ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಪರವಾಗಿ ಎರಡನೇ ದಿನ ಬಿರುಸಿನ ರೋಡ್ ಶೋ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ಹೊರಹಾಕಿದರು.
“ಪಾರ್ಲಿಮೆಂಟಿನಲ್ಲಿ ಕನ್ನಡಿಗರ ಪರ ಧ್ವನಿ ಎತ್ತದ ತೇಜಸ್ವಿ ಸೂರ್ಯ ಯಾವ ಮುಖ ಇಟ್ಕೊಂಡು ಮತ ಕೇಳುತ್ತಿದ್ದಾರೆ. ಬೆಂಗಳೂರಿನ ಕುಡಿಯುವ ನೀರಿಗೆ ಮೇಕೆದಾಟು ಆಗಬೇಕು. ಕೇಂದ್ರದಲ್ಲಿ ಮೇಕೆದಾಟುಗೆ ಅನುಮತಿ ಸಿಗಬೇಕಾದ್ರೆ ಸೌಮ್ಯರೆಡ್ಡಿ ಗೆಲ್ಲಬೇಕು” ಎಂದು ಸಿ.ಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಬೆಂಗಳೂರು ದಕ್ಷಿಣದಲ್ಲಿ ಕುಡಿಯುವ ನೀರಿಗೆ ಕಾವೇರಿ ಸಂಪರ್ಕ ಇನ್ನಷ್ಟು ಆಗಬೇಕಿದೆ. ಈಗ ಆಗಿರುವುದು ಶೇ. 60 ರಷ್ಟು ಮಾತ್ರ. ಆದ್ದರಿಂದ ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ಸೌಮ್ಯರೆಡ್ಡಿ ಅವರ ಗೆಲುವು ಅತ್ಯಗತ್ಯ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಸೌಮ್ಯರೆಡ್ಡಿಗೆ ಅನ್ಯಾಯವಾಗಿದೆ. ಕೋರ್ಟ್ ನಲ್ಲಿ ನ್ಯಾಯ ಸಿಗುತ್ತದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಜನತಾ ನ್ಯಾಯಾಲಯದಲ್ಲಿ ನೀವು ನ್ಯಾಯ ಕೊಡಿ ಎಂದು ಸಿ.ಎಂ.ಸಿದ್ದರಾಮಯ್ಯ ಮನವಿ ಮಾಡಿದರು.