1990ರ ಲಾಕಪ್ ಡೆತ್ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅಪರಾಧ ಎಸಗಿದ್ದಾರೆ ಎಂದು ಸಾಬೀತುಪಡಿಸುವಲ್ಲಿ ಪ್ರಾಷಿಕ್ಯೂಷನ್ ವಿಫಲವಾಗಿದೆ. ಹೀಗಾಗಿ, ಗುಜರಾತ್‌ನ ಫೋರ ಬಂದರ್ ನ್ಯಾಯಾಲಯವು ಅವರನ್ನು ನಿರ್ದೋಷಿ ಎಂದು ಘೋಷಿಸಿದ್ದು, ಪ್ರಕರಣದಿಂದ ಖುಲಾಸೆಗೊಳಿಸಿದೆ.
1990ರಲ್ಲಿ ಸಂಜೀವ್ ಭಟ್ ಅವರು ಜಾಮ್‌ನಗರದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದರು. ಆಗ, ಜೋಧ್‌ಪುರ ಪಟ್ಟಣದಲ್ಲಿ ಕೋಮು ಗಲಭೆ ನಡೆದು, ಪೊಲೀಸರು ಸುಮಾರು 150 ಜನರನ್ನು ಬಂಧಿಸಿದ್ದರು. ವಿಚಾರಣೆಗೆ ವೇಳೆ ತಪ್ಪೊಪ್ಪಿಗೆ ಪಡೆಯಲು ಬಂಧಿತರ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಬಳಿಕ, ಎಲ್ಲರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಪ್ರಭುದಾಸ್ ವೈಷ್ಣವಿ ಎಂಬವರು ಸಾವನ್ನಪ್ಪಿದ್ದರು. ಅದನ್ನು ಲಾಕಪ್ ಡೆತ್ ಎಂದು ಆರೋಪಿಸಲಾಗಿತ್ತು.
ಪೊಲೀಸ್ ಕಸ್ಟಡಿಯಲ್ಲಿದ್ದ ನನ್ನಿಂದ ಟಾಡಾ ಕಾಯ್ದೆ ಹಾಗೂ ಶಸ್ತ್ರಾಸ್ತ್ರಗಳ ಕಾಯ್ದೆಯಡಿ ತಪ್ಪೊಪ್ಪಿಗೆ ಪಡೆಯಲು ನನ್ನ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಸಂಜೀವ್ ಭಟ್ ವಿರುದ್ಧ ನರನ್ ಜಾಧವ್ ಎಂಬವರು 1990ರಲ್ಲಿ ದೂರು ನೀಡಿದ್ದರು. ಅವರ ದೂರು ಮತ್ತು ಪ್ರಭುದೇವ್ ವೈಷ್ಣವ್ ಸಾವಿನ ಆಧಾರದ ಮೇಲೆ ಸಂಜೀವ್ ಭಟ್ ಹಾಗೂ ಪೊಲೀಸ್ ಪೇದೆ ವಜುಭಾಯಿ ಚೌ ವಿರುದ್ಧ ಐಪಿಸಿ ಸೆಕ್ಷನ್ 330 ಹಾಗೂ 324ರ ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ 34 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದಿದೆ. ಆದರೆ, ಸಂಜೀವ್ ಭಟ್ ದೋಷಿ ಎಂದು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ, ಸೂಕ್ತ ಪುರಾವೆಗಳ ಕೊರತೆಯಿದೆ ಎಂದು ಅಭಿಪ್ರಾಯ ಪಟ್ಟಿರುವ ಫೋರ ಬಂದರಿನ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಕೇಶ್ ಪಾಂಡ್ಯ ಅವರು ಸಂಜೀವ್ ಭಟ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ | ಟೋಲ್ ಎಂಬ ಸರ್ಕಾರಿ ದರೋಡೆ; 20 ತಿಂಗಳಲ್ಲಿ 438 ಕೋಟಿ ವಸೂಲಿ
ಲಾಕಪ್ ಡೆತ್ ಪ್ರಕರಣದಲ್ಲಿ ಸಂಜೀವ್ ಭಟ್ ನಿರ್ದೋಷಿ ಎಂದು ನ್ಯಾಯಾಲಯ ಘೋಷಿಸಿದ್ದರೂ, ಸಂಜೀವ್ ಭಟ್ ಜೈಲಿನಲ್ಲಿದ್ದಾರೆ. ಅಲ್ಲದೆ, ಅವರನ್ನು 2015ರಲ್ಲಿಯೇ ಹುದ್ದೆಯಿಂದ ವಜಾಗೊಳಿಸಲಾಗಿದೆ.
1996ರಲ್ಲಿ ಪಲನ್ ಪುರ್‌ನಲ್ಲಿ ರಾಜಸ್ಥಾನದ ವಕೀಲರೊಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ತಾವೇ ಮಾದಕ ದ್ರವ್ಯ ಇಟ್ಟು, ಅದನ್ನು ತಾವೇ ಜಪ್ತಿ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಸಂಜೀವ್ ಭಟ್ ಅವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರು ಈಗ, ಗುಜರಾತ್‌ನ ರಾಜ್ ಕೋಟ್‌ನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಗಮನಾರ್ಹವಾಗಿ, ಸಂಜೀವ್ ಭಟ್ ಅವರು ಪ್ರಧಾನಿ ಮೋದಿ ಅವರನ್ನು ಕಠುವಾಗಿ ಟೀಕೆ ಮಾಡುವವರು. ಮೋದಿ ಸರ್ಕಾರದ ನೀತಿ-ನಿರ್ಧಾರ, ಯೋಜನೆಗಳನ್ನು ನೇರವಾಗಿ ಟೀಕೆ ಮಾಡಿದ್ದರು. ಆ ಕಾರಣಕ್ಕಾಗಿಯೇ, ಅವರನ್ನು ಪ್ರಕರಣದ ನೆಪವೊಡ್ಡಿ ಹುದ್ದೆಯಿಂದ ವಜಾಗೊಳಿಸಲಾಗಿದೆ. ಅಲ್ಲದೆ, 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಜೈಲಿಗೆ ಕಳಿಸಲಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.