ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟ ಬಿಟ್ಟು ಎನ್‌ಡಿಎ ಒಕ್ಕೂಟ ಸೇರ್ಪಡೆಯಾಗಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಬಿಹಾರದಲ್ಲಿ ಸಾಗುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ”ನಿತೀಶ್ ಅವರು ಏಕೆ ಸಿಲುಕಿಕೊಂಡರು ಎಂಬುದು ಅರ್ಥವಾಗುತ್ತದೆ. ನಾನು ಅವರಿಗೆ ನೇರವಾಗಿ ಹೇಳುತ್ತೇನೆ. ನೀವು ಬಿಹಾರದಲ್ಲಿ ಜಾತಿ ಸಮೀಕ್ಷೆ ಕೈಗೊಂಡಿರಿ, ಆರ್‌ಜೆಡಿಯೊಂದಿಗೆ ನಾವು ಕೂಡ ಸಮೀಕ್ಷೆ ಕೈಗೊಳ್ಳುವಂತೆ ಒತ್ತಾಯಿಸಿದ್ದೆವು. ಆದರೆ ಬಿಜೆಪಿ ಭಯಕ್ಕೊಳಗಾಯಿತು. ಈ ಯೋಜನೆಗೆ ಅವರು ವಿರೋಧ ವ್ಯಕ್ತಪಡಿಸಿದರು. ನಿತೀಶ್ ಅವರು ಸಮಸ್ಯೆಗೆ ಸಿಲುಕಿ ಬಿಜೆಪಿ ಒದಗಿಸಿದ ಹಿಂಬಾಗಿಲಿನ ಮೂಲಕ ಓಡಿ ಹೋಗಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ
“ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ನಮ್ಮ ಇಂಡಿಯಾ ಒಕ್ಕೂಟದ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಿತೀಶ್ ಅವರ ಬೆಂಬಲ ಅಗತ್ಯವಿಲ್ಲ. ಜಾತಿ ಸಮೀಕ್ಷೆಯ ಒತ್ತಡ ವಿಪಕ್ಷಗಳಿಗೆ ಇಷ್ಟವಾಗದ ಕಾರಣ ನಿತೀಶ್ ಸ್ವಲ್ಪ ಒತ್ತಡಕ್ಕೊಳಗಾಗಿ ಪಕ್ಷಾಂತರ ಮಾಡಿದ್ದಾರೆ. ಅವರಿಗೆ ಒತ್ತಡ ಮುಖ್ಯವಾಗಿದೆ. ಆದರೆ ನಮ್ಮ ಒಕ್ಕೂಟ ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಇದೇ ಸಂದರ್ಭದಲ್ಲಿ ನಿತೀಶ್ ಅವರ ಬಗ್ಗೆ ರಾಹುಲ್ ಅವರು ಹಾಸ್ಯ ಚಟಾಕಿ ಹಾರಿಸಿದರು. ”ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿ ರಾಜಭವನದಿಂದ ತಕ್ಷಣ ತೆರಳಿದರು. ಕಾರಿನಲ್ಲಿ ಅವರು ತಮ್ಮ ಶಾಲು ಮರೆತಿದ್ದರು ತಮ್ಮ ಚಾಲಕನಿಗೆ ಹೇಳಿ ಶಾಲನ್ನು ವಾಪಸ್ ತರಿಸಿಕೊಂಡರು. ಮತ್ತೆ ರಾಜ ಭವನಕ್ಕೆ ತೆರಳಿದಾಗ, ಏಕೆ ಇಷ್ಟು ತರಾತುರಿಯಲ್ಲಿ ವಾಪಸ್ ಬಂದಿರಿ ಎಂದು ರಾಜ್ಯಪಾಲರು ಪ್ರಶ್ನಿಸಿದರು” ಎಂದು ರಾಹುಲ್ ಹೇಳಿದರು.
ನಿತೀಶ್ ಕುಮಾರ್ ಅವರು ಭಾನುವಾರ ದಾಖಲೆಯ ಒಂಬತ್ತನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಅವರು ಡಿಸಿಎಂಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.