ಭಾರತದಲ್ಲಿ ಇಲ್ಲಿಯವರೆಗೂ ನಡೆದಿರುವ 17 ಲೋಕಸಭೆ ಚುನಾವಣೆಗಳಲ್ಲಿ ಮೂರು ಬಾರಿ ಅತಂತ್ರ ಸಂಸತ್ತು ನಿರ್ಮಾಣವಾದರೆ, 7 ಬಾರಿ ಯಾವೊಂದು ರಾಜಕೀಯ ಪಕ್ಷಗಳು ಬಹುಮತದ ಸಂಖ್ಯೆ ಪಡೆದಿಲ್ಲ.
1989ರ 9ನೇ ಲೋಕಸಭೆ ಚುನಾವಣೆಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಅತಂತ್ರ ಸಂಸತ್ತು ನಿರ್ಮಾಣವಾಗಿತ್ತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಬಹುಮತ ಸಂಖ್ಯೆ 272 ಪಡೆಯಲು ವಿಫಲವಾಗಿತ್ತು. ಅಂದಿನ ಚುನಾವಣೆಯಲ್ಲಿ ಕೈ ಪಕ್ಷ 187 ಸ್ಥಾನಗಳನ್ನು ಮಾತ್ರ ಪಡೆದಿತ್ತು.
143 ಸ್ಥಾನ ಗಳಿಸಿದ್ದ ಜನತಾದಳ ಪಕ್ಷ ಬಿಜೆಪಿ ಹಾಗೂ ಎಡಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸಿತ್ತು. ವಿ ಪಿ ಸಿಂಗ್ ಒಂದು ವರ್ಷದ ಅವಧಿಯವರೆಗೆ ಪ್ರಧಾನಿಯಾಗಿದ್ದರು. 1990ರಲ್ಲಿ ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದ ಕಾರಣ ವಿ ಪಿ ಸಿಂಗ್ ರಾಜೀನಾಮೆ ನೀಡಬೇಕಾಯಿತು. ಕಾಂಗ್ರೆಸ್ ಬೆಂಬಲದಿಂದ ಚಂದ್ರ ಶೇಖರ್ ಅವರು 7 ತಿಂಗಳ ಕಾಲ ಪ್ರಧಾನಿಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು
1996ರ 11ನೇ ಲೋಕಸಭಾ ಚುನಾವಣೆಯಲ್ಲಿ ಎರಡನೇ ಬಾರಿ ಅತಂತ್ರ ಸ್ಥಿತಿ ಉಂಟಾಗಿತ್ತು. ಈ ಚುನಾವಣೆಯಲ್ಲಿ 161 ಕ್ಷೇತ್ರಗಳನ್ನು ಜಯಿಸಿದ ಬಿಜೆಪಿ ಮೊದಲ ಪಕ್ಷವಾಗಿ ಹೊರಹೊಮ್ಮಿತ್ತು. ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್ 140 ಸ್ಥಾನಗಳನ್ನು ಪಡೆದಿತ್ತು. ಎರಡು ವರ್ಷಗಳ ಈ ಅವಧಿಯಲ್ಲಿ ಮೂವರು ಪ್ರಧಾನಿಗಳು ಅಧಿಕಾರ ಅನುಭವಿಸಿದರು.
ಅಟಲ್ ಬಿಹಾರಿ ವಾಜಪೇಯಿ 13 ದಿನಗಳು, ಹೆಚ್ ಡಿ ದೇವೇಗೌಡ ಹತ್ತುವರೆ ತಿಂಗಳು ಹಾಗೂ 11 ತಿಂಗಳ ಕಾಲ ಐ ಕೆ ಗುಜ್ರಾಲ್ ಪ್ರಧಾನಿಗಳಾಗಿದ್ದರು.
1998ರ 12ನೇ ಲೋಕಸಭಾ ಚುನಾವಣೆಯಲ್ಲೂ ಯಾವೊಂದು ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಬಿಜೆಪಿ 182 ಸೀಟು ಗಳಿಸಿ ಹೆಚ್ಚು ಸ್ಥಾನಗಳಿಸಿದ ಪಕ್ಷವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ 141 ಸ್ಥಾನ ಪಡೆದರೆ, ಸಿಪಿಐಎಂಗೆ 32 ಕ್ಷೇತ್ರಗಳು ಲಭಿಸಿದ್ದವು. ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ 13 ತಿಂಗಳುಗಳ ಕಾಲ ಪ್ರಧಾನಿಯಾಗಿದ್ದರು.
7 ಚುನಾವಣೆಗಳಲ್ಲಿ ಮ್ಯಾಜಿಕ್ ಸಂಖ್ಯೆ ಪಡೆಯದ ಪಕ್ಷಗಳು
ಒಟ್ಟು 7 ಲೋಕಸಭಾ ಚುನಾವಣೆಗಳಲ್ಲಿ ಯಾವೊಂದು ಪಕ್ಷವು ಬಹುಮತದ 272 ಸಂಖ್ಯೆಗಳನ್ನು ಪಡೆದಿಲ್ಲ. 1996ರ 11ನೇ ಲೋಕಸಭಾ ಚುನಾವಣೆಯಿಂದ 2014ರ 16ನೇ ಲೋಕಸಭಾ ಚುನಾವಣೆಯವರೆಗೂ ರಾಷ್ಟ್ರೀಯ ಪಕ್ಷಗಳು ಒಳಗೊಂಡು ಯಾವ ಪಕ್ಷವು ಮ್ಯಾಜಿಕ್ ಸಂಖ್ಯೆಯನ್ನು ಪಡೆದಿರಲಿಲ್ಲ.
1991,2004 ಹಾಗೂ 2009ರಲ್ಲಿ ಕಾಂಗ್ರೆಸ್ ಪೂರ್ಣ ಅವಧಿಯ ಕಾಲ ಅಧಿಕಾರ ನಡೆಸಿದರೂ ಬಹುಮತದ ಸಂಖ್ಯೆ ಗಳಿಸಿರಲಿಲ್ಲ. 1991ರಲ್ಲಿ 244 ಸ್ಥಾನ ಪಡೆದಿದ್ದ ಕಾಂಗ್ರೆಸ್ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಪಿ ವಿ ನರಸಿಂಹರಾವ್ 5 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿದ್ದರು.
2004ರಲ್ಲಿ ಕಾಂಗ್ರೆಸ್ 145 ಸ್ಥಾನ ಪಡೆದಿತ್ತು. ಎಡ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್ನಿಂದ ಡಾ. ಮನ್ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. 2009ರಲ್ಲಿ ಕಾಂಗ್ರೆಸ್ 206 ಸ್ಥಾನ ಪಡೆದ ಸಂದರ್ಭದಲ್ಲೂ ಎಡ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಎರಡನೇ ಬಾರಿ ಮನ್ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು.
