ಏಪ್ರಿಲ್‌ನಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಅಕ್ರಮಗಳನ್ನು ನಡೆಸಿದೆ. ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಎಸಗಿ ಟಿಎಂಸಿಯ ಬರೋಬ್ಬರಿ 150 ವಿಧಾನಸಭಾ ಸ್ಥಾನಗಳನ್ನು ಬಿಜೆಪಿ ಕದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ರಾಜಕೀಯ ರ‍್ಯಾಲಿಯಲ್ಲಿ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಮಮತಾ, “ಬಿಜೆಪಿ ಕೇಂದ್ರ ಸರ್ಕಾರದ ಅಧಿಕಾರ, ಕೇಂದ್ರದಲ್ಲಿರುವ ಸೌಲಭ್ಯಗಳು ಹಾಗೂ ವಿವಿಧ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಚುನಾವಣಾ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳನ್ನು ಎಸಗಿದೆ” ಎಂದು ದೂರಿದ್ದಾರೆ.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಮತ್ತು ಚುನಾವಣಾ ವ್ಯವಸ್ಥೆಯನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಬಂಗಾಳದಾದ್ಯಂತ ಟಿಎಂಸಿಗೆ ಜನಬೆಂಬಲ ಪ್ರಬಲವಾಗಿದ್ದರೂ, ಅನೇಕ ಕ್ಷೇತ್ರಗಳಲ್ಲಿ ಕೇಂದ್ರ ಪಡೆಗಳ ಅತಿಯಾದ ಹಸ್ತಕ್ಷೇಪ ಮತ್ತು ಮತಗಟ್ಟೆಗಳ ಮಟ್ಟದಲ್ಲಿ ನಡೆದ ವ್ಯವಸ್ಥಿತ ಅಕ್ರಮಗಳಿಂದಾಗಿ ಟಿಎಂಸಿ ಗೆಲ್ಲಬೇಕಾಗಿದ್ದ ಕನಿಷ್ಠ 150 ಸ್ಥಾನಗಳ ಫಲಿತಾಂಶವನ್ನು ಬದಲಾಯಿಸಲಾಗಿದೆ. ಬಂಗಾಳದ ಜನತೆ ನಮಗೆ ನೀಡಿದ ಸ್ಪಷ್ಟ ಜನಾದೇಶವನ್ನು ಕಸಿದುಕೊಳ್ಳಲು ದೆಹಲಿಯ ನಾಯಕರು ಸಂಚು ರೂಪಿಸಿದ್ದರು” ಎಂದು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಂಗಾಳ | ಬಿಜೆಪಿ ಗೋರಕ್ಷಣೆ ನಾಟಕಕ್ಕೆ ಮುಸ್ಲಿಂ ಯುವಕರ ಪೆಟ್ಟು; ಸಂಕಷ್ಟದಲ್ಲಿ ಹಿಂದು ರೈತರು!
“ಬಿಜೆಪಿಯ ಈ ‘ಮತಗಳ ಕಳ್ಳತನ’ ಮತ್ತು ರಾಜಕೀಯ ತಂತ್ರಗಾರಿಕೆಗೆ ಬಂಗಾಳದ ಹೆಮ್ಮೆಯ ಜನತೆ ಎಂದಿಗೂ ಮಣಿಯುವುದಿಲ್ಲ. ಕೇಂದ್ರ ಸರ್ಕಾರವು ಎಷ್ಟೇ ದಬ್ಬಾಳಿಕೆ ನಡೆಸಿದರೂ ಅಥವಾ ತಮ್ಮ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿಸಿದರೂ, ನಾವು ಯಾವುದೇ ಕಾರಣಕ್ಕೂ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ” ಎಂದಿದ್ದಾರೆ.
ತಮ್ಮ ರಾಜ್ಯದ ಹಕ್ಕುಗಳಿಗಾಗಿ ಮತ್ತು ಜನರ ಸ್ವಾಭಿಮಾನಕ್ಕಾಗಿ ತಾವು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದ್ದು, ಬಿಜೆಪಿಯ ಇಂತಹ ಜನವಿರೋಧಿ ಧೋರಣೆಗಳನ್ನು ಜನರ ನ್ಯಾಯಾಲಯದಲ್ಲೇ ಬಲವಾಗಿ ಎದುರಿಸುವುದಾಗಿ ಅವರು ಸವಾಲು ಹಾಕಿದ್ದಾರೆ.



