ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಹೋರಾಟ ನಡೆಸುತ್ತಿರುವ CJP ನಾಯಕರು ಸೋಮವಾರ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿ ತಮ್ಮ ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು. ಆದರೆ ಸರ್ಕಾರದಿಂದ ಯಾವುದೇ ಸ್ಪಷ್ಟ ಭರವಸೆ ಸಿಗದ ಹಿನ್ನೆಲೆಯಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ ಹಾಗೂ ಸಚಿವ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.
CJP ವಕ್ತಾರ ಆಶುತೋಷ್ ರಂಕಾ, “ಇಂದು ನಾವು ಸರ್ಕಾರವನ್ನು ತಲೆಬಾಗುವಂತೆ ಮಾಡಿ ನಮ್ಮ ಮಾತು ಕೇಳಿಸಿದ್ದೇವೆ. ಆದರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಮಾಡಿದ್ದಾರೆ.
CJP ಪ್ರತಿನಿಧಿಗಳಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರು ನಡ್ಡಾ ಅವರನ್ನು ಭೇಟಿಯಾಗಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.

- ಸೋನಂ ವಾಂಗ್‌ಚುಕ್ ಅವರನ್ನು ಬಿಡುಗಡೆ ಮಾಡಬೇಕು.
- ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಬೇಕು ಅಥವಾ ರಾಜೀನಾಮೆ ಪಡೆಯಬೇಕು.
- ನೀಟ್ ಅಭ್ಯರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು.
ಸಭೆಯ ಬಳಿಕ ಮಾತನಾಡಿದ ಸೌರವ್ ದಾಸ್, “ನಮ್ಮ ಬೇಡಿಕೆಗಳನ್ನು ಸಚಿವರಿಗೆ ತಿಳಿಸಿದ್ದೇವೆ. ಅವರು ಸೂಕ್ತ ಮಟ್ಟದಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ. ಆದರೆ ಯಾವುದೇ ಭರವಸೆ ನೀಡಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ” ಎಂದರು.
ಸಭೆಯ ಬಳಿಕ ಮಾತನಾಡಿದ ನಡ್ಡಾ, ಪ್ರತಿಭಟನಾಕಾರರು ಧರಣಿ ಕೈಬಿಟ್ಟು ಆಡಳಿತ ವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ಮರಳಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
“ಇಂದು ಬೆಳಿಗ್ಗೆ ಪ್ರತಿಭಟನಾಕಾರರಿಂದ ಮಾತುಕತೆಗೆ ಪ್ರಸ್ತಾವ ಬಂದಿತ್ತು. ಬಳಿಕ ಅವರ ನಿಯೋಗದೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಂಜೆ ಲಿಖಿತ ಮನವಿಯನ್ನೂ ಸ್ವೀಕರಿಸಿದ್ದೇನೆ. ಅದನ್ನು ಪರಿಶೀಲಿಸಲಾಗುವುದು” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಂ ವಾಂಗ್‌ಚುಕ್, ಪ್ರತಿಭಟನಾಕಾರರಿಗೆ ಸಂಸದರನ್ನು ಭೇಟಿಯಾಗಲು ಅವಕಾಶ ನೀಡುವವರೆಗೆ ಅಥವಾ ತಮಗೆ ಆಸ್ಪತ್ರೆಯಲ್ಲೇ ಅವರನ್ನು ಭೇಟಿ ಮಾಡಲು ಅವಕಾಶ ಸಿಗುವವರೆಗೆ ಉಪವಾಸ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಸಂಸತ್ ಚಲೋ ಮೆರವಣಿಗೆಯ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್ ಒಡೆಯಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗ ಹಾಗೂ ಲಾಠಿ ಚಾರ್ಜ್ ನಡೆಸಿದರು. ಈ ಘರ್ಷಣೆಯಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಯುವಕರ ಮೇಲಿನ ದೌರ್ಜನ್ಯ ಖಂಡಿಸಿ ಉಪವಾಸ ಮುಂದುವರಿಸಿದ ಸೋನಂ ವಾಂಗ್‌ಚುಕ್
ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದರೆ, ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ. ವಾಂಗ್‌ಚುಕ್ ಅವರ ಪತ್ನಿ ಹಾಗೂ 12 ವರ್ಷದ ಬಾಲಕಿಯ ಮೇಲೂ ಹಲ್ಲೆ ನಡೆದಿದೆ ಎಂಬ ಆರೋಪವನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದು, ಅಂತಹ ವರದಿಗಳು ಸುಳ್ಳು ಎಂದಿದ್ದಾರೆ.
ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲೂ ಸಿಜೆಪಿಗೆ ಬೆಂಬಲವಾಗಿ ಪ್ರತಿಭಟನೆಗಳು ನಡೆದಿವೆ. ಅಹಮದಾಬಾದ್‌ನಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪದಡಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರು ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿದ್ದು, ಈ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.





