ಕೋಲ್ಕತ್ತಾ ಅತ್ಯಾಚಾರ ಘಟನೆ | ತನ್ನ ಹುಳುಕು ಮುಚ್ಚಿಕೊಳ್ಳಲು ಬಿಜೆಪಿಯಿಂದ ಕೊಳಕು ರಾಜಕೀಯ

Date:

Advertisements

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಘಟನೆಯು ದಿನದಿಂದ ದಿನಕ್ಕೆ ಭಾರಿ ಆಕ್ರೋಶ ಹುಟ್ಟುಹಾಕಿದೆ. ಘಟನೆಯನ್ನು ಖಂಡಿಸಿ, ಮಂಗಳವಾರವೂ(ಆಗಸ್ಟ್ 27) ಕೂಡ ಕೋಲ್ಕತ್ತಾದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಬಿಜೆಪಿ ಈ ವಿಷಯದಲ್ಲಿ ತನ್ನ ಹುಳುಕು ಮುಚ್ಚಿಕೊಳ್ಳಲು ಅತ್ಯಾಚಾರ ಘಟನೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ.

ಅತ್ಯಾಚಾರ ಹಾಗೂ ಕೊಲೆ ಮಾಡಿದ ಆರೋಪಿಗಳಿಗೆ ಖಂಡಿತಾ ಉಗ್ರ ಶಿಕ್ಷೆಯಾಗಬೇಕು. ಆರೋಪಿ ಯಾರೇ ಆಗಿದ್ದರೂ ಎಷ್ಟೇ ಪ್ರಭಾವಿಯಾಗಿದ್ದರೂ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಕೊಡಬಾರದು. ಯಾವುದೇ ಪಕ್ಷವಾಗಿರಲಿ ಮಹಿಳೆಯರ ವಿರುದ್ಧದ ಅಮಾನುಷ ಕೃತ್ಯದಲ್ಲಿ ರಾಜಕೀಯ ಖಂಡಿತಾ ಸಲ್ಲ. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಠಿಣ ಕಾನೂನಿದ್ದರೂ ಬಹುತೇಕ ಪ್ರಕರಣಗಳಲ್ಲಿ ಬಲಾಢ್ಯರು ನುಣುಚಿಕೊಳ್ಳುತ್ತಲೇ ಇದ್ದಾರೆ. ಕಡಿಮೆ ಪ್ರಮಾಣದಲ್ಲಿ ಪ್ರಕರಣಗಳು ಸಾಬೀತಾಗಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ.  

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದೌರ್ಜನ್ಯದ ವಿರುದ್ಧ ಖಂಡಿಸಿ ಪ್ರತಿಭಟಿಸುವುದು ಸಾರ್ವಜನಿಕರ ಹಕ್ಕು. ಆದರೆ ಬಿಜೆಪಿ ಅತ್ಯಾಚಾರ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರತಿಭಟನೆ ಹೆಸರಿನಲ್ಲಿ ಜನರ ಆಸ್ತಿಪಾಸ್ತಿ ನಾಶ ಪಡಿಸುವುದು ಹಾಗೂ ಸಾಮಾನ್ಯ ಜನರಿಗೆ ತೊಂದರೆ ನೀಡುವುದು ಮಾಡುತ್ತಿದೆ. ವಿಪಕ್ಷಗಳ ಆಡಳಿತವಿರುವ ರಾಜ್ಯದಲ್ಲಿ ದಾಂಧಲೆ ಎಬ್ಬಿಸುತ್ತಿರುವ ಬಿಜೆಪಿ ನಾಯಕರು ತನ್ನದೇ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಸದ್ದನ್ನು ಜೋರು ಮಾಡುತ್ತಿಲ್ಲ.

Advertisements

ಇಂದು(ಆಗಸ್ಟ್‌ 29) ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಸಹಪಾಠಿಯೊಬ್ಬ ಅತ್ಯಾಚಾರವೆಸಗಿದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಖಂಡಿತಾ ಗಂಭೀರ ಪ್ರಕರಣ.

ಎರಡು ದಿನಗಳ ಹಿಂದೆ(ಆಗಸ್ಟ್‌ 27) ಬೆಳಕಿಗೆ ಬಂದಿರುವ ಇನ್ನೊಂದು ಘಟನೆಯಲ್ಲಿ ಗುಜರಾತ್‌ನ ವಲ್ಸಾದನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ 3 ವರ್ಷದ ಮಗು ಮೇಲೆ ಅತ್ಯಾಚಾರವೆಸಗಿದ್ದಾನೆ. ಮೂರು ವರ್ಷದ ಮಗುವಿನ ಮೇಲೆ ಆಕೆಯ ತಂದೆಯ ಆಪ್ತ ಸ್ನೇಹಿತನೇ ಅತ್ಯಾಚಾರವೆಸಗಿದ್ದಾನೆ. ಆರೋಪಿಗಳು ಅಪರಾಧ ಎಸಗಿ ನಂತರ ಪರಾರಿಯಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಲೈಂಗಿಕ ದೌರ್ಜನ್ಯದ ಸುದ್ದಿ ಹರಡುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ಸ್ಥಳೀಯ ಉಮರ್ಗಾಮ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ತಕ್ಷಣ ಕ್ರಮ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

2024 ಮೇ ತಿಂಗಳಿನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ, 14 ವರ್ಷದ ಸಹೋದರಿಯ ಮೇಲೆ 1 ವರ್ಷಕ್ಕೂ ಹೆಚ್ಚು ಕಾಲ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಬಂಧಿಸಲಾಗಿತ್ತು. ಪದೇಪದೆ ಆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದರಿಂದ 14 ವರ್ಷದ ಬಾಲಕಿ ಗರ್ಭ ಧರಿಸಿದ್ದಳು. ಇಂತಹ ಘಟನೆಗಳು ದೊಡ್ಡಮಟ್ಟದಲ್ಲಿ ಸುದ್ದಿಯಾಗುವುದೇ ಇಲ್ಲ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೇಕೆದಾಟು ಮಧ್ಯಸ್ಥಿಕೆ ವಹಿಸದ ಕೇಂದ್ರ, ದಕ್ಷಿಣದ ರಾಜ್ಯಗಳಿಗಿದು ಸಕಾಲ

ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಬಿಹಾರ ಸೇರಿದಂತೆ ಬಿಜೆಪಿ ಆಡಳಿತ ನಡೆಸುತ್ತಿರುವ ಹಲವು ರಾಜ್ಯಗಳಲ್ಲಿ ಮಹಿಳೆಯರ ಮೇಲೆ, ಮುಖ್ಯವಾಗಿ ದಲಿತರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಆದರೆ ಈ ಸುದ್ದಿ ಬಗ್ಗೆ ಬಿಜೆಪಿ ನಾಯಕರು ಧ್ವನಿ ಎತ್ತುತ್ತಿಲ್ಲ. ಎಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿ ಇರುತ್ತದೊ ಅಂತಹ ಕಡೆ ಭಾರತೀಯ ಜನಾತಾ ಪಕ್ಷದ ನಾಯಕರು ಸಮಸ್ಯೆಯನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ವಿಪಕ್ಷಗಳು ಆಡಳಿತ ನಡೆಸುವ ರಾಜ್ಯಗಳಲ್ಲಿ ಮಾತ್ರ ಬಿಜೆಪಿಗರ ಧ್ವನಿ ದೊಡ್ಡದಾಗಿ ಕೇಳಿ ಬರುತ್ತದೆ. ಅದನ್ನು ಗೋದಿ ಮೀಡಿಯಾ ದೊಡ್ಡದು ಮಾಡಿ, ಇಡೀ ರಾಷ್ಟ್ರಕ್ಕೆ ಹಂಚುತ್ತದೆ. ಇದು ಬಿಜೆಪಿಯ ರಾಜಕಾರಣ ವ್ಯವಸ್ಥೆ.

ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡದೆ ಹೆಣ್ಣು ಮಕ್ಕಳ ಅತ್ಯಾಚಾರದ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ. ಇವುಗಳ ಜೊತೆ ಧರ್ಮ, ಕೋಮುವಾದ ಮುಂತಾದ ವಿಷಯಗಳಲ್ಲಿ ಬೇಳೆ ಬೇಯಿಸಿಕೊಳ್ಳುತ್ತಾರೆ ವಿನಃ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ, ಅಪರಾಧ ಪ್ರಕರಣಗಳಲ್ಲಿ ಜನರಿಗೆ ತುರ್ತಾಗಿ ನ್ಯಾಯ ಕೊಡಿಸಬೇಕು ಎಂಬ ವಿಚಾರದಲ್ಲಿ ಹೋರಾಟಗಳನ್ನು ನಡೆಸುವುದಿಲ್ಲ. ನ್ಯಾಯಕ್ಕಾಗಿ ಹೋರಾಟಗಳು ಮಾಡುತ್ತಾರೆ ಅನ್ನುವುದು ನಿಜ ಆಗಿದ್ದರೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಲಿತರ ಮೇಲೆ ನಡೆಯುವಂತಹ ಅತ್ಯಾಚಾರ ಪ್ರಕರಣಗಳಲ್ಲಿ ಎಷ್ಟು ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂಬುದನ್ನು ಅಂಕಿಅಂಶಗಳ ಸಮೇತ ಬಹಿರಂಗಪಡಿಸಲಿ.

ತನಿಖೆಯ ವಿಳಂಬ, ಸಾಬೀತಾಗದ ಶಿಕ್ಷೆಗಳು

ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲೇ, ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ಪಾರಾಗುತ್ತಿರುವುದು ಕಳವಳ ಹುಟ್ಟಿಸುವ ಸಂಗತಿ. ಇದಕ್ಕೆ ಕರ್ನಾಟಕವನ್ನೇ ಉದಾಹರಣೆಯಾಗಿ ನೀಡಬಹುದು. ಈ ವರ್ಷದ ಆರಂಭದ 7 ತಿಂಗಳಲ್ಲಿಯೇ 340 ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. 2023ರಲ್ಲಿ 537 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ? ಯಾರಿಗೂ ತಿಳಿದಿಲ್ಲ. ಅತ್ಯಾಚಾರ ಪ್ರಕರಣಗಳನ್ನು ನಮ್ಮ ವ್ಯವಸ್ಥೆ ಹೇಗೆ ನಿರ್ವಹಿಸುತ್ತಿದೆ ಎನ್ನುವುದಕ್ಕೆ ನಿದರ್ಶನವಾಗಿ, 2013ರಿಂದ 2023ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ದಾಖಲಾದ 1,322 ಅತ್ಯಾಚಾರ ಪ್ರಕರಣಗಳಲ್ಲಿನ ಶಿಕ್ಷೆಯ ಅಂಕಿ ಅಂಶವನ್ನು ಗಮನಿಸಿದರೆ ಈವರೆಗೆ 10 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

ಅಂದರೆ ಶಿಕ್ಷೆಯ ಪ್ರಮಾಣ ಕೇವಲ ಶೇ 0.76ರಷ್ಟಿದೆ. 713 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದರೆ, 230 ಪ್ರಕರಣಗಳು ತನಿಖಾ ಹಂತದಲ್ಲಿವೆ. 259 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದರೆ, 110 ಪ್ರಕರಣಗಳಲ್ಲಿ ಸಾಕ್ಷ್ಯಗಳಿಲ್ಲದೆ ‘ಬಿ’ ರಿಪೋರ್ಟ್‌ ಸಲ್ಲಿಸಲಾಗಿದೆ. ಈ ಅಂಕಿಅಂಶಗಳು ಕಾನೂನು ಸುವ್ಯವಸ್ಥೆಯಲ್ಲಿನ ಲೋಪಗಳಿಗೆ ಕನ್ನಡಿ ಹಿಡಿಯುವಂತಿವೆ. ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದಲ್ಲಿ ಗಟ್ಟಿಯಾಗಿ ನಿಲ್ಲದಿರಲು ಸಾಕ್ಷ್ಯ ಕೊರತೆ ಮುಖ್ಯ ಕಾರಣವಾಗಿದೆ. ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತೆಯರೇ ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗುವುದಿದೆ.

ನ್ಯಾಯಾಲಯದಾಚೆ ನಡೆಯುವ ರಾಜಿ ಪಂಚಾಯಿತಿಗಳಿಂದಾಗಿಯೂ ಅತ್ಯಾಚಾರ ಪ್ರಕರಣಗಳು ಜೀವ ಕಳೆದುಕೊಳ್ಳುತ್ತವೆ. ಇವೆಲ್ಲಕ್ಕೂ ಮಿಗಿಲಾಗಿ ಆತಂಕ ಹುಟ್ಟಿಸುವುದು, ತನಿಖೆ ಮತ್ತು ವಿಚಾರಣೆಯಲ್ಲಿನ ವಿಳಂಬ. ಪ್ರಕರಣವೊಂದರ ವಿಚಾರಣೆ ವರ್ಷಗಟ್ಟಲೆ ನಡೆದಾಗ, ದೀರ್ಘ ಕಾಲದವರೆಗೆ ಸಂತ್ರಸ್ತೆಯರು ಹೋರಾಟದ ಮನೋಭಾವ ಉಳಿಸಿಕೊಳ್ಳುವುದು ಸುಲಭವಲ್ಲ. ಪ್ರಕರಣ ನಡೆಯುವಷ್ಟೂ ಕಾಲ ಅತ್ಯಾಚಾರದ ನೋವು ಮರುಕಳಿಸುತ್ತಿರುತ್ತದೆ. ಹಾಗಾಗಿ, ಪ್ರಕರಣಗಳು ತ್ವರಿತಗತಿಯಲ್ಲಿ ಕೊನೆಗೊಳ್ಳುವ ನಿಟ್ಟಿನಲ್ಲಿ ಕಾನೂನು ವ್ಯವಸ್ಥೆಗೆ ತಿದ್ದುಪಡಿ ತರಬೇಕಿದೆ. ಹಾಗೆಯೇ ಕಾಯ್ದೆಗಳನ್ನು ಬಲಪಡಿಸುವುದರ ಜೊತೆಗೆ, ಅತ್ಯಾಚಾರ ಘಟನೆಗಳನ್ನು ರಾಜಕೀಯಗೊಳಿಸದಿರುವ ಸಂವೇದನೆಯನ್ನು ಸಮಾಜದಲ್ಲಿ ರೂಪಿಸುವ ಆಂದೋಲನವೂ ತುರ್ತಾಗಿ ನಡೆಯಬೇಕಾಗಿದೆ.

ಜಾತಿ, ಧರ್ಮ, ಹಣ ಹಾಗೂ ಅಧಿಕಾರ ಬಲ ಕೂಡ ಕೆಲವೊಮ್ಮೆ ತಪ್ಪಿತಸ್ಥರ ಪರವಾಗಿ ಕೆಲಸ ಮಾಡಿರುವ ಉದಾಹರಣೆಗಳಿವೆ. ಉತ್ತರಪ್ರದೇಶದ ಹಾಥರಸ್‌ನಲ್ಲಿ 2020ರಲ್ಲಿ ನಡೆದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿ ಕಾನೂನು ಸುವ್ಯವಸ್ಥೆಯ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಕುಸಿದು ಹೋಗುವಂತೆ ಇತ್ತು. ಇತ್ತೀಚೆಗೆ ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ–ಕೊಲೆ ಪ್ರಕರಣದಲ್ಲಿ ಪೊಲೀಸರು ಅನುಸರಿಸಿದ ವಿಳಂಬ ನೀತಿಯ ಬಗ್ಗೆ ಸುಪ್ರೀಂ ಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ. ಇನ್ನು ಮೇಲಾದರೂ ಇಂತಹ ನಿರ್ಲಕ್ಷ್ಯ ಕೊನೆಗೊಳ್ಳಬೇಕು. ಕಾಯ್ದೆಗಳನ್ನು ಬಲಪಡಿಸುವಲ್ಲಿ ಕೇಂದ್ರ ಸರ್ಕಾರ ಯೋಚಿಸಬೇಕಿದೆ. ಕಾನೂನನ್ನು ಬಲಪಡಿಸುವ ಪ್ರಕ್ರಿಯೆ ವಿಳಂಬವಿಲ್ಲದೆ ನಡೆಯುವಂತೆ ನೋಡಿಕೊಳ್ಳಬೇಕಾದುದು ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X