ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದು, ಮೊದಲ ಪಟ್ಟಿಯಲ್ಲಿ ಕೇರಳ, ಕರ್ನಾಟಕ, ತೆಲಂಗಾಣ, ಛತ್ತೀಸ್ಗಢ ಹಾಗೂ ಲಕ್ಷದ್ವೀಪಕ್ಕೆ ಸ್ಥಾನ ನೀಡಲಾಗುತ್ತದೆ ಎಂದು ತಿಳಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕಾಂಗ್ರೆಸ್ ಚುನಾವಣಾ ಸಮಿತಿ ನಿನ್ನೆ(ಮಾ.07) ಮೊದಲ ಸಭೆ ಏರ್ಪಡಿಸಿದ್ದು 10 ರಾಜ್ಯಗಳಲ್ಲಿ ಆರು ರಾಜ್ಯಗಳ ಅಭ್ಯರ್ಥಿಗಳನ್ನು ನಿರ್ಣಯಿಸಲಾಗಿದೆ. ಔಪಾಚಾರಿಕ ಘೋಷಣೆಯನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಿಳಿಸಿದರು.
“ಕೇರಳ, ಕರ್ನಾಟಕ, ತೆಲಂಗಾಣ, ಛತ್ತೀಸ್ಗಢ, ದೆಹಲಿ ಹಾಗೂ ಲಕ್ಷದ್ವೀಪ ರಾಜ್ಯಗಳ ಸ್ಥಾನಗಳನ್ನು ಅಂತಿಮಗೊಳಿಲಾಗಿದೆ. ಕಾರ್ಯವಿಧಾನ ಮುಂದುವರಿಯುತ್ತಿದೆ. ಔಪಾಚಾರಿಕ ಘೋಷಣೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ” ಎಂದು ವೇಣುಗೋಪಾಲ್ ತಿಳಿಸಿದರು.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸ್ಪರ್ಧಿಸಲಿದ್ದಾರೆ. ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ರಾಜನಂದಗಾವ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕೇರಳದಿಂದ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಒಳಗೊಂಡು 16 ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ಒಂದು ನೆನಪು | ಲಂಕೇಶರಿಗೆ ‘ಪತ್ರಿಕೆ’ ಜೀವನ್ಮರಣದ ಪ್ರಶ್ನೆಯಾಗಿತ್ತೇ?
ಕರ್ನಾಟಕದಲ್ಲಿ ಸಚಿವರು ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಬಹುತೇಕ ಸಚಿವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿಲ್ಲ. ಇಲ್ಲಿಯವರೆಗೂ ಒಬ್ಬರು ಸಚಿವರು ಮಾತ್ರ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದಾರೆ.
ಪ್ರಕಟಗೊಳ್ಳುವ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಡಿಸಿಎಂ ಸಹೋದರ ಹಾಲಿ ಸಂಸದ ಡಿ ಕೆ ಸುರೇಶ್ ಅವರ ಹೆಸರು ಬಹುತೇಕ ಇರಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ಕಲಬುರಗಿಯಲ್ಲಿ ಸ್ಪರ್ಧಿಗಳ ಹೆಸರು ಅಂತಿಮಗೊಂಡಿಲ್ಲ.
ಮೊದಲ ಪಟ್ಟಿಯಲ್ಲಿ ಕೇರಳ, ಕರ್ನಾಟಕ, ತೆಲಂಗಾಣ, ಛತ್ತೀಸ್ಗಢ, ದೆಹಲಿ ಹಾಗೂ ಲಕ್ಷದ್ವೀಪ ರಾಜ್ಯಗಳನ್ನು ಪರಿಗಣಿಸಲಾಗಿದ್ದು, ಎರಡನೇ ಸುತ್ತಿನ ಪಟ್ಟಿ ಪ್ರಕಟಣೆಯಲ್ಲಿ ಈಶಾನ್ಯ ರಾಜ್ಯಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗುತ್ತದೆ.
90 ಕ್ಷೇತ್ರಗಳನ್ನು ಒಳಗೊಂಡಿರುವ ನಿರ್ಣಾಯಕ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಇನ್ನು ಅಂತಿಮಗೊಂಡಿಲ್ಲ. ಆದರೂ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ಕಸರತ್ತು ನಡೆಯುತ್ತಿದೆ.
