ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಹಳಿ ಬದಲಿಸುವ ವ್ಯವಸ್ಥೆಯಲ್ಲಿನ (ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್) ದೋಷ ಹಾಗೂ ಸ್ಟೇಷನ್ ಮಾಸ್ಟರ್ ಕೊಠಡಿಯಲ್ಲಿ ಸರಿಯಾದ ಸಿಗ್ನಲ್ ನೀಡಲು ವಿಫಲವಾಗಿರುವುದು ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರೈಲ್ವೆ ದುರಂತವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಅಪಘಾತದ ಸ್ವರೂಪ, ಚಾಲ್ತಿಯಲ್ಲಿರುವ ಸಂದರ್ಭಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಗಣಿಸಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ರೈಲ್ವೆ ಮಂಡಳಿಯು ಶಿಫಾರಸು ಮಾಡಿದೆ” ಎಂದು ತಿಳಿಸಿದ್ದಾರೆ.
“ನಮಗೆ ಕಾರಣ ತಿಳಿದಿದೆ, ಆದರೆ ಇದು ಗೌಪ್ಯವಾದ ಮಾಹಿತಿಯಾಗಿರುವುದರಿಂದ ನಾನು ಏನನ್ನಾದರೂ ಹೇಳಿದರೆ ತಪ್ಪಾಗುತ್ತದೆ. ಸದ್ಯ ರೈಲ್ವೆ ಸುರಕ್ಷತಾ ಆಯೋಗ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ವಿಚಾರಣೆ ಪೂರ್ಣಗೊಳಿಸಿದೆ ಮತ್ತು ವಿವರಗಳೊಂದಿಗೆ ತನಿಖೆಯ ವರದಿಯನ್ನು ಸಲ್ಲಿಸಲಿದೆ. ತನಿಖಾಧಿಕಾರಿಗಳಿಂದಲೇ ಮಾಹಿತಿ ಹೊರಬರಲಿ” ಎಂದು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಒಡಿಶಾ ರೈಲು ದುರಂತ | ಹಳಿ ಬದಲಿಸುವ ವ್ಯವಸ್ಥೆಯ ದೋಷ ಕಾರಣ; ಸಚಿವ ಅಶ್ವಿನಿ ವೈಷ್ಣವ್

ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ರೈಲ್ವೆ ಸಚಿವರು, “ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಟ್ರ್ಯಾಕ್‌ಗೆ ಸಂಬಂಧಿಸಿದ ಕೆಲಸ ಮುಗಿದಿದೆ ಮತ್ತು ಓವರ್‌ಹೆಡ್ ವೈರಿಂಗ್ ಕೆಲಸ ನಡೆಯುತ್ತಿದೆ. ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
“ಶಾಲಿಮಾರ್ – ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಭುವನೇಶ್ವರದಿಂದ ಸುಮಾರು 180 ಕಿಮೀ ದೂರದಲ್ಲಿರುವ ಬಹನಾಗಾ ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿ ಲೂಪ್‌ಲೈನ್‌ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರೈಲಿನ ಕನಿಷ್ಠ 12 ಬೋಗಿಗಳು ಮಗುಜಿ ಪಕ್ಕದ ಹಳಿ ಮೇಲೆ ಬಿದ್ದಿವೆ. ಇದೇ ವೇಳೆ ಪಕ್ಕದ ಟ್ರ್ಯಾಕ್‌ನಲ್ಲಿ ಬರುತ್ತಿದ್ದ ಬೆಂಗಳೂರು – ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಚದುರಿದ ಕೋರಮಂಡಲ್ ಎಕ್ಸ್‌ಪ್ರೆಸ್ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ” ಎಂದು ಸಚಿವರು ತಿಳಿಸಿದ್ದಾರೆ.
ಬಾಲಸೋರ್, ಕಟಕ್ ಮತ್ತು ಭುವನೇಶ್ವರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗಾಯಾಳುಗಳಿಗೆ ಒಡಿಶಾ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ಎಲ್ಲ ನೆರವು ನೀಡುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ, ಹಗಲು-ರಾತ್ರಿ ರೋಗಿಗಳನ್ನು ನೋಡಿಕೊಳ್ಳುವ ವೈದ್ಯರ ತಂಡಗಳಿವೆ. ಮೃತರ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ರೈಲ್ವೆ ಸಚಿವರು ತಿಳಿಸಿದರು.
ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆ ಎಂದರೇನು?
ಸಿಗ್ನಲ್ಗಳು ಮತ್ತು ಹಳಿಗಳನ್ನು ನಿಯಂತ್ರಿಸುವ ಮೂಲಕ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಎಂದು ಕರೆಯಲಾಗುತ್ತದೆ. ಇದು ಎಲೆಕ್ಟ್ರಾನಿಕ್ ಕಂಟ್ರೋಲ್ ಸಿಸ್ಟಂ ಮತ್ತು ಕಂಪ್ಯೂಟರ್ ಸಹಾಯದಿಂದ ರೈಲುಗಳ ಚಲನೆಯ ಮೇಲೆ ನಿಗಾ ವಹಿಸುತ್ತದೆ. ಮಾರ್ಗವು ಸುರಕ್ಷಿತವೆಂದು ಸಾಬೀತುಪಡಿಸದ ಹೊರತು ಯಾವುದೇ ರೈಲು ಮುಂದುವರಿಯಲು ಈ ವ್ಯವಸ್ಥೆ ಬಿಡುವುದಿಲ್ಲ. ಆದರೆ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ದೋಷದಿಂದಾಗಿ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.