ಮುಂಬೈನ ವಸಾಯ್‌ನ ಜನನಿಬಿಡ ರಸ್ತೆಯೊಂದರಲ್ಲಿ 20 ವರ್ಷದ ಯುವಕನೋರ್ವ ತನ್ನ ಮಾಜಿ ಪ್ರಿಯತಮೆಯನ್ನು ಕಬ್ಬಿಣದ ಸ್ಪ್ಯಾನರ್‌ನಿಂದ 15 ಬಾರಿ ಹೊಡೆದು ಕೊಂದಿರುವ ಅಮಾನುಷ ದುರ್ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆತನನ್ನು ತಡೆಯದ ಜನರು ಸುತ್ತಲೂ ನಿಂತು ನೋಡುವುದು ವಿಡಿಯೋದಲ್ಲಿ ಕಂಡುಬಂದಿದೆ.
ಆರೋಪಿ ರೋಹಿತ್ ಯಾದವ್ ಎಂಬ ಯುವಕ ತನ್ನ ಮಾಜಿ ಪ್ರೇಯಸಿ ಆರತಿ ಯಾದವ್ ಎಂಬಾಕೆಯನ್ನು ನಡುರಸ್ತೆಯಲ್ಲೇ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿಗೆ ಬೇರೆ ಯುವಕನೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆ ಸಾಯುವವರೆಗೂ ನಿರಂತರವಾಗಿ ಹೊಡೆದಿರುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರತಿ ಯಾದವ್ ಕೆಲಸಕ್ಕೆ ಹೋಗುತ್ತಿದ್ದಾಗ ವಸಾಯ್‌ನ ಪೂರ್ವ ಚಿಂಚ್ಪಾಡಾ ಪ್ರದೇಶದಲ್ಲಿ ಬೆಳಿಗ್ಗೆ 8:30ರ ಸುಮಾರಿಗೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳ | ಗುಟ್ಕಾ ತಂದುಕೊಡದ ಕಾರಣಕ್ಕೆ 7 ವರ್ಷದ ಬಾಲಕಿ ಹತ್ಯೆ: ಆರೋಪಿ ಬಂಧನ
“ಇದು ಲವ್ ಜಿಹಾದ್ ಅಲ್ಲದ ಕಾರಣ, ಸುದ್ದಿ ಮಾಧ್ಯಮಗಳು ಸುದ್ದಿ ಮಾಡಿಲ್ಲ. ಸುದ್ದಿಯನ್ನು ಹೈಲೈಟ್ ಮಾಡುವುದಿಲ್ಲ” ಎಂದು ಪತ್ರಕರ್ತ ಮೊಹಮ್ಮದ್ ಜುಬೇರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜುಬೇರ್, “ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿಯನ್ನು ಕಬ್ಬಿಣದ ಸಲಾಕೆಯಿಂದ 15 ಬಾರಿ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ. ರೋಹಿತ್ ಮತ್ತು ಆರತಿ 6 ವರ್ಷಗಳ ಕಾಲ ಪ್ರೀತಿಸಿದ್ದರು. ಇತ್ತೀಚೆಗೆ ಅವರ ಸಂಬಂಧ ಮುರಿದುಬಿದ್ದಿದೆ. ಇಲ್ಲಿ ‘ಲವ್ ಜಿಹಾದ್’ ಇಲ್ಲದ ಕಾರಣ ಸುದ್ದಿ ಸಂಸ್ಥೆಗಳು ಇದನ್ನು ಹೈಲೈಟ್ ಮಾಡುವುದಿಲ್ಲ” ಎಂದಿದ್ದಾರೆ.
ವ್ಯಕ್ತಿಯೋರ್ವ ರೋಹಿತ್‌ನನ್ನು ತಡೆಯಲು ಪ್ರಯತ್ನಿಸಿದ್ದು, ಆ ವ್ಯಕ್ತಿಯನ್ನು ದೂರ ತಳ್ಳಿ, ಆತನಿಗೂ ಸ್ಪ್ಯಾನರ್‌ನಲ್ಲಿ ಹೊಡೆಯುವ ಬೆದರಿಕೆ ಹಾಕಿದ್ದಾನೆ. ಆತಂಕಗೊಂಡ ವ್ಯಕ್ತಿ ದೂರ ಸರಿದಿರುವುದು ವಿಡಿಯೋದಲ್ಲಿ ಕಾಣಬಹುದು. ಇನ್ನು ಜನರು ಅತ್ತಿತ್ತ ಓಡಾಡುತ್ತಿದ್ದರೂ ಕೂಡಾ ಬೇರೆ ಯಾರೂ ದಾಳಿಯನ್ನು ತಡೆಯುವ ಪ್ರಯತ್ನವನ್ನು ಮಾಡಿಲ್ಲ.
ಇದನ್ನು ಓದಿದ್ದೀರಾ? ಮಹಿಳೆಯರ ಕೊಲೆ | ಪೊಲೀಸರ ತನಿಖೆಯಲ್ಲೇ ಲೋಪವಿದೆ: ಬಾಲನ್
ಇನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ರೋಹಿತ್ ಆಕೆ ಸತ್ತ ಬಳಿಕ ಶವವನ್ನು ಹಿಡಿದು ‘ನನಗೇಕೆ ಹೀಗೆ ಮಾಡಿದೆ, ಯಾಕೆ ಹೀಗೆ ಮಾಡಿದೆ’ ಎಂದು ಹಿಂದಿಯಲ್ಲಿ ಕಿರುಚಾಡಿ ಮತ್ತೊಮ್ಮೆ ಆಕೆಗೆ ಹೊಡೆದಿರುವುದು ಕಂಡುಬಂದಿದೆ. ಅದಾದ ಬಳಿಕ ರಕ್ತಸಿಕ್ತ ಸ್ಪ್ಯಾನರ್ ಅನ್ನು ಪಕ್ಕಕ್ಕೆ ಎಸೆದು ಹೋಗಿದ್ದಾನೆ.
ಪೊಲೀಸರು ಆರೋಪಿ ರೋಹಿತ್ ಯಾದವ್‌ನನ್ನು ಬಂಧಿಸಿದ್ದಾರೆ.