ಆಧುನಿಕ ಜೀವನ ಶೈಲಿಯಲ್ಲಿ ಬದುಕುತ್ತಿರುವ ಜನರು ನಮ್ಮ ನಿಜ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ ಸಂಗತಿ. ಇಂದಿನ ಯುವ ಪೀಳಿಗೆಗೆ ನಮ್ಮ ತಲೆ ತಲಾಂತರದಿಂದ ಬಂದಿರುವ ಮೌಲ್ಯ ಶಿಕ್ಷಣ, ಸಂಸ್ಕೃತಿಯನ್ನು ಪರಿಚಯಿಸುವುದು ಬಹಳ ಮುಖ್ಯವಾಗಿದೆ ಎಂದು ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪೂರೆ ಕರೆ ನೀಡಿದರು.
ಬೀದರ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವುದು ಅತ್ಯಂತ ಮುಖ್ಯವಾಗಿದ್ದು, ಅವರ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ” ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬುರಾವ ಮಲ್ಕಾಪೂರೆ ಮಾತನಾಡಿ, “ಸಮಾಜದ ಮಕ್ಕಳು ಮುಂದಿನ ದಿನಗಳಲ್ಲಿ ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ ದೇಶದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣ ಮತ್ತು ಕಠಿಣ ಪರಿಶ್ರಮದ ಮೂಲಕ ಉನ್ನತ ಸಾಧನೆ ಮಾಡಿದಾಗ ಅದು ಕೇವಲ ವೈಯಕ್ತಿಕ ಯಶಸ್ಸಾಗದೇ, ನಿಮ್ಮ ಕುಟುಂಬ, ಹೆತ್ತವರು ಹಾಗೂ ಸಮಾಜಕ್ಕೂ ಕೀರ್ತಿಯನ್ನು ತಂದುಕೊಡುತ್ತದೆ” ಎಂದು ಹೇಳಿದರು.
ಸಂಪನ್ಮೂಲ ಶಿಕ್ಷಕ ಪ್ರಕಾಶ ದೇಶಮುಖ ಅವರು ವಿಶೇಷ ಉಪನ್ಯಾಸ ನೀಡಿ, “ಮಕ್ಕಳನ್ನು ಸೋಮಾರಿಗಳಾಗಿ ಬೆಳೆಸದೆ ಅಧ್ಯಯನಶೀಲರಾಗಿ ರೂಪಿಸುವ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಮೇಲಿದೆ. ಪ್ರತಿಯೊಬ್ಬರು ಅಹಂಕಾರವನ್ನು ಬಿಟ್ಟು ವಿನಯ, ಪ್ರೀತಿ ಮತ್ತು ಮಾನವೀಯತೆಯಿಂದ ಇತರರ ಮನಸ್ಸನ್ನು ಗೆಲ್ಲಬೇಕು” ಎಂದು ತಿಳಿಸಿದರು.
ಮಕ್ಕಳು ತಮ್ಮ ಗುರಿಯತ್ತ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಮುನ್ನಡೆಯಬೇಕು. ಕಠಿಣ ಪರಿಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ ಎಂಬುದನ್ನು ಅರಿತು, ಮೌಲ್ಯಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸಾಮಾಜಿಕ ಸೇವೆಯನ್ನು ಪರಿಗಣಿಸಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸರ್ಕಾರಿ ನೌಕರರು ಹಾಗೂ ನಿವೃತ್ತ ಸರ್ಕಾರಿ ನೌಕರರನ್ನು ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆ, ಭರತನಾಟ್ಯ, ನಾಡಗೀತೆ, ವಚನಗಾಯನ, ಮಹಿಳಾ ಕೋಲಾಟ, ಮಹಿಳಾ ಜಾನಪದ ಭಜನೆ, ಜೋಗುತಿ ನೃತ್ಯ, ಪೈತ್ರಿ ಕುಣೀತ, ಜಾನಪದ ಗೀತೆ, ಸಂಪ್ರದಾಯಿಕ ಪದ, ಕುಟ್ಟುವ ಪದ, ಬಿಸುವ ಪದ, ಐರಾಣಿ ಪದ, ಭುಲಾಯಿಪದ, ಜಾನಪದ ಭಜನೆ, ಮುಂತಾದವುಗಳು ಸಭಿಕರ ಗಮನ ಸೆಸಳೆದವು.
ಇದನ್ನೂ ಓದಿ : ಬೀದರ್ | ಸೋನಂ ವಾಂಗ್ಚೂಕ್ ಸತ್ಯಾಗ್ರಹಕ್ಕೆ ಬೆಂಬಲ: ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ ಅತಿವಾಳೆ, ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಮಹಾನಗರ ಪಾಲಿಕೆ ಸದಸ್ಯ ಹನಮಂತ ಮಲ್ಕಾಪುರ, ಡಾ.ಬಾಬುರಾವ ಮರಖಲ್, ಡಾ.ಶ್ರೀಕಾಂತ್ ಚಿಂಚೋಳಿಕರ್, ಡಾ.ಜಿ.ಬಿ ಮಲ್ಲಿಕಾರ್ಜುನ ಸೇರಿದಂತೆ ಪ್ರಮುಖರಾದ ಪೀರಪ್ಪಾ ಯರನಳ್ಳಿ, ರತಿಕಾಂತ ಜೋಜನಾ, ಶಂಭುಲಿಂಗ ವಾಲ್ದೊಡ್ಡಿ, ದೇವಪ್ಪಾ ಚಾಂಬೋಳೆ, ಬಾಬುರಾವ ಮಲ್ಕಾಪುರ, ತುಕಾರಾಮ ಚಿದ್ರಿ ಕರಾಟೆ, ಶಿವಕುಮಾರ್ ಉಪ್ಪೆ, ದೀಪಕ ಚಿದ್ರಿ, ತುಕಾರಾಮ ಔದತಪುರ, ಬಾಲಾಜಿ ಜಬಾಡೆ, ಕಲ್ಲಪ್ಪಾ ರಾಯಗೊಂಡ, ಸುನೀಲ ಚಿಲ್ಲರ್ಗಿ, ಗೋವಿಂದ ದುರ್ಗೆ, ಶರಣಪ್ಪಾ ಮಲಗೊಂಡ, ಪ್ರವೀಣ ಮತ್ತಿತರರಿದ್ದರು. ವಿಜಯಕುಮಾರ ಬ್ಯಾಲಹಳ್ಳಿ ಸ್ವಾಗತಿಸಿದರು. ದೇವಿದಾಸ ಜೋಶಿ ನೀರುಪಿಸಿದರು, ಮಲ್ಲಿಕಾರ್ಜುನ್ ಮುರ್ಕೆ ವಂದಿಸಿದರು.





