ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡು ಅಧಿಕಾರ ಕಳೆದುಕೊಂಡಿರುವ ಟಿಎಂಸಿ ಇಬ್ಭಾಗವಾಗುವ ಭೀತಿ ಮಮತಾ ಬ್ಯಾನರ್ಜಿ ಅವರನ್ನು ಕಾಡುತ್ತಿದೆ. ಸರ್ಕಾರ ರಚಿಸಿರುವ ಬಿಜೆಪಿ ತಮ್ಮ ಪಕ್ಷವನ್ನು ಒಡೆದು, ನಾಶ ಮಾಡಲು ಹುನ್ನಾರ ಮಾಡಿದೆ ಎಂದು ಮಮಾ ಆರೋಪಿಸಿದ್ದಾರೆ. ಪಕ್ಷವನ್ನು ಒಗ್ಗಟ್ಟಿನಿಂದ ಉಳಿಸಿಕೊಳ್ಳಲು ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ, ಬಂಗಾಳದಲ್ಲಿಯೂ ಬಿಜೆಪಿ ‘ಮಹಾರಾಷ್ಟ್ರ ಮಾದರಿ’ಯಲ್ಲಿ ಟಿಎಂಸಿಯನ್ನು ಒಡೆದುಹಾಕಲು ವೇದಿಕೆ ಸಿದ್ಧಗೊಳಿಸುತ್ತಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಕುತಂತ್ರದೊಂದಿಗೆ ಶಿವಸೇನೆಯ ಏಕನಾಥ್ ಶಿಂಧೆ ಮತ್ತು ಎನ್ಸಿಪಿಯ ಅಜಿತ್ ಪವಾರ್ ತಮ್ಮ ಮೂಲ ಪಕ್ಷಗಳನ್ನೇ ಸೀಳಿದ್ದರು. ಆ ಪಕ್ಷಗಳ ಚಿಹ್ನೆ ಮತ್ತು ಪಕ್ಷದ ಹೆಸರನ್ನು ವಶಕ್ಕೆ ಪಡೆದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿದರು. ಅದೇ ಮಾದರಿಯಲ್ಲಿ ಬಂಗಾಳದಲ್ಲೂ ಟಿಎಂಸಿ ಶಾಸಕರನ್ನು ಬಂಡಾಯ ಏಳುವಂತೆ ಮಾಡಿ, ಪಕ್ಷವನ್ನು ಒಡೆಯಲು ಬಿಜೆಪಿ ಸಂಚು ಹೂಡಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಟಿಎಂಸಿ ಶಾಸಕಾಂಗ ಪಕ್ಷದ ನಾಯಕತ್ವದ ಆಯ್ಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಪತ್ರದಲ್ಲಿ ನಮ್ಮ ಸಹಿಯನ್ನು ನಕಲು ಮಾಡಲಾಗಿದೆ ಎಂದು ಶಾಸಕ ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಗಂಭೀರ ಆರೋಪ ಮಾಡಿದ್ದಾರೆ. ಈ ಇಬ್ಬರನ್ನೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷವು ಉಚ್ಛಾಟಿಸಿದೆ.
ಪ್ರಸ್ತುತ, ಟಿಎಂಸಿ ಶೋಭಾದೇವ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ (LoP), ನಯನಾ ಬ್ಯಾನರ್ಜಿ ಮತ್ತು ಆಶಿಮಾ ಪಾತ್ರಾ ಅವರನ್ನು ಉಪನಾಯಕರನ್ನಾಗಿ ಹಾಗೂ ಫಿರ್ಹಾದ್ ಹಕೀಮ್ ಅವರನ್ನು ಮುಖ್ಯ ನೇಮಕ ಮಾಡಿದೆ. ಆದರೆ, ಈ ನೇಮಕಾತಿಯ ಸಹಿ ವಿವಾದಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸ್ ತನಿಖೆ ನಡೆಯುತ್ತಿದೆ. ಹೀಗಾಗಿ, ಸ್ಪೀಕರ್ ಕಚೇರಿಯು ಟಿಎಂಸಿ ನೀಡಿದ ಹೊಸ ಪತ್ರವನ್ನು ಇನ್ನೂ ಅಂಗೀಕರಿಸಿಲ್ಲ.
ಉಚ್ಛಾಟನೆಯ ನಂತರ ಮಾತನಾಡಿರುವ ಶಾಸಕ ಸಂದೀಪನ್ ಸಹಾ, “ಪಕ್ಷವು ಅನೈತಿಕ ಕೆಲಸ ಮಾಡುವವರನ್ನು ಬೆಂಬಲಿಸುತ್ತದೆ. ನೈತಿಕವಾಗಿ ಇರುವವರನ್ನು ಹೊರಹಾಕುತ್ತದೆ. ಹಾಜರಾತಿ ಪುಸ್ತಕದಲ್ಲಿ ನಾವು ಹಾಕಿದ ಸಹಿಯನ್ನು ನಾಯಕತ್ವದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಸಹಿ ಎಂದು ಬಿಂಬಿಸಲಾಗುತ್ತದೆ ಎಂಬುದು ನಮಗೆ ತಿಳಿದೇ ಇರಲಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಉಚ್ಛಾಟನೆಗೊಂಡ ಕೆಲವೇ ಗಂಟೆಗಳಲ್ಲಿ ಶಾಸಕ ರಿತಬ್ರತ ಬ್ಯಾನರ್ಜಿ ಅವರು ಹಲವು ಟಿಎಂಸಿ ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ ಎಂಬ ಊಹಾಪೋಹಗಳು ಹೆಚ್ಚಾಗಿವೆ. ಮಮತಾ ಬ್ಯಾನರ್ಜಿ ಅವರ ಕಟ್ಟಾ ಬೆಂಬಲಿಗರು, ಶಾಸಕರಾದ ಕುನಾಲ್ ಘೋಷ್ ಮತ್ತು ಮದನ್ ಮಿತ್ರಾ ಕೂಡ ಈ ರಹಸ್ಯ ಸಭೆಯ ಆರೋಪವನ್ನು ಖಚಿತಪಡಿಸಿದ್ದಾರೆ.
“ಬಂಡಾಯ ಶಾಸಕರು ಶಾಸಕರ ವಸತಿಗೃಹ ಮತ್ತು ಖಾಸಗಿ ಹೋಟೆಲ್ಗಳಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿದೆ. ಅವರು ಮಹಾರಾಷ್ಟ್ರ ಮಾದರಿಯನ್ನು ಇಲ್ಲಿ ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ,” ಎಂದು ಬೇಳೆಘಾಟಾ ಶಾಸಕ ಕುನಾಲ್ ಘೋಷ್ ಆರೋಪಿಸಿದ್ದಾರೆ. ಆದರೆ, ರಿತಬ್ರತ ಬ್ಯಾನರ್ಜಿ ಈ ಆರೋಪವನ್ನು ನಿರಾಕರಿಸಿದ್ದು, ತಾನು ಕೇವಲ ಸಹೋದ್ಯೋಗಿಗಳಾದ ರಥಿನ್ ಘೋಷ್ ಮತ್ತು ಶಿಯುಲಿ ಸಹಾ ಅವರನ್ನು ಮಾತ್ರ ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?
ಸದ್ಯ ಬಂಗಾಳದಲ್ಲಿ ಟಿಎಂಸಿಯ ಹಲವು ಶಾಸಕರನ್ನು ಬಿಜೆಪಿ ಗುಂಪಾಗಿ ತನ್ನತ್ತ ಸೆಳೆದುಕೊಳ್ಳಲಿದೆ ಎಂಬ ಮಾತುಗಳು ದಟ್ಟವಾಗಿವೆ. ಆದರೆ, ಈ ಪಕ್ಷಾಂತರಕ್ಕೆ ‘ಪಕ್ಷಾಂತರ ನಿಷೇಧ ಕಾಯ್ದೆ’ಯು ಅಡ್ಡಿಯಾಗಲಿದೆ. ಆದ್ದರಿಂದ, ಕಾಯ್ದೆಯನ್ನೂ ‘ಓವರ್ ಟೇಕ್’ ಮಾಡಿ ಶಾಸಕರನ್ನು ಸೆಳೆಯಲು ಬಿಜೆಪಿ ಬೃಹತ್ ಹುನ್ನಾರ ರೂಪಿಸಿದೆ. ಟಿಎಂಸಿಯ ಒಟ್ಟು 80 ಶಾಸಕರಲ್ಲಿ ಕನಿಷ್ಠ ಮರನೇ ಎರಡರಷ್ಟು. ಅಂದರೆ 53 ಶಾಸಕರು ಒಟ್ಟಿಗೆ ಬಂಡಾಯ ಏಳುವಂತೆ ಮಾಡಲು ನಾನಾ ರೀತಿಯಲ್ಲಿ ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗಿದೆ.
ಈ ತಂತ್ರಗಳು ನಡೆಯುತ್ತಿರುವ ಸಮಯದಲ್ಲೇ, ಮಮತಾ ಬ್ಯಾನರ್ಜಿ ಅವರು ಏಕಾಂಗಿಯಾಗುತ್ತಿರುವ ವಿದ್ಯಮಾನಗಳು ಜರುಗುತ್ತಿವೆ. ಮಮತಾ ಅವರು ತಮ್ಮ ನಿವಾಸದಲ್ಲಿ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ಬರೋಬ್ಬರಿ 60 ಶಾಸಕರು ಗೈರಾಗಿದ್ದರು. ಈ ಗೈರು ಪಕ್ಷದೊಳಗಿನ ಬಿರುಕನ್ನು ಸೂಚಿಸಿದೆ.
ಆದಾಗ್ಯೂ, ಶಾಸಕರ ಗೈರು ಹಾಜರಿಯನ್ನು ಪಕ್ಷವು ಸಮರ್ಥಿಸಿಕೊಂಡಿದ್ದು, “ನಮ್ಮ ಸಂಸದರ ಮೇಲೆ ನಡೆದ ದಾಳಿಯ ಕಾರಣದಿಂದಾಗಿ ಶಾಸಕರು ಸಭೆಗೆ ಬರಲು ಸಾಧ್ಯವಾಗಿಲ್ಲ” ಎಂದು ಸಮಜಾಯಷಿ ನೀಡಿದೆ. ಆದರೂ, ಒಳಗೊಳಗೆ ನಾಯಕತ್ವದ ವಿರುದ್ಧ ಅಸಮಾಧಾನ ಸ್ಫೋಟಗೊಂಡಿರುವುದು ಸ್ಪಷ್ಟವಾಗಿದೆ.
ಟಿಎಂಸಿ ಶಾಸಕರ ಗೈರು, ಬಂಡಾಯದ ಹಿಂದೆ ಬಿಜೆಪಿಯ ಕುತಂತ್ರವಿದೆ ಎಂದು ಮಮತಾ ಬ್ಯಾನರ್ಜಿ ಕೂಡ ಆರೋಪಿಸಿದ್ದಾರೆ. “ತಮ್ಮ ಪಕ್ಷವನ್ನು ಧ್ವಂಸ ಮಾಡಲು ದೆಹಲಿಯ ಕೇಂದ್ರ ಬಿಜೆಪಿ ನಾಯಕತ್ವವು ವ್ಯವಸ್ಥಿತ ಸಂಚು ರೂಪಿಸುತ್ತಿದೆ. ನಮ್ಮ ಶಾಸಕರನ್ನು ಮನೆಗಳಿಂದ ಹೊರಬರಲು ಬಿಡುತ್ತಿಲ್ಲ. ಟಿಎಂಸಿ ತೊರೆದು ‘ಹೊಸ ಟಿಎಂಸಿ’ ರಚಿಸುವಂತೆ ಪೊಲೀಸರ ಮೂಲಕವೇ ಬೆದರಿಕೆ ಹಾಕಲಾಗುತ್ತಿದೆ. ಪಕ್ಷದ ಚಿಹ್ನೆಯಡಿ ಗೆದ್ದು ಬಂದವರು ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ, ಈ ಎಲ್ಲ ಪಿತೂರಿಗಳನ್ನು ನಾವು ಧ್ವಂಸ ಮಾಡುತ್ತೇವೆ,” ಎಂದು ಅವರ ಸವಾಲು ಹಾಕಿದ್ದಾರೆ.




