ತಿರುನಲ್ವೇಲಿ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ಸರಿಯಾಗಿ ಪಾಲಿಸುತ್ತಿಲ್ಲ. ಅವರು ಸಂತ್ರಸ್ತ ದಲಿತರನ್ನು ರಾಜಿ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದಾರೆ ಎಂದು ಮಾಜಿ ಐಎಎಸ್ ಅಧಿಕಾರಿ ಮತ್ತು ಸಮೂಗ ಸಮತುವ ಪದೈ ಸಂಸ್ಥಾಪಕ ಪಿ ಶಿವಕಾಮಿ ಹೇಳಿದ್ದಾರೆ.
2023ರ ಆಗಸ್ಟ್ನಲ್ಲಿ ತಮಿಳುನಾಡಿನ ತಿರುನಲ್ವೇಲಿ ಬಳಿಯ ನಂಗುನೇರಿಯಲ್ಲಿ ಕೆಲವು ಶಾಲಾ ವಿದ್ಯಾರ್ಥಿಗಳು ದಲಿತರ ಮೇಲೆ ಹಲ್ಲೆ ನಡೆಸಿದ್ದರು. ಜಾತಿ ದೌರ್ಜನ್ಯಕ್ಕೊಳಗಾದ ಸಂತ್ರಸ್ತರನ್ನು ಭೇಟಿ ಮಾಡಿದ್ದ ಶಿವಕಾಮಿ ಅವರು ತಮ್ಮ ಶಿಫಾರಸ್ಸುಗಳನ್ನು ನ್ಯಾಯಮೂರ್ತಿ ಕೆ ಚಂದ್ರು ನೇತೃತ್ವದ ಆಯೋಗಕ್ಕೆ ನೀಡಲು ತಿರುನಲ್ವೇಲಿಗೆ ತೆರಳಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕಾಮಿ, “ಎಫ್ಐಆರ್ನಲ್ಲಿ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ಗಳನ್ನು ಉಲ್ಲೇಖಿಸುವುದನ್ನು ತಪ್ಪಿಸಲು ಜಿಲ್ಲೆಯ ಪೊಲೀಸರು ತಮಗೆ ಬೇಕಾದಂತೆ ದೂರುಗಳನ್ನು ಬರೆಯಲು ದಲಿತ ದೂರುದಾರರಿಗೆ ಒತ್ತಾಯಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ 15 ಮಂದಿ ಮಧ್ಯಮ ಜಾತಿಯ ಆರೋಪಿಗಳ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ. ಪ್ರಕರಣದಲ್ಲಿ ರಾಜಿ ಮಾಡಿಸುವ ಉದ್ದೇಶದಿಂದ ಪೊಲೀಸರು ಕೆಲವು ದಲಿತರ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದಾರೆ” ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪರಿಸರ ಸಚಿವಾಲಯದ ಸಮಿತಿಗೆ ಅದಾನಿ ಕಂಪನಿ ಉದ್ಯೋಗಿ: ‘ದೋಸ್ತಿ ಎಂದರೆ ಹೀಗಿರಬೇಕು’ ಎಂದ ವಿಪಕ್ಷಗಳು
“ಜಿಲ್ಲೆಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ತಾತ್ಕಾಲಿಕ ವಿದ್ಯುತ್ ಕೆಲಸಗಾರ ಎಸಕ್ಕಿಮುತ್ತು ಅವರು ಇತ್ತೀಚೆಗೆ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದಾಗ ಮಧ್ಯಮ ಜಾತಿಯ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ವಿದ್ಯುತ್ ಪ್ರವಹಿಸಿ ಹತ್ಯೆಗೈದಿದ್ದರು. ಆದರೆ, ಪೊಲೀಸರು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರಾಕರಿಸಿದ್ದರು. ಬದಲಿಗೆ ಪ್ರಕರಣವನ್ನು ಅಪಘಾತವೆಂದು ದಾಖಲಿಸಿಕೊಂಡಿದ್ದರು” ಎಂದು ಅವರು ವಿವರಿಸಿದ್ದಾರೆ.