ಎಮ್ಮೆಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಗೋರಕ್ಷಕರು ಹತ್ಯೆ ಗೈದಿದ್ದಾರೆ ಎಂದು ವರದಿಯಾಗಿದೆ. ಗುಜರಾತ್‌ನ ಬನಸ್ಕಾಂತದಲ್ಲಿ ಗುರುವಾರ ಘಟನೆ ನಡೆಸಿದೆ. ಆದರೆ, ಇದು ಗುಂಪುಹತ್ಯೆಯಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ಗುರುವಾರ ಮುಂಜಾನೆ ಮಿಶ್ರಿಖಾನ್ ಬಲೋಚ್ ಎಂಬಾತ ಎಮ್ಮೆಗಳನ್ನು ಪ್ರಾಣಿ ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಈ ವೇಳೆ, ಅವರನ್ನು ತಡೆದ ಐವರ ಗುಂಪು, ಆತನನ್ನು ಹೊಡೆದು ಕೊಂದಿದೆ ಎಂದು ಟಿಒಐ ವರದಿ ಮಾಡಿದೆ.
ಮಿಶ್ರಿಖಾನ್ ಜೊತೆಯಲ್ಲಿ ಹುಸೇನ್ಖಾನ್ ಬಲೋಚ್ ಎಂಬ ಮತ್ತೊಬ್ಬ ವ್ಯಕ್ತಿ ಇದ್ದರು. ಆತ ದಾಳಿಕೋರರಿಂದ ತಪ್ಪಿಸಿಕೊಂಡಿದ್ದು, ಬದುಕುಳಿದಿದ್ದಾನೆ. ಪೊಲೀಸರಿಗೆ ಆತನೇ ದೂರು ನೀಡಿದ್ದಾನೆ ಎಂದು ವರದಿಯಾಗಿದೆ.
ಆರೋಪಿಗಳ ವಿರುದ್ಧ ಕೊಲೆ ಮತ್ತು ಮಾರಕಾಸ್ತ್ರ ಬಳಸಿ ಗಲಭೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ‘ಇದು ಗುಂಪು ಹತ್ಯೆಯಲ್ಲ. ಬದಲಾಗಿ, ಮೃತ ಮತ್ತು ಆರೋಪಿಗಳ ನಡುವಿನ ಹಳೆಯ ವೈಷಮ್ಯದಿಂದ ಕೃತ್ಯ ನಡೆದಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ಆರೋಪಿಗಳಲ್ಲಿ ಅಖೇರಾಜ್‌ಸಿನ್ಹ್ ಪರ್ಬತ್‌ಸಿನ್ಹ್ ವಘೇಲಾ ಎಂಬಾತನೂ ಸೇರಿದ್ದಾನೆ ಎನ್ನಲಾಗಿದೆ. ಆತ, ಕಳೆದ ವರ್ಷ ಜುಲೈನಿಂದ ಗೋರಕ್ಷಣೆ ಸಂಬಂಧಿತ ಹಿಂಸಾಚಾರ ಘಟನೆಯಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಐವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇತರ ಮೂವರಿಗಾಗಿ ಶೋಧ ನಡೆಸುತ್ತಿದ್ದಾರೆ.