ಮೈತ್ರಿ ಪಕ್ಷ ಆರ್‌ಜೆಡಿಯೊಂದಿಗೆ ಬಹುತೇಕ ರಾಜಕೀಯ ಸಂಬಂಧ ಮುರಿದುಕೊಂಡಿರುವ ಜೆಡಿಯು ಅಧ್ಯಕ್ಷ ಹಾಗೂ ಬಿಹಾರ್ ಸಿಎಂ ನಿತೀಶ್ ಕುಮಾರ್ ಜ.28ರಂದು ಬಿಜೆಪಿ ಬೆಂಬಲದೊಂದಿಗೆ ಪುನಃ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೂತನ ಸರ್ಕಾರದಲ್ಲಿ ಬಿಹಾರ್ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಮೋದಿ ಉಪಮುಖ್ಯಮಂತ್ರಿಯಾಗುವ ಸಂಭವವಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸುಶೀಲ್ ಮೋದಿ, ಮುಚ್ಚಿದ ಬಾಗಿಲುಗಳು ತೆರೆಯಬಹುದು. ರಾಜಕೀಯವು ಎಲ್ಲ ಸಾಧ್ಯತೆಗಳ ಆಟ ಎಂದು ಹೇಳಿದ್ದಾರೆ.
ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿದ ವಿಚಾರಕ್ಕೆ ನಿನ್ನೆ(ಜ.26) ಮಿತ್ರ ಪಕ್ಷ ಆರ್‌ಜೆಡಿ ಜೊತೆಗಿನ ಪ್ರಕ್ಷುಬ್ಧತೆ ಉಂಟಾದ ನಂತರ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಳಿಸಿದ ಶಕ್ತಿಗಳೇ ಕರ್ಪೂರಿಯವರನ್ನು ಅಟ್ಟಕ್ಕೇರಿಸುತ್ತಿರುವ ಅಣಕ
ನಿತೀಶ್ ಕುಮಾರ್ ಕೌಟುಂಬಿಕ ರಾಜಕಾರಣದ ಬಗ್ಗೆ ಮಾತನಾಡಿದ ನಂತರ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ನಿತೀಶ್ ವಿರುದ್ಧ ಅವಕಾಶವಾದಿ ರಾಜಕಾರಣಿ ಎಂದು ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿ ಅಳಿಸಿ ಹಾಕಿದ್ದರು. ಈ ಘಟನೆಯೆ ಬಿಹಾರದ ರಾಜಕೀಯ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.
ಈ ನಡುವೆ ಬಿಹಾರದ ರಾಜಕೀಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್, ನಿತೀಶ್ ಬಿಜೆಪಿ ಸೇರ್ಪಡೆ ಅಷ್ಟು ಸಲಭವಲ್ಲ ಎಂದು ತಿಳಿಸಿದೆ. ಮೇಲಾಗಿ ವಿಧಾನಸಭಾ ಸ್ಪೀಕರ್ ನಮ್ಮ ಕಡೆ(ಆರ್‌ಜೆಡಿ) ಇದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
2020ರಲ್ಲಿ ನಡೆದಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ 75, ಎನ್‌ಡಿಎ 74 ಹಾಗೂ ಜೆಡಿಯು 43 ಸ್ಥಾನ ಗೆದ್ದಿತ್ತು. ಆರಂಭದಲ್ಲಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ 2022ರಲ್ಲಿ ಆರ್‌ಜೆಡಿಯೊಂದಿಗೆ ಸಖ್ಯ ಬೆಳೆಸಿ ಸರ್ಕಾರ ರಚಿಸಿದ್ದರು. ಈಗ, ಆರ್‌ಜೆಡಿ ಬಿಟ್ಟು, ಬಿಜೆಪಿಯೊಂದಿಗೆ ಸರ್ಕಾರ ರಚಿಸುತ್ತಿದ್ದಾರೆ.