ಭಾರತ ಮತ್ತು ಪಾಕಿಸ್ತಾನಗಳು ಕಣಿವೆ ಪ್ರದೇಶದ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳದಿದ್ದರೆ ಕಾಶ್ಮೀರವು ಮುಂದಿನ ದಿನಗಳಲ್ಲಿ ಗಾಜಾ ಮತ್ತು ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ಸಮಸ್ಯೆಯನ್ನೇ ಎದುರಿಸಬೇಕಾಗುತ್ತದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, “ನಾವು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳದಿದ್ದರೆ, ಇಸ್ರೇಲ್‌ನಿಂದ ಬಾಂಬ್ ದಾಳಿಗೆ ಒಳಗಾಗುತ್ತಿರುವ ಗಾಜಾ ಮತ್ತು ಪ್ಯಾಲೆಸ್ತೀನ್ ನಂತೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಫಾರೂಕ್ ಅಬ್ದುಲ್ಲಾ ಅವರು ಪೂಂಚ್ ಜಿಲ್ಲೆಯಲ್ಲಿ ಐವರು ಸೈನಿಕರು ಉಗ್ರಗಾಮಿಗಳಿಂದ ಸಾವಿಗೀಡಾದ ನಂತರ ಮೂವರು ನಾಗರಿಕರು ಮೃತಪಟ್ಟ ಬಗ್ಗೆ ಆಘಾತ ವ್ಯಕ್ತಪಡಿಸಿದರು.
ನಾವು ನಮ್ಮ ಸ್ನೇಹಿತರನ್ನು ಬದಲಿಸಬಹುದು, ಆದರೆ ನಮ್ಮ ನೆರೆಹೊರೆಯವರನ್ನು ಬದಲಿಸಲಾಗದು ಎಂದು ಕಾಶ್ಮೀರದ ಬಗೆಗಿನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತನ್ನು ಫಾರೂಕ್ ಅಬ್ದುಲ್ಲಾ ಉಲ್ಲೇಖಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
“ನಾವು ನಮ್ಮ ನೆರೆಹೊರೆಯವರೊಂದಿಗೆ ಸ್ನೇಹವನ್ನು ಉಳಿಸಿಕೊಳ್ಳಬೇಕಾದರೆ, ನಮ್ಮ ಮಾತುಕತೆ ಮುಂದುವರಿಯಬೇಕು. ಪ್ರಧಾನಿ ನರೇಂದ್ರ ಮೋದಿ ಕೂಡ ಯುದ್ಧ ನಮ್ಮ ಆಯ್ಕೆಯಲ್ಲ ಮಾತುಕತೆಯ ಮೂಲಕ ವಿವಾದ ಇತ್ಯರ್ಥ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರು” ಎಂದು ಫಾರೂಕ್ ತಿಳಿಸಿದರು.
ನವಾಜ್ ಷರೀಫ್ ತಾವು ಪ್ರಧಾನಿಯಾಗಲಿದ್ದು, ಭಾರತದೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ. ಆದರೆ ಭಾರತ ಏಕೆ ಮಾತುಕತೆಗೆ ಸಿದ್ಧವಿಲ್ಲ ಎಂದು ಪ್ರಶ್ನಿಸಿದ ಫಾರೂಕ್ ಅವರು, ನಾವು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳದಿದ್ದರೆ, ಇಸ್ರೇಲ್‌ನಿಂದ ಬಾಂಬ್ ದಾಳಿಗೆ ಒಳಗಾಗುತ್ತಿರುವ ಗಾಜಾ ಮತ್ತು ಪ್ಯಾಲೆಸ್ತೀನ್‌ನಂತೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಪುನರುಚ್ಚರಿಸಿದರು.
ಏತನ್ಮಧ್ಯೆ, ಭೂಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಭಯೋತ್ಪಾದಕರ ಅಡಗುತಾಣಗಳಾಗಿ ಬಳಸುತ್ತಿರುವ ಗುಹೆಗಳನ್ನು ಕೆಡವಲು ಸ್ಥಳೀಯ ಸೈನಿಕರಿಗೆ ಆದೇಶಿಸಿದ್ದಾರೆ. ಅಲ್ಲದೆ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ರಜೌರಿ-ಪೂಂಚ್ ಸೆಕ್ಟರ್‌ಗೆ ಭೇಟಿ ನೀಡಿ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರತ ಸೈನಿಕರೊಂದಿಗೆ ಸಂವಾದ ನಡೆಸಲಿದ್ದಾರೆ.