ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವ ನಡುವೆಯೇ, 10 ದಿನಗಳ ಬಳಿಕ ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ ಚೀನಿ ಪ್ರಜೆ ಹಾಗೂ ನುವಾಕೋಟ್‌ನಲ್ಲಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 64 ವರ್ಷದ ಮಹಿಳೆಯನ್ನು ರಕ್ಷಣಾ ತಂಡಗಳು ಸುರಕ್ಷಿತವಾಗಿ ಹೊರತೆಗೆದಿವೆ.
ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸುಮಾರು 225 ಮೀಟರ್ ದೂರದಲ್ಲಿ ಸಿಲುಕಿದ್ದ ಚೀನಿ ಪ್ರಜೆ ಲುಹೈತಾವೊ ಅವರನ್ನು ನೇಪಾಳ ಸೇನೆ ಮತ್ತು ವಿದೇಶಿ ರಕ್ಷಣಾ ತಜ್ಞರ ಜಂಟಿ ತಂಡ ರಕ್ಷಿಸಿದೆ. ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ನುವಾಕೋಟ್‌ನ ಬೆತ್ರಾವತಿಯಲ್ಲಿ ಪ್ರವಾಹ ಸಂಭವಿಸಿದ ಕೆಲವೇ ಗಂಟೆಗಳ ಬಳಿಕ ನಾಲ್ಕಂತಸ್ತಿನ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 64 ವರ್ಷದ ಚಂಡಿಕಾ ಕುಮಾರಿ ಶ್ರೇಷ್ಠಾ ಅವರನ್ನೂ ರಕ್ಷಿಸಲಾಗಿದೆ. ಕಟ್ಟಡದ ಮೇಲಿನ ಮಹಡಿಯಲ್ಲಿ ಸುಮಾರು 10 ದಿನಗಳ ಕಾಲ ಸಿಲುಕಿದ್ದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಸೇನಾ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಅಪ್ಪರ್ ತ್ರಿಶೂಲಿ-3A ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ ಇಬ್ಬರು ನೇಪಾಳಿ ಕಾರ್ಮಿಕರಾದ ಸಂಜಯ್ ಸಾಹ್ ಮತ್ತು ಕಬೀರ್ ಮಹಾರ್ಜನ್ ಅವರನ್ನು ಜೀವಂತವಾಗಿ ಇತ್ತೀಚೆಗಷ್ಟೇ ರಕ್ಷಿಸಲಾಗಿತ್ತು. ಇಬ್ಬರೂ ಸುರಂಗದೊಳಗೆ ಸುಮಾರು 40 ಮೀಟರ್ ಆಳದಲ್ಲಿ ಸಿಲುಕಿದ್ದರು.
ಆಗಸ್ಟ್ 26ರಂದು ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದ ಬಳಿಕ ಭೋಟೇಕೋಶಿ ನದಿಯಲ್ಲಿ ಭಾರಿ ಪ್ರಮಾಣದ ನೀರು, ಕೆಸರು ಮತ್ತು ಅವಶೇಷಗಳು ಹರಿದುಬಂದಿದ್ದವು. ಸುನಾಮಿಯಂತಿದ್ದ ಈ ಪ್ರವಾಹದಿಂದ ಹಲವು ವಸತಿ ಪ್ರದೇಶಗಳು ಹಾಗೂ ಜಲವಿದ್ಯುತ್ ಯೋಜನೆಗಳಿಗೆ ವ್ಯಾಪಕ ಹಾನಿಯಾಗಿದೆ.
ನೇಪಾಳ ಪೊಲೀಸರ ಪ್ರಕಾರ, ಶನಿವಾರದ ವೇಳೆಗೆ ದುರಂತದಲ್ಲಿ 1,344 ಮಂದಿ ಮೃತಪಟ್ಟಿದ್ದು, 4,898 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಒಟ್ಟು 8,631 ಮಂದಿಯನ್ನು ರಕ್ಷಿಸಲಾಗಿದ್ದು, 3,655 ಮಂದಿ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ: ನೇಪಾಳ | ಎಲ್ಲವನ್ನೂ ಕೊಚ್ಚಿಕೊಂಡು ಹೋದ ಪ್ರವಾಹ ಇದೊಂದು ಮನೆಯನ್ನ ಬಿಟ್ಟದ್ದು ಹೇಗೆ?
ಪತ್ತೆಯಾಗಿರುವ ಮೃತದೇಹಗಳ ಪೈಕಿ 501 ಮಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಗುರುತು ಪತ್ತೆಗಾಗಿ 1,260 ಮೃತದೇಹಗಳಿಂದ ಮತ್ತು 972 ಸಂಬಂಧಿಕರಿಂದ DNA ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಪ್ರವಾಹದಿಂದ 11 ಜಲವಿದ್ಯುತ್ ಯೋಜನೆಗಳು ಹಾಗೂ ಒಂದು ಸೌರ ವಿದ್ಯುತ್ ಘಟಕಕ್ಕೂ ಹಾನಿಯಾಗಿದೆ. ಈ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದವರೂ ಸೇರಿದಂತೆ 942 ಮಂದಿ ನಾಪತ್ತೆಯಾಗಿದ್ದಾರೆ. ರಸುವಾಗಢಿ ಜಲವಿದ್ಯುತ್ ಯೋಜನೆಯೊಂದರಲ್ಲೇ 93 ಮಂದಿ ನಾಪತ್ತೆಯಾಗಿದ್ದಾರೆ.





