1975ರಲ್ಲಿ ಇಸ್ರೇಲ್ ಪ್ರವಾಸದಲ್ಲಿದ್ದ ಅಂದಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್, “ನಾನು ಇಂದು ಪ್ರಧಾನಿ ಯಿತ್ಜಾಕ್ ರೇಬಿನ್ ಅವರನ್ನು ರಕ್ಷಣಾ ಸಚಿವ ಶಿಮೋನ್ ಪೆರೆಸ್ ಅವರಿಂದ ಪಾರುಮಾಡಲು ಬಂದಿದ್ದೇನೆ” ಎಂದು ತಮಾಷೆಯಾಗಿ ಹೇಳಿದ್ದರು. ಆದರೆ, ಈ ಹಾಸ್ಯವನ್ನು ಬದಿಗಿಟ್ಟರೆ, ಪ್ರತಿಯೊಬ್ಬ ಸರ್ವೋಚ್ಚ ನಾಯಕನೂ ಎದುರಿಸುವ ಅತ್ಯಂತ ಸಂಕೀರ್ಣವಾದ ಗೊಂದಲವನ್ನು ಅವರು ಪ್ರಸ್ತಾಪಿಸುತ್ತಿದ್ದರು. ಅದೇನೆಂದರೆ, ತನ್ನ ಉಪನಾಯಕ ಅಥವಾ ನಿಕಟವರ್ತಿ ಅಥವಾ ಮಿತ್ರ ಇಡೀ ಸನ್ನಿವೇಶವನ್ನೇ ಹಾಳುಗೆಡವದಂತೆ ತಡೆಯುವುದು ಹೇಗೆ ಎಂಬುದು. ಒಬ್ಬ ನಾಯಕ ತನ್ನ ಸುತ್ತಲಿರುವ ಕಟ್ಟರ್ ವ್ಯಕ್ತಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾದಾಗ, ಅದರ ಪರಿಣಾಮ ನಿಸ್ಸಂಶಯವಾಗಿ ಅಪಾರ ಹಾನಿಗೆ ಕಾರಣವಾಗುತ್ತದೆ.
ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿಯೂ ಇಂತಹ ಹಲವು ಉದಾಹರಣೆಗಳಿವೆ. 1960ರಲ್ಲಿ ಚೀನಾದ ಪ್ರಧಾನಿ ಝೌ ಎನ್ಲಾಯ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಗೋವಿಂದ್ ವಲ್ಲಭ್ ಪಂತ್ ಮತ್ತು ಮೊರಾರ್ಜಿ ದೇಸಾಯಿ ಅವರಿಗೆ ಯಾವುದೇ ಒಪ್ಪಂದವನ್ನು ಮುರಿಯಲು ಅವಕಾಶ ಮಾಡಿಕೊಟ್ಟಿದ್ದರು. ಸಂಜಯ್ ಗಾಂಧಿ ತಮ್ಮ ತಾಯಿ ಇಂದಿರಾ ಗಾಂಧಿಯವರನ್ನು ತುರ್ತುಸ್ಥಿತಿಯ ಸುಳಿಗೆ ಸಿಲುಕಿಸಿದ್ದರು. ಎಲ್. ಕೆ. ಅಡ್ವಾಣಿಯವರು ಅಟಲ್ ಬಿಹಾರಿ ವಾಜಪೇಯಿ ಮತ್ತು ಪರ್ವೇಜ್ ಮುಷರ್ರಫ್ ನಡುವಿನ ಆಗ್ರಾ ಸಭೆಯು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಳ್ಳುವಂತೆ ನೋಡಿಕೊಂಡಿದ್ದರು. ಇಂತಹ ಉದಾಹರಣೆಗಳ ಪಟ್ಟಿ ಸುದೀರ್ಘವಾಗಿದೆ.
ಒಂದು ಕ್ರಿಯಾಶೀಲ ರಾಜಕೀಯ ವ್ಯವಸ್ಥೆಯಲ್ಲಿ, ಪರಸ್ಪರ ಬೆಸೆದುಕೊಂಡಿರುವ ಸಾಂಸ್ಥಿಕ ವ್ಯವಸ್ಥೆಗಳು ವ್ಯವಸ್ಥಿತ ಕುಸಿತ ಉಂಟಾಗದಂತೆ ತಡೆಯಲು ಸಾಕಷ್ಟು ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತವೆ. ಆದರೆ, ಇಂದು ನಮ್ಮ ಸಂಸ್ಥೆಗಳು ದುರ್ಬಲಗೊಂಡಿವೆ. ಇದರಿಂದಾಗಿ, ಹೊಸದಾದ ಆಲೋಚನೆಯೊಂದು ಮೂಡಿಬರದಿದ್ದರೆ, ಭಾರತೀಯ ರಾಜಕೀಯ ವ್ಯವಸ್ಥೆ ಅತ್ಯಂತ ವಿನಾಶಕಾರಿ ಕುಸಿತ ಕಾಣಲಿದೆ.
ಪ್ರಸ್ತುತದ ಸಂಘರ್ಷ ಅಥವಾ ಬಿಕ್ಕಟ್ಟಿನ ಸ್ವರೂಪವು ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದು ಕಡೆ, ಯಾವುದೇ ರಾಜಿಗೂ ಒಪ್ಪದ ತೀವ್ರ ಬಲಪಂಥೀಯ ಬಳಗದಿಂದ ಸುತ್ತುವರಿಯಲ್ಪಟ್ಟ ಪ್ರಧಾನಮಂತ್ರಿ; ಇನ್ನೊಂದು ಕಡೆ, ಸೈದ್ಧಾಂತಿಕವಾಗಿ ಮತ್ತು ಸಾಂವಿಧಾನಿಕವಾಗಿ ಸ್ವಾಯತ್ತತೆಯನ್ನು ಹೊಂದಿದ್ದರೂ ಆಡಳಿತಾರೂಢ ಪಕ್ಷದ ಕೈಗೊಂಬೆಯಾಗಿದೆ ಎಂಬ ಆರೋಪ ಹೊತ್ತಿರುವ ಚುನಾವಣಾ ಆಯೋಗ; ಮತ್ತೊಂದೆಡೆ, ಕಳೆದುಕೊಳ್ಳಲು ಏನೂ ಇಲ್ಲದ ನಾಯಕನ ನೇತೃತ್ವದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುತ್ತಿರುವ ವಿರೋಧ ಪಕ್ಷಗಳು; ಹಾಗೂ ಕೊನೆಯದಾಗಿ, ಹಳೆಯ ಸಾಂಪ್ರದಾಯಿಕ ಶಿಷ್ಟಾಚಾರಗಳಿಗೆ ಬೆಲೆ ನೀಡದ, ನಾಯಕನಿಲ್ಲದ ಕೋಪೋದ್ರಿಕ್ತ ಯುವ ಪ್ರತಿಭಟನಾಕಾರರ ದಂಡು.
ಈ ಪರಿಸ್ಥಿತಿಯಲ್ಲಿ ಜುಲೈ 20ರಿಂದ ಅಕ್ಟೋಬರ್ 10ರವರೆಗೆ, ಅಧಿಕೃತವಾಗಿ ಹಿಂಸಾಚಾರ ಮತ್ತು ದಮನಕಾರಿ ಅಧಿಕಾರದ ದರ್ಪ ಮೆರೆಯುತ್ತಿರುವ ಯಂತ್ರಾಂಗಗಳು ನಿರಾಯುಧ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗುತ್ತಿವೆ. ಯುವಕ-ಯುವತಿಯರು ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಪೋಲಿಸ್ ಪಡೆ ಅತ್ಯಂತ ಕ್ರೂರವಾಗಿ ವರ್ತಿಸುತ್ತಿದೆ. ಈ ವಿಕೃತ ದೌರ್ಜನ್ಯದ ಅತ್ಯಂತ ಅಸಹ್ಯಕರ ಚಿತ್ರಣಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇದಕ್ಕಿಂತಲೂ ಹೆಚ್ಚು ಆಘಾತಕಾರಿ ವಿಷಯವೆಂದರೆ, ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ನಡೆಯುವ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೂ ಕಿವಿಕೊಡದೆ, ಸಂಪೂರ್ಣ ಉದಾಸೀನತೆ ತೋರುತ್ತಿದ್ದಾರೆ. ಈ ಸರ್ವಾಧಿಕಾರಿ ಧೋರಣೆ ಎಲ್ಲಿಯವರೆಗೆ ಮುಂದುವರಿಯುತ್ತದೋ, ಅಲ್ಲಿಯವರೆಗೆ ಆಡಳಿತಾರೂಢ ಸರ್ಕಾರವು ನ್ಯಾಯಾಂಗದ ಆದೇಶಗಳನ್ನು ಉಲ್ಲಂಘಿಸುವ ಮತ್ತು ಬೀದಿಗಳಲ್ಲಿ ನಿರಾಯುಧ ಪ್ರತಿಭಟನಾಕಾರರನ್ನು ಓಡಿಸಲು ಗೂಂಡಾ ಪಡೆಗಳನ್ನು ಬಳಸುವ ಪ್ರವೃತ್ತಿ ಹೆಚ್ಚಾಗುತ್ತಲೇ ಇರುತ್ತದೆ.
ಇಂತಹ ಪ್ರವೃತ್ತಿಯು ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೆ ಶೋಭೆಯಲ್ಲ. ದೆಹಲಿಯಲ್ಲಿ ಮತ್ತು ದೇಶಾದ್ಯಂತ ಎದುರಾಗಿರುವ ಬಿಕ್ಕಟ್ಟನ್ನು ತಕ್ಷಣವೇ ಬಗೆಹರಿಸುವ ತುರ್ತು ಅಗತ್ಯವಿದೆ.
ಪ್ರಸ್ತುತ ಬಿಕ್ಕಟ್ಟಿನ ಕೇಂದ್ರಬಿಂದುವಿನಲ್ಲಿ ಇರುವುದು ಹಾಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಮತ್ತು ಅವರು ಎಸಗಿರುವ ಕಾನೂನುಬಾಹಿರ ಕೃತ್ಯಗಳು. ಗ್ಯಾನೇಶ್ ಕುಮಾರ್ ಅವರು ತಾವು ಮುಖ್ಯ ಚುನಾವಣಾ ಆಯುಕ್ತರಾಗಿ ಸಾಂವಿಧಾನಿಕ ಸ್ವಾಯತ್ತತೆಯ ಅಧಿಕಾರವನ್ನು ಅನುಭವಿಸುವುದು ಮಾತ್ರವಲ್ಲದೆ, ತಮ್ಮ ಯಾವುದೇ ಕೃತ್ಯಗಳು ಅಥವಾ ತಪ್ಪುಗಳಿಗೆ ಭವಿಷ್ಯದಲ್ಲಿ ಯಾವುದೇ ಶಿಕ್ಷಾರ್ಹ ಕ್ರಮಗಳಿಂದ ರಕ್ಷಣೆಯನ್ನೂ ಪಡೆದಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ; ಇಂತಹದೊಂದು ಯಾರಿಗೋ ಶಾಸನಬದ್ಧ ರಕ್ಷಣೆಯನ್ನು ಕಲ್ಪಿಸಲಾಗಿದೆ ಎಂದರೆ, ಇದರ ಹಿಂದೆ ದುರುದ್ದೇಶಪೂರ್ವಕ ಯೋಜನೆಯಿದೆ ಎಂಬುದು ಸ್ಪಷ್ಟವಾಗುತ್ತದೆ. ಅದು, ಗ್ಯಾನೇಶ್ ಕುಮಾರ್ ವಿಚಾರದಲ್ಲಿ ಎಸ್‌ಐಆರ್ ಅಂದರೆ, ಬಿಜೆಪಿ ವಿರೋಧಿ ಮತಗಳ ಹರಣ.
ಆದರೆ, ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್ ಕುಮಾರ್ ಅವರ ಕುತಂತ್ರ ಈಗ ಬಹಿರಂಗಗೊಂಡಿದೆ. ಗ್ಯಾನೇಶ್ ಕುಮಾರ್ ಅವರ ಇನ್ನಿಬ್ಬರು ಸಹೋದ್ಯೋಗಿಗಳಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಚುನಾವಣಾ ಆಯೋಗದೊಳಗೆ ಗ್ಯಾನೇಶ್ ಎಸಗುತ್ತಿರುವ ಅಕ್ರಮಗಳು ಮತ್ತು ಸರ್ವಾಧಿಕಾರಿ ಕೃತ್ಯಗಳಿಗೆ ಲಿಖಿತವಾಗಿ ಆಕ್ಷೇಪಿಸಿದ್ದಾರೆ. ಅದೆಲ್ಲವೂ ಬಹಿರಂಗವಾಗಿದೆ. ದೆಹಲಿಯೂ ಸೇರಿದಂತೆ, ಬೀದಿಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
ಈಗ, ಈ ಬಿಕ್ಕಟ್ಟಿನಿಂದ ಹೊರಬರಲು ಮೋದಿ ಸರ್ಕಾರಕ್ಕೆ ಯಾವುದೇ ದಾರಿ ಇಲ್ಲದಂತೆ ಕಾಣಿಸುತ್ತಿದೆ. ಮೋದಿ ಅವರು ಗ್ಯಾನೇಶ್ ಕುಮಾರ್ ಅವರನ್ನು ಎಷ್ಟೇ ಬಳಸಿಕೊಂಡಿದ್ದರೂ – ಈಗಲೂ ಬಳಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೂ – ಗ್ಯಾನೇಶ್ ಕುಮಾರ್ ಈಗ ಮೋದಿ ಮತ್ತು ಅಮಿತ್ ಶಾ ಪಾಲಿಗೆ ಹೊರೆಯಾಗಿ ಪರಿಣಮಿಸಿದ್ದಾರೆ. ಸಿಇಸಿಯನ್ನು ಹುದ್ದೆಯಿಂದ ತೆಗೆದುಹಾಕಬೇಕಾದರೆ, ಸಂಸತ್ತಿನಲ್ಲಿ ಮಹಾಭಿಯೋಗ ನಿರ್ಣಯವನ್ನು ಅಂಗೀಕರಿಸಬೇಕಾಗುತ್ತದೆ. ಆದರೆ, ಆಡಳಿತ ಪಕ್ಷವು ಇಂತಹ ನಿರ್ಣಯವನ್ನು ಅಂಗೀಕರಿಸಲು ಖಂಡಿತವಾಗಿಯೂ ಬಿಡುವುದಿಲ್ಲ.
ಆದಾಗ್ಯೂ, ಗ್ಯಾನೇಶ್ ಕುಮಾರ್ ತಮ್ಮ ಪಾಲಿಗೆ ಅತ್ಯಂತ ಅಪಾಯಕಾರಿ ಹೊರೆಯಾಗಿದ್ದಾರೆ ಎಂಬ ಸತ್ಯ ಮೋದಿ ಸರ್ಕಾರಕ್ಕೆ ಅರಿವಾಗಿರಬಹುದು. ಮೋದಿ ಸರ್ಕಾರವು ತನಗಾಗುವ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಸಿಇಸಿಯನ್ನು ಕಳುಹಿಸಿಬಿಡುವ ಸಮಯ ಬಂದಿದೆ ಎಂದು ನಿರ್ಧರಿಸಿದರೆ, ಅವರನ್ನು ರಾಜೀನಾಮೆ ನೀಡುವಂತೆ ಮಾಡಲು ಅಗತ್ಯವಿರುವ ತಂತ್ರವನ್ನೂ ಹೆಣೆಯುತ್ತದೆ. ಇತ್ತೀಚೆಗಷ್ಟೇ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಆರೋಗ್ಯದ ನೆಪವೊಡ್ಡಿ, ರಾಜೀನಾಮೆ ನೀಡುವಂತೆ ಇದೇ ಮೋದಿ ಪಟಾಲಂ ಮಾಡಿತ್ತು.
ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ
ಒತ್ತಡಕ್ಕೆ ಮಣಿಯುವುದು ಆಡಳಿತಾರೂಢ ಮೋದಿ ಸರ್ಕಾರದ ಸ್ವಭಾವಕ್ಕೆ ವಿರುದ್ಧವಾದದ್ದು; ಅದು ತನ್ನದೇ ಆದ ದಬ್ಬಾಳಿಕೆ ನಡೆಸುತ್ತಲೇ, ಆನಂದಿಸುತ್ತದೆ. ಆದರೂ ಇತಿಹಾಸವು, ಯಾವೊಬ್ಬ ವ್ಯಕ್ತಿಯೂ ಅನಿವಾರ್ಯ ಅಲ್ಲ ಎಂಬುದನ್ನು ಪ್ರತಿಯೊಬ್ಬ ರಾಜನೂ ತಿಳಿದಿರುತ್ತಾನೆ ಎಂಬುದನ್ನು ಪದೇ-ಪದೇ ಸಾಬೀತು ಮಾಡಿದೆ. ಈ ಗ್ರಹಿಕೆ ಮೋದಿ ಅವರಿಗೂ ಇದ್ದಿರಬಹುದು. ಈಗಾಗಲೇ, ಗ್ಯಾನೇಶ್ ಕುಮಾರ್ ಅವರ ಅತಿಯಾದ ಕೃತ್ಯಗಳ ನೆರಳು ಮೋದಿ ಭ್ರಮಿಸಿರುವ ಪ್ರಭಾವಶಾಲಿ ನಾಯಕ, ನಂಬಿಕೆಗೆ ಅರ್ಹ, ಪ್ರಾಮಾಣಿಕ ನಾಯಕನೆಂಬ ವರ್ಚಸ್ಸಿನ ಮೇಲೆ ಬಿದ್ದಿದೆ. ಮೋದಿ ನಂಬಿಕಾರ್ಹ ನಾಯಕನಲ್ಲ ಎಂಬ ಅಭಿಪ್ರಾಯ ಜನರಲ್ಲಿ ಗಾಢವಾಗಿ ಬೆಳೆಯುತ್ತಿದೆ.
ಈಗ, ಗ್ಯಾನೇಶ್ ಕುಮಾರ್ ವಿಚಾರದಿಂದ ಸುತ್ತುವರೆದಿರುವ ಬಿಕ್ಕಟ್ಟಿನಿಂದ ಹೊರಬರುವುದು ಮೋದಿ ಸರ್ಕಾರಕ್ಕೆ ಕಗ್ಗಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಧಾನಿ ಮೋದಿ ಅವರಿಗೆ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ ಕೇಳಲು ಒಂದು ನೆಪ ಬೇಕು, ಮಾತ್ರವಲ್ಲ, ತಮ್ಮ ಸರ್ಕಾರವು ಚುನಾವಣೆಗಳನ್ನು ‘ಕದಿಯುತ್ತಿಲ್ಲ’ ಎಂಬುದನ್ನು ಗ್ಯಾನೇಶ್ ಕುಮಾರ್ ಸಾರಿಯೇ ಹೋಗಬೇಕು; ಗ್ಯಾನೇಶ್ ಕುಮಾರ್‌ಗೆ ಗೌರವಾನ್ವಿತ ನಿರ್ಗಮನದ ಹಾದಿ ಬೇಕು.
ಸದ್ಯದ ಪರಿಸ್ಥಿತಿಯಲ್ಲಿ ಅಂದರೆ, 2023ರ ಪ್ರಜಾಪ್ರತಿನಿಧಿ ತಿದ್ದುಪಡಿ ಕಾಯ್ದೆಯ ಪ್ರಕಾರ, ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಕ್ರಮಕ್ಕೆ ಅವಕಾಶವಿಲ್ಲದ ಸ್ಥಿತಿಯಲ್ಲಿ; ಗ್ಯಾನೇಶ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್ ನೇರವಾಗಿ ‘ಅಮಾನತು’ ಮಾಡಲು ಸಾಧ್ಯವಿಲ್ಲ. ಆದರೂ, ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಟೀಕೆ ಮಾಡಲು ನ್ಯಾಯಾಲಯಕ್ಕೆ ಸಂಪೂರ್ಣ ಅವಕಾಶವಿದೆ. ನ್ಯಾಯಾಲಯದ ಇಂತಹ ಟೀಕೆಯು ಪ್ರಧಾನಮಂತ್ರಿಯವರಿಗೆ ಗ್ಯಾನೇಶ್ ಅವರನ್ನು ಮನೆಗೆ ಕಳುಹಿಸಲು ಒಂದು ನೆಪವಾಗಬಹುದು.
ಇಂತಹ ‘ನೆಪ’ವು ಮೋದಿ ಸರ್ಕಾರಕ್ಕೆ ‘ಹಾವೂ ಸಾಯಬೇಕು, ಕೋಲೂ ಮುರಿಯಬಾರದು’ ಎಂಬಂತೆ ಗ್ಯಾನೇಶ್ ಅವರನ್ನು ಹೊರಹಾಕಬಹುದು. ಇಲ್ಲಿ, ಗ್ಯಾನೇಶ್ ಕುಮಾರ್ ವಿಚಾರದಲ್ಲಿ ಏನಾಗುತ್ತದೆ ಎಂಬುದಕ್ಕಿಂತ ಮೋದಿ ಅವರಿಗೆ ಗ್ಯಾನೇಶ್ ಕುಮಾರ್ ಅವರಿಂದ ಎದುರಾಗಿರುವ ಗಂಡಾಂತರದಿಂದ ರಕ್ಷಣೆ ಬೇಕು ಎಂಬುದೇ ವಾಸ್ತವ.
ಮಾಹಿತಿ ಮೂಲ: ದಿ ವೈರ್



