ಒಂದು ನೆನಪು | ಲಂಕೇಶರಿಗೆ ‘ಪತ್ರಿಕೆ’ ಜೀವನ್ಮರಣದ ಪ್ರಶ್ನೆಯಾಗಿತ್ತೇ?

Date:

ಪಿ. ಲಂಕೇಶ್‌ ಕರ್ನಾಟಕ ಕಂಡ ಮೇರು ವ್ಯಕ್ತಿತ್ವ. ಮಾರ್ಚ್‌ ಎಂಟು ಲಂಕೇಶರ ಜನ್ಮದಿನ. ಲಂಕೇಶರಿಗೆ ‘ಪತ್ರಿಕೆ’ ಎನ್ನುವುದು ಜೀವನ್ಮರಣದ ಪ್ರಶ್ನೆಯಾಗಿತ್ತು. ಅದರ ಸುತ್ತಲಿನ ಒಂದು ನೆನಪು…

”ವಿದಾಯದ ಬಗ್ಗೆ ನೋವನ್ನನುಭವಿಸುವುದರ ಜೊತೆಗೇ ವಿದಾಯದ ಅನಿವಾರ್ಯತೆಯನ್ನು ಅರಿಯದ ಮನುಷ್ಯ ನಾಶವಾಗುತ್ತಾನೆ. ಪ್ರೀತಿ ಮತ್ತು ಸಂಬಂಧವನ್ನು ಹೊಂದಿದ ಮನುಷ್ಯ ತನ್ನ ಉದ್ಯೋಗ, ಪರಿಸರದೊಂದಿಗೆ ಪ್ರಯೋಗ ನಡೆಸದಿದ್ದರೆ ನಶಿಸುತ್ತಾ ಹೋಗುತ್ತಾನೆ. ಸಮರ್ಪಣೆ ಮತ್ತು ಸ್ವಾತಂತ್ರ್ಯ ಇವೆರಡರ ಅರ್ಥ ಅರಿತವನು ಮಾತ್ರ ವಿದಾಯದ ನೋವು ಮತ್ತು ಪ್ರಯೋಗದ ರೋಮಾಂಚನ ಎರಡನ್ನೂ ಅನುಭವಿಸುತ್ತಾನೆ.”

ಇದು ಪಿ. ಲಂಕೇಶರು, ಪ್ರತಿವಾರ ಬರೆಯುತ್ತಿದ್ದ ‘ಟೀಕೆ-ಟಿಪ್ಪಣಿ’ ಅಂಕಣದಲ್ಲಿ ‘ವಿದಾಯ’ ಎಂಬ ಶೀರ್ಷಿಕೆಯಡಿ 1990ರ ಸೆಪ್ಟೆಂಬರ್ 2ರಂದು ಬರೆದದ್ದು. ಇದನ್ನು ಓದುತ್ತಿದ್ದಂತೆ ಮನಸ್ಸು ಮೂವತ್ನಾಲ್ಕು ವರ್ಷಗಳ ಹಿಂದಕ್ಕೆ ಜಾರಿತು. ಆಗ ನಡೆದ ಘಟನೆಗಳೆಲ್ಲ ಒಂದೊಂದಾಗಿ ನೆನಪಾಗತೊಡಗಿದವು.

ಇದನ್ನೇ ಏಕೆ ಮತ್ತೆ ಓದಿದೆನೆಂದರೆ, ಆ ವಿದಾಯ ನನ್ನದೂ ಆಗಿತ್ತು. ಅಂದಿನ ನನ್ನ ಸ್ಥಿತಿ ಧ್ಯಾನಿಸಿದ ಲಂಕೇಶರು, ಅದನ್ನು ಅವರ ಪ್ರತಿಭೆ ಬಳಸಿ ಬರಹಕ್ಕಿಳಿಸಿದ್ದರು. ಅಸಲಿಗೆ ಲಂಕೇಶರು ಕೂಡ ಆ ಕ್ಷಣದಲ್ಲಿ ಆ ವಿದಾಯದ ಗುಂಗಿನಲ್ಲೇ ಇದ್ದರು. ಆ ವಿದಾಯ ನನಗೆ ಹೊಸದು. ಆದರೆ ಅವರು ಅಂತಹ ಹತ್ತಾರು ವಿದಾಯದ ನೋವನ್ನು ನುಂಗಿಕೊಂಡಿದ್ದರು, ಹೊಸ ಪ್ರಯೋಗದ ರೋಮಾಂಚನದ ಸವಿಯನ್ನು ಉಂಡಿದ್ದರು. ಅದು ಅವರ ಬದುಕಿನಲ್ಲಿ ಬಂದು ಹೋಗುತ್ತಲೇ ಇತ್ತು. ಆ ವಾರದ ಅಂಕಣ ಬರಹ, ನನ್ನ ಭವಿಷ್ಯದ ಬದುಕಿಗೆ ಪಠ್ಯವಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜುಲೈ 6, 1980ರಲ್ಲಿ ಬಸವನಗುಡಿಯ ಗೋವಿಂದಪ್ಪ ರಸ್ತೆಯಲ್ಲಿ ಶುರುವಾದ ‘ಲಂಕೇಶ್ ಪತ್ರಿಕೆ‘ ಹತ್ತು ವರ್ಷಗಳ ಅಂತರದಲ್ಲಿ ನಾಡಿನ ಜನರ ಪ್ರೀತಿಗೆ ಪಾತ್ರವಾಗಿತ್ತು. ಭಿನ್ನ ಬಗೆಯ ಆಯ್ಕೆ, ಅಭಿರುಚಿ ಮತ್ತು ಬರಹದಿಂದಾಗಿ ಅತ್ಯಧಿಕ ಪ್ರಸಾರವುಳ್ಳ ಪತ್ರಿಕೆಯಾಗಿ ಹೊರಹೊಮ್ಮಿತ್ತು. ‘ಪತ್ರಿಕೆ’ಯ ಮಾರಾಟದಿಂದ ಬಂದ ಹಣ ಮತ್ತು ಖ್ಯಾತಿಯಿಂದ ಲಂಕೇಶರು, 1990ರಲ್ಲಿ ಪತ್ರಿಕೆಯ ಹೊಸ ಕಚೇರಿ ಕಟ್ಟಡಕ್ಕಾಗಿ ಬಸವನಗುಡಿಯ ಇಎಟಿ ರಸ್ತೆಯಲ್ಲಿ ಜಾಗ ಖರೀದಿಸಿ, ಹೊಸ ಬಿಲ್ಡಿಂಗ್ ಕಟ್ಟಿ, ಅಲ್ಲಿಗೆ ಅಡಿಯಿಟ್ಟಿದ್ದರು.

ಆ ಸಂದರ್ಭದಲ್ಲಿ, ‘ಪತ್ರಿಕೆ’ ಉತ್ತುಂಗದಲ್ಲಿದ್ದ ಕಾಲದಲ್ಲಿ, ಸಣ್ಣದಾಗಿ ಕಾರ್ಮಿಕರ ಸಮಸ್ಯೆ ಶುರುವಾಯಿತು. ಆರಂಭದಿಂದ ‘ಪತ್ರಿಕೆ’ಯನ್ನು ಮೊಳೆ ಜೋಡಿಸುವ- ಹ್ಯಾಂಡ್ ಕಂಪೋಸಿಂಗ್‌ನಿಂದ ರೂಪಿಸುತ್ತಿದ್ದ ವಿಧಾನದಿಂದ ಲಂಕೇಶರು ಹೊಸ ಪ್ರಯೋಗದತ್ತ ಗಮನ ಹರಿಸಿದರು. ಕಂಪೋಸಿಂಗ್‌ಗೆ ಬದಲಿಗೆ ಕಂಪ್ಯೂಟರ್ ಬಳಸಿ ‘ಪತ್ರಿಕೆ’ ರೂಪಿಸುವ ಹೊಸ ಆವಿಷ್ಕಾರ ಅಳವಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.

ಇದರಿಂದ ಇಪ್ಪತ್ನಾಲ್ಕು ಜನ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಯಿತು. ಲಂಕೇಶರಿಂದ ಸಮಾಜವಾದಿ ಪಾಠ ಕಲಿತ ಅವರ ಸಹೋದ್ಯೋಗಿಗಳೇ, ಅವರ ನಿರ್ಧಾರವನ್ನು ಪ್ರಶ್ನಿಸತೊಡಗಿದರು. ಕಾರ್ಮಿಕರೆಲ್ಲ ಒಂದಾಗಿ ಲಂಕೇಶರ ವಿರುದ್ಧ ಸಿಡಿದೆದ್ದು ನಿಂತರು. ಲಂಕೇಶರ ಬಸವನಗುಡಿಯಲ್ಲಿ ಲಂಕೇಶರ ವಿರುದ್ಧವೇ ಪ್ರತಿಭಟಿಸಿದರು.

ಇದನ್ನು ಓದಿದ್ದೀರಾ?: ಹಿಂದೂಸ್ಥಾನ್ ಕೋ ಲೀಡರೋ ಸೆ ಬಚಾವೋ: ಎಲ್ಲ ಕಾಲಕ್ಕೂ ಸಲ್ಲುವ ಮಂಟೋ ಚಿಂತನೆ 

ಆದರೆ, ಅದರಿಂದ ಲಂಕೇಶರು ವಿಚಲಿತರಾಗಲಿಲ್ಲ. ಅಂತಹ ವಿರೋಧ, ಪ್ರತಿಭಟನೆಗೆ ಮಾನಸಿಕವಾಗಿ ಸಿದ್ಧರಾಗಿದ್ದರು. ‘ಪತ್ರಿಕೆ’ಯಿಂದ ಹೊರ ಹೋಗುವವರು ಮತ್ತು ಒಳ ಬರುವವರು ಅವರಿಗೆ ಸಾಮಾನ್ಯವಾಗಿತ್ತು. 1980ರಿಂದ 1990ರವರೆಗೆ, ಅಂತಹ ಹಲವು ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದರು. ಮತ್ತು ಅಂತಹ ಪಲ್ಲಟಗಳನ್ನು ಅವರು ಸಮರ್ಥವಾಗಿಯೇ ನಿಭಾಯಿಸಿ ‘ಪತ್ರಿಕೆ’ಯನ್ನು ಮುನ್ನಡೆಸಿದ್ದರು.

ಕಾರ್ಮಿಕರಿಂದ ವಿರೋಧ ವ್ಯಕ್ತವಾದಾಗಲೂ, ಅವರಿಗೆ ಕೊಡಬೇಕಾದ ಪರಿಹಾರದ ಮೊತ್ತವನ್ನು ಕೊಟ್ಟು ಗೌರವದಿಂದಲೇ ನಡೆಸಿಕೊಂಡಿದ್ದರು. ಆದರೆ ಅದು, ಹೊರಗಿನ ಪ್ರಪಂಚಕ್ಕೆ- ಹೇಳುವುದು ಒಂದು ಮಾಡುವುದು ಇನ್ನೊಂದು- ಎಂಬ ರೀತಿಯಲ್ಲಿ ಕಂಡಿತು. ಅದೇ ಸಮಯಕ್ಕೆ ಸರಿಯಾಗಿ ಲಂಕೇಶರ ಕಾರು-ಬಾರು ಕೂಡ ಜೋರಾಗಿತ್ತು. ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳಲಾಗದ ಕೆಲ ಅತೃಪ್ತ ಆತ್ಮಗಳು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡವು. ಲಂಕೇಶರ ಏರುಗತಿಗೆ ಆ ಘಟನೆ ಕೊಂಚ ಕಡಿವಾಣ ಹಾಕಿತ್ತು.

ಆ ಸಂದಿಗ್ಧ ಸಮಯದಲ್ಲಿ ನಾನು ‘ಪತ್ರಿಕೆ’ಯ ಸಂಪಾದಕೀಯ ವಿಭಾಗದೊಳಕ್ಕೆ ಪ್ರವೇಶ ಪಡೆದಿದ್ದೆ. ಅಲ್ಲಿಯವರೆಗೆ, ಅಂದರೆ 1980ರಿಂದ 90ರವರೆಗೆ, ಹತ್ತು ವರ್ಷಗಳ ಕಾಲ, ಒಂದೇ ಒಂದು ಸಂಚಿಕೆಯನ್ನು ಬಿಡದೇ ಪತ್ರಿಕೆಯ ಮಾರಾಟ ಮಾಡಿದ್ದೆ. 90ರ ಅಕ್ಟೋಬರ್‍‌ನಿಂದ ಪತ್ರಿಕೆಯನ್ನು ರೂಪಿಸುವ ತಂಡದಲ್ಲಿ ಒಬ್ಬನಾದೆ. ಆಗ ನನಗೆ ಜೊತೆಯಾದವರು ಹಿರಿಯರಾದ ಎನ್.ಎಸ್. ಶಂಕರ್. ಅದಾಗಲೇ ಅವರು ‘ಪ್ರಜಾವಾಣಿ, ಮುಂಗಾರು, ಸುದ್ದಿ ಸಂಗಾತಿ’ಗಳಲ್ಲಿ ಕೆಲಸ ಮಾಡಿ, ಪತ್ರಿಕೋದ್ಯಮದಲ್ಲಿ ಪಳಗಿದವರಾಗಿದ್ದರು. ಆ ನಂತರ ಪತ್ರಿಕೆಗೆ ಬಂದಿದ್ದರು. ಕಂಪ್ಯೂಟರ್ ಬಗ್ಗೆ ಅರಿತಿದ್ದರು, ಅದರಿಂದ ಪತ್ರಿಕೆ ರೂಪಿಸುವ ಕೆಲಸದಲ್ಲಿ ನಿಪುಣರಾಗಿದ್ದರು.

ಅದಕ್ಕೂ ಮುನ್ನ, ಹ್ಯಾಂಡ್ ಕಂಪೋಸಿಂಗ್ ಇದ್ದಾಗ ಪತ್ರಿಕೆಯನ್ನು ಅಚ್ಚುಕಟ್ಟಾಗಿ ರೂಪಿಸುತ್ತಿದ್ದವರು, ಸತ್ಯಮೂರ್ತಿ ಆನಂದೂರು, ಚಂದ್ರಶೇಖರ ಗುಬ್ಬಿ ಮತ್ತು ಪಂಜು ಗಂಗೂಲಿ. ಅವರ ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆ ಕಂಡ ಲಂಕೇಶರು, ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ‘ನಮ್ಮ ಹುಡುಗ್ರು’ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ, ಲಂಕೇಶರು ಕಂಪ್ಯೂಟರ್ ಅಳವಡಿಸಲು ಯೋಚಿಸಿ, ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ನಿರ್ಧಾರಕ್ಕೆ ಬಂದಾಗ, ಅವರು ಕಾರ್ಮಿಕರ ಪರ ನಿಂತರು. ಅವರಿಗೆ, ಅವತ್ತಿಗೆ ಅವರ ನಿಲುವು ಸರಿಯಾಗಿತ್ತು. ಹಾಗೆಯೇ ಲಂಕೇಶರಿಗೂ, ಹೊಸಗಾಲಕ್ಕೆ ತಕ್ಕಂತೆ ಪತ್ರಿಕೆಯಲ್ಲಿ ಬದಲಾವಣೆ ತರುವುದು ಕೂಡ ಸರಿ ಎನಿಸಿತ್ತು. ಅದು ಅವತ್ತಲ್ಲದಿದ್ದರೂ ಮುಂದೊಂದು ದಿನ ಆಗಲೇಬೇಕಾದ ಬದಲಾವಣೆಯಾಗಿತ್ತು. ಈ ಸರಿ-ತಪ್ಪುಗಳ ನಡುವೆ, ಅವರ ನಡೆ ಲಂಕೇಶರನ್ನು ಸಿಟ್ಟಿಗೇಳಿಸಿತು. ಬಿರುಕು ಹೆಚ್ಚಾಗಿ ಸಂಬಂಧ ಬಿಗಡಾಯಿಸಿತು. ಮಾತುಕತೆ ಇಲ್ಲದಾಯಿತು. ಹಳೆಯ ತಂಡ ಸಂಪೂರ್ಣವಾಗಿ ಪತ್ರಿಕೆಯಿಂದ ಹೊರನಡೆಯಿತು.

ಇದನ್ನು ಓದಿದ್ದೀರಾ?: ಹೊಸ ಓದು | ಓದಲೇಬೇಕಾದ ಬಿ.ಟಿ. ಜಾಹ್ನವಿಯವರ ‘ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ’

ಆ ಕ್ಷಣದಲ್ಲಿ ಲಂಕೇಶರ ಮನಸ್ಥಿತಿ ಪ್ರಕ್ಷುಬ್ಧಗೊಂಡಿತ್ತು. ಅವರ ಸಿಟ್ಟಿನ, ಸಿಡುಕಿನ ಸ್ವಭಾವಕ್ಕೆ ಬೆಂಕಿ ಬಿದ್ದಿತ್ತು. ಗಳಿಗೆಗೊಂದು ಸಿಗರೇಟ್ ಸುಡುತ್ತ, ಬುಸು ಬುಸುನೆ ಸೇದಿ ಬಿಸಾಕುತ್ತ, ಅತ್ತಿಂದಿತ್ತ ಓಡಾಡುತ್ತ ದುಮುಗುಡುತ್ತಿದ್ದರು. ಅಂತಹ ಸಂದರ್ಭದಲ್ಲಿಯೇ ನನ್ನನ್ನು ಮತ್ತು ಶಂಕರ್ ಅವರನ್ನು ಕರೆದ ಲಂಕೇಶರು, ‘ಅದೇನ್ಮಾಡ್ತಿರೋ ಗೊತ್ತಿಲ್ಲ, ಮಂಗಳವಾರ ಬೆಳಗ್ಗೆ ಪತ್ರಿಕೆ ನನ್ನ ಟೇಬಲ್ ಮೇಲಿರಬೇಕು’ ಎಂದು ಕೊಂಚ ಗಡುಸು ಧ್ವನಿಯಲ್ಲಿ ಆದೇಶಿಸಿದರು. ಮರು ಮಾತನಾಡುವಂತಿಲ್ಲ, ನಮ್ಮ ಮೌನ ಸಮ್ಮತಿ ಅಲ್ಲ, ಅದನ್ನೂ ಹೇಳುವಂತಿಲ್ಲ.

ಪತ್ರಿಕೆಗೆ ಅದು ಸಂಕ್ರಮಣ ಕಾಲ. ಕೈಯಿಂದ ಮೊಳೆ ಜೋಡಿಸುವಿಕೆ ಬಿಟ್ಟು ಕಂಪ್ಯೂಟರ್‍‌ನಿಂದ ಪುಟವಿನ್ಯಾಸ ಮಾಡುವ ಹೊಸ ಬದಲಾವಣೆಗೆ ಒಗ್ಗಿಕೊಳ್ಳಬೇಕಾದ ಹೊತ್ತು. ನಾನು ಹಳ್ಳಿಯಿಂದ ಬಂದ ಹುಡುಗ. ಅಲ್ಲಿಯವರೆಗೂ ಕಂಪ್ಯೂಟರ್ ಹೇಗಿರುತ್ತದೆಂದು ಗೊತ್ತಿಲ್ಲ, ಮುಟ್ಟಿಯೂ ನೋಡಿರಲಿಲ್ಲ. ಅದರ ಮುಂದೆ ಕೂರಿಸಿದ ಮೇಸ್ಟ್ರು, ‘ಮಾಡು’ ಎಂದರು. ಪಕ್ಕದಲ್ಲಿದ್ದ ಶಂಕರ್ ಶಕ್ತಿ ತುಂಬಿದರು. ಶಂಕರ್‍‌ಗೆ ಕಂಪ್ಯೂಟರ್ ಗೊತ್ತಿತ್ತು. ಆದರೆ ಪತ್ರಿಕೆಯ ಪುಟವಿನ್ಯಾಸಕ್ಕೆ ಕೈಹಾಕಿರಲಿಲ್ಲ. ಟ್ಯಾಬ್ಲಾಯ್ಡ್ ಪತ್ರಿಕೆಯ ಎ3 ಸೈಜಿನ ಒಂದು ಪುಟಕ್ಕೆ ಎಷ್ಟು ಪದಗಳು ಬೇಕು; ಹೆಡ್ಡಿಂಗ್-ಇಂಟ್ರೋ-ಫೋಟೋಗಳಿಗೆ ಜಾಗ ಬಿಟ್ಟು ವಿನ್ಯಾಸ ಮಾಡುವುದು ಹೇಗೆ- ಕರಾರುವಾಕ್ಕು ಲೆಕ್ಕ ಇಲ್ಲ.

ಏನಾದರಾಗಲಿ ಎಂದು ಅಗತ್ಯಕ್ಕಿಂತ ಹೆಚ್ಚು ಸುದ್ದಿ/ಲೇಖನಗಳನ್ನು ಕಂಪೋಸ್, ಕರೆಕ್ಷನ್, ಎಡಿಟ್ ಮಾಡಿಟ್ಟುಕೊಂಡು, ಅದಕ್ಕೆ ಬೇಕಾದ ಫೋಟೋಗಳನ್ನು ಮೊದಲೇ ಪಾಸಿಟಿವ್ ಮಾಡಿಸಿಕೊಂಡು, ಕೆಲ ಹೆಡ್ಡಿಂಗ್‌ಗಳನ್ನು ನೆಗಟಿವ್ ಮಾಡಿಟ್ಟುಕೊಂಡು ತಯಾರಾಗಿ ನಿಂತೆವು. ಯಾವ್ಯಾವ ಪೇಜಿಗೆ ಯಾವ್ಯಾವ ಸುದ್ದಿ/ಲೇಖನ/ಕವನ ಬರಬೇಕೆಂದು, 20 ಪುಟದ ಡಮ್ಮಿ ತಯಾರಿಸಿಕೊಂಡೆವು.

ಆ ಪ್ರಕ್ಷುಬ್ಧ ಗಳಿಗೆಯಲ್ಲೂ ಲಂಕೇಶರು ಎಂದಿನಂತೆ ಟೀಕೆಟಿಪ್ಪಣಿ, ಮರೆಯುವ ಮುನ್ನ, ಈ ಸಂಚಿಕೆ, ಛೇ ಛೇ ಮತ್ತು ಮೂರು ನೀಲುಗಳನ್ನು ಬರೆದು ಕೊಟ್ಟಿದ್ದರು. ಎಲ್ಲವನ್ನು ಎ4 ಸೈಜಿನ ಟ್ರೇಸಿಂಗ್ ಪೇಪರ್ ಮೇಲೆ, ಕಾಲಂವೈಸ್ ಪ್ರಿಂಟ್ ಔಟ್ ತೆಗೆದುಕೊಂಡ ನಾವು, ಪೇಸ್ಟಪ್ ರಾಜಗೋಪಾಲ್‌ರನ್ನು ಕರೆದುಕೊಂಡು ಪತ್ರಿಕೆ ಪ್ರಿಂಟಾಗುತ್ತಿದ್ದ ‘ಸಂಜೆವಾಣಿ’ ಪ್ರೆಸ್‌ಗೆ ಹೋದೆವು. ನಮ್ಮ ಹಿಂದೆ ಮೇಸ್ಟ್ರು ಕೂಡ ಬಂದು, ಸಂಜೆವಾಣಿ ಮಾಲೀಕರಾದ ಮಣಿಯವರ ಚೇಂಬರ್‍‌ನಲ್ಲಿ ಕೂತು ಸಿಗರೇಟ್ ಸುಡುತ್ತಿದ್ದರು.

ಪಿ. ಲಂಕೇಶ್
ಪಿ. ಲಂಕೇಶ್

ಸಂಜೆವಾಣಿ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಪೇಸ್ಟಪ್ ರಾಜಗೋಪಾಲ್, ಪೇಸ್ಟಪ್ ಟೇಬಲ್ ಮೇಲೆ ಗ್ರಾಫ್ ಶೀಟ್ ಬಿಡಿಸಿಟ್ಟು ನಾವು ತಂದ ಟ್ರೇಸಿಂಗ್ ಪೇಪರ್‍‌ಗಳನ್ನು ಕೇಳಿದರು. ಶಂಕರ್, ಡಮ್ಮಿ ನೋಡಿ, ಇಷ್ಟಿಷ್ಟೇ ಕಟ್ ಮಾಡಿ ಅವರ ಕೈಗೆ ಕೊಡುತ್ತಿದ್ದರು. ಅದನ್ನು ಅವರು ಉಲ್ಟಾ ಅಂಟಿಸುತ್ತ, ಸೆಲೊ ಟೇಪ್ ಅಂಟಿಸುತ್ತ ಒಂದೊಂದೇ ಪುಟಗಳನ್ನು ಮುಗಿಸುತ್ತಿದ್ದರು. ಹೀಗೇ ಮಾಡ್ತಾ ಮಾಡ್ತಾ ರಾತ್ರಿ ಒಂದೂವರೆ ಆಗಿತ್ತು. ಯಾವುದೋ ಒಂದು ಪುಟದ ಕೊನೆಯಲ್ಲಿ ಸ್ವಲ್ಪ ಜಾಗ ಖಾಲಿ ಬಿತ್ತು. ಅಲ್ಲಿಗೆ ಯಾವ ಸುದ್ದಿಯನ್ನು ತುಂಬುವಂತಿರಲಿಲ್ಲ. ತುಂಬುವಂತಹ ಸುದ್ದಿಯೂ ಇರಲಿಲ್ಲ. ತಕ್ಷಣ ಶಂಕರ್, ‘ಮೇಸ್ಟ್ರತ್ರ ಒಂದು ನೀಲು ಬರ್‍ಸ್ಕೊಂಡ್ ಬನ್ನಿ’ ಎಂದರು. ನಾನು ಹೋಗಿ, ‘ಸರ್, ಒಂದು ನೀಲು ಬೇಕು’ ಎಂದೆ. ‘ಪೆನ್ ಕೊಡೋ’ ಎಂದರು. ಮತ್ತೆ ಕೆಳಗೆ ಓಡಿ ಬಂದು, ರಾಜಗೋಪಾಲ್ ಬಳಿ ಇದ್ದ ರೋಟ್ರಿಂಗ್ ಪೆನ್ನು ಮತ್ತು ಬಟರ್ ಶೀಟ್ ಪಡೆದು, ಮೇಸ್ಟ್ರ ಮುಂದೆ ಇಟ್ಟೆ. ಕಣ್ಮುಚ್ಚಿ ಬಿಡುವುದರೊಳಗೆ ನೀಲು… ರೆಡಿ. ಒಂದಲ್ಲ, ಎರಡು.

ರಾತ್ರಿ ಎರಡೂವರೆಗೆಲ್ಲ ‘ಪತ್ರಿಕೆ’ ಪ್ರಿಂಟಾಗಿ ಹೊರಗೆ ಬಂತು. ರೈಲು, ಬಸ್, ಪೋಸ್ಟಿಗೆ ಹೋಗಬೇಕಾದ್ದೆಲ್ಲ ಹೋಯಿತು. ಸಿಟಿಗೆ ಬೇಕಾದ ಕಾಪಿಗಳು ಆಫೀಸ್ ತಲುಪಿದವು. ಮಂಗಳವಾರ ಬೆಳಗ್ಗೆ ‘ಪತ್ರಿಕೆ’ ಎಂದಿನಂತೆ ಮಾರುಕಟ್ಟೆಯಲ್ಲಿತ್ತು. ಹಾಗೆಯೇ ಮೇಸ್ಟ್ರ ಟೇಬಲ್ ಮೇಲೂ ಇತ್ತು. ಅದನ್ನು ನೋಡಿ ಖುಷಿಗೊಂಡ ಮೇಸ್ಟ್ರು, ನನಗೂ ಶಂಕರ್‍‌ಗೂ ಬಿಯರ್ ಕೊಟ್ಟು ‘ಲವ್ಲಿ’ ಎಂದರು.

‘ಪತ್ರಿಕೆ’ ಪ್ರಿಂಟಾಗಿ ಸಮಯಕ್ಕೆ ಸರಿಯಾಗಿ ಬಂದಿತ್ತು. ಆದರೆ ನಮಗೆ ಖುಷಿ ಇರಲಿಲ್ಲ. ಮೇಸ್ಟ್ರ ಲವ್ಲಿ ಕೂಡ ಹುಮ್ಮಸ್ಸು ತರಲಿಲ್ಲ. ಏಕೆಂದರೆ, ಪತ್ರಿಕೆ, ಪತ್ರಿಕೆಯಾಗಿರಲಿಲ್ಲ. ಕಳೆದ ಹತ್ತು ವರ್ಷದಲ್ಲಿ ಅದು ಬಂದ ಬಗೆ ಮತ್ತು ಬಿತ್ತಿದ ಬೆರಗು ಅಲ್ಲಿರಲಿಲ್ಲ. ಆಗತಾನೆ ಪತ್ರಿಕೋದ್ಯಮಕ್ಕೆ ಬಂದ ಅಮೆಚ್ಯೂರ್‍‌ಗಳು ಮಾಡಿದಂತಿತ್ತು. ಕ್ರೂಡಾಗಿತ್ತು. ಹೇಳಿಕೊಳ್ಳಲಾಗದಷ್ಟು ಕೆಟ್ಟದಾಗಿತ್ತು. ನಮ್ಮನ್ನೇ ಅಣಕಿಸುತ್ತಿತ್ತು.

ನನಗೆ ಈ ಕ್ಷಣದಲ್ಲಿ ಅನ್ನಿಸುತ್ತಿರುವುದೇನೆಂದರೆ, 1990ರ ಅಕ್ಟೋಬರ್ ಸಂಚಿಕೆಯನ್ನು ರೂಪಿಸುವಾಗ ಲಂಕೇಶರ ವಯಸ್ಸು 55. ಒಬ್ಬ ವ್ಯಕ್ತಿ ಏರಬೇಕಾದ ಎತ್ತರಕ್ಕೆ ಲಂಕೇಶರು ಏರಿದ್ದರು. ಉತ್ತುಂಗ ಸ್ಥಿತಿ ತಲುಪಿದ್ದ ‘ಪತ್ರಿಕೆ’ ಅಪಾರ ಜನಮನ್ನಣೆ ಗಳಿಸಿತ್ತು. ಲಂಕೇಶರಿಗೆ ಹಣ, ಖ್ಯಾತಿ, ಪ್ರಚಾರ, ಪ್ರಸಿದ್ಧಿ ಎಲ್ಲವೂ ಯಥೇಚ್ಛವಾಗಿ ಸಿಕ್ಕಿತ್ತು. ಲಂಕೇಶರು ಕೂಡ, ತಮ್ಮಲ್ಲಿರುವ ಬುದ್ಧಿವಂತಿಕೆಯನ್ನೆಲ್ಲ ಬಸಿದು ತಮ್ಮ ಓದುಗರಿಗಾಗಿ ಬರೆದು, ಸಾಧನೆಯ ಶಿಖರಕ್ಕೇರಿದ್ದರು. ಸಾಹಿತಿಯಾಗಿ, ಚಿತ್ರನಿರ್ದೇಶಕರಾಗಿ, ಸಂಪಾದಕರಾಗಿ ತಮ್ಮ ಹೆಸರನ್ನು ಚಿರಸ್ಥಾಯಿಯನ್ನಾಗಿಸಿದ್ದರು.

ಬೇರೆ ಯಾರೇ ಆಗಿದ್ದರೂ, ಆ 55ರ ವಯಸ್ಸಿನಲ್ಲಿ ಪತ್ರಿಕೆಗೆ ಎದುರಾದ ಸಮಸ್ಯೆಯನ್ನೇ ನೆಪವಾಗಿಟ್ಟುಕೊಂಡು ವಿಶ್ರಾಂತಿ ಜೀವನಕ್ಕೆ ತೆರಳುತ್ತಿದ್ದರು. ಮನೆ, ಮಕ್ಕಳು, ತೋಟ, ತೆವಲು ಎಂದು ವಿದಾಯ ಹೇಳುತ್ತಿದ್ದರು. ಆದರೆ, ಲಂಕೇಶರಿಗೆ ವಿದಾಯ ಒಡ್ಡುವ ಸಮರ್ಪಣೆ ಮತ್ತು ಸ್ವಾತಂತ್ರ್ಯದ ಅರಿವಿತ್ತು. ನೋವು ಮತ್ತು ರೋಮಾಂಚನಗಳ ಅನುಭವವಿತ್ತು. ಅವುಗಳನ್ನು ಮತ್ತೆ ಮತ್ತೆ ನಿಕಷಕ್ಕೆ ಒಡ್ಡುವ ಒರಟುತನವಿತ್ತು. ಅದಕ್ಕಿಂತ ಹೆಚ್ಚಾಗಿ ‘ಪತ್ರಿಕೆ’ ಎನ್ನುವುದು ಅವರಿಗೆ ಜೀವನ್ಮರಣದ ಪ್ರಶ್ನೆಯಾಗಿತ್ತು.

ಲಂಕೇಶರು ಯಾವಾಗಲೂ, ‘ಜನ ನನಗೆ ಇಷ್ಟೆಲ್ಲ ಸುಖ, ಸಂತೋಷ ಕೊಟ್ಟಿದ್ದಾರೆ. ಅವರಿಗಾಗಿ ನನ್ನ ಬುದ್ಧಿ ಬಸಿದು ಬರೆಯದಿದ್ದರೆ, ಬದುಕು ವ್ಯರ್ಥ’ ಎನ್ನುತ್ತಿದ್ದರು. ಹೇಳಿದಂತೆಯೇ ಇಪ್ಪತ್ತು ವ‍ರ್ಷಗಳ ಕಾಲ ನಿರಂತರವಾಗಿ ಬರೆದರು. 2000ರ ಜನವರಿ ಇಪ್ಪತ್ನಾಲ್ಕರ ರಾತ್ರಿ, ಕೊನೆಯ ಸಂಚಿಕೆಯ ಕೆಲಸ ಮುಗಿಸಿಯೇ ಹೋದರು.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

4 COMMENTS

  1. ಹತ್ತಿರದಿಂದ ಬಲ್ಲ ಲಂಕೇಶರನ್ನ ಮತ್ತು ಅವರ ವ್ವಕ್ತಿತ್ವ ವನ್ನ ನಿಖರವಾಗಿ ವಾಗಿ ನಿರೊಪಿಸಿದ್ದೀರಿ ಮೆಚ್ಚಿಗೆ ಅರ್ಹ ಲೇಖನ

  2. ಅವರ ಸಿಟ್ಟು ಹಟ ಪ್ರೀತಿ.. ಲಂಕೇಶರೊಡನೆ ಮತ್ತೆ ಒಡನಾಡಿದ ಅನುಭವ ಕೊಡ್ತು ಲೇಖನ.

  3. ಅಪರೂಪದ ವ್ಯಕ್ತಿತ್ವ, ನಿಷ್ಟೆ ಇಂದ ಬರೆಯುತಿದರು. ಯಾರಿಗೂ ಮುಲಾಜು ತೋರಿಸುತ್ತಿರಲಿಲ್ಲ. ಅವರ ಇರುವ ತನಕ ಅವರ ಪತ್ರಿಕೆಯ ಓದುಗ

  4. ಲಂಕೇಶ್ ರವರು ತೀರಿಕೊಂಡಿದ್ದು 2000 ಜನವರಿ 24 ರಂದು ಎಂದಾಗ ಬೇಕಲ್ಲವೇ? ಅಂದು ರಾತ್ರಿ ಸಿಟಿ ಬಸ್ಸಿನಲ್ಲಿ ಮನೆಗೆ ಹಿಂತಿರುಗುವಾಗ ಪತ್ರಿಕೆ ಮಾರುವವ ಹೊಸ ಸಂಚಿಕೆಯನ್ನು ಕೈಗಿತ್ತು ಪತ್ರಿಕೆಯ ಭವಿಷ್ಯದ , ಗುಣಮಟ್ಟದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಬಗೆಯೇ ಅಚ್ಚರಿ ಮೂಡಿಸಿತ್ತು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಗದೀಪ್ ಧನಕರ್ | ಅಂದು ಸಮಾಜವಾದಿ, ಇಂದು ಕೋಮುವಾದಿ

ಜಗದೀಪ್ ಧನಕರ್ ಸಂಸದೀಯ ಪಟುವಾಗಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ...

ಮಡಿದ ಅಗ್ನಿವೀರನ ಮತ್ತು ಅವನ ಹಡೆದಮ್ಮನ ಪುತ್ರಶೋಕದ ದುರಂತ ಕತೆಯ ಕೇಳಿದಿರಾ?

ಬಿಬಿಸಿ ವರದಿಗಾರ ಮೋಹರ್ ಸಿಂಗ್ ಮೀಣಾ ಜುಲೈ 5ರಂದು ಜಿತೇಂದ್ರಸಿಂಗ್ ತಾಯಿಯ...

ದಲಿತರು-ಬುಡಕಟ್ಟು ಜನರು ಹಾಗೂ ಹಿಂದುಳಿದವರೇ ಉಷ್ಣೋಗ್ರತೆಯ ಬಲಿಪಶುಗಳು

ಉಷ್ಣೋಗ್ರತೆಯನ್ನು ಸಹಿಸುವ ಶಕ್ತಿಯು ಜಾತಿಗಳನ್ನು ಆಧರಿಸಿದ ಉದ್ಯೋಗ ವ್ಯವಸ್ಥೆಯನ್ನು ಪ್ರತಿಬಿಂಬಿಸಿದೆ. ಪರಿಶಿಷ್ಟರು...

ಫಝಲ್ ಕೋಯಮ್ಮ ತಂಙಳ್: ಸರಳ, ನಿಗರ್ವಿ ವಿದ್ವಾಂಸರೊಬ್ಬರ ನಿರ್ಗಮನ

ಜ್ಞಾನಸಂಪನ್ನ ವ್ಯಕ್ತಿಗಳು ಅವರದ್ದೇ ಆದ ಒಂದು ನೆಮ್ಮದಿಯ ಸ್ಥಿತಿಯಲ್ಲಿರುತ್ತಾರೆ. ಸಾವಿರಾರು ಜನರು...