ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಾವಲ್ ತಾಲೂಕಿನ ಕುಂದಮಾಲ ಬಳಿ ಇಂದ್ರಾಯಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ 30 ವರ್ಷ ಹಳೆಯದಾದ ಕಬ್ಬಿಣದ ಸೇತುವೆ ಭಾನುವಾರ ಕುಸಿದಿದೆ.
ವಾರಾಂತ್ಯದ ಪಿಕ್ನಿಕ್ ತಾಣವಾಗಿ ಈ ಪ್ರದೇಶ ಜನಪ್ರಿಯವಾಗಿದ್ದರಿಂದ ಸಾವಿರಾರು ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಸೇತುವೆ ಕುಸಿದಾಗ ಸುಮಾರು 130ಕ್ಕೂ ಹೆಚ್ಚು ಪ್ರವಾಸಿಗರು ನೀರಿಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿಯವರೆಗೆ ನಾಲ್ಕು ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇತುವೆ ಕುಸಿದಾಗ 130ಕ್ಕೂ ಹೆಚ್ಚು ಜನ ನೀರಿಗೆ ಬಿದ್ದಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ 32 ಜನರಿಗೆ ಗಾಯಗಳಾಗಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. 80ಕ್ಕೂ ಹೆಚ್ಚು ಜನರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಇದು ದುರದೃಷ್ಟಕರ ಘಟನೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, “ರಾಜ್ಯದ ಎಲ್ಲ ಇಂತಹ ಸೇತುವೆಗಳ ರಚನಾತ್ಮಕ ಲೆಕ್ಕಪರಿಶೋಧನೆ ನಡೆಸಲು ಆದೇಶ ನೀಡಿದ್ದೇವೆ” ಎಂದು ತಿಳಿಸಿದ್ದಾರೆ.
🚨🚨🚨
— Hinduism_and_Science (@Hinduism_sci) June 15, 2025
A weekend trip turned into horror. 💔
Bridge collapse at Maval near Kundamala has left 5 feared dead and 25+ missing.
Prayers for all affected. 🙏🏻
Govt must urgently audit all tourist hotspots for safety. #BridgeCollapse #pune pic.twitter.com/3pYDjQwiGu
ಸುದ್ದಿಮನೆಯಲ್ಲಿ ಅಪಚಾರ: ರಾಜಾರಾಂ ತಲ್ಲೂರು ಟೀಕೆ
ನಾವು ಶಾಲೆಯಲ್ಲಿದ್ದಾಗ ಲಘುತ್ತಮ ಸಾಮಾನ್ಯ ಅಪವರ್ತನ ಮತ್ತು ಮಹತ್ತಮ ಸಾಮಾನ್ಯ ಅಪವರ್ತನಗಳನ್ನು ಗಣಿತ ಮೇಸ್ಟ್ರುಗಳಿಂದ ಕಲಿತಿದ್ದೇವೆ. ಅಲ್ವಾ? ಸದ್ಯಕ್ಕೆ ಅದನ್ನು ನೆನಪು ಬಿಡಿ. ಈಗ ನಾನು ನಮ್ಮ ಡಿಯರ್ ಮೀಡಿಯಾಗಳ ಲಘುತ್ತಮ ಸಾಮಾನ್ಯ “ಅನುವರ್ತನ” (ಲ.ಸಾ.ಅ) ಮತ್ತು ಮಹತ್ತಮ ಸಾಮಾನ್ಯ “ಅನುವರ್ತನ”ಗಳ (ಮ.ಸಾ.ಅ) ಬಗ್ಗೆ ತಿಳಿಸುವೆ.
ನಮ್ಮ ಸುದ್ದಿಮೂಲ ಸಂಸ್ಥೆಗಳು ಹುಟ್ಟುಹಾಕಿರುವ ಈ ಹೊಸ ಗಣಿತ ಲೆಕ್ಕಾಚಾರವನ್ನು ಉಳಿದ ಮಾಧ್ಯಮಗಳು ಇಷ್ಟ ಪಟ್ಟು ಪಾಲಿಸುತ್ತಿವೆ. ಇದರಿಂದ ಸುದ್ದಿನಷ್ಟ ಜನಸಾಮಾನ್ಯರಿಗೆ. ಪುಣೆ ಸೇತುವೆ ಕುಸಿತದಲ್ಲಿ 4 ಸಾವು ಎಂದು ಬಹುತೇಕ ಎಲ್ಲ ಪತ್ರಿಕೆಗಳೂ ವರದಿ ಮಾಡಿವೆ.
ಈಗ ಲ.ಸಾ.ಅ ಮತ್ತು ಮ.ಸಾ.ಅ ಪತ್ತೆ ಹಚ್ಚುವ ಲೆಕ್ಕ ಶುರು ಮಾಡೋಣ. ದುರ್ಘಟನೆಯ ವೇಳೆ ಅಂದಾಜು 130ಕ್ಕೂ ಮಿಕ್ಕಿ ಜನ ಸೇತುವೆಯ ಮೇಲೆ ಇದ್ದರು. ಅವರಲ್ಲಿ 40 ಜನರನ್ನು ರಕ್ಷಿಸಲಾಗಿದೆ; ರಕ್ಷಿಸಲಾದವರಲ್ಲಿ 30 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 4 ಮಂದಿ ಸಾವಿಗೀಡಾಗಿದ್ದಾರೆ. ಹಾಗಿದ್ದರೆ, ಉಳಿದ ಅಂದಾಜು 85 ಮಂದಿ ಏನಾಗಿದ್ದಾರೆ? ಅಥವಾ ನಿಜಕ್ಕೂ ಸಾವಿನ ಸಂಖ್ಯೆ ಎಷ್ಟು?
ಇಲ್ಲಿ ಲ.ಸಾ.ಅ ಮತ್ತು ಮ.ಸಾ.ಅ ಗಳ ಪತ್ತೆ ಹೇಗೆಂದರೆ, ತಮ್ಮ ಧಣಿಗಳಿಗೆ ಡ್ಯಾಮೇಜ್ ಮಾಡುವ ಸುದ್ದಿ ಆಗಿದ್ದರೆ, ಮಾಧ್ಯಮಗಳು ಲ. ಸಾ. ಅ ಬಳಸುತ್ತವೆ. ಅರ್ಥಾತ್, ಸಿಕ್ಕಿದ ಶವಗಳ ಅಧಿಕೄತ ಲೆಕ್ಕಾಚಾರ ಮಾತ್ರ ಸುದ್ದಿ ಆಗುತ್ತದೆ. ಈ ಪ್ರಕರಣದಲ್ಲಿ ಸಧ್ಯಕ್ಕೆ ನಾಲ್ಕು ಸಾವು. ಕೆಳಗೆ ಇಂದ್ರಾಯಣೀ ಹೊಳೆಯಲ್ಲಿ ಭಾರೀ ನೀರು-ಪ್ರವಾಹ ಇದ್ದು , ಕೊಚ್ಚಿಕೊಂಡು ಹೋಗಿರುವವರ ಶವಗಳು ಇನ್ನೂ ಸಿಕ್ಕಿಲ್ಲ.
ತಮ್ಮ ಧಣಿಗಳ ಎದುರಾಳಿಗಳಿಗೆ ಡ್ಯಾಮೇಜ್ ಆಗುವ ಸುದ್ದಿ ಆಗಿದ್ದರೆ, ಮಾಧ್ಯಮಗಳು ಮ. ಸಾ.ಅ. ಲೆಕ್ಕಾಚಾರ ಮಾಡುತ್ತವೆ. ಕಡೇ ಪಕ್ಷ ಒಂದು ಪ್ರಶ್ನಾರ್ಥಕ ಚಿಹ್ನೆ ಆದರೂ ಹಾಕಿ 90ಕ್ಕೂ ಮಿಕ್ಕಿ ಜನ ಕೊಚ್ಚಿಹೋಗಿರಬಹುದು ಎಂದು ಹೇಳುತ್ತಾರೆ. ಹೀಗೆ ಧಣಿಗಳ ಸೇವೆಯಲ್ಲಿ, ಸುದ್ದಿಗೆ ಮೋಸ ಮಾಡುವ, ಸುದ್ದಿಯ ಗುರುತರತೆಯನ್ನು ಕಡೆಗಣಿಸುವ ಮಾಧ್ಯಮಗಳು ಸದ್ಯಕ್ಕೆ ಸಮಾಜದ ಅತಿದೊಡ್ಡ ಶತ್ರುಗಳು.
ಇತ್ತೀಚೆಗಿನ ಎಲ್ಲ ದುರಂತಗಳಲ್ಲೂ ಇದೇ ಲಸಾಅ ಮತ್ತು ಮಸಾಅ ಲೆಕ್ಕಾಚಾರವನ್ನು ನೀವು ಗಮನಿಸಬಹುದು. ಅದು ಕೋವಿಡ್ ಸಾವಿನ ಲೆಕ್ಕಾಚಾರ ಇರಬಹುದು, ವಿಮಾನ ದುರಂತದ ಲೆಕ್ಕಾಚಾರ ಇರಬಹುದು ಅಥವಾ ಮೊನ್ನೆಯ ಕ್ರಿಕೆಟ್ ಕಾಲ್ತುಳಿತದ ಲೆಕ್ಕಾಚಾರ ಇರಬಹುದು. ಎಲ್ಲದರಲ್ಲೂ ಇದೇ ಆಟ.
ಸುದ್ದಿಮನೆಯಲ್ಲಿ ಕುಳಿತು ಸುದ್ದಿಗೆ ಅಪಚಾರ ಮಾಡುವುದೆಂದರೆ ಉಣ್ಣುವ ಬಟ್ಟಲಿಗೆ ಹೇತು ಉಂಡಂತೆ ಎಂಬುದನ್ನು ಇವರಿಗೆ ಅರ್ಥ ಮಾಡಿಸುವವರು ಯಾರು?!