಮತ್ತು ಪರಿಸರ ರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಪಾರದರ್ಶಕ ಮತ್ತು ಸುಸ್ಥಿರ ನಿಯಮಾವಳಿಗಳನ್ನು ಜಾರಿಗೆ ತರಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳನ್ನು ಮಂಡಿಸಲಾಗಿದೆ.

ಸಿಜೆಐ ಅವರ ಹೇಳಿಕೆಯು ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಲಾಭ ಮಾಡಿಕೊಡುತ್ತದೆ ಎಂದು ನಾಗರಿಕ ಹಕ್ಕುಗಳ ಹೋರಾಟಗಾರರು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಅದಕ್ಕೆ ಕಾರಣಗಳೂ ಇವೆ.. “ಕೇಂದ್ರ ಸರ್ಕಾರವು ಆರ್ಥಿಕ ಪ್ರಗತಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಇದೇ ಧಾಟಿಯಲ್ಲಿ ಸಿಜೆಐ ಕೂಡ ʼದೇಶವು ಪ್ರಗತಿ ಹೊಂದುತ್ತಿದೆʼ ಎಂದು ಹೇಳಿರುವುದು, ʼನ್ಯಾಯಾಂಗವೂ ಸರ್ಕಾರದ ಭಾಷೆಯನ್ನೇ ಮಾತನಾಡುತ್ತಿದೆಯಲ್ಲʼ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ”

“ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದ್ದು ಯಾವುದೇ ಹೈಫೈ ಪರಿಸರವಾದಿಯಲ್ಲ. ಅಲ್ಲಿನ ಸ್ಥಳೀಯ ಸಮುದಾಯದ ಬಡ ನಿವಾಸಿ. ಆದರೂ ಸಿಜೆಐ ಇಡೀ ಪರಿಸರ ಚಳವಳಿಯನ್ನೇ ಸಾರಾಸಗಟಾಗಿ ಲೇವಡಿ ಮಾಡಿರುವುದು, ಸರ್ಕಾರದ ಯೋಜನೆಗಳಿಗೆ ಯಾರು ಅಡ್ಡಿ ಬರಬಾರದು ಎಂಬ ಸಂದೇಶ ರವಾನಿಸಿದಂತಾಗುತ್ತದೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಪರಿಸರ ಪ್ರಭಾವದ ಮೌಲ್ಯಮಾಪನ ನಿಯಮಗಳನ್ನು ಸಡಿಲಗೊಳಿಸುತ್ತಿದೆ ಎಂಬ ಟೀಕೆ ಇದೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯವೂ ಪರಿಸರವಾದಿಗಳನ್ನು ತರಾಟೆಗೆ ತೆಗೆದುಕೊಂಡರೆ, ಉದ್ಯಮಿಗಳಿಗೆ ಮತ್ತು ಸರ್ಕಾರಕ್ಕೆ ನಿಯಮಗಳನ್ನು ಉಲ್ಲಂಘಿಸಲು ಹಸಿರು ನಿಶಾನೆ ತೋರಿಸಿದಂತಾಗುತ್ತದೆ” ಎಂಬುದು ಹೋರಾಟಗಾರರ ಆತಂಕವಾಗಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆ | ಚುನಾವಣಾ ಅಕ್ರಮ ನಡೆಸಿ TMCಯ 150 ಸೀಟುಗಳನ್ನು BJP ಕದ್ದಿದೆ: ಮಮತಾ ಬ್ಯಾನರ್ಜಿ

ದೇಶದ ಅತ್ಯುನ್ನತ ನ್ಯಾಯಾಂಗ ಸ್ಥಾನದಲ್ಲಿರುವ ಮುಖ್ಯ ನ್ಯಾಯಮೂರ್ತಿಗಳಿಂದ ಇಂತಹ ಪೂರ್ವಾಗ್ರಹ ಪೀಡಿತ ಮಾತುಗಳು ಹೊರಬಂದಿರುವುದು ಸಂವಿಧಾನದ ಘನತೆ ಹಾಗೂ ಆಶಯಗಳಿಗೆ ತಕ್ಕುದಾದದ್ದಲ್ಲ. ಪ್ರಕೃತಿ, ಜೀವರಾಶಿ ಮತ್ತು ಸ್ಥಳೀಯ ಸಮುದಾಯಗಳ ಹಿತಾಸಕ್ತಿಯನ್ನು ಬಲಿಗೊಟ್ಟು ಸಾಧಿಸುವ ಯಾವುದೇ ಅಭಿವೃದ್ಧಿಯೂ ಎಂದಿಗೂ ಸುಸ್ಥಿರ ಹಾಗೂ ನ್ಯಾಯಸಮ್ಮತ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕಿದೆ. ಕೇವಲ ಭೌತಿಕ ಲಾಭದ ಆಸಕ್ತಿಯಿಂದ ನ್ಯಾಯಾಲಯದ ಸಮಯವನ್ನು ಹಾಳು ಮಾಡಲು ಬಂದ ಆಗಂತುಕರು ಎಂಬಂತೆ ಪರಿಸರ ಸಂರಕ್ಷಕರನ್ನು ಬಿಂಬಿಸಿರುವ ಈ ಕಳವಳಕಾರಿ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕಿದೆ. ಆ ಮೂಲಕ, ಭಾರತೀಯ ನ್ಯಾಯಾಂಗ ವ್ಯವಸ್ಥೆಯು ತಾನೇ ಹೆಮ್ಮೆಯಿಂದ ನಿರ್ಮಿಸಿಕೊಂಡು ಬಂದಿರುವ ಪರಿಸರ ನ್ಯಾಯಶಾಸ್ತ್ರದ ಭವ್ಯ ಪರಂಪರೆಯನ್ನು ಎತ್ತಿಹಿಡಿಯಬೇಕಿದೆ ಮತ್ತು ನಾಗರಿಕರ ಸಾಂವಿಧಾನಿಕ ಧ್ವನಿಗೆ ಗೌರವ ನೀಡಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿಯಲ್ಲಿ ಅ.30ರಿಂದ ನ.1ರವರೆಗೆ ಎಸ್‌ಎಫ್‌ಐ ರಾಜ್ಯ ಸಮ್ಮೇಳನ

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಸಮ್ಮೇಳನವು...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...