ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಅಮಾನವೀಯ ಉಗ್ರರ ದಾಳಿ ನಡೆದು ಒಂದು ತಿಂಗಳಾಯಿತು. ಅಕಾರಣವಾಗಿ ಮನೆ ಯಜಮಾನರನ್ನು ಕಳೆದುಕೊಂಡ ಕುಟುಂಬಗಳ ನೋವು ತೀರುವಂತದ್ದಲ್ಲ. ಆದರೆ, ದೇಶವಾಸಿಗಳ ಮನಸ್ಸಿನಿಂದ ಈ ಘೋರ ದುರಂತವನ್ನು ಮರೆ ಮಾಡುವ ರೀತಿಯಲ್ಲಿ ಸಿಂಧೂರದ ಚರ್ಚೆ ನಡೆಯುತ್ತಿದೆ. ಪುಲ್ವಾಮ ದಾಳಿಯನ್ನು ಬಾಲಾಕೋಟ್ ದಾಳಿ ನುಂಗಿಹಾಕಿತ್ತು. ಈಗಲೂ ಅಷ್ಟೇ ಪಹಲ್ಗಾಮ್ ವೈಫಲ್ಯವನ್ನು ಸಿಂಧೂರ ಆಪರೇಷನ್ ನುಂಗಿ ಹಾಕಲಿದೆ. ಅಮಾಯಕರಿಗೆ ಗುಂಡಿಕ್ಕಿದ ಉಗ್ರರು ಸಿಕ್ಕರೇ, ಅವರು ಏನಾದರು? ಪ್ರಶ್ನೆ ಮಾಡುವುದೇ ಅಪರಾಧವೇ?
ಸರಿಯಾಗಿ ಒಂದು ತಿಂಗಳ ಹಿಂದೆ 2025 ಏಪ್ರಿಲ್ 22 ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆಯದೇ ಇಲ್ಲ ಎಂಬಂತಹ ದುರ್ಘಟನೆಯೊಂದು ನಡೆದು ಹೋಗಿದೆ. ಮಕ್ಕಳ ಪರೀಕ್ಷೆ ಮುಗಿಸಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದ ಬೇರೆ ಬೇರೆ ರಾಜ್ಯದ ಕುಟುಂಬಗಳು, ಆಗಷ್ಟೇ ಮದುವೆಯಾಗಿ ಹನಿಮೂನ್ ಸಂಭ್ರಮದಲ್ಲಿದ್ದ ಜೋಡಿಗಳು ಕಾಶ್ಮೀರದ ರಮಣೀಯ ಸ್ಥಳಗಳಲ್ಲಿ ಸುತ್ತಾಡುತ್ತಾ ಪಹಲ್ಗಾಮ್ ಎಂಬ ಪರ್ವತದ ಮೇಲಿನ ವಿಶಾಲ ಹುಲ್ಲುಗಾವಲಿಗೆ ಕುದುರೆ ಏರಿ ಬಂದಿತ್ತು. ಇನ್ನೇನು ಫೋಟೋ, ರೀಲ್ಸ್ ಅಂತ ಜಾಲಿ ಮೂಡ್‌ನಲ್ಲಿದ್ದ ದಂಪತಿ. ಕೆಲವರು ಮೊದಲ ಬಾರಿಗೆ ಭೂಲೋಕದ ಸ್ವರ್ಗದಲ್ಲಿ ಸುಂದರ ಕ್ಷಣಗಳನ್ನು ಅನುಭವಿಸುತ್ತಿದ್ದರು. ಆ ಕ್ಷಣ ಅವರ ಪಕ್ಕದಲ್ಲಿಯೇ ಸಾವು ಹೊಂಚು ಹಾಕಿ ಕುಳಿತಿತ್ತು. ಅದರ ಅರಿವು ಇರಲು ಸಾಧ್ಯವೇ ಇರಲಿಲ್ಲ.
ಪಹಲ್ಗಾಮ್‌ನ ಆ ಸುಂದರ ಹುಲ್ಲುಗಾವಲಿನಲ್ಲಿ ಯಾವುದೇ ಭಯವಿಲ್ಲದೇ ವಿಹರಿಸುತ್ತಿದ್ದ ಜನರಿಗೆ ಅಲ್ಲೆಲ್ಲೂ ಒಂದು ಪಟಾಕಿಗಿಂತ ದೊಡ್ಡ ಶಬ್ಧ ಕೇಳಿಸುತ್ತದೆ. ಎಲ್ಲೋ ಏನೋ ಕೇಳಿಸಿತ್ತು, ಏನೆಂದು ತಿರುಗಿ ನೋಡುವಾಗ ಪಕ್ಕದಲ್ಲೇ ಇದ್ದ ಗಂಡನ ತಲೆಗೆ ಬಿದ್ದಿತ್ತು ಗುಂಡು. ಭಾರತೀಯ ನೌಕಾಪಡೆಯ ಕಿರಿಯ ಅಧಿಕಾರಿ ಕೊಚ್ಚಿಯಲ್ಲಿ ಲೆಫ್ಟನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿನಯ್ ನರ್ವಾಲ್ ಮತ್ತು ಹಿಮಾಂಶಿ ಏ. 16ರಂದು ಮದುವೆಯಾಗಿದ್ದರು. ಹನಿಮೂನ್ ಕಾಶ್ಮೀರಕ್ಕೆ ತೆರಳಿದ್ದರು. ಆಕೆಯ ಅಂಗೈಯಲ್ಲಿ ಮದರಂಗಿ ರಂಗು ಮಾಸಿರಲಿಲ್ಲ. ಹಚ್ಚ ಹಸಿರಿನ ಮೆತ್ತಗಿನ ಹುಲ್ಲುಗಾವಲಿನಲ್ಲಿ ಯುವದಂಪತಿ ಪಾನಿಪೂರಿ ತಿನ್ನುತ್ತ ಕೂತಿದ್ದರು. ಅಷ್ಟರಲ್ಲಿ ಎದುರಿಗೆ ಬಂದು ನಿಂತಿದ್ದ ಉಗ್ರ ವಿನಯ್ ಎದೆಗೆ ಗುಂಡಿಟ್ಟು ಹೋಗಿದ್ದ. ಪತಿಯ ಶವದ ಮುಂದೆ ಮೌನವಾಗಿ ರೋಧಿಸುತ್ತಿದ್ದ ಹಿಮಾಂಶಿಯ ಚಿತ್ರಗಳು ಎಂತಹವರ ಎದೆಯನ್ನೂ ತಣ್ಣಗಾಗಿಸುವಂತಿತ್ತು.

ಕಾಶ್ಮೀರದ ತಣ್ಣನೆಯ, ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯ, ಆಹ್ಲಾದಕರ ವಾತಾವರಣದಲ್ಲಿದ್ದ ಮಕ್ಕಳು ಅದೇ ಸುಂದರ ತಾಣದಲ್ಲಿ ಅಪ್ಪನ ಬಲಿಯನ್ನು ಕಾಣುವಂತಾಗಿತ್ತು. ಶಿವಮೊಗ್ಗದ ಮಂಜುನಾಥ್ ಪತ್ನಿ ಮತ್ತು ಮಗ ಉಗ್ರನನ್ನು ಕಂಡೂ ಏನೂ ಮಾಡಲಾರದ ಸ್ಥಿತಿ. ತಮ್ಮನ್ನೂ ಕೊಂದುಬಿಡು ಎಂದಷ್ಟೇ ಹೇಳುವುದು ಸಾಧ್ಯವಾಗಿತ್ತು. ಬೆಂಗಳೂರಿನ ಭರತ್ ಭೂಷಣ್ ಪತ್ನಿ ಸ್ವತಃ ವೈದ್ಯೆ, ಮೂರು ವರ್ಷದ ಮಗುವನ್ನು ಬಚ್ಚಿಟ್ಟುಕೊಂಡು ಗಂಡ ಪ್ರಾಣ ಬಿಡುವುದನ್ನು ಉಸಿರು ಬಿಗಿ ಹಿಡಿದು ನೋಡುವ ದಯನೀಯ ಸ್ಥಿತಿ. ಇದುವರೆಗೂ ಉಗ್ರರು ಪ್ರವಾಸಿಗಳನ್ನು ಗುರಿಯಾಗಿಸಿ ದಾಳಿ ನಡೆಸಿರಲಿಲ್ಲ ಎಂದು ದಾಖಲೆಗಳು ಹೇಳುತ್ತವೆ. ಅದರಲ್ಲೂ ಬೇರೆ ರಾಜ್ಯಗಳಿಂದ ಬಂದಿರುವ ಪ್ರವಾಸಿಗರ ಬಳಿ ಬಂದು ಧರ್ಮ ನೋಡಿ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ ಗಂಡಸರನ್ನು ಮಾತ್ರ ಕೊಲ್ಲುವ ಉದ್ದೇಶದಿಂದ ದೂರದಿಂದ ದಾಳಿ ನಡೆಸಿಲ್ಲ. ಮತ್ತು ಇದರಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ. ಒಂದೇ ಗುಂಡಿಗೆ ಪ್ರಾಣಬಿಡುವಂತೆ ಬಹಳ ಕರಾರುವಕ್ಕಾಗಿ ದಾಳಿ ಅದಾಗಿತ್ತು. ಕಾಶ್ಮೀರದಲ್ಲಿ ಹಿಂದೆ ನಡೆದ ಉಗ್ರರ ದಾಳಿಗಳು ಅವರ ನೆನಪಿಗೂ ಸುಳಿದಿರಲ್ಲ ಅಂತಹ ಭದ್ರತೆಯ ಹುಸಿ ಭಾವ ಮೋದಿ ಸರ್ಕಾರ ಜನರ ಮನಸ್ಸಿನಲ್ಲಿ ತುಂಬಿತ್ತು. ಈ ದಾಳಿಗೆ ಕೆಲವೇ ದಿನಗಳ ಹಿಂದೆ ಗೃಹಸಚಿವ ಅಮಿತ್ ಶಾ ಭಾಷಣವೊಂದರಲ್ಲಿ ಭಯೋತ್ಪಾದಕ ದಾಳಿ ಮುಗಿದ ಅಧ್ಯಾಯ ಎಂದಿದ್ದರು. ಕಾಶ್ಮೀರ ಪ್ರವಾಸ ಬಹುತೇಕರ ಜೀವನದ ಆಸೆ. ಅಂತಹ ಆಸೆ ಈಡೇರಿಸಿಕೊಳ್ಳುವ ತವಕದಲ್ಲಿದ್ದ ಜನ ಕಾಶ್ಮೀರದ ಕಡೆಗೆ ದೌಡಾಯಿಸಿದ್ದರು.
ಅಚ್ಚರಿಯೆಂದರೆ ಸುಮಾರು ಐನೂರು ಪ್ರವಾಸಿಗರಿದ್ದ ಆ ಹುಲ್ಲುಗಾವಲಿನಲ್ಲಿ 26 ಮಂದಿ ಮೃತಪಟ್ಟ ನಂತರ ದಿಕ್ಕಾಪಾಲಾಗಿ ಓಡುತ್ತಿದ್ದ ಕುಟುಂಬಗಳನ್ನು ಸಮಾಧಾನಿಸಿ ತಮ್ಮ ಬೆನ್ನಿನ ಮೇಲೆ ಹೊತ್ತು, ಕುದುರೆಯ ಮೇಲೆ ಕೂರಿಸಿಕೊಂಡು ಕೆಳಗೆ ಕರೆತಂದವರು ಕುದುರೆ ಸವಾರರು. ಅವರನ್ನೆಲ್ಲ ಆಸ್ಪತ್ರೆ, ಹೋಟೇಲುಗಳಿಗೆ ತಲುಪಿಸಿದ್ದರು. ಅಲ್ಲಿಯವರೆಗೆ ಪ್ರವಾಸಿಗರೇ ಹೇಳುವಂತೆ ಸುಮಾರು ಒಂದೂವರೆ ಗಂಟೆ ಕಳೆದರೂ ಭದ್ರತಾಪಡೆಯವರು ಬಂದೇ ಇಲ್ಲ. ಕನಿಷ್ಠ ಐದತ್ತು ಕಿಲೋಮೀಟರ್ ದೂರದಲ್ಲೂ ಅವರಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ. ನಿಜ ಸಂಗತಿ ಹೇಳಿದ್ದ ಕೆಲವು ಸಂತ್ರಸ್ತ ಕುಟುಂಬಗಳನ್ನು ಹೀನಾಯವಾಗಿ ಟ್ರೋಲ್ ಮಾಡಲಾಯಿತು. ತಮಗೆ ಬೇಕಾದಂತೆ ಮುಸ್ಲಿಂ ದ್ವೇಷದ ಹೇಳಿಕೆ ನೀಡಲಿಲ್ಲ ಎಂಬ ಕಾರಣಕ್ಕೆ ಆ ಹೆಣ್ಣುಮಕ್ಕಳ ಚಾರಿತ್ರ್ಯವಧೆಗೆ ಕೆಲವು ಮೋದಿ ಭಕ್ತರು ಇಳಿದರು.

ಪಹಲ್ಗಾಮ್ ದಾಳಿಯ ಸಮಯದಲ್ಲಿ ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ವಾಪಾಸಾಗಿ ಹೋಗಿದ್ದು ಬಿಹಾರಕ್ಕೆ. ಕೆಲ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಅಲ್ಲಿ ಸಾವಿರಾರು ಕೋಟಿಯ ಯೋಜನೆಗಳಿಗೆ ಚಾಲನೆ ನೀಡಿ ʼಉಗ್ರರನ್ನು ಸುಮ್ಮನೆ ಬಿಡಲ್ಲʼ ಎಂದು ಎಚ್ಚರಿಕೆ ನೀಡಿದರು. ಮೃತದೇಹಗಳಿಗೆ ಗೃಹಸಚಿವ ಅಮಿತ್ ಶಾ ನಮನ ಸಲ್ಲಿಸಿದರು. ಆದರೆ ಪ್ರಧಾನಿ ಮೋದಿ ಮೃತದೇಹಗಳಿಗೆ ಗೌರವ ಸಲ್ಲಿಸಲಿಲ್ಲ. ಇದುವರೆಗೂ ಆ ಕುಟುಂಬಗಳನ್ನು ಭೇಟಿ ಮಾಡಲಿಲ್ಲ. ಆದರೆ, ಮೃತದೇಹಗಳು ಮಣ್ಣಾಗುವ ಮುನ್ನವೇ ರಾಜಕೀಯ ಲಾಭದ ಲೆಕ್ಕಾಚಾರಕ್ಕಿಳಿದಿದ್ದರು. ಆ ಕುಟುಂಬಗಳಿಗೆ ಪರಿಹಾರವನ್ನೂ ಘೋಷಿಸಿಲ್ಲ. ಸರ್ವ ಪಕ್ಷಗಳ ಸಭೆ ಕರೆದು ಅದಕ್ಕೂ ಮೋದಿ ಹಾಜರಾಗಿಲ್ಲ. ಆಪರೇಷನ್ ಸಿಂಧೂರ್ ನಡೆದು ಯುದ್ಧ ವಿರಾಮ ಘೋಷಣೆಯಾಗಿದೆ. ಆದರೆ ಪಹಲ್ಗಾಮ್‌ನಲ್ಲಿ ಹತ್ಯಾಕಾಂಡ ನಡೆಸಿದ ನಾಲ್ಕರು ಉಗ್ರರು ಏನಾದರು? ಅವರನ್ನು ಹಿಡಿಯುವುದು ಅಥವಾ ಕೊಂದು ಮುಗಿಸುವುದು ಸಾಧ್ಯವಾಗಿಲ್ಲ. ಅವರೆಲ್ಲಿ ಹೋದರು? ಈ ಪ್ರಶ್ನೆಗಳನ್ನು ಕೇಳುವವರೇ ಇಲ್ಲ.
ಹುಸಿ ಹೇಳಿಕೆ ನಂಬಿ ಪ್ರಾಣ ಕಳೆದಕೊಂಡರು
ಜಮ್ಮು ಕಾಶ್ಮೀರದಲ್ಲಿ ಇದ್ದ ಆರ್ಟಿಕಲ್ 370 (ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸ್ವಾಯತ್ತತೆಯ ವಿಷಯದಲ್ಲಿ ವಿಶೇಷ ಸ್ಥಾನಮಾನವನ್ನು ಮತ್ತು ರಾಜ್ಯದ ಖಾಯಂ ನಿವಾಸಿಗಳಿಗೆ ಕಾನೂನುಗಳನ್ನು ರೂಪಿಸುವ ಸಾಮರ್ಥ್ಯವನ್ನು ಅಂಗೀಕರಿಸುತ್ತದೆ. ಇದಲ್ಲದೆ, ರಾಜ್ಯವು ಖಾಯಂ ನಿವಾಸಿಗಳಿಗೆ ಮನೆ ಆಸ್ತಿ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಂತಹ ವಿಷಯಗಳಲ್ಲಿ ವಿಶೇಷ ಸವಲತ್ತುಗಳನ್ನು ನೀಡಿತು, ಅದು ಇತರರಿಗೆ ಲಭ್ಯವಿಲ್ಲ) ಅಡಿ ಇದ್ದ ವಿಶೇಷ ಸವಲತ್ತು ತೆಗೆದು ಹಾಕಿದ ನಂತರ ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ, ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗಿದೆ ಎಂಬದು ಜಾಹೀರಾತುಗಳನ್ನು ನಂಬಿ ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಮೋದಿ ಅವರ ಬೊಗಳೆ ಭಾಷಣವನ್ನು ನಿಜ ಎಂದು ನಂಬಿ ಹೋದವರ ಬದುಕು ಒಂದೊಂದು ಗುಂಡಿಗೆ ಬಲಿಯಾಗಿತ್ತು. ಪತ್ನಿ ಮಕ್ಕಳು ಯಜಮಾನನಿಲ್ಲದೇ ಮನೆಗೆ ವಾಪಾಸಾಗುವ ದುರಂತ ಸ್ಥಿತಿ ಬಂದಿತ್ತು. ಸಂತ್ರಸ್ತ ಕುಟುಂಬಗಳು ನೇರವಾಗಿ ಭದ್ರತಾಲೋಪವನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಹಾಯಕ್ಕೆ ಧಾವಿಸಿದ ಸ್ಥಳೀಯ ಮುಸ್ಲಿಮರನ್ನು ಶ್ಲಾಘಿಸಿದ್ದಾರೆ. ಈ ಮಾತು ಭಯೋತ್ಪಾದನೆ ಪೀಡಿತ ಕಾಶ್ಮೀರಕ್ಕೆ ಪ್ರವಾಸ ಹೋಗಿ ಬಂದ ಪ್ರತಿಯೊಬ್ಬರ ಮನದ ಮಾತೇ ಆಗಿದೆ. ಅಲ್ಲಿನ ಬಡ ಮುಸ್ಲಿಮರಿಗೆ ಬದುಕು ಸಾಗುವುದೇ ಪ್ರವಾಸಿಗರಿಗೆ ನೆರವಾಗುವ ಮೂಲಕ. ಕಣಿವೆ ಪ್ರದೇಶಕ್ಕೆ ಪ್ರವಾಸಿಗರನ್ನು ಕುದುರೆಯ ಮೇಲೆ ಕೂರಿಸಿ ಅಥವಾ ತಮ್ಮ ಬೆನ್ನಿನ ಮೇಲೆ ಬುಟ್ಟಿಯಲ್ಲಿ ಕೂರಿಸಿ ಸಾಗಿಸಬೇಕು. ಅಲ್ಲಿನ ಗೈಡ್‌ಗಳಾಗಿ, ಊಟೋಪಚಾರ ಆತಿಥ್ಯ ನೋಡಿಕೊಳ್ಳುವವರಾಗಿ, ಇಂತಹ ಸಂಕಷ್ಟದ ಸಮಯದಲ್ಲಿ ದೇವರಾಗಿ ಬಂದು ಕಾಪಾಡುವುದು ಅವರ ಎಂದಿನ ಕಾಯಕ. ಕೋಮುವಾದಿ ರಾಜಕಾರಣದ ಫಲವಾಗಿ ಮುಸ್ಲಿಂ ದ್ವೇಷ ಅಬಾಲವೃದ್ಧರಾದಿಯಾಗಿ ಎಲ್ಲರ ಮನಸ್ಸಿನಲ್ಲೂ ಬಿತ್ತುವ ಬಿಜೆಪಿಯ ಹೊಲಸು ರಾಜಕೀಯ ಕುರಿತ ಚರ್ಚೆ ಪಹಲ್ಗಾಮ್ ದಾಳಿಯ ನಂತರ ಮತ್ತೆ ಮುನ್ನೆಲೆಗೆ ಬರುವಂತಾಯ್ತು. ದೇಶಕ್ಕೇ ಬರಸಿಡಿಲು ಬಡಿದಂತಾಗಿದ್ದ ಇಂತಹ ಸಮಯದಲ್ಲಿ ಉಗ್ರರ ಧರ್ಮವನ್ನು ಹಿಡಿದು ಇಡೀ ಸಮುದಾಯವನ್ನು ಶಿಕ್ಷಿಸುವ ಅದ್ಭುತ ಅವಕಾಶ ತಪ್ಪಿರುವುದು ಕೋಮುವಾದಿಗಳಿಗೆ ನಿರಾಸೆ ಮೂಡಿಸಿತ್ತು.

ಆಪರೇಷನ್ ಸಿಂಧೂರ ಮರೆಯಿಸಿದ ಪಹಲ್ಗಾಮ್ ದಾಳಿ
ಪಹಲ್ಗಾಮ್ ದಾಳಿಯ 15 ನೇ ದಿನದಂದು, ಅಂದರೆ ಮೇ 7 ರ ಮುಂಜಾನೆ ಪ್ರತೀಕಾರದ ಕ್ರಮವನ್ನು ಪ್ರಾರಂಭಿಸಿತು. ಮೇ 7 ರಂದು ಬೆಳಗಿನ ಜಾವ 1 ರಿಂದ 1.35 ರ ನಡುವೆ ‘ಆಪರೇಷನ್ ಸಿಂಧೂರ್’ ನಡೆಸಲಾಯಿತು ಎಂದು ಭಾರತೀಯ ಸೇನೆ ತಿಳಿಸಿದೆ. ಈ ಅವಧಿಯಲ್ಲಿ, ಭಾರತೀಯ ಸೇನೆ ಮತ್ತು ವಾಯುಪಡೆ ಜಂಟಿ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಿಒಕೆಯಲ್ಲಿದ್ದ ಒಟ್ಟು 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದವು. ಮೇ ಹತ್ತರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಢೀರ್ ತಮ್ಮ ಎಕ್ಸ್ನಲ್ಲಿ ಸೀಸ್ ಫೈರ್ (Ceasefire) ಘೋಷಣೆ ಮಾಡಿದರು. ಭಾರತ ಮತ್ತು ಪಾಕಿಸ್ತಾನ ದೇಶಗಳು (India-Pakistan) ತತ್ಕ್ಷಣದ ಮತ್ತು ಪೂರ್ಣ ಕದನ ವಿರಾಮಕ್ಕೆ ಒಪ್ಪಿವೆ ಎಂದು ಆ ಪೋಸ್ಟ್ನಲ್ಲಿ ಟ್ರಂಪ್ ಬರೆದರು. ಅದಕ್ಕೆ ಭಾರತ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ನಂತರ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಕದನವಿರಾಮದ ಮಾಹಿತಿ ನೀಡಿದ್ದರು. ಈ ಮಧ್ಯೆ ಸುದ್ದಿ ಮಾಧ್ಯಮಗಳು ನಾ ಮುಂದು ತಾ ಮುಂದು ಎಂಬಂತೆ ನಕಲಿ ವಿಡಿಯೋಗಳನ್ನು, ವಿಡಿಯೋ ಗೇಮ್ ದೃಶ್ಯಗಳನ್ನು ಬಿತ್ತರಿಸಿ ತಮಗೆ ತಾವೇ ಅವಮಾನಿಸಿಕೊಂಡವು. ಯುದ್ಧ ಅಲ್ಲ ಉಗ್ರರ ತಾಣಗಳ ಮೇಲಿನ ದಾಳಿ ಎಂದು ಸೇನಾ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರೂ ಭಾರತದ ಮಾಧ್ಯಮಗಳು ಯುದ್ಧ ಶುರುಮಾಡಿಯೇ ಬಿಟ್ಟಿದ್ದವು. ಕದನವಿರಾಮ ಘೋಷಣೆಯಾದ ನಂತರ ನಡೆದ ಸರ್ವಪಕ್ಷ ಸಭೆಗೂ ಮೋದಿ ಹಾಜರಾಗಿಲ್ಲ. ಈ ಮಧ್ಯೆ ಮೋದಿ ಭಕ್ತರು, ಬಿಜೆಪಿ ನಾಯಕರು ತಿರಂಗಾ ಯಾತ್ರೆ ಮಾಡಿ ಮೋದಿಯ ಗುಣಗಾನಕ್ಕೆ ಇಳಿದಿದ್ದಾರೆ.
ಬಿಜೆಪಿ ಸಂಘಪರಿವಾರ ಮತ್ತು ಮೋದಿ ಭಕ್ತರು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ, ದುರಾಡಳಿತ, ಭ್ರಷ್ಟಾಚಾರ, ಅನ್ಯಾಯ ಹೀಗೆ ಏನೇ ಆರೋಪ ಕೇಳಿಬಂದರೂ ಸರ್ಕಾರದ ರಕ್ಷಣೆಗೆ ಕಂಕಣಬದ್ಧರಾಗಿ ನಿಲ್ಲುತ್ತಾರೆ. ಇಂದಿನ ಎಲ್ಲಾ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳು, ನೆಹರೂ, ಇಂದಿರಾಗಾಂಧಿ ಅವರನ್ನು ದೂಷಣೆ ಮಾಡುತ್ತ, ತಿರುಚಿದ ಸುದ್ದಿಗಳನ್ನು ಹರಿಯಬಿಟ್ಟು ಮುಗ್ಧ ಜನರನ್ನು ಹಾದಿ ತಪ್ಪಿಸಿ ವಾಸ್ತವ ಮರೆಯುವಂತೆ ಮಾಡುತ್ತಾರೆ. ಕೊರೋನಾ ಸಾಂಕ್ರಾಮಿಕವನ್ನು ಸರಿಯಾಗಿ ನಿಭಾಯಿಸದೇ ತಟ್ಟೆ ಜಾಗಟೆ ಬಡಿಯಿರಿ, ದೀಪ ಹಚ್ಚಿ ಎಂದು ಹೇಳುತ್ತಾ ಭಾವನಾತ್ಮಕವಾಗಿ ಜನರನ್ನು ಕಟ್ಟಿ ಹಾಕಿ ತನ್ನ ಅಸಾಮರ್ಥ್ಯವನ್ನು ಮುಚ್ಚಿಕೊಂಡಿದ್ದರು ಮೋದಿ. ನಿಖರವಾಗಿ ಸಾವಿನ ಸಮೀಕ್ಷೆಯನ್ನೇ ಮಾಡದೇ, ಆಕ್ಸಿಜನ್ ಸಿಗದೇ ಸತ್ತವರ ಲೆಕ್ಕವನ್ನೂ ಕೊಡದೇ, ಲಾಕ್‌ಡೌನ್ ಘೋಷಿಸಿ ಜನರನ್ನು ನರಕಕ್ಕೆ ತಳ್ಳಿದ್ದರೂ ಜನ ಮೋದಿ ಭಜನೆ ನಿಲ್ಲಿಸಲಿಲ್ಲ. ಪುಲ್ವಾಮಾ ದಾಳಿಯನ್ನು ಬಾಲಾಕೋಟ್ ದಾಳಿ ನುಂಗಿಹಾಕಿತ್ತು. ಈಗಲೂ ಅಷ್ಟೇ ಪಹಲ್ಗಾಮ್ ವೈಫಲ್ಯವನ್ನು ಸಿಂಧೂರ ಆಪರೇಷನ್ ನುಂಗಿ ಹಾಕಿದೆ.

ಸಂತ್ರಸ್ತ ಕುಟುಂಬಗಳ ನೋವು ಆಲಿಸುವವರಿಲ್ಲ. ಸರ್ಕಾರ ಅವರತ್ತ ತಿರುಗಿಯೂ ನೋಡಿಲ್ಲ. ಆಯಾ ರಾಜ್ಯ ಸರ್ಕಾರಗಳು ಐದು, ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಿದ್ದು ಬಿಟ್ಟರೆ ಮೋದಿ ಸರ್ಕಾರ ಏನೇನೂ ಮಾಡಿಲ್ಲ. ಈ ಮಧ್ಯೆ ಬಿಜೆಪಿ, ಸಂಘಪರಿವಾರ ಎಂದಿನ ಹೊಲಸು ರಾಜಕಾರಣ ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಪರ, ದೇಶದ್ರೋಹಿಗಳನ್ನು ಬೆಂಬಲಿಸುತ್ತದೆ ಎಂದು ಹೇಳುವ ಚಾಳಿ ಮುಂದುವರಿಸಿದ್ದಾರೆ. ಈ ಮಧ್ಯೆ ಬಿಜೆಪಿಯ ಬೆಂಬಲಿಗಳು ಪಂಜಾಬ್‌ನ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡಿದ ಆರೋಪದಲ್ಲಿ ಬಂಧಿತಳಾಗಿದ್ದಾಳೆ. ಹೀಗೆ ಪಾಕಿಸ್ತಾನದ ನಂಟು ಹೊಂದಿರುವ ಅನೇಕರು ಬಿಜೆಪಿಯಲ್ಲಿ ಗುರುತಿಸಿಕೊಂಡವರೇ ಇದ್ದಾರೆ ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ. ಮುಸ್ಲಿಮರು ದೇಶದ್ರೋಹಿಗಳು, ಪಾಕಿಸ್ತಾನದ ಬೆಂಬಲಿಗರು ಎಂದು ಹೇಳುತ್ತಾ ತಮ್ಮಲ್ಲೇ ಪಾಕ್ ಬೆಂಬಲಿಗ ದೇಶದ್ರೋಹಿಗಳನ್ನು ಬೆಳೆಸುತ್ತಿದೆ ಬಿಜೆಪಿ.
ಈಗ ಯುದ್ಧ ತಣ್ಣಗಾಗಿದೆ, ವಿದೇಶಗಳಿಗೆ ಸರ್ವಪಕ್ಷಗಳ ತಂಡ ತೆರಳಿ ಭಾರತದ ದಾಳಿಯ ಕುರಿತು ಮನವರಿಕೆ ಮಾಡಿಕೊಡಲಿದೆ. ಕೆಲ ತಿಂಗಳಲ್ಲಿ ಬಿಹಾರ ಚುನಾವಣೆ ಬರಲಿದೆ. ಅದಕ್ಕಾಗಿ ಈಗಲೇ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಮೋದಿ ಶಾ ಜೋಡಿ ಗೆಲುವಿನ ದಂಡಯಾತ್ರೆ ಮುಂದುವರಿಸಬಹುದು. ಮೋದಿ ಸರ್ಕಾರದಿಂದ ಯಾವುದೇ ಲೋಪವಾದರೂ ಅವರ ಪರವಾಗಿ ನಿಲ್ಲುವ ದೊಡ್ಡ ಸಮೂಹ ದೇಶದಲ್ಲಿದೆ. ವೈಫಲ್ಯವನ್ನೂ ಫಲವಾಗಿ ಮಾಡಿಕೊಳ್ಳುವ ಚಾಕಚಕ್ಯತೆ ಬಿಜೆಪಿಗೆ ಇದೆ. ಅದಕ್ಕೆ ಇರುವ ಪುರಾವೆಗಳು ಅನೇಕ. ನೋಟ್ ಬ್ಯಾನ್‌ನಿಂದ ಲಕ್ಷಾಂತರ ಸಣ್ಣ ಉದ್ಯಮಗಳು ಅಸುನೀಗಿದವು. ಜನ ಹಣ ಕಳೆದುಕೊಂಡರು. ಜನವಿರೋಧ ಇರುವುದು ನಿಚ್ಚಳವಾಗಿತ್ತು. ಬೆಲೆಯೇರಿಕೆ ಆಬಾಧಿತವಾಗಿತ್ತು. ಇನ್ನೇನು ಲೋಕಸಭಾ ಚುನಾವಣೆಗೆ ನಾಲ್ಕು ತಿಂಗಳಿತ್ತು. ಆಗ ನಡೆಯಿತು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಬಹುದೊಡ್ಡ ಭಯೋತ್ಪಾದಕ ದಾಳಿ. ಅದೂ ಬಿಎಎಸ್‌ಎಫ್ ಸಿಬ್ಬಂದಿಯ ನರಮೇಧ! ಪುಲ್ವಾಮ ದಾಳಿ.
ಪುಲ್ವಾಮ ದಾಳಿಯಿಂದಲೂ ಮತದ ಫಸಲು ಪಡೆದಿದ್ದ ಬಿಜೆಪಿ
2019ರ ಫೆಬ್ರವರಿಯಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ 2000 ಬಿಎಸ್‌ಎಫ್ ಯೋಧರನ್ನು ಬಸ್‌ನಲ್ಲಿ ಸಾಗಿಸುತ್ತಿದ್ದಾಗ 350 ಕೆ. ಜಿ. ಆರ್‌ಡಿಎಕ್ಸ್ ತುಂಬಿ ಜೀಪ್‌ನಲ್ಲಿ ಬಂದ ಉಗ್ರ ಬಸ್‌ಗೆ ಡಿಕ್ಕಿ ಹೊಡೆದು ಸ್ಪೋಟಿಸಿದ್ದ. ನಲವತ್ತೈದು ಯೋಧರ ದೇಹಗಳು ಛಿದ್ರಗೊಂಡಿದ್ದವು. ಪುಲ್ವಾಮದಲ್ಲಿ ಯೋಧರು ಸಾಗುವ ರಸ್ತೆಯ ಚೆಕ್‌ಪೋಸ್ಟ್‌ಗಳು ಅಂದು ಕಾರ್ಯನಿರ್ವಹಿಸುತ್ತಿರಲಿಲ್ಲ. ಪುಲ್ವಾಮ ದಾಳಿಯ ಬಗ್ಗೆ ಯಾರೊಬ್ಬರೂ ಹೊಣೆ ಹೊತ್ತು ರಾಜೀನಾಮೆ ನೀಡಿಲ್ಲ. ಅದರ ತನಿಖೆಯೇ ನಡೆದಿಲ್ಲ. ಆದರೆ ಆನಂತರ ಭಾರತ ಪಾಕಿಸ್ತಾನದ ಬಾಲಾಕೋಟ್ ಮೇಲೆ ಕ್ಷಿಪಣಿ ದಾಳಿ ಮಾಡಿದ್ದನ್ನೇ ಮೋದಿಯವರು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಂಡರು. ಬಿಜೆಪಿ ಮತ್ತು ಗೋದಿ ಮಾಧ್ಯಮಗಳು ಜನರ ಮನಸ್ಸಿನಲ್ಲಿ ಮೋದಿಯನ್ನು ಮಹಾನಾಯಕನ್ನಾಗಿ ಬಿಂಬಿಸಿದ ಪರಿಣಾಮವಾಗಿ ಬಿಜೆಪಿ 305 ಸ್ಥಾನಗಳನ್ನು ಪಡೆದು ಬಹುಮತದ ಸರ್ಕಾರ ರಚನೆಯಾಗಿತ್ತು. 45 ಯೋಧರ ಕುಟುಂಬಗಳು ಏನಾದವು, ಅವರಿಗೆ ಸರ್ಕಾರ ಯಾವ ನೆರವು ನೀಡಿದೆ ಎಂಬ ಬಗ್ಗೆ ಯಾವ ಮಾಧ್ಯಮಗಳೂ ವರದಿ ಮಾಡಿಲ್ಲ. ಬಾಲಾಕೋಟ್‌ನ ದಾಳಿಯಲ್ಲಿ ಯಾರೊಬ್ಬರೂ ಸತ್ತ ಬಗ್ಗೆ ನಿಖರ ಮಾಹಿತಿಯೇ ಇಲ್ಲ. ಪುರಾವೆ ಕೇಳಿದವರು ದೇಶದ್ರೋಹಿಗಳಾದರು. ಈಗಲೂ ಅಷ್ಟೇ ಟ್ರಂಪ್ ಹೇಳಿದ ತಕ್ಷಣ ಯುದ್ಧ ವಿರಾಮಕ್ಕೆ ಒಪ್ಪಿದ ಮೋದಿ ಸರ್ಕಾರದ ಬಗ್ಗೆ ಪ್ರಶ್ನೆ ಮಾಡೋದೇ ಅಪರಾಧವಾಗಿದೆ. ಪ್ರಶ್ನೆ ಮಾಡಿದರೆ ಪ್ರಕರಣ ದಾಖಲಿಸಲಾಗುತ್ತಿದೆ.

ಮೋದಿ ಸರ್ಕಾರದ ಭದ್ರತಾ ವೈಫಲ್ಯವನ್ನೇ ಚುನಾವಣಾ ಗೆಲುವಿಗೆ ಪರಿವರ್ತಿಸುವುದು ಬಿಜೆಪಿಗೆ ಕರತಲಾಮಲಕ ಎಂದೇ ಹೇಳಬಹುದು. 2019ರ ಚುನಾವಣೆಯಲ್ಲಿ ಮೋದಿ ಸೋಲಲೇ ಬೇಕಿತ್ತು. ಆದರೆ ಮತದಾರರು ಮೋದಿಯನ್ನು ಮತ್ತೆ ಗೆಲ್ಲಿಸಿದರು. ಇದೀಗ ಪಹಲ್ಗಾಮ್ ದಾಳಿ ಮತ್ತೆ ಮೋದಿಯವರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ. ಆದರೆ ಬಿಜೆಪಿ ಈ ಘಟನೆಯ ನಂತರ ಸೇನೆ ನಡೆಸಿದ ಆಪರೇಷನ್ ಸಿಂಧೂರವನ್ನು ಮೋದಿಯವರ ಸಾಧನೆ ಎಂಬಂತೆ ಬಿಂಬಿಸುತ್ತಿದೆ. 26 ಅಮಾಯಕರ ಜೀವ ಹೋಗಿರುವುದರ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ, ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಕಾಶ್ಮೀರದ ಜಿಲ್ಲಾಧಿಕಾರಿ ಸಹಿತ ಅನೇಕ ಯೋಧರು, ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾಶ್ಮೀರದ ಅನೇಕರ ಮನೆಗಳು ಹಾನಿಗೊಳಗಾಗಿವೆ. ಅವರ ಸಮಸ್ಯೆಗಳನ್ನು ಆಲಿಸುವವರು ಯಾರು? ಪಹಲ್ಗಾಮ್‌ನಲ್ಲಿ ಭದ್ರತೆ ಒದಗಿಸಿ ಉಗ್ರರನ್ನು ಮಟ್ಟ ಹಾಕಿದ್ದರೆ ಅಮಾಯಕರ ಜೀವವೂ ಉಳಿಯುತ್ತಿತ್ತು.
ಕಾಶ್ಮೀರದಲ್ಲಿ ಉಗ್ರರ ಬಾಂಬ್ ದಾಳಿ, ಸೈನಿಕರ ಮೇಲಿನ ದಾಳಿ, ಸ್ಥಳೀಯರ ಮೇಲೆ ಗುಂಡಿನ ದಾಳಿ ಹೊಸದೇನೂ ಅಲ್ಲ. ಭಾರತ ಪಾಕಿಸ್ತಾನ ವಿಭಜನೆಯಾದಾಗಿನಿಂದಲೂ ಇದೆ. ಪಾಕ್ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ ನಿರಂತರ ತುರ್ತುಪರಿಸ್ಥಿತಿಯಿದೆ. ಉಗ್ರರ ಮಟ್ಟ ಹಾಕಲು ಎಲ್ಲಾ ಸರ್ಕಾರಗಳೂ ಪ್ರಯತ್ನಿಸುತ್ತಲೇ ಬಂದಿವೆ. ಪಾಕಿಸ್ತಾನದ ಉಗ್ರ ಸಂಘಟನೆಗಳು ಗಡಿ ಪ್ರವೇಶಿಸಿ ದಾಳಿ ನಡೆಸುತ್ತಲೇ ಬಂದಿವೆ. ಆದರೆ, ಉಗ್ರರು ಕಾಣಿಸಿಕೊಳ್ಳದೇ ಮರೆಯಿಂದ ಗುಂಡಿನ ದಾಳಿ ನಡೆಸುತ್ತಿದ್ದರು.
ಏಪ್ರಿಲ್ 22ರಂದು ಪ್ರವಾಸ ತೆರಳಿದ್ದ ಬೇರೆ ಬೇರೆ ರಾಜ್ಯದ ಕುಟುಂಬಗಳು ಸಂತೋಷದಿಂದ ಸಮಯ ಕಳೆಯುತ್ತಿದ್ದಾಗ, ಇನ್ನೂ ಸಂಜೆಯಾಗುವ ಮುನ್ನವೇ ಬಂದೂಕುದಾರಿಗಳು ಕೇವಲ ಗಂಡಸರನ್ನು ಮಾತ್ರ ಗುರಿಯಾಗಿಸಿ ತೀರಾ ಹತ್ತಿರದಿಂದ ಗುಂಡು ಹೊಡೆದು ಉರುಳಿಸಿದ್ದರು. ಉಗ್ರರಿಗೆ ಗಂಡಸರನ್ನು ಮಾತ್ರವೇ ಕೊಲ್ಲುವ ಉದ್ದೇಶ ಇತ್ತು ಎಂಬುದನ್ನು ಆ ಕುಟುಂಬಗಳೇ ಹೇಳಿವೆ. ಅವರು ಯಾರಿಗೆ ಯಾವ ಸಂದೇಶ ಕೊಡಲು ಬಯಸಿದ್ದರೋ ಎಂಬುದು ಕೂಡ ಸ್ಪಷ್ಟವಿತ್ತು. ಶಿವಮೊಗ್ಗದ ಮಂಜುನಾಥ್ ಅವರ ಪತ್ನಿ ಪಲ್ಲವಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹೇಳಿದಂತೆ, ಪತಿಯನ್ನು ಕೊಂದ ಉಗ್ರನಿಗೆ ತಮ್ಮನ್ನೂ ಕೊಲ್ಲು ಎಂದಾಗ, “ಮೋದಿಗೆ ಹೋಗಿ ಹೇಳು” ಎಂದಿದ್ದನಂತೆ ಉಗ್ರ. ಅಷ್ಟೇ ಅಲ್ಲ ಉಗ್ರರು ಹತ್ಯೆಗೈದ 26 ಪುರುಷರಲ್ಲಿ ದಾಳಿಗೆ ಪ್ರತಿರೋಧ ಒಡ್ಡಿದ್ದ ಕುದುರೆ ಸವಾರ ಕಾಶ್ಮೀರದ ಸ್ಥಳೀಯ ಮುಸ್ಲಿಂ ಯುವಕ ಮೃತಪಟ್ಟಿರುವುದು ಬಿಟ್ಟರೆ ಉಳಿದ ಎಲ್ಲರೂ ಹಿಂದೂಗಳು ಎಂಬುದು ಮೋದಿ ಸರ್ಕಾರದ ಕೋಮುವಾದಿ ನೀತಿಗಳು, ಮುಸ್ಲಿಂ ವಿರೋಧಿ ಕೃತ್ಯಗಳಿಗೆ ಪ್ರತೀಕಾರವಾಗಿತ್ತು ಎಂಬುದು ಗಮನಿಸಬೇಕು.

ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ವಿಧಿಯನ್ನು ಮೋದಿ ಅವರ ಎರಡನೇ ಅವಧಿ ಶುರುವಾಗುತ್ತಿದ್ದಂತೆ 2019ರ ಆಗಸ್ಟ್ 5ರಂದು ರದ್ದುಗೊಳಿಸಿದ್ದರು. ಕಾಶ್ಮೀರದಲ್ಲಿ ಭಯೋತ್ಪಾದನೆ ಮಟ್ಟ ಹಾಕಲು ಈ ನಿರ್ಧಾರ ಎಂದು ಭಜನೆ ಮಾಡಿದ್ದರು. ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ, ಉದ್ಯಮಗಳಿಗೆ ಅವಕಾಶ ನೀಡಲಾಗುತ್ತದೆ, ಯಾರು ಬೇಕಿದ್ದರೂ ಆಸ್ತಿ ಖರೀದಿಸಬಹುದು ಎಂದೆಲ್ಲ ಆಕಾಶದ ನಕ್ಷತ್ರ ತೋರಿಸುತ್ತಾ ಭಾಷಣ ಬಿಗಿದಿದ್ದರು. ಮೊದಲ ಅವಧಿಯಲ್ಲಿ ಐನೂರು, ಒಂದು ಸಾವಿರ ಮುಖಬೆಲೆಯ ನೋಟು ಬ್ಯಾನ್ ಮಾಡಿದಾಗಲೂ ಇದೇ ರಾಗ ಹಾಡಿದ್ದರು. ಕಪ್ಪು ಹಣ ಚಲಾವಣೆಗೆ ಕಡಿವಾಣ, ಶ್ರೀಮಂತರು ಕೂಡಿಟ್ಟ ಹಣ ಮುಟ್ಟುಗೋಲು, ಉಗ್ರರಿಗೆ ಹಣಕಾಸಿನ ಕೊರತೆ, ನಕಲಿ ನೋಟು ಚಲಾವಣೆಗೆ ಬ್ರೆಕ್ ಎಂದು ಪುಂಗಿ ಬಿಟ್ಟಿದ್ದರು. ಈ ಮಧ್ಯೆ ಮೋದಿ ಪ್ರಣೀತ ಮಾಧ್ಯಮ, ಸಂಘಟನೆಗಳು, ಬಿಜೆಪಿ ಕಾಶ್ಮೀರದಲ್ಲಿ ಏನೋ ಮಹಾ ಸಾಧನೆ ಮಾಡಿದ್ದೇವೆ ಎಂದು ಸಂಭ್ರಮಿಸಿದ್ದರು. ಎಲ್ಲಾ ಸಮಸ್ಯೆಗಳಿಗೆ ನೆಹರೂ ಮತ್ತು ಕಾಂಗ್ರೆಸ್ ಸರ್ಕಾರ ಕಾರಣ ಎಂಬಲ್ಲಿಗೆ ತಮ್ಮ ವಾದವನ್ನು ತಂದು ನಿಲ್ಲಿಸುವ ಬಲಪಂಥೀಯರು ಮೋದಿ ಸರ್ಕಾರ ಹನ್ನೊಂದು ವರ್ಷಗಳಲ್ಲಿ ಮಾಡಿದ್ದೆಲ್ಲ ಸರಿ ಎಂದು ಹೇಳುತ್ತಾ ದಿನ ದೂಡುತ್ತಿದ್ದಾರೆ.
ಇದನ್ನೂ ಓದಿ ಕರ್ನಲ್ ಖುರೇಷಿ ಬಗ್ಗೆ ಸಚಿವ ವಿಜಯ್ ಶಾ ಅವಹೇಳನಕಾರಿ ಹೇಳಿಕೆ; ರಾಷ್ಟ್ರಪತಿಗೆ ನಾಗರಿಕರ ಪತ್ರ
ಪಹಲ್ಗಾಮ್ ದಾಳಿ ಸರ್ಕಾರದ ವೈಫಲ್ಯ ಎಂದು ಒಪ್ಪಿಕೊಳ್ಳದ ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರವನ್ನು ಸರ್ಕಾರದ ಸಾಧನೆ ಎಂದುಕೊಳ್ಳುವುದು, ಆ ಮೂಲಕ ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳುವುದು ನಾಚಿಕೆಗೇಡು. ಅದು ಸಂತ್ರಸ್ತ ಕುಟುಂಬಗಳಿಗೆ ಮಾಡುವ ಘೋರ ಅನ್ಯಾಯ. ಮೃತರ ಕುಟುಂಬಗಳಿಗೆ ಯಾವುದೇ ಪರಿಹಾರ ಕೊಡದಿರುವ ಕೇಂದ್ರ ಸರ್ಕಾರಕ್ಕೆ ಆ ಜೀವಗಳ ಬೆಲೆ ಗೊತ್ತಿಲ್ಲ. ಆದರೆ ಅದನ್ನು ಇಂತಹ ಘೋರ ಕೃತ್ಯವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ. ನಿನ್ನೆಯಷ್ಟೇ ಮೋದಿ ಅವರು ತಮ್ಮ ಮೈಯಲ್ಲಿ ರಕ್ತ ಹರಿಯುತ್ತಿಲ್ಲ ಸಿಂಧೂರ ಹರಿಯುತ್ತಿದೆ ಎಂದು ಹೇಳಿದ್ದಾರೆ. ಈಗಾಗಲೇ ಅವರು ಮಾತಿನ ವ್ಯಾಪಾರ ಶುರು ಮಾಡಿದ್ದಾರೆ. ಫಸಲು ಪಡೆಯುವುದಷ್ಟೇ ಬಾಕಿ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.
ಲೇಖನದ ಕೊನೆಯವರೆಗೂ ಸಿಂಧೂರ ಹಂತಕರು ಬದುಕಿದರೆ ಸತ್ತರೆ ಎಂಬ ಉತ್ತರವೇ ಇಲ್ಲ ಎಂಥ ವಿಪರ್ಯಾಸ ಲೇಖನ
ವರದಿಗಾರರು, ಪತ್ರಕರ್ತರು ನಿಪಕ್ಷರಾಗಿರಬೇಕು. ಇಲ್ಲಿ ಒಂದು ಮಾತು ಅಂತು ಸ್ಪಷ್ಟ ಮೋದಿ ವಿರೋಧಿ ಧೋರಣೆ. ಪುಲ್ವಾಮ ಅಟ್ಯಾಕ್ಗೆ ಬಾಳಕೋಟ್ ದಾಳಿ ಮಾಡಿ ಚುನಾವಣೆ ಗೆದ್ದರು ಹೌದು ಎಂದಾದರೆ
Mumbai ದಾಳಿಗೆ ಪ್ರತಿಯಾಗಿ ಅಂದಿನ ಸರಕಾರ ಪ್ರತಿಕಾರ ಮಾಡಬೇಕಿತ್ತು, ಯಾಕೆ ಮಾಡಿಲ್ಲ. ಇಂದಿನ ಸರಕಾರದ ನೀವು ಪಟ್ಟಿ ಮಾಡಿದ ವಿಫಲತೆಗಳು ಗೆಲ್ಲುವುದು ಎಲ್ಲಿ ಗೊತ್ತೇ
ನಿಮ್ಮ ಹಿಂದಿನ ಸರಕಾರದ ದೇಶದ ಬಗ್ಗೆ ಅಸಡ್ಡೆ. ಒಲ್ಯೆಕೆ ರಾಜಕಾರಣ
ಭ್ರಷ್ಟಾಚಾರ. ಕುಟುಂಬ ವ್ಯಾಮೋಹ