ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಪ್ರತಿ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 180 ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಕಷ್ಟಪಡುತ್ತಿದ್ದು, ಪ್ರಧಾನಿ ಮೋದಿ ತಮ್ಮ ಹಿಂದಿನ ‘ಅದೇ ಹಿಂದೂ-ಮುಸ್ಲಿಂ ಮಾತುಗಳನ್ನು ಪ್ರತಿಧ್ವನಿಸುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ತಿಳಿಸಿದ್ದಾರೆ.
ನವದೆಹಲಿಯ ಎಐಸಿಸಿ ಮುಖ್ಯ ಕಚೇರಿಯಲ್ಲಿ ಮಾತನಾಡಿದ ಸುಪ್ರಿಯಾ ಅವರು, ಬಿಜೆಪಿ ನಿರಂತರವಾಗಿ ತನ್ನ ಮೂಲ ನೆಲೆ ಕಳೆದುಕೊಳ್ಳುತ್ತಿದ್ದು, ಪ್ರಧಾನಿಯ ಹೇಳಿಕೆಗಳು ಮುಸ್ಲಿಂ ಸಮುದಾಯದ ಬಗ್ಗೆಯೆ ಮರುಕಳಿಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯನ್ನು ವಿಸ್ತೃತವಾಗಿ ಚರ್ಚಿಸಿದ್ದು,ಇದು ದೇಶದ ಭವಿಷ್ಯದ ನೀಲನಕ್ಷೆ ಎಂದು ಸುಪ್ರಿಯಾ ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?
“10 ವರ್ಷ ಅಧಿಕಾರ ನಡೆಸಿದ ನಂತರ ಚುನಾವಣೆಗಳು ಹೊಸ್ತಿಲಲ್ಲಿ ಇರುವ ಸಂದರ್ಭದಲ್ಲಿ ತಮ್ಮ ಸಾಧನೆಯನ್ನು ಮತದಾರರಿಗೆ ತಿಳಿಸಲು ಪ್ರಧಾನಿ ಅವರಿಗೆ ನಡುಕವಾಗುತ್ತಿದೆ. ಇವರು ಮತ್ತೆ ಹಿಂದೂ-ಮುಸ್ಲಿಂ ಮಾತುಗಳನ್ನು ಪ್ರತಿಧ್ವನಿಸುತ್ತಿದ್ದಾರೆ” ಎಂದು ಸುಪ್ರಿಯಾ ಅವರು ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡರು.
“ಕಾಂಗ್ರೆಸ್‌ನ ಪ್ರಣಾಳಿಕೆ ನ್ಯಾಯದ ಐದು ಆಧಾರಸ್ತಂಭಗಳ ಆಧಾರದ ಮೇಲಿರುವ ಧ್ವನಿಯಾಗಿದೆ.ಇದು ದೇಶದ ಜನರಿಗೆ ಅಳಿಸಲಾಗದ ಮುದ್ರೆಯಾಗಿದೆ. ಇದು ಭಾರತ್ ಜೋಡೋ ಯಾತ್ರೆ ಹಾಗೂ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ನಮ್ಮನ್ನು ಒಗ್ಗೂಡಿಸಿದ ಕೋಟ್ಯಂತರ ಜನರ ನಿರೀಕ್ಷೆಗಳು, ಭರವಸೆಗಳು ಹಾಗೂ ಸವಾಲುಗಳಾಗಿವೆ” ಎಂದು ಹೇಳಿದರು.
“ ಈ ಮುದ್ರೆಯು 10 ವರ್ಷದಲ್ಲಿ ಕಳೆದುಕೊಂಡ ಉತ್ಸಾಹವನ್ನು ಹೊಸ ಭರವಸೆಯೊಂದಿಗೆ ಉದಯಿಸುತ್ತದೆ. ಇದು ಯುವಕರ, ರೈತರ, ಮಹಿಳೆಯರ ಕಾರ್ಮಿಕರ ಮುದ್ರೆಯಾಗಿದ್ದು, ಈ ಮುದ್ರೆಯಿಂದ ಸಮಾಜದ ಅಂಚಿನಲ್ಲಿರುವ ಜನರು ಖಂಡಿತವಾಗಿಯು ಮುಂದೆ ಬರುವುದಲ್ಲದೆ ಹೆಚ್ಚಿನ ಪ್ರಾತಿನಿಧ್ಯ ಕಂಡುಕೊಳ್ಳಲಿದ್ದಾರೆ” ಎಂದು ಸುಪ್ರಿಯಾ ಶ್ರೀನಾಥೆ ತಿಳಿಸಿದರು.
ಕಾಂಗ್ರೆಸ್ ನ್ಯಾಯಪತ್ರವು ಮೋದಿ ಸರ್ಕಾರ ದೇಶದಲ್ಲಿ 10 ವರ್ಷ ವಿಧಿಸಿದ್ದ ಪ್ರತಿಯೊಬ್ಬರ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ. ಈ ನ್ಯಾಯ ಪತ್ರ ಭಾರತದ ಜನರ ಧ್ವನಿ, ದೇಶದ ಧ್ವನಿ” ಎಂದು ಸುಪ್ರಿಯಾ ಹೇಳಿದರು.
